Advertisement

ಮರಿಯುಪೋಲ್‌ ಮೇಲೇಕೆ ಕಣ್ಣು? ಬಂದರು ನಗರಿ ವಶಕ್ಕೆ ಪಡೆಯಲು ರಷ್ಯಾ ಹರಸಾಹಸ

02:07 AM Mar 08, 2022 | Team Udayavani |

ಕೀವ್‌/ಮಾಸ್ಕೋ: ಕೆಲವು ನಗರಗಳಲ್ಲಿ ಕದನ ವಿರಾಮ ಘೋಷಿಸಿರುವ ರಷ್ಯಾ, ಉಕ್ರೇನ್‌ ವಿರುದ್ಧದ ಆಕ್ರಮಣವನ್ನು ಮುಂದುವರಿಸಿದೆ. ಸೋಮವಾರವೂ ಹಲವು ನಗರಗಳಲ್ಲಿ ಶೆಲ್‌, ವೈಮಾನಿಕ ದಾಳಿಗಳು ನಡೆದಿವೆ. ಕೀವ್‌ನ ಸಮೀಪದ ಗೋಸ್ಟೋಮೆಲ್‌ನಲ್ಲಿ ಮೇಯರ್‌ನಲ್ಲೇ ರಷ್ಯಾ ಪಡೆಗಳು ಹತ್ಯೆಗೈದಿವೆ. ಇರ್ಪಿನ್‌ನಲ್ಲಿ ವಸತಿ ಕಟ್ಟಡಗಳನ್ನು ಗುರಿಯಾಗಿಸಿ ಕೊಂಡು ದಾಳಿ ನಡೆಸಲಾಗಿದೆ.

Advertisement

ರವಿವಾರ ರಾತ್ರಿ ವಿನ್ನಿಷಿಯಾ ಏರ್‌ಪೋರ್ಟ್‌ ಮೇಲೆ ನಡೆಸಿದ ದಾಳಿಯಲ್ಲಿ ಮೃತಪಟ್ಟ ವರ ಸಂಖ್ಯೆ 9ಕ್ಕೇರಿದೆ. ಈ ನಡುವೆ, ಉಕ್ರೇನ್‌ನ ಮರಿಯುಪೋಲ್‌ನಲ್ಲಿ ರಷ್ಯಾ ಈಗಾಗಲೇ 3 ಬಾರಿ ಕದನ ವಿರಾಮ ಘೋಷಿಸಿದ್ದು, ಮೂರೂ ಬಾರಿಯೂ ಅದು ಉಲ್ಲಂಘನೆಯಾದ ಕಾರಣ ನಾಗರಿಕರ ಸ್ಥಳಾಂತರ ಯಶಸ್ವಿಯಾಗಿಲ್ಲ. ಆದರೂ, ಮರಿಯುಪೋಲ್‌ನಲ್ಲಿ ಸ್ಫೋಟದ ಸದ್ದು ಮಾತ್ರ ನಿಂತಿಲ್ಲ. ನಿರಂತರವಾಗಿ ಅಲ್ಲಿ ವೈಮಾನಿಕ ದಾಳಿಗಳು ನಡೆಯುತ್ತಲೇ ಇದೆ. ರಷ್ಯಾ ಈ ನಗರವನ್ನು ಅತಿಕ್ರಮಿಸಿಕೊಳ್ಳಲು ಸರ್ವಪ್ರಯತ್ನ ನಡೆಸುತ್ತಿರುವುದಕ್ಕೆ ಕಾರಣವೂ ಇದೆ.

ಈ ನಗರವೇ ಮೈನ್‌ ಟಾರ್ಗೆಟ್‌ ಏಕೆ?: ಮರಿಯುಪೋಲ್‌ ಎನ್ನುವುದು ಬಂದರು ನಗರಿ. ಇದು ಡಾನೆಸ್ಕ್ನ ಎರಡನೇ ಅತಿದೊಡ್ಡ ನಗರ. ಅಂದರೆ, ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳ ಬಾಹುಳ್ಯ ವಿರುವ ಲುಗಾಂಸ್ಕ್ ಮತ್ತು ಡಾನೆಸ್ಕ್ನಿಂದ ಕೇವಲ 10 ಕಿ.ಮೀ. ದೂರದಲ್ಲಿ ಮರಿಯುಪೋಲ್‌ ಇದೆ. ಈ ನಗರವನ್ನು ವಶಕ್ಕೆ ಪಡೆದರೆ, ಕ್ರಿಮಿಯಾದಲ್ಲಿರುವ ತನ್ನ ಪಡೆಗಳನ್ನು ಸೇತುವೆಯ ಮೂಲಕ ಡಾನೆಸ್ಕ್ ಮತ್ತು ಲುಗಾಂಸ್ಕ್ಗೆ ಕಳುಹಿಸಲು ರಷ್ಯಾಗೆ ಸಾಧ್ಯವಾಗುತ್ತದೆ. ಜತೆಗೆ ಕ್ರಿಮಿಯಾದಿಂದ ಸರಕುಗಳ ಸಾಗಣೆಯೂ ಸುಲಭವಾಗುತ್ತದೆ. 2014ರಿಂದಲೂ ರಷ್ಯಾ ಈ ನಗರದ ಮೇಲೆ ಕಣ್ಣಿಟ್ಟಿದೆ.

ಉಕ್ರೇನ್‌ಗೆ ಹೇಗೆ ಸಮಸ್ಯೆ?: ಮರಿಯುಪೋಲ್‌ ಅನ್ನು ಉಕ್ರೇನ್‌ ಕಳೆದುಕೊಂಡರೆ, ತನ್ನ ನೌಕಾ ಸಂಪರ್ಕವನ್ನು ಕಳೆದುಕೊಂಡಂತೆ. ಅದು ದೇಶಕ್ಕೆ ಭಾರೀ ಆರ್ಥಿಕ ಹೊಡೆತ ನೀಡಲಿದೆ. ಜತೆಗೆ ರಷ್ಯಾ ಪಶ್ಚಿಮದತ್ತ ಅಂದರೆ ಒಡೆಸ್ಸಾವನ್ನು ಸುತ್ತುವರಿಯುತ್ತಿರುವ ಕಾರಣ ಉಕ್ರೇನ್‌ ಏಕಾಂಗಿಯಾಗಲಿದೆ. ಅಝೋವ್‌ ಸಮುದ್ರ ಪ್ರದೇಶದ ಅತಿ ದೊಡ್ಡ ಬಂದರು ನಗರಿಯಾದ ಮರಿಯುಪೋಲ್‌, ಉಕ್ರೇ ನ್‌ನ ಪ್ರಮುಖ ಕೈಗಾರಿಕ ಕೇಂದ್ರವೂ ಹೌದು. ಉಕ್ಕು ಮತ್ತು ಕಬ್ಬಿಣ ತಯಾರಿಕೆಯ ದೊಡ್ಡ ದೊಡ್ಡ ಕಾರ್ಖಾನೆಗಳೂ ಇಲ್ಲಿವೆ.

ಹೀಗಾಗಿ ಮರಿಯುಪೋಲ್‌ ಅನ್ನು ಹಿಡಿತಕ್ಕೆ ಪಡೆದರೆ ಉಕ್ರೇನ್‌ ಸರಕಾರದ ಮೇಲೆ ಆರ್ಥಿಕ ಒತ್ತಡ ಹೆಚ್ಚಾಗುತ್ತದೆ. ಆಗ ಉಕ್ರೇನ್‌ನ ಸೇನಾ ಕಾರ್ಯಾಚರಣೆಯು ಪತನಗೊಳ್ಳುತ್ತದೆ. ಈ ಲೆಕ್ಕಾಚಾರ ಇಟ್ಟುಕೊಂಡೇ ಪುತಿನ್‌ ಮರಿಯುಪೋಲ್‌ನತ್ತ ಕಣ್ಣು ನೆಟ್ಟಿದ್ದಾರೆ.

Advertisement

ವ್ಯೂಹಾತ್ಮಕವಾಗಿ ಪ್ರಮುಖ
ಪ್ರಸ್ತುತ ರಷ್ಯಾವು ಕೇವಲ 1 ಸೇತುವೆ ಮೂಲಕ ಕ್ರಿಮಿಯಾವನ್ನು ಸಂಪರ್ಕಿಸುತ್ತದೆ. ಮರಿಯುಪೋಲ್‌ ಅನ್ನು ತನ್ನ ಸುಪರ್ದಿಗೆ ಪಡೆದರೆ ಸಂಪರ್ಕ ಜಾಲ ವಿಸ್ತರಣೆಯಾಗುವುದರ ಜತೆಗೆ ಉಕ್ರೇನ್‌ನ ಅತಿದೊಡ್ಡ ಬಂದರು, ಲ್ಯಾಂಡ್‌ ಕಾರಿಡಾರ್‌ ಕೂಡ ರಷ್ಯಾದ ಪಾಲಾಗುತ್ತದೆ. ಆಗ ಅಝೋವ್‌ ಕರಾವಳಿಯ ನಿಯಂತ್ರಣವೂ ರಷ್ಯಾ ಕೈಗೆ ಬರುತ್ತದೆ.

ಸ್ನೇಹ ತೊರೆದ ದೇಶಗಳ ಪಟ್ಟಿ
ಉಕ್ರೇನ್‌ ಮೇಲೆ ದಾಳಿ ಮಾಡಿದ ಕಾರಣ ತನ್ನ ಮೇಲೆ ನಿರ್ಬಂಧ ಹೇರಿರುವ ಹಾಗೂ ತನ್ನೊಂದಿಗಿನ ಸ್ನೇಹ ಸಂಬಂಧವನ್ನು ಕಡಿದುಕೊಂಡಿರುವ ರಾಷ್ಟ್ರಗಳ ಪಟ್ಟಿಯನ್ನು ರಷ್ಯಾ ಸೋಮವಾರ ತಯಾರಿಸಿದೆ. ಆ ಪಟ್ಟಿಯಲ್ಲಿ ಆಸ್ಟ್ರೇಲಿಯಾ, ಕೆನಡಾ, ಐರೋಪ್ಯ ಒಕ್ಕೂಟ, ಐಸ್‌ಲ್ಯಾಂಡ್‌, ಜಪಾನ್‌, ಮೊನ್ಯಾಕೋ, ಮಾಂಟೆನಗ್ರೋ, ನ್ಯೂಜಿಲೆಂಡ್‌, ನಾರ್ವೆ, ತೈವಾನ್‌, ಸ್ಯಾನ್‌ ಮರೀನೋ, ಸಿಂಗಾಪುರ, ದಕ್ಷಿಣ ಕೊರಿಯಾ, ಸ್ವಿಜರ್ಲೆಂಡ್‌, ಉಕ್ರೇನ್‌, ಯುಕೆ ಮತ್ತು ಅಮೆರಿಕದ ಹೆಸರುಗಳಿವೆ.

ಬೆಲಾರಸ್‌ ತೊರೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳು
ಉಕ್ರೇನ್‌ನಲ್ಲಿ ರಷ್ಯಾ ಸೈನಿಕರ ಕ್ರೌರ್ಯಗಳು ಪಕ್ಕದ ಬೆಲಾರಸ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳನ್ನು ಬೆಚ್ಚಿಬೀಳಿಸಿದೆ. ಹೀಗಾಗಿ ಬೆಲಾರಸ್‌ನಿಂದ ಅವರು ಭಾರತಕ್ಕೆ ಮರಳಲು ಆರಂಭಿಸಿದ್ದಾರೆ. ಯುದ್ಧವು ದಿನೇ ದಿನೆ ಹೆಚ್ಚಾಗುತ್ತಿರುವ ಕಾರಣ, ಮುಂದೇನಾಗುತ್ತದೋ ಎಂಬ ಭಯ ಆವರಿಸಿದೆ. ಹೀಗಾಗಿ ನಾವು ಊರಿಗೆ ಟಿಕೆಟ್‌ ಬುಕ್‌ ಮಾಡತೊಡಗಿದ್ದೇವೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಅಂಥದ್ದೇನೂ ಆಗುವುದಿಲ್ಲ ಎಂದು ಸ್ಥಳೀಯ ಆಡಳಿತ ಹಾಗೂ ವಿಶ್ವವಿದ್ಯಾನಿಲಯಗಳು ಭರವಸೆ ನೀಡುತ್ತಿದ್ದರೂ, ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ನಾವು ಇಲ್ಲ ಎನ್ನುತ್ತಿದ್ದಾರೆ ಭಾರತೀಯರು.

ಐಸಿಜೆ ವಿಚಾರಣೆಗೆ ರಷ್ಯಾ ಗೈರು
ರಷ್ಯಾ ತನ್ನ ವಿರುದ್ಧ ಆರಂಭಿಸಿರುವ ಸೇನಾ ದಾಳಿಯನ್ನು ಕೂಡಲೇ ನಿಲ್ಲಿಸಬೇಕೆಂದು ಉಕ್ರೇನ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ (ಐಸಿಜೆ) ಸೋಮವಾರದಿಂದ ಆರಂಭವಾಗಿದೆ. ಆದರೆ, ಮೊದಲ ದಿನದ ವಿಚಾರಣೆಗೆ ರಷ್ಯಾದ ವಕೀಲರು, ಪ್ರತಿನಿಧಿಗಳು ಹಾಜರಿರಲಿಲ್ಲ. ನ್ಯಾಯಪೀಠದಲ್ಲಿದ್ದ ಅಮೆರಿಕ ಮೂಲದ ನ್ಯಾಯಮೂರ್ತಿ ಜೋನ್‌ ಇ. ಡೊನೊಗ್‌ ಅವರು, ನ್ಯಾಯಾಲಯದ ವಿಚಾರಣೆಗೆ ರಷ್ಯಾ ಹಾಜರಾಗುವುದಿಲ್ಲ ಎಂದು ನೆದರ್ಲೆಂಡ್‌ನ‌ಲ್ಲಿರುವ ರಷ್ಯಾದ ರಾಯಭಾರಿ ತಮಗೆ ಈ ಮೊದಲೇ ತಿಳಿಸಿದ್ದಾಗಿ ಹೇಳಿದರು. ರಷ್ಯಾದ ಅನುಪಸ್ಥಿತಿಯಲ್ಲೇ ವಿಚಾರಣೆ ಮುಂದುವರಿಯಿತು. ಈ ಪ್ರಕರಣದ ವಿಚಾರಣೆಗಾಗಿ ಎರಡು ದಿನಗಳನ್ನು ನಿಗದಿಪಡಿಸಲಾಗಿದೆ. ಮೊದಲ ದಿನದ ಕಲಾಪದಲ್ಲಿ ಉಕ್ರೇನ್‌ಗೆ ಅಹವಾಲು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಎರಡನೇ ದಿನದ ಕಲಾಪದಲ್ಲಿ, ಉಕ್ರೇನ್‌ನ ಆರೋಪಗಳಿಗೆ ಉತ್ತರ ನೀಡಲು ಅವಕಾಶ ಕಲ್ಪಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next