ವಾಷಿಂಗ್ಟನ್: ಉಕ್ರೇನ್ ನ ಹಲವು ನಗರಗಳ ಮೇಲೆ ರಷ್ಯಾ ಪಡೆಗಳು ಏಕಾಏಕಿ ಭಾರೀ ಪ್ರಮಾಣದಲ್ಲಿ ಮಿಸೈಲ್ ದಾಳಿ ನಡೆಸಿರುವುದಕ್ಕೆ ಜಿ 7 ದೇಶಗಳ ಒಕ್ಕೂಟ ತೀವ್ರವಾಗಿ ಖಂಡಿಸಿದ್ದು, ಒಂದು ವೇಳೆ ಉಕ್ರೇನ್ ಮೇಲೆ ಪರಮಾಣು ಶಸ್ತ್ರಾಸ್ತ್ರ ಬಳಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಷ್ಯಾಕ್ಕೆ ಎಚ್ಚರಿಕೆ ನೀಡಿವೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮಂಗಳೂರು: ಕರ್ತವ್ಯನಿರತ ಮಹಿಳಾ ಪೇದೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನ
ಜಿ 7 ದೇಶಗಳ ಮುಖಂಡರು ( ಬ್ರಿಟನ್, ಜರ್ಮನಿ, ಇಟಲಿ, ಕೆನಡಾ, ಅಮೆರಿಕ, ಫ್ರಾನ್ಸ್ ಮತ್ತು ಜಪಾನ್) ಹೊರಡಿಸಿರುವ ಪ್ರಕಟಣೆಯಂತೆ, ಉಕ್ರೇನ್ ಹತ್ತಿಕ್ಕಲು ಬೇಜವಾಬ್ದಾರಿತನದಿಂದ ಪರಮಾಣು ಶಸ್ತ್ರಾಸ್ತ್ರ ಬಳಸುವುದಾಗಲಿ, ಮಿಸೈಲ್ ದಾಳಿ ನಡೆಸುವ ರಷ್ಯಾದ ಕ್ರಮವನ್ನು ಬಲವಾಗಿ ಖಂಡಿಸುತ್ತೇವೆ.
ಪರಮಾಣು ಶಸ್ತ್ರಾಸ್ತ್ರ ಬಳಕೆಯಿಂದ ಜಾಗತಿಕ ಶಾಂತಿ ಮತ್ತು ಭದ್ರತೆಗೆ ಅಪಾಯ ಎದುರಾಗಲಿದೆ. ರಷ್ಯಾ ಯಾವುದೇ ರೀತಿಯಲ್ಲೂ ಪರಮಾಣು, ಜೈವಿಕ ಅಥವಾ ರಾಸಾಯನಿಕ ಶಸ್ತ್ರಾಸ್ತ್ರ ಬಳಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗಲಿದೆ ಎಂದು ತಿಳಿಸಿದೆ.
ಸೋಮವಾರ ರಷ್ಯಾ ಪಡೆಗಳು ಉಕ್ರೇನ್ ನ ಕೀವ್ ಸೇರಿದಂತೆ ಹಲವು ನಗರಗಳ ಮೇಲೆ ಮಿಸೈಲ್ ದಾಳಿ ನಡೆಸಿತ್ತು. ಈ ಘಟನೆ ನಂತರ ಜಿ 7 ದೇಶಗಳ ಒಕ್ಕೂಟ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜೊತೆ ಸಭೆ ನಡೆಸಿದ ಬಳಿಕ ಎಚ್ಚರಿಕೆಯ ಸಂದೇಶ ರವಾನಿಸಿದೆ ಎಂದು ವರದಿ ವಿವರಿಸಿದೆ.