Advertisement

ತುಕ್ಕು ಹಿಡಿದ ಗಜೇಂದ್ರ ಗೋಲ್ಡ್‌

02:40 PM Dec 12, 2019 | Suhan S |

ಗಜೇಂದ್ರಗಡ: ಘನತ್ಯಾಜ್ಯ ವಸ್ತುಗಳಿಂದ ತಯಾರಿಸುತ್ತಿದ್ದ ಗಜೇಂದ್ರ ಗೋಲ್ಡ್‌ ಹೆಸರಿನ ಸಾವಯುವ ಜೈವಿಕ ಗೊಬ್ಬರ ಪ್ರಚಾರದ ಕೊರತೆಯಿಂದ ಬೇಡಿಕೆ ಕಳೆದುಕೊಂಡು ತಯಾರಿಕೆ ಸ್ಥಗಿತಗೊಂಡಿದೆ. ಲಕ್ಷಾಂತರ ರೂಪಾಯಿ ವೆಚ್ಚದ ಯಂತ್ರಗಳು ತುಕ್ಕು ಹಿಡಿಯುವ ಹಂತಕ್ಕೆ ತಲುಪಿವೆ.

Advertisement

ಪಟ್ಟಣದ ಹೊರ ವಲಯದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಪುರಸಭೆಯು 2011-12ರಲ್ಲಿಯೇ ರೂ. 8 ಲಕ್ಷ ಖರ್ಚು ಮಾಡಿ, ಗೊಬ್ಬರ ತಯಾರಿಸುವ ಯಂತ್ರಗಳನ್ನು ಖರೀದಿಸಲಾಗಿತ್ತು. ಆದರೆ ಸಾವಯುವ ಜೈವಿಕ ಗೊಬ್ಬರದ ಬಗೆಗೆ ರೈತರಲ್ಲಿ ಜಾಗೃತಿ ಮೂಡಿಸುವಲ್ಲಿ ಹಿನ್ನಡೆಯಾದ ಪರಿಣಾಮ ಗಜೇಂದ್ರ ಗೋಲ್ಡ್‌ ಗೊಬ್ಬರ ಕೇಳ್ಳೋರಿಲ್ಲದಂತಾಗಿದೆ. ಹೀಗಾಗಿ ಯಂತ್ರಗಳು ಕಾರ್ಯನಿರ್ವಹಿಸದೇ ಮೂಲೆ ಸೇರಿವೆ.

ಗಜೇಂದ್ರಗಡ 23 ವಾರ್ಡ್‌ಗಳ ಮನೆಗಳಿಂದ ಹಾಗೂ ಸಾರ್ವಜನಿಕ ಸ್ಥಳಗಳಿಂದ ಟ್ರಾಕ್ಟರ್‌, ಆಟೋ ಟಿಪ್ಪರ್‌ ಮೂಲಕ ನಿತ್ಯ ಬೆಳಗ್ಗೆ ಕಸ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಕುಷ್ಟಗಿ ರಸ್ತೆಯ ಗೌಡಗೇರಿ ಸರಹದ್ದಿನಲ್ಲಿರುವ ಪುರಸಭೆಯ 4.27 ಎಕರೆ ವಿಸ್ತಿರ್ಣದ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕಕ್ಕೆ ರವಾನಿಸಲಾಗುತ್ತದೆ.

ನಿತ್ಯ ಸಂಗ್ರಹವಾಗುವ ಘನತ್ಯಾಜ್ಯವನ್ನು ಜೈವಿಕ ಗೊಬ್ಬರವನ್ನಾಗಿ ತಯಾರಿಸಿ ರೈತರಿಗೆ ಅತ್ಯಂತ ಕಡಿಮೆ ದರದಲ್ಲಿ ನೀಡುವ ಉದ್ದೇಶದಿಂದ ಲಕ್ಷಾಂತರ ಖರ್ಚು ಮಾಡಿ ಗೊಬ್ಬರ ತಯಾರಿಕೆ ಯಂತ್ರ ಅಳವಡಿಸಲಾಗಿದೆ. ಆದರೆ ಕೆಲ ವರ್ಷಗಳು ಮಾತ್ರ ಉತ್ತಮವಾಗಿ ಕಾರ್ಯ ನಿರ್ವಹಿಸಿರುವುದನ್ನು ಬಿಟ್ಟರೇ, ಇದೀಗ ಬಳಕೆಗೆ ಬಾರದಂತಾಗಿ ಗಜೇಂದ್ರ ಗೋಲ್ಡ್‌ ಗೊಬ್ಬರ ಕಣ್ಮರೆಯಾಗಿದೆ.

ಮೂಲೆ ಸೇರಿದ ಗಜೇಂದ್ರ ಗೋಲ್ಡ್‌: ಗಜೇಂದ್ರಗಡ ಪೌರ ಕಾರ್ಮಿಕರು ಕಸದಿಂದ ರಸ ತೆಗೆಯುವ ಕಾರ್ಯ ಬಲು ಜೋರಾಗಿ ನಡೆಸಿದ್ದರು. ಘನತ್ಯಾಜ್ಯ ವಸ್ತುಗಳನ್ನು ಮರು ಬಳಕೆ ಮಾಡಿಕೊಂಡು ಗಜೇಂದ್ರ ಗೋಲ್ಡ್‌ ಹೆಸರಿನಲ್ಲಿ ಕೆಜಿ ಒಂದಕ್ಕೆ ಮೂರು ರೂಪಾಯಿಯಂತೆ 25 ಕೆಜಿ ಪಾಕೆಟ್‌ನಲ್ಲಿ ಸಾವಯುವ ಜೈವಿಕ ಗೊಬ್ಬರವನ್ನು ರೈತರಿಗೆ ವಿತರಿಸುತ್ತಿದ್ದರು. ಆದರೀಗ ಪುರಸಭೆಯ ಇಚ್ಚಾಶಕ್ತಿಯ ಕೊರತೆಯಿಂದ ಎಲ್ಲವೂ ತಲೆ ಕೆಳಗಾಗಿರುವುದು ಜನತೆಗೆ ಬೇಸರ ಮೂಡಿಸಿದೆ.

Advertisement

ತುಕ್ಕು ಹಿಡಿಯುತ್ತಿವೆ ಯಂತ್ರಗಳು: ಪುರಸಭೆ ಲಕ್ಷಾಂತರ ರೂಪಾಯಿ ವ್ಯಯಿಸಿ ಗೊಬ್ಬರ ತಯಾರಿಕೆಯ ಯಂತ್ರಗಳನ್ನು ಅಳವಡಿಸಿದ್ದಾರೆ. ಆದರೆ ಯಂತ್ರಗಳು ಕೆಲವೇ ವರ್ಷಗಳ ಕಾಲ ಕಾರ್ಯ ನಿರ್ವಹಿಸಿರುವುದನ್ನು ಹೊರತು ಪಡಿಸಿದರೆ, ಬಹುತೇಕ ವರ್ಷಗಳು ಯಂತ್ರ ಸ್ಥಗಿತಗೊಂಡಿದ್ದೆ ಹೆಚ್ಚಾಗಿದೆ. ಹೀಗಾಗಿ ಬಳಕೆ ಕಡಿಮೆಯಾಗಿದ್ದರಿಂದ ಯಂತ್ರಗಳು ತುಕ್ಕು ಹಿಡಿಯುವ ಸ್ಥಿತಿಗೆ ಬಂದೋದಗಿದೆ.

ಪುರಸಭೆಯ ಇಚ್ಛಾಶಕ್ತಿ ಕೊರತೆ: ಪಟ್ಟಣದಿಂದ ನಿತ್ಯ ದೊಡ್ಡ ಪ್ರಮಾಣದಲ್ಲಿ ಘನತ್ಯಾಜ್ಯ ಸಂಗ್ರಹವಾಗುತ್ತಿದೆ. ಈಗಾಗಲೇ ಸ್ಟಾಕ್‌ ಯಾರ್ಡನಲ್ಲಿ ಕಣ್ಣು ಹಾಯಿಸಿದಲ್ಲೇಲ್ಲ ಕಸದ ರಾಶಿಯೇ ತುಂಬಿಕೊಂಡಿದೆ. ಕಸದಿಂದ ಏನು ಮಾಡಲು ಸಾಧ್ಯ ಎನ್ನುವವರೆ ಹೆಚ್ಚು. ಆದರೆ ಕಸದಿಂದ ಬಹಳಷ್ಟು ಉಪಯೋಗವಿದೆ. ಇದರಿಂದ ವಿದ್ಯುತ್‌, ಬಯೋಗ್ಯಾಸ್‌ ಹಾಗೂ ಸಾವಯುವ ಗೊಬ್ಬರ ಉತ್ಪಾದನೆ ಮಾಡಬಹುದು. ಆದರೆ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ಗಜೇಂದ್ರಗಡ ಪುರಸಭೆ ವಿಫಲವಾಗಿದೆ ಎನ್ನುವುದು ಸಾರ್ವಜನಿಕರ ಆರೋಪ.

ಸಾವಯುವ ಗೊಬ್ಬರದ ಜಾಗೃತಿ ಅಗತ್ಯ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಗುಣಮಟ್ಟದ ಸಾವಯುವ ಜೈವಿಕ ಗೊಬ್ಬರ ತಯಾರಿಕಾ ಘಟಕ ಪರವಾನಗಿ ಪಡೆದು ಪುರಸಭೆಗಜೇಂದ್ರ ಗೋಲ್ಡ್‌ ಗೊಬ್ಬರ ತಯಾರಿಕೆ ಪ್ರಾರಂಭಿಸಿದ್ದ ಸಂದರ್ಭದಲ್ಲಿ ಎಲ್ಲೇಲ್ಲೂ ಸಾವಯುವ ಗೊಬ್ಬರದೇ ಮಾತು ಕೇಳಿ ಬರುತ್ತಿತ್ತು. ಗಜೇಂದ್ರ ಗೋಲ್ಡ್‌ ಸಾವಯವ ಗೊಬ್ಬರದ ವಿನೂತನ ಪ್ರಯೋಗ ಇನ್ನೇನು ಯಶಸ್ವಿಯಾಯಿತು ಎನ್ನುವಷ್ಟರಲ್ಲಿ, ಪುರಸಭೆ ನಿರ್ಲಕ್ಷ ತೋರಿದ ಹಿನ್ನಲೆಯಲ್ಲಿ ಗಜೇಂದ್ರ ಗೋಲ್ಡ್‌ಗೆ ತೀವ್ರ ಹಿನ್ನಡೆಯಾಯಿತು. ಸಾವಯುವ ಜೈವಿಕ ಗೊಬ್ಬರದ ಮಹತ್ವವನ್ನು ರೈತರಿಗೆ ತಿಳಿಪಡಿಸುವ ಕಾರ್ಯವಾದಾಗ ಮಾತ್ರ ಗಜೇಂದ್ರ ಗೋಲ್ಡ್‌ ಗೊಬ್ಬರ ರೈತರಿಗೆ ವರವಾಗಲಿದೆ ಎನ್ನುವುದು ರೈತ ಸಮುದಾಯದ ಅಭಿಪ್ರಾಯವಾಗಿದೆ.

 

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next