ಧಾರವಾಡ: ಸಮಾಜದ ಯಾವುದೇ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಶಿಕ್ಷಣವೇ ಪರಿಹಾರ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದಲ್ಲಿ ಅಂಜುಮನ್ ಇಸ್ಲಾಂ ಸಂಸ್ಥೆಯ ನೂತನ ವಾಣಿಜ್ಯ ಕಟ್ಟಡದ ಶಿಲಾನ್ಯಾಸ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಶಿಕ್ಷಣದಿಂದ ಮಾತ್ರವೇ ಸಮಾನತೆ ಕಾಣಲು ಸಾಧ್ಯವಿದೆ.
14 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಶಿಕ್ಷಣ ನೀಡಬೇಕು. ಇದು ಅವರ ಮೂಲಭೂತ ಹಕ್ಕಾಗಿದೆ ಎಂದರು. ಶಿಕ್ಷಣದಿಂದ ಮಾತ್ರ ಅಭಿವೃದ್ಧಿ, ಸ್ವಾಭಿಮಾನಿಗಳಾಗಲು ಸಾಧ್ಯ. ಶಿಕ್ಷಣದಿಂದಲೇ ಹಿಂದುಳಿದವರಿಗೆ ಸ್ವಾಭಿಮಾನ, ಆತ್ಮಾಭಿಮಾನ ಬರಲು ಸಾಧ್ಯ. ಹೀಗಾಗಿ ಪಾಲಕರು ಮಕ್ಕಳಿಗೆ ಶಿಕ್ಷಣ ನೀಡಿ ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕು ನಡೆಸಲು ಸಿದ್ಧರಾಗಬೇಕು ಎಂದು ತಿಳಿಸಿದರು.
ಈ ದೇಶ ಎಲ್ಲ ಧರ್ಮ, ಜಾತಿ, ಪ್ರಾಂತದ ಜನರಿಗೆ ಸೇರಿದ್ದು, ಹೀಗಾಗಿ ಇಂದಿಗೂ ಒಟ್ಟಾಗಿ ಉಳಿಯಲು ಸಾಧ್ಯವಾಗಿದೆ. ವಿವಿಧತೆಯಲ್ಲಿ ಏಕತೆ ಕಂಡಿದೆ. ಕೆಲವರು ಸಮಾಜ ಒಡೆಯಲು ಪ್ರಯತ್ನಿಸುತ್ತಾರೆ. ಅಂತಹ ಶಕ್ತಿಗಳ ವಿರುದ್ಧ ಎಚ್ಚರವಾಗಿರಬೇಕು. ಎಲ್ಲ ಧರ್ಮದವರು ಒಟ್ಟಾಗಿ ಇದ್ದರೆ ಅದು ಹಿಂದುಸ್ಥಾನ. ರಾಜ್ಯದಲ್ಲಿರುವ ಯಾವುದೇ ಸಮಾಜ ಅದರಲ್ಲೂ ಅಲ್ಪಸಂಖ್ಯಾತರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ. ನಿಮಗೆ ರಕ್ಷಣೆ ಇದೆ.
ಕೋಮುವಾದ ಮಾಡುವವರೆ ಸಮಾಜದ ಸ್ವಾಸ್ಥ್ಯ ಹಾಳು ಮಾಡುವರು ಎಂದು ಟೀಕಿಸಿದರು. ನಮ್ಮ ದೇಶದಲ್ಲಿ ಶೇ.14ರಷ್ಟು ಮುಸ್ಲಿಂ ಬಾಂಧವರಿದ್ದಾರೆ. ಆದರೆ, ಅವರಲ್ಲಿ ಶಿಕ್ಷಣದ ಮಟ್ಟ ಕಡಿಮೆ ಇದೆ. ಅವರಲ್ಲಿ ಶಿಕ್ಷಣ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಅಂಜುಮನ್ ಸಂಸ್ಥೆ ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಅಂಜುಮನ್ ಸಂಸ್ಥೆ ನೂರು ವರ್ಷಕ್ಕೂ ಅಧಿಧಿಕ ಕಾಲ ಸೇವೆ ಸಲ್ಲಿಸಿದೆ. ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡಿ ಎಲ್ಲ ವರ್ಗದ ಮಕ್ಕಳಿಗೆ ಶಿಕ್ಷಣ ಒದಗಿಸುತ್ತಿದೆ ಎಂದು ಹೇಳಿದರು.
ಸಿಎಂ ಸೂಚನೆ: ಜಿಲ್ಲಾಡಳಿತಕ್ಕೆ ಅಂಜುಮನ್ ಸಂಸ್ಥೆಯಿಂದ 25 ಎಕರೆ ಭೂಮಿ ನೀಡಲು ಹಣ ನೀಡಿದ್ದರೂ ಜಿಲ್ಲಾಡಳಿತ ಭೂಮಿ ನೀಡಿಲ್ಲ ಎಂದು ಸಂಸ್ಥೆ ಅಧ್ಯಕ್ಷ ಮನವಿ ನೀಡಿದ್ದು, ಈ ಕುರಿತು ಜಿಲ್ಲಾಧಿಕಾರಿಗಳ ಕಚೇರಿಯಿಂದ ಸಂಬಂಧಿಸಿದ ಕಡತ ತರಿಸಿಕೊಂಡು ವಿಚಾರಣೆ ಮಾಡಿ ಜಾಗ ನೀಡಲು ಸೂಚಿಸುತ್ತೇನೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ, ಉನ್ನತ ಶಿಕ್ಷ ಸಚಿವ ರಾಯರೆಡ್ಡಿ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್, ಕ್ರೀಡಾ ಸಚಿವ ಪ್ರಮೋದ ಮಧ್ವರಾಜ, ಶಾಸಕ ಪ್ರಸಾದ ಅಬ್ಬಯ್ಯ, ಸಿ.ಎಸ್. ಶಿವಳ್ಳಿ, ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕ ವೀರಣ್ಣ ಮತ್ತಿಕಟ್ಟಿ ಇದ್ದರು.