Advertisement

ರಷ್ಯಾಕ್ಕೆ ಆಘಾತ ನೀಡಿದ ಉಕ್ರೇನ್‌; ಒಂದು ಸಾವಿರ ಯೋಧರ ಸಾವು

11:25 PM Nov 02, 2022 | Team Udayavani |

ಕೀವ್‌/ಮಾಸ್ಕೋ: ಒಂದೇ ದಿನದಲ್ಲಿ ರಷ್ಯಾದ ಒಂದು ಸಾವಿರ ಮಂದಿ ಸೈನಿಕರನ್ನು ಕೊಲ್ಲಲಾಗಿದೆ. ಫೆ.24ರಿಂದ ಇದುವರೆಗೆ 71,200 ಮಂದಿ ರಷ್ಯಾ ಸೈನಿಕರು ಅಸುನೀಗಿದ್ದಾರೆ ಎಂದು ಉಕ್ರೇನ್‌ನ ರಕ್ಷಣಾ ಸಚಿವಾಲಯ ಬುಧವಾರ ಹೇಳಿಕೊಂಡಿದೆ.

Advertisement

ಉಕ್ರೇನ್‌ ರಾಜಧಾನಿ ಕೀವ್‌ ಒಂದರಲ್ಲಿಯೇ ಭಾನುವಾರ 950 ಮಂದಿ ಸೈನಿಕರು ಜೀವ ಕಳೆದುಕೊಂಡಿದ್ದಾರೆ. ಯುದ್ಧ ಸಿದ್ಧತೆ ನಡೆಸದೇ ಇದ್ದ ಸೈನಿಕರ ಮೇಲೆ ಉಕ್ರೇನ್‌ ದಾಳಿ ಎಸಗಿದ್ದರಿಂದ ಈ ಬೆಳವಣಿಗೆಯಾಗಿದೆ ಎಂದು ಹೇಳಲಾಗುತ್ತಿದೆ.

ಫೆ.24ರಂದು ರಷ್ಯಾ ದಾಳಿ ಶುರು ಮಾಡಿದ ಬಳಿಕ ಇದೇ ಮೊದಲ ಬಾರಿಗೆ ಉಕ್ರೇನ್‌ ಯೋಧರು ಅತ್ಯಂತ ಆಕ್ರಮಣಕಾರಿ ದಾಳಿ ನಡೆಸಿದ್ದಾರೆ ಎಂಬ ವಿಶ್ಲೇಷಣೆಗಳು ನಡೆದಿವೆ. ಪ್ರತಿ ದಾಳಿ ನಡೆಸಲು ಇತ್ತೀಚಿನ ದಿನಗಳಲ್ಲಿ ರಷ್ಯಾ ಸೇನೆಗೆ ಆಯ್ಕೆ ಮಾಡಿರುವ ಯೋಧರಿಗೆ ಕಠಿಣ ಸಂದರ್ಭಗಳಲ್ಲಿ ಯುದ್ಧ ನಡೆಸಲು ತರಬೇತಿಯೇ ಇಲ್ಲ.

ಹೀಗಾಗಿಯೇ, ಕ್ಷಿಪ್ರವಾಗಿ ಅವರು ಅಸುನೀಗುತ್ತಿದ್ದಾರೆ. ಕಳೆದ ತಿಂಗಳ ಮಧ್ಯಭಾಗದಿಂದಲೇ ಯುದ್ಧಭೂಮಿಯಲ್ಲಿ ಕಾರ್ಯಾಚರಣೆ ನಡೆಸಿ ಅನುಭವ ಇಲ್ಲದವರನ್ನು ನೇಮಕ ಮಾಡಿಕೊಳ್ಳುತ್ತಿದೆ ಎಂದು ಉಕ್ರೇನ್‌ ಸರ್ಕಾರ ಹೇಳಿಕೊಂಡಿದೆ.

ಮತ್ತೆ ಸೇರ್ಪಡೆ:
ಮತ್ತೂಂದು ಕುತೂಹಲಕಾರಿ ಬೆಳವಣಿಗೆಯಲ್ಲಿ ಯುದ್ಧ ಕಾಲದಲ್ಲಿ ಧಾನ್ಯ ಮತ್ತು ಆಹಾರ ವಸ್ತುಗಳನ್ನು ಸಾಗಿಸುವ ಒಪ್ಪಂದಕ್ಕೆ ಟರ್ಕಿ ಮತ್ತು ರಷ್ಯಾಗಳು ಸೇರ್ಪಡೆಯಾಗುವುದಾಗಿ ಹೇಳಿಕೊಂಡಿವೆ. ಕಪ್ಪು ಸಮುದ್ರ ಪ್ರದೇಶದಲ್ಲಿ ಆಹಾರ ವಸ್ತುಗಳನ್ನು ಸಾಗಿಸುವ ಕಂಟೈನರ್‌ ಹಡುಗಳ ಮೇಲೆ ಉಕ್ರೇನ್‌ ಪಡೆಗಳು ದಾಳಿ ನಡೆಸಲಾರವು ಎಂಬ ಬಗ್ಗೆ ಖಾತರಿ ಸಿಗುತ್ತಿದ್ದಂತೆಯೇ ಈ ಒಪ್ಪಂದಕ್ಕೆ ಮರು ಪ್ರವೇಶ ಮಾಡುವುದಾಗಿ ರಷ್ಯಾ ಹೇಳಿದೆ.

Advertisement

ಟರ್ಕಿ ಮತ್ತು ಉಕ್ರೇನ್‌ನ ದಕ್ಷಿಣ ಭಾಗದ ವ್ಯಾಪ್ತಿಯಲ್ಲಿ ಆಹಾರ ವಸ್ತುಗಳನ್ನು ಸಾಗಿಸುವ ಕಂಟೈನರ್‌ ಹಡಗುಗಳ ಮೇಲೆ ದಾಳಿ ನಡೆಸುವುದಿಲ್ಲ ಎಂದು ಉಕ್ರೇನ್‌ ಹೇಳಿದೆ. ಅದನ್ನು ಪಾಲಿಸುವ ಭರವಸೆ ನಮಗೆ ಇದೆ ಎಂದು ರಷ್ಯಾದ ರಕ್ಷಣಾ ಖಾತೆ ಮಾಸ್ಕೋದಲ್ಲಿ ತಿಳಿಸಿದೆ. ರಷ್ಯಾ ವಶದಲ್ಲಿ ಇರುವ ಕ್ರೀಮಿಯಾ ಪ್ರದೇಶದಲ್ಲಿ ಆಹಾರ ವಸ್ತುಗಳನ್ನು ಸಾಗಿಸುವ ವೇಳೆ ಡ್ರೋನ್‌ ದಾಳಿ ನಡೆಸಲಾಗಿತ್ತು ಎಂದು ಆರೋಪಿಸಲಾಗಿತ್ತು.

ಟರ್ಕಿ ಮಧ್ಯಸ್ಥಿಕೆ:
ಟರ್ಕಿಯ ಅಧ್ಯಕ್ಷ ರೀಪ್‌ ತಯ್ಯಿಪ್‌ ಎಡೋಗನ್‌ ಅವರು ರಷ್ಯಾ ರಕ್ಷಣಾ ಸಚಿವ ಸಗೇ ಶೋಗು ಜತೆಗೆ ಮಾತುಕತೆ ನಡೆಸಿದ್ದಾರೆ. ಅದರ ಫ‌ಲವಾಗಿಯೇ ಆಹಾರ ಕೊರತೆ ಉಂಟಾಗಿರುವ ಕೆಲವು ರಾಷ್ಟ್ರಗಳಿಗೆ ಅದನ್ನು ಪೂರೈಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಶ್ರಮಿಸುತ್ತಿತ್ತು. ಅದಕ್ಕೆ ರಷ್ಯಾ ಒಪ್ಪಿದೆ. ಸೋಮವಾರವೇ ಕೆಲವು ರಾಷ್ಟ್ರಗಳಿಗೆ ಶೇ.23 ಆಹಾರ ಪೂರೈಕೆಯಾಗಿದೆ. ಆಹಾರ ಪೂರೈಕೆ ಸರಣಿಯಿಂದ ರಷ್ಯಾ ದೂರ ಉಳಿದಿದ್ದರೆ ಸೋಮಾಲಿಯಾ, ಡಿಜಿಬೌತಿ ಮತ್ತು ಸುಡಾನ್‌ ಸೇರಿದಂತೆ ಆಫ್ರಿಕಾ ಖಂಡದ ಹಲವು ರಾಷ್ಟ್ರಗಳಿಗೆ ತೊಂದರೆ ಉಂಟಾಗುತ್ತಿತ್ತು. ಉಕ್ರೇನ್‌ ಮತ್ತು ರಷ್ಯಾ ಜಗತ್ತಿಗೆ ಹೆಚ್ಚಿನ ಪ್ರಮಾಣದಲ್ಲಿ ಗೋಧಿ, ಬಾರ್ಲಿ, ಸೂರ್ಯಕಾಂತಿ ಎಣ್ಣೆ ಉತ್ಪಾದಿಸಿ ಜಗತ್ತಿನ ಮಾರುಕಟ್ಟೆಗೆ ನೀಡುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next