Advertisement

ರುಸ್ತುಂ ಡಿಗ್ರಿ ಎಕ್ಸಾಂ ಇದ್ದಂತೆ

01:36 PM Apr 20, 2019 | mahesh |

ಕನ್ನಡ ಚಿತ್ರರಂಗಕ್ಕೂ ಪೊಲೀಸ್‌ ಸ್ಟೋರಿಗಳಿಗೂ ಅವಿನಾಭಾವ ಸಂಬಂಧ. ಕನ್ನಡದಲ್ಲಿ ಈಗಾಗಲೇ
ಸಾಕಷ್ಟು ಪೊಲೀಸ್‌ ಸ್ಟೋರಿಗಳು ಬಂದಿವೆ. ಅಂದಿನಿಂದ ಇಂದಿನವರೆಗಿನ ಬಹುತೇಕ ಎಲ್ಲಾ ನಾಯಕ ನಟರು ಪೊಲೀಸ್‌ ಯೂನಿಫಾರಂನಲ್ಲಿ ಖಡಕ್‌ ಆಗಿ ಖದರ್‌ ತೋರಿದ್ದಾರೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಎರಡು ಚಿತ್ರಗಳು ಪೊಲೀಸ್‌ ಸ್ಟೋರಿ ಮೂಲಕ ಕುತೂಹಲ ಹುಟ್ಟಿಸಿವೆ. ಶಿವರಾಜಕುಮಾರ್‌ ಅಭಿನಯದ “ರುಸ್ತುಂ’ ಹಾಗೂ ರಕ್ಷಿತ್‌ ಶೆಟ್ಟಿ ನಾಯಕರಾಗಿರುವ “ಅವನೇ ಶ್ರೀಮನ್ನಾರಾಯಣ’. ಈ ಎರಡು ಚಿತ್ರಗಳ ಕುರಿತು ರಕ್ಷಿತ್‌ ಹಾಗೂ “ರುಸ್ತುಂ’ ನಿರ್ದೇಶಕ ರವಿವರ್ಮ ಇಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದಾರೆ …

Advertisement

ಕನ್ನಡ ಚಿತ್ರರಂಗದಲ್ಲಿ ರವಿವರ್ಮ ಅಂದಾಕ್ಷಣ, ನೆನಪಾಗೋದೇ ಭರ್ಜರಿ ಆ್ಯಕ್ಷನ್‌. ಅಪ್ಪಟ ಕನ್ನಡಿಗ ರವಿವರ್ಮ ಅವರ ಸಾಹಸ ಕನ್ನಡ ಮಾತ್ರವಲ್ಲ, ಬಾಲಿವುಡ್‌, ಟಾಲಿವುಡ್‌, ಕಾಲಿವುಡ್‌ಗೂ ವಿಸ್ತರಿಸಿದೆ. ಬಹುತೇಕ ಬಿಗ್‌ಸ್ಟಾರ್‌ಗಳಿಗೆ ಸ್ಟಂಟ್‌ ಹೇಳಿಕೊಟ್ಟಿರುವ ರವಿವರ್ಮ ಇದೇ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಮೊದಲ ಸಲವೇ ಬಿಗ್‌ಸ್ಟಾರ್‌ಗೆ ಆ್ಯಕ್ಷನ್‌-ಕಟ್‌ ಹೇಳಿರುವುದೇ ವಿಶೇಷ. “ರುಸ್ತುಂ’ ಚಿತ್ರದ ಮೂಲಕ ಶಿವರಾಜಕುಮಾರ್‌ ಹಾಗು ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಅವರನ್ನು ನಿರ್ದೇಶಿಸಿರುವ ಖುಷಿ ರವಿವರ್ಮ ಅವರದು. ಮೊದಲ ನಿರ್ದೇಶನ ಕುರಿತು ಅವರು ಹೇಳುವುದಿಷ್ಟು. “ನನಗಂತೂ ತುಂಬಾನೇ ಖುಷಿ ಇದೆ. ಯಾಕೆಂದರೆ ಎಲ್ಲರ ಬದುಕಲ್ಲೂ ಒಂದೊಳ್ಳೆಯ ಅವಕಾಶ ಬಂದೇ ಬರುತ್ತದೆ.
“ರುಸ್ತುಂ’ ನನ್ನ ಪಾಲಿನ ಒಳ್ಳೆಯ ಅವಕಾಶ. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದೇನೆ. ನನಗಷ್ಟೇ ಅಲ್ಲ, ಕನ್ನಡದ ಬಹುತೇಕರಿಗೂ ಕುತೂಹಲವಿದೆ. ಖಂಡಿತ ಆ ಕುತೂಹಲ, ನಿರೀಕ್ಷೆ ಸುಳ್ಳಾಗಲ್ಲ. ನಾನು ಈಗಾಗಲೇ ಫೈಟರ್‌ ಆಗಿ, ಸ್ಟಂಟ್‌ ಮಾಸ್ಟರ್‌ ಆಗಿ ಎಕ್ಸಾಂನಲ್ಲಿ ಪಾಸ್‌ ಆಗಿದ್ದೇನೆ. ಡಿಸ್ಟಿಂಕ್ಷನ್‌ ಕೂಡ ಪಡೆದಿದ್ದೇನೆ. ಅದೊಂದು ರೀತಿ ಎಸ್ಸೆಸ್ಸೆಲ್ಸಿ, ಪಿಯುಸಿ ಎಕ್ಸಾಂ ಇದ್ದಂತೆ. ಈಗ “ರುಸ್ತುಂ’ ಡಿಗ್ರಿ ಎಕ್ಸಾಂ ಇದ್ದಂತೆ. ಬರೆದಿದ್ದೇನೆ. ನಿರೀಕ್ಷೆಯೂ ಇದೆ. ಸಾಕಷ್ಟು ಎಕ್ಸೆ„ಟ್‌ ಆಗಿದ್ದೇನೆ. ಜನರು
ಹೇಗೆ ಸ್ವೀಕರಿಸುತ್ತಾರೋ ನೋಡಬೇಕು’ ಎಂಬುದು ಅವರ ಮಾತು.

ಸಾಮಾನ್ಯವಾಗಿ ಒಬ್ಬ ಸ್ಟಾರ್‌ ನಟರನ್ನು ಇಟ್ಟುಕೊಂಡೇ ಸಿನಿಮಾ ಮುಗಿಸುವುದು ಹರ ಸಾಹಸದ ಕೆಲಸ. ಆದರೆ, “ರುಸ್ತುಂ’ ಚಿತ್ರದಲ್ಲಿ ಶಿವರಾಜಕುಮಾರ್‌ ಮತ್ತು ಬಾಲಿವುಡ್‌ ನಟ ವಿವೇಕ್‌ ಒಬೆರಾಯ್‌ ಅವರ ಜೊತೆಗಿನ ಕೆಲಸ ಹೇಗಿತ್ತು ಎಂಬ ಪ್ರಶ್ನೆಯನ್ನು ರವಿವರ್ಮ ಅವರ ಮುಂದಿಟ್ಟರೆ, “ನನಗೆ ಇಲ್ಲಿ ಕಷ್ಟದ ಕೆಲಸ ಅಂತ ಯಾವುದೂ ಅನಿಸಲಿಲ್ಲ. ಯಾಕೆಂದರೆ, ನಾನು ಸ್ಟಂಟ್‌ ಮಾಸ್ಟರ್‌ ಆಗಿ, ಬಹುತೇಕ ಸ್ಟಾರ್‌ ನಟರ ಜೊತೆ ಕೆಲಸ ಮಾಡಿದ್ದೇನೆ. ಆ್ಯಕ್ಷನ್‌ ಸೀನ್‌ ಮಾಡುವಾಗ, ಅದರ ಹಿಂದೆ, ಮುಂದಿನ ದೃಶ್ಯಗಳನ್ನು ನಾವೇ ಕಂಪೋಸ್‌ ಮಾಡ್ತೀವಿ. ಹಾಗಾಗಿ ಇಲ್ಲಿ ಇಬ್ಬರು ದೊಡ್ಡ ಸ್ಟಾರ್‌ಗಳಿದ್ದರೂ, ಅಂತಹ ದೊಡ್ಡ ಸಮಸ್ಯೆಯೇನೂ ಆಗಲಿಲ್ಲ. ಗೊಂದಲವೂ ಇರಲಿಲ್ಲ. ಇನ್ನು, ಇಬ್ಬರನ್ನು ಹೇಗೆ ಬ್ಯಾಲೆನ್ಸ್‌ ಮಾಡಿದೆ ಎಂಬುದಕ್ಕೆ ಸಿನಿಮಾ ನೋಡಿದರೆ ಎಲ್ಲವೂ ಪಕ್ಕಾ ಗೊತ್ತಾಗುತ್ತದೆ’ ಎಂದು ಹೇಳುತ್ತಾರೆ.

ಈ ಕಥೆಗೆ ಶಿವಣ್ಣನೇ ನಾಯಕ ಇಲ್ಲಿ ಇಬ್ಬರು ಸ್ಟಾರ್‌ಗಳಿದ್ದಾರೆ. ಅವರಿ ಬ್ಬರಿಗೂ ಸಮವಾದ ಜಾಗ
ಕಲ್ಪಿಸಲಾಗಿದೆಯಾ ಎಂಬ ಪ್ರಶ್ನೆಗೆ, “ಇಬ್ಬರು ಸ್ಟಾರ್‌ಗಳ ಇಮೇಜ್‌ಗೆ ಇಲ್ಲಿ ಯಾವುದೇ ತೊಂದರೆ ಆಗಲ್ಲ. ಹಾಗೆ ಆಗದಂತೆ ನೋಡಿಕೊಂಡಿದ್ದೇನೆ. ಕಥೆ ಏನು ಹೇಳುತ್ತೋ, ಪಾತ್ರ ಎಷ್ಟು ಕೇಳುತ್ತೋ
ಅಷ್ಟನ್ನು ಮಾತ್ರ ನೀಟ್‌ ಆಗಿ ಮಾಡಿದ್ದೇನೆ. ಇಲ್ಲಿ ನನಗೆ ಶಿವಣ್ಣ ಮುಖ್ಯ. ನಮ್ಮ ಕಥೆಗೆ ಅವರೇ ನಾಯಕ. ವಿವೇಕ್‌ ಒಬೆರಾಯ್‌ ಇಲ್ಲಿದ್ದರೂ, ಯಾರೊಬ್ಬರಿಗೂ ಹೆಚ್ಚು ಕಮ್ಮಿ ಇಲ್ಲ ಎಂಬಂತಹ ಪಾತ್ರ ಕಟ್ಟಿಕೊಡಲಾಗಿದೆ. ಮೊದಲರ್ಧ ಕಥೆ ಕೇಳಿಯೇ ಶಿವಣ್ಣ ಖುಷಿಪಟ್ಟು, “ರವಿ ಇದು ಚೆನ್ನಾಗಿದೆ, ಹೊಸತರ
ಇರುತ್ತೆ ಮಾಡು’ ಅಂತ ಶಿವಣ್ಣ ಬೆನ್ನುತಟ್ಟಿದ್ದರು. ಒಬೆರಾಯ್‌ ಕೂಡ ನಟಿಸ್ತೀನಿ ಅಂತ ಗ್ರೀನ್‌ಸಿಗ್ನಲ್‌ ಕೊಟ್ಟಿದ್ದರು. ಆ ಬಳಿಕ “ರುಸ್ತುಂ’ ಶುರುವಾಗಿದ್ದು. ಅವರ ಸಹಕಾರ ಮತ್ತು ಪ್ರೋತ್ಸಾಹ ಇಲ್ಲಿಯವರೆಗೂ
ಇದೆ. ಹಾಗಾಗಿ “ರುಸ್ತುಂ’ ಅಂದುಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಮೂಡಿಬಂದಿದೆ. ಇಂಥದ್ದೊಂದು ಚಿತ್ರ ಮಾಡಬೇಕಾದರೆ, ನಿರ್ಮಾಪಕರ ಪ್ರೋತ್ಸಾಹ ಅಗತ್ಯವಾಗಿ ಬೇಕೇ ಬೇಕು. ಕೇಳಿದ್ದಕ್ಕಿಂತ ಹೆಚ್ಚು ಒದಗಿಸಿ, ಪಕ್ಕಾ ಕಮರ್ಷಿಯಲ್‌ ಸಿನಿಮಾ ಆಗುವಂತೆ ಮಾಡಿದ್ದಾರೆ. ಇಲ್ಲಿ ರವಿವರ್ಮ ಒಬ್ಬನೇ ಎಲ್ಲವನ್ನೂ ಮಾಡಿಲ್ಲ. ನನ್ನ ಇಡೀ ತಂಡ ಜೊತೆಗಿರುವುದಕ್ಕೇ ಇಂಥದ್ದೊಂದು ಚಿತ್ರ ಮೂಡಿಬಂದಿದೆ.
ನನ್ನ ತಂತ್ರಜ್ಞರು ಕೊಟ್ಟ ಸಲಹೆ, ಸಹಕಾರ ಕೂಡ ಚಿತ್ರಕ್ಕೆ ಪ್ಲಸ್‌ ಆಗಿದೆ’ ಎಂಬುದು ರವಿವರ್ಮ ಮಾತು.

ಪೋಸ್ಟರ್‌ ಮತ್ತು ಟ್ರೇಲರ್‌ ನೋಡಿದವರಿಗೆ ಇಲ್ಲಿ “ರುಸ್ತುಂ’ ಯಾರಿರಬಹುದು? ಎಂಬ ಪ್ರಶ್ನೆ ಎದುರಾಗುತ್ತೆ. ಅದಕ್ಕೆ ರವಿವರ್ಮ ಅವರ ಉತ್ತರ, ಅದನ್ನು ಸಿನಿಮಾದಲ್ಲೇ ನೋಡಬೇಕು ಎಂಬುದು. ಎಲ್ಲಾ ಸರಿ, ರವಿವರ್ಮ ಅವರು ಸ್ಟಂಟ್‌ ಮಾಸ್ಟರ್‌ ಆಗಿದ್ದವರು. “ರುಸ್ತುಂ’ ಅವರ ಮೊದಲ ಸಿನಿಮಾ. ಚಿತ್ರವಿಡೀ ಆ್ಯಕ್ಷನ್‌ಮಯ ಆಗಿರುತ್ತಾ ಎಂಬ ಅನುಮಾನ ಕಾಮನ್‌. ಆ ಕುರಿತು ಹೇಳುವ ರವಿವರ್ಮ, “ಎಲ್ಲರಿಗೂ ಅಂಥದ್ದೊಂದು ಅನುಮಾನ ಇದ್ದೇ ಇರುತ್ತೆ. ಸ್ಟಂಟ್‌ ಮಾಸ್ಟರ್‌ ಸಿನಿಮಾದಲ್ಲಿ ಸ್ಟಂಟ್‌ ಹೆಚ್ಚಾಗಿರುತ್ತೆ. ಡ್ಯಾನ್ಸ್‌ ಮಾಸ್ಟರ್‌ ಚಿತ್ರದಲ್ಲಿ ಡ್ಯಾನ್ಸ್ಗೆ ಹೆಚ್ಚು ಒತ್ತು ಕೊಡಲಾಗಿರುತ್ತೆ ಎಂಬುದು. ಇಲ್ಲಿ ಒಳ್ಳೆಯ ಕಥೆ ಇದೆ. ಫ್ಯಾಮಿಲಿ ವಿಷಯವೂ ಇದೆ. ಶಿವಣ್ಣ ಅಳ್ತಾರೆ, ಅಳಿಸುತ್ತಾರೆ, ತಂಗಿಯ ಸೆಂಟಿಮೆಂಟೂ ಇದೆ. ಭರ್ಜರಿ ಸ್ಟಂಟೂ ಇದೆ. ಎಮೋಷನ್ಸ್‌, ಅಲ್ಲಲ್ಲಿ ಹಾಸ್ಯ ಎಲ್ಲವೂ ಇದೆ. ಒಟ್ಟಾರೆ, “ರುಸ್ತುಂ’ ಒಂದು ಮನರಂಜನೆಯ ಸಿನಿಮಾ. ಈಗ ಹೊರಬಂದಿರುವ ಟ್ರೇಲರ್‌ನಲ್ಲಿ ಎಲ್ಲರಿಗೂ ಆ್ಯಕ್ಷನ್‌ ಸಿನಿಮಾ
ಅನಿಸಬಹುದು. ಇಷ್ಟರಲ್ಲೇ ಇನ್ನೊಂದು ಟ್ರೇಲರ್‌ ಕೂಡ ಬಿಡ್ತೀವಿ. ಅಲ್ಲಿ ಕಥೆ ಏನೆಂಬುದರ ಗುಟ್ಟು ಗೊತ್ತಾಗುತ್ತದೆ’ ಎಂಬುದು ಅವರ ಸ್ಪಷ್ಟನೆ.

Advertisement

ಆ್ಯಕ್ಷನ್‌ ಜೊತೆ ಫ್ಯಾಮಿಲಿ ಪ್ಯಾಕೇಜ್‌ ಮೊದಲ ನಿರ್ದೇಶನ, ಇಬ್ಬರು ಸ್ಟಾರ್‌ಗಳು, ಬಿಗ್‌ ಬಜೆಟ್‌ ಸಿನಿಮಾ… ಇದೆಲ್ಲಾ ಅಂದಾಗ ಕೊಂಚ ಗೊಂದಲ ಸಹಜ. ರವಿವರ್ಮ ಅವರಿಗೆ ಇಲ್ಲಿ ಅಂತಹ ಗೊಂದಲಗಳಾಗಲಿ, ಎದುರಾದ ಸಮಸ್ಯೆಗಳಾಗಲಿ ಏನಾದರೂ ಇದ್ದವಾ? ಅಂತ ಕೇಳಿದರೆ, “ಯಾವ ಗೊಂದಲವೂ ಇಲ್ಲದೆ, ನಾರ್ಮಲ್‌ ಆಗಿ ಸಿನಿಮಾ ಮಾಡಿದ್ದೇನೆ. ನನಗೆ ಸ್ಟಂಟ್‌ ಮಾಡಿದಷ್ಟೇ
ನಿರ್ದೇಶನ ಕೂಡ ಸುಲಭವಾಯ್ತು. ಇಂತಹ ಚಿತ್ರ ಮಾಡುವಾಗ ಮೊದಲು ನಟರ ಸಹಕಾರ ಅಗತ್ಯ. ಶಿವರಾಜಕುಮಾರ್‌ ಕೊಟ್ಟ ಧೈರ್ಯ, ಒಬೆರಾಯ್‌ ತೋರಿದ ಪ್ರೀತಿಯಿಂದ ಚಿತ್ರ ಚೆನ್ನಾಗಿ ಮೂಡಿಬಂದಿದೆ. ಅನೇಕರಿಗೆ ವಿವೇಕ್‌ ಒಬೆರಾಯ್‌ ಬೇಕಿತ್ತಾ ಎಂಬ ಪ್ರಶ್ನೆ ಎದುರಾಗಬಹುದು. ಆದರೆ, ಇಲ್ಲಿ ಅವರಿಗಿಂತ ಮೊದಲು ಅನಿಲ್‌ಕಪೂರ್‌ ಅವರನ್ನು ಹಾಕಿಕೊಳ್ಳಬೇಕು ಅಂದುಕೊಂಡಿದ್ದೆ. ಕಾರಣವಿಷ್ಟೇ, ಕನ್ನಡಿಗರಿಗೆ ಬೇಗ ರೀಚ್‌ ಆಗುವ ಮುಖಗಳಿವು. ಯಾಕೆಂದರೆ, ಅನಿಲ್‌ಕಪೂರ್‌ ಅವರು ಮೊದಲು ಕನ್ನಡ ಸಿನಿಮಾ ಮಾಡಿದ್ದವರು. ವಿವೇಕ್‌ ಒಬೆರಾಯ್‌ ಕರ್ನಾಟಕದ ಅಳಿಯ. ಹಾಗಾಗಿ ಆಡಿಯನ್ಸ್‌ಗೆ ರೀಚ್‌ ಆಗುತ್ತೆ ಎಂಬ ಉದ್ದೇಶದಿಂದ ಒಬೆರಾಯ್‌ ಅವರಿಗೆ ಒಳ್ಳೆಯ ಪಾತ್ರ ಕೊಡಲಾಗಿದೆ. ಇನ್ನು, ರವಿವರ್ಮ ಸ್ಟಂಟ್‌ ಮಾಡಿಕೊಂಡಿದ್ದವರು, ನಿರ್ದೇಶನ ಹೇಗೋ ಎಂಬ ಅನುಮಾನವೂ ಇದೆ. ಸಿನಿಮಾ ನೋಡಿದವರಿಗೆ ರವಿವರ್ಮನ ನಿರ್ದೇಶನ ಓಕೆನಾ, ಅವರಿಗೆ ಕೆಪಾಸಿಟಿ ಇದೆಯಾ ಇಲ್ಲವೋ ಅಂತ ಗೊತ್ತಾಗುತ್ತೆ. ಶಿವರಾಜಕುಮಾರ್‌ ಫ್ಯಾನ್ಸ್‌ಗೆ ಏನೆಲ್ಲಾ ಬೇಕೋ ಅದೆಲ್ಲವೂ ಇದೆ. ಫ್ಯಾಮಿಲಿ ಆಡಿಯನ್ಸ್‌ಗೂ ಇಲ್ಲಿ ಪ್ಯಾಕೇಜ್‌ ಇದೆ. ಮೇ ತಿಂಗಳಲ್ಲಿ “ರುಸ್ತುಂ’ ಬಿಡುಗಡೆಯಾಗಲಿದೆ. ಇದು ಪಕ್ಕಾ ದೇಸಿ ಚಿತ್ರ. ನಮ್ಮ ನೆಲದ ಕಥೆ ಇಲ್ಲಿದೆ. ಟ್ರೇಲರ್‌ ನೋಡಿದವರಿಗೆ ಕಥೆ ಪಾಟ್ನಾ, ಗುಜರಾತ್‌ವರೆಗೂ
ಹೋದಿದೆಯಲ್ಲಾ ಅಂತೆನಿಸಬಹುದು. ಸಿನಿಮಾ ನೋಡಿದವರಿಗೆ ಸಂಪೂರ್ಣ ಇದರ ಸೆಲೆ ಗೊತ್ತಾಗಲಿದೆ’ ಎನ್ನುವ ರವಿವರ್ಮ, “ಸದ್ಯಕ್ಕೆ ಡಿಗ್ರಿ ಎಕ್ಸಾಂ ಬರೆದು ಫ‌ಲಿತಾಂಶ ಎದುರು ನೋಡುತ್ತಿದ್ದೇನೆ’ ಎನ್ನುತ್ತಲೇ ಮಾತು ಮುಗಿಸುತ್ತಾರೆ.

ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next