Advertisement

ತೂಗುಯ್ಯಾಲೆಯಲ್ಲಿ ಉಕ್ರೇನ್‌ ಭವಿಷ್ಯ

12:48 AM Mar 06, 2022 | Team Udayavani |

ಕೀವ್‌/ಮಾಸ್ಕೋ: ಉಕ್ರೇನ್‌ ಮೇಲೆ ರಷ್ಯಾದ ಅಮಾನುಷ ಆಕ್ರಮಣ ಆರಂಭವಾಗಿ 10 ದಿನಗಳು ಪೂರ್ಣಗೊಂಡಿವೆ.

Advertisement

ಶಾಂತಿಯುತವಾಗಿದ್ದ ರಾಷ್ಟ್ರವು ಯುದ್ಧದ ಬೆಂಕಿಗೆ ಸಿಲುಕಿ ಕರಕಲಾಗಿದೆ, ಅಪಾರ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿ ಉಂಟಾಗಿದೆ. ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದಾರೆ. ಉಕ್ರೇನ್‌ನ ನಗರಗಳು ಒಂದೊಂದಾಗಿ ರಷ್ಯಾದ ಮುಷ್ಟಿಗೆ ಬರುವ ಸ್ಥಿತಿಯಲ್ಲಿವೆ.

ಪರಿಸ್ಥಿತಿ ಇದೇ ರೀತಿ ಮುಂದುವರಿದರೆ, ಮುಂಬರುವ ವಾರಗಳು ಅಥವಾ ತಿಂಗಳುಗಳಲ್ಲಿ ಏನಾಗಬಹುದು ಎಂದು ಪಾಶ್ಚಿಮಾತ್ಯ ರಾಷ್ಟ್ರಗಳ ತಜ್ಞರು ವಿಶ್ಲೇಷಿಸಿದ್ದಾರೆ.

1. ರಷ್ಯಾ ಸೇನೆಯ ವಿಜಯ
ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಏರ್‌ಪವರ್‌, ವಿಧ್ವಂಸಕಾರಿ ಕ್ಷಿಪಣಿಗಳು ರಷ್ಯಾ ಬತ್ತಳಿಕೆಯಲ್ಲಿರುವ ಕಾರಣ, ಉಕ್ರೇನ್‌ ಅನ್ನು ರಷ್ಯಾ ಸೇನೆ ಸಂಪೂರ್ಣ ವಶಕ್ಕೆ ಪಡೆಯಬಹುದು. ಕೀವ್‌ನತ್ತ ಬರುತ್ತಿರುವ ಬೃಹತ್‌ ಪಡೆಯು ಕೆಲವೇ ದಿನಗಳಲ್ಲಿ ರಾಜಧಾನಿಯನ್ನು ಸುಪರ್ದಿಗೆ ಪಡೆಯುವ ಸಾಧ್ಯತೆ ಅಧಿಕವಾಗಿದೆ.

2. ಪುಟಿನ್‌ಗೆ ತಿರುಗುಬಾಣ
ಉಕ್ರೇನ್‌ ಮೇಲೆ ಯುದ್ಧ ಘೋಷಿಸಿರುವುದು ರಷ್ಯಾ ಅಧ್ಯಕ್ಷ ಪುಟಿನ್‌ಗೆ ತಿರುಗುಬಾಣವಾಗುವ ಸಾಧ್ಯತೆಯೂ ಇಲ್ಲದಿಲ್ಲ. ತನ್ನದೇ ದೇಶದೊಳಗೆ ತನ್ನ ವಿರುದ್ಧ ಅಸಮಾಧಾನ, ಪ್ರತಿರೋಧ ಸ್ಫೋಟಗೊಳ್ಳುತ್ತಿರುವುದನ್ನು ಪುಟಿನ್‌ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಪುಟಿನ್‌ ವಿರುದ್ಧ ಪ್ರತಿಭಟನೆ ನಡೆಸಿರುವ 6 ಸಾವಿರಕ್ಕೂ ಅಧಿಕ ರಷ್ಯನ್ನರನ್ನು ಬಂಧಿಸಲಾಗಿದೆ. ಯುದ್ಧದ ವರದಿ ಮಾಡುತ್ತಿದ್ದ ಸ್ವತಂತ್ರ ಚಾನೆಲ್‌ಗ‌ಳಿಗೆ ನಿಷೇಧ ಹೇರಲಾಗಿದೆ. ಈ ಎಲ್ಲ ನಿರ್ಧಾರಗಳು ಪುಟಿನ್‌ ಪತನಕ್ಕೆ ಕಾರಣವಾಗಲೂಬಹುದು. ಈಗಾಗಲೇ ಆಡಳಿತಾರೂಢ ಪಕ್ಷದಲ್ಲೇ ಕೆಲವು ಸಂಸದರು, ಖಾಸಗಿ ತೈಲ ಕಂಪನಿ ಲುಕಾಯಿಲ್‌, ಕೋಟ್ಯಧಿಪತಿ ಉದ್ಯಮಿಗಳು ಸಾರ್ವಜನಿಕವಾಗಿಯೇ ಪುಟಿನ್‌ ವಿರುದ್ಧ ಧ್ವನಿಯೆತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಜನಾಕ್ರೋಶವು ಸ್ಫೋಟಗೊಳ್ಳಬಹುದು ಅಥವಾ ಪುಟಿನ್‌ ಅರಮನೆಯೇ ಕ್ಷಿಪ್ರಕ್ರಾಂತಿಗೆ ಸಾಕ್ಷಿಯಾಗಬಹುದು. ಸೋವಿಯತ್‌ ಹಾಗೂ ರಷ್ಯಾ ಇತಿಹಾಸದಲ್ಲಿ ಈ ಹಿಂದೆಯೂ ಇಂಥದ್ದು ನಡೆದಿದೆ.

Advertisement

3. ಸೇನಾ ಗೋಜಲು
ಕಳೆದ 10 ದಿನಗಳಿಂದಲೂ ರಷ್ಯಾ ಪಡೆಯ ವಿರುದ್ಧ ಉಕ್ರೇನ್‌ನ ಸೇನೆ ಶಕ್ತಿಮೀರಿ ಹೋರಾಡುತ್ತಿದೆ. ರಾಜಧಾನಿ ಕೀವ್‌ ಅನ್ನು ವಶಪಡಿಸಿಕೊಳ್ಳಲು ರಷ್ಯಾದ ಪ್ಯಾರಾಟ್ರೂಪರ್‌ಗಳು ಮಾಡಿರುವ ಎಲ್ಲ ಯತ್ನವನ್ನೂ ಉಕ್ರೇನ್‌ ಸೈನಿಕರು ವಿಫ‌ಲಗೊಳಿಸಿದ್ದಾರೆ. ಆದರೆ, ವೈಮಾನಿಕವಾಗಿ ನಾವು ಬಲಿಷ್ಠರಾಗಿದ್ದೇವೆ ಎಂದು ರಷ್ಯಾ ಸೇನೆ ಹೇಳುತ್ತಿದೆ. ಇನ್ನೊಂದೆಡೆ, ಉಕ್ರೇನ್‌ ಸೇನೆಗೆ ಸಾಕಷ್ಟು ನಾಗರಿಕರೂ ಸೇರಿಕೊಂಡಿರುವ ಕಾರಣ, ರಷ್ಯಾ ಸೈನಿಕರ ನೈತಿಕ ಸ್ಥೆರ್ಯ ಕುಂದುತ್ತಿದೆ. ಹೀಗಾಗಿ ಇನ್ನೂ ಕೆಲವು ದಿನ ಸೇನಾಮಟ್ಟದ ಗೊಂದಲಗಳು ಮುಂದುವರಿಯಬಹುದು. ಜತೆಗೆ, ಜಾಗತಿಕ ದಿಗ್ಬಂಧನದಿಂದಾಗಿ ಪುಟಿನ್‌ ಲೆಕ್ಕಾಚಾರ ತಲೆಕೆಳಗಾಗಿದ್ದು ಕೂಡ ಉಕ್ರೇನ್‌ ಸೇನೆಗೆ ವರವಾಗುವ ಸಾಧ್ಯತೆಯಿದೆ.

4. ಸಂಘರ್ಷ ವಿಸ್ತರಣೆ:
ಅಮೆರಿಕ ನೇತೃತ್ವದ ನ್ಯಾಟೋ ಸೇನಾ ಮೈತ್ರಿಯ ನಾಲ್ಕು ಸದಸ್ಯ ರಾಷ್ಟ್ರಗಳೊಂದಿಗೆ ಉಕ್ರೇನ್‌ ಗಡಿ ಹಂಚಿಕೊಂಡಿದೆ. ಈ ಮೈತ್ರಿಯು, ಒಂದು ಸದಸ್ಯ ರಾಷ್ಟ್ರದ ಮೇಲಾಗುವ ದಾಳಿಯನ್ನು ಎಲ್ಲರ ವಿರುದ್ಧದ ದಾಳಿ ಎಂದೇ ಪರಿಗಣಿಸುತ್ತದೆ. ಉಕ್ರೇನ್‌ ಮೇಲೆ ಯುದ್ಧ ಸಾರಿರುವ ರಷ್ಯಾದಿಂದಾಗಿ ಅಕ್ಕಪಕ್ಕದ ಯಾವುದೇ ದೇಶಗಳಿಗೆ ತೊಂದರೆಯಾದರೂ ಅದು ನ್ಯಾಟೋ-ರಷ್ಯಾ ಯುದ್ಧವಾಗಿ ಮಾರ್ಪಾಡಾಗಲಿದೆ. ಮೂರನೇ ವಿಶ್ವಯುದ್ಧದ ಕಿಡಿ ಹೊತ್ತಿಕೊಳ್ಳಲು ಒಂದು ಸಣ್ಣ ಕ್ಷಿಪಣಿಯೋ, ಸೈಬರ್‌ದಾಳಿಯೋ ಸಾಕು.

5. ನ್ಯಾಟೋ ಮುಖಾಮುಖಿ:
ಯುದ್ಧದಲ್ಲಿ ಅಣ್ವಸ್ತ್ರಗಳ ಬಳಕೆಯೇನಾದರೂ ಆದರೆ ಎರಡೂ ಕಡೆ ದೊಡ್ಡ ಮಟ್ಟದ ವಿನಾಶ ಉಂಟಾಗುವುದು ಖಚಿತ. ಇದು ಎಲ್ಲರಿಗೂ ಗೊತ್ತಿರುವ ಕಾರಣ, ನ್ಯಾಟೋ ಮತ್ತು ರಷ್ಯಾ ನಡುವೆ 3ನೇ ವಿಶ್ವಯುದ್ಧದ ಸಾಧ್ಯತೆ ಕಡಿಮೆ. ಉಕ್ರೇನ್‌ ಗಗನವನ್ನು ಅಮೆರಿಕ ಮತ್ತು ಯುರೋಪ್‌ “ಹಾರಾಟ ನಿಷಿದ್ಧ ವಲಯ’ ಎಂದು ಘೋಷಿಸಬಾರದು ಎನ್ನುವುದು ರಷ್ಯಾದ ಉದ್ದೇಶ. ಹೀಗಾಗಿ, ಪುಟಿನ್‌ ಆಗಾಗ್ಗೆ “ಅಣ್ವಸ್ತ್ರ’ದ ಬಾಣ ಪ್ರಯೋಗಿಸುವ ಮೂಲಕ ಅಮೆರಿಕ ಮತ್ತು ಯುರೋಪ್‌ ಅನ್ನು ಬೆದರಿಸುವ ತಂತ್ರ ಅನುಸರಿಸುತ್ತಿದ್ದಾರೆ.

ಕತ್ತಲ ವಿರುದ್ಧ ಬೆಳಕು ಗೆಲ್ಲಲಿದೆ
ಯುದ್ಧ ಘೋಷಣೆಯಾದಾಗಿನಿಂದಲೂ ಉಕ್ರೇನ್‌ನಲ್ಲೇ ಇದ್ದುಕೊಂಡು ತನ್ನ ನಾಗರಿಕರು ಹಾಗೂ ಸೈನಿಕರಿಗೆ ಧೈರ್ಯ ತುಂಬಿ ಹೀರೋ ಎನಿಸಿಕೊಂಡಿರುವ ಅಧ್ಯಕ್ಷ ಝೆಲೆನ್‌ಸ್ಕಿ ಶನಿವಾರ ಪ್ಯಾರಿಸ್‌, ಪ್ರೇಗ್‌, ಲ್ಯಾನ್‌ ಮತ್ತು ಫ್ರಾಂಕ್‌ಫ‌ರ್ಟ್‌ನ ಸಾವಿರಾರು ಮಂದಿಯನ್ನು ಉದ್ದೇಶಿಸಿ ವರ್ಚುವಲ್‌ ಭಾಷಣ ಮಾಡಿದ್ದಾರೆ. “ರಷ್ಯಾದ ಆಕ್ರಮಣವನ್ನು ಖಂಡಿಸುತ್ತಿರುವ ನೀವೆಲ್ಲರೂ ಉಕ್ರೇನಿಯನ್ನರೇ. ಈ ಯುದ್ಧದಲ್ಲಿ ನಾವು ಖಂಡಿತಾ ಗೆಲ್ಲುತ್ತೇವೆ. ಅದು ಇಡೀ ಜಗತ್ತಿಗೆ ಪ್ರಜಾಸತ್ತಾತ್ಮಕ ಜಯವಾಗಿರಲಿದೆ. ಅದು ಕತ್ತಲ ವಿರುದ್ಧದ ಬೆಳಕಿನ ಜಯ, ಜೀತದ ವಿರುದ್ಧ ಸ್ವಾತಂತ್ರ್ಯದ ಜಯವಾಗಿರಲಿದೆ. ನಮ್ಮನ್ನು ಬೆಂಬಲಿಸಿದ ನಿಮಗೆಲ್ಲರಿಗೂ ಕೋಟಿ ಕೋಟಿ ವಂದನೆಗಳು’ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ. ಉಕ್ರೇನ್‌ ಅಧ್ಯಕ್ಷರು ಪರಾರಿಯಾಗಿದ್ದಾರೆ ಎಂದು ರಷ್ಯಾ ಸುಳ್ಳು ಹೇಳಿದ ಮಾರನೇ ದಿನವೇ ಅವರು ಈ ಭಾಷಣ ಮಾಡಿದ್ದು, ತಾನು ಇನ್ನೂ ತನ್ನ ದೇಶದಲ್ಲೇ ಇದ್ದೇನೆ ಎಂಬುದನ್ನು ಪುನರುಚ್ಚರಿಸಿದ್ದಾರೆ.

ಸಮರಾಂಗಣದಲ್ಲಿ
-ನಮ್ಮೆಲ್ಲ ಬೇಡಿಕೆಗಳನ್ನು ಈಡೇರಿಸಿದರೆ ಮಾತ್ರ ನಾವು ಉಕ್ರೇನ್‌ ಜತೆ ಮಾತುಕತೆ ನಡೆಸುತ್ತೇವೆ ಎಂದ ರಷ್ಯಾ ಅಧ್ಯಕ್ಷ ಪುತಿನ್‌
-ಯುದ್ಧವು ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ. ಸಮರ ನಿಲ್ಲುವವರೆಗೂ ರಷ್ಯಾ ಮೇಲೆ ಒತ್ತಡ ಹೆಚ್ಚಿಸಬೇಕು ಎಂದ ಅಮೆರಿಕ ವಿದೇಶಾಂಗ ಸಚಿವ
-ಯುದ್ಧ ಆರಂಭವಾದಾಗಿನಿಂದ 13 ಲಕ್ಷ ಮಂದಿ ಈವರೆಗೆ ಉಕ್ರೇನ್‌ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ಮಾಹಿತಿ
-ಮರಿಯುಪೋಲ್‌, ವೋಲ್ನೋವಾರಾ ನಗರ ದಲ್ಲಿ 5 ಗಂಟೆಗಳ ಕದನ ವಿರಾಮ ಘೋಷಿಸಿದ್ದ ರಷ್ಯಾ
-ಕದನ ವಿರಾಮ ಉಲ್ಲಂ ಸಿ ಏಕಾಏಕಿ ನಾಗರಿಕರ ಮೇಲೆ ಪುತಿನ್‌ ಪಡೆಯಿಂದ ಗುಂಡಿನ ದಾಳಿ
-ನಗರಗಳ ಮೇಲೆ ಬಾಂಬುಗಳ ಮಳೆ ನಿಲ್ಲಬೇಕೆಂದರೆ, ನೋ ಫ್ಲೈ ಝೋನ್‌ ಘೋಷಿಸಬೇಕು ಎಂದು ಉಕ್ರೇನ್‌ ಒತ್ತಾಯ
-ರಷ್ಯಾ ವಿರುದ್ಧ ದಿಗ್ಬಂಧನ ಬಹುತೇಕ “ಯುದ್ಧ ಘೋಷಣೆ’ಯೇ ಸರಿ; ಉಕ್ರೇನ್‌ನಲ್ಲಿ ಹಾರಾಟ ನಿರ್ಬಂಧ ವಲಯವೆಂದು ಯಾರಾದರೂ ಘೋಷಿಸಿದರೆ, ಅವರು ಸಂಘರ್ಷಕ್ಕೆ ಎಂಟ್ರಿಯಾದಂತೆ: ಅಧ್ಯಕ್ಷ ಪುತಿನ್‌

Advertisement

Udayavani is now on Telegram. Click here to join our channel and stay updated with the latest news.

Next