Advertisement
ಪೋಲೆಂಡ್, ಹಂಗೇರಿ, ಸ್ಲೋವಾಕಿಯಾ, ಮೋಲ್ಡಾವಾ, ರೊಮೇನಿಯಾ ದೇಶಗಳಿಗೆ ಸುಮಾರು 5 ಲಕ್ಷ ಉಕ್ರೇನಿಯನ್ನರು ವಲಸೆ ಹೋಗಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಕೀವ್ ಮತ್ತು ಖಾರ್ಕಿವ್ ನಗರದವರೇ ಹೆಚ್ಚಾಗಿ ದೇಶ ತೊರೆಯುತ್ತಿದ್ದಾರೆ ಎಂದು ಅದು ಹೇಳಿದೆ.
ಅಣ್ವಸ್ತ್ರ ಪಡೆಗಳಿಗೆ ಸನ್ನದ್ಧರಾಗಿರುವಂತೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೂಚನೆ ನೀಡಿರುವಂತೆಯೇ, ಎರಡು ದೇಶಗಳ ನಡುವೆ ಸಂಧಾನ ಮಾತುಕತೆ ನಡೆದಿದೆ. ಉಕ್ರೇನ್ – ಬೆಲಾರಸ್ ಗಡಿಯಲ್ಲಿ ಉಭಯ ದೇಶಗಳ ಪ್ರತಿನಿಧಿಗಳು ಮಾತುಕತೆ ನಡೆಸಿದ್ದಾರೆ. ಈ ಸಂದರ್ಭ ತತ್‌ಕ್ಷಣದಿಂದಲೇ ದಾಳಿ ನಿಲ್ಲಿಸಬೇಕು, ಎಲ್ಲ ಸೇನಾ ಸಿಬಂದಿಯನ್ನು ವಾಪಸ್ ಕರೆಸಿಕೊಳ್ಳಬೇಕು, ದಾನ್‌ಬಾಸ್‌ನ ಎರಡು ಪ್ರದೇಶಗಳನ್ನು ಸ್ವತಂತ್ರ ಎಂದು ಘೋಷಿಸಿರುವುದನ್ನು ಹಿಂಪಡೆಯಬೇಕು ಎಂದು ಉಕ್ರೇನ್ ಪಟ್ಟು ಹಿಡಿದಿದೆ. ಇದಕ್ಕೆ ರಷ್ಯಾ ಪ್ರತಿಕ್ರಿಯೆ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಜನವಸತಿ ಪ್ರದೇಶಗಳೇ ಟಾರ್ಗೆಟ್
ರಷ್ಯಾ ಆಕ್ರಮಣ ಐದು ದಿನ ಪೂರೈಸಿದ್ದು, ಸೋಮವಾರ ದಾಳಿಯನ್ನು ತೀವ್ರಗೊಳಿಸಿದೆ. ಕೀವ್ ಮತ್ತು ಖಾರ್ಕಿವ್ ನಗರಗಳ ಜನವಸತಿ ಕೇಂದ್ರಗಳನ್ನೇ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಕೀವ್ ಮೇಲೆ ರಷ್ಯಾ ಪ್ರಬಲ ದಾಳಿ ನಡೆಸುತ್ತಿದ್ದರೂ, ನಾಗರಿಕರ ಪ್ರತಿರೋಧದಿಂದಾಗಿ ನಗರವನ್ನು ಸಂಪೂರ್ಣವಾಗಿ ವಶಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಅಲ್ಲದೆ, ಅತ್ತ ಖಾರ್ಕಿವ್ ನಗರದಲ್ಲೂ ರಷ್ಯಾದ ದಾಳಿಯಿಂದಾಗಿ ಅಪಾರ ಪ್ರಮಾಣದ ಹಾನಿಯುಂಟಾಗಿದೆ.
Related Articles
ರಷ್ಯಾ ಸೇನೆಯ ದಾಳಿಗೆ ಹೆದರಿ ಲಕ್ಷಾಂತರ ಸಂಖ್ಯೆಯಲ್ಲಿ ಜನ ದೇಶ ಬಿಟ್ಟು ಹೋಗುತ್ತಿದ್ದಾರೆ. ಕಳೆದ ಗುರುವಾರ ದಿಂದ ಇಲ್ಲಿಯವರೆಗೆ ಪೋಲೆಂಡ್‌ಗೆ 1.56 ಲಕ್ಷ ಮಂದಿ ವಲಸೆ ಹೋಗಿದ್ದಾರೆ. ಯಾವುದೇ ದಾಖಲೆಗಳು ಇಲ್ಲದೇ ಈ ಜನರನ್ನು ಪೋಲೆಂಡ್ ಸ್ವೀಕಾರ ಮಾಡುತ್ತಿದೆ.
Advertisement
ಹಂಗೇರಿಗೆ 70 ಸಾವಿರ ಮಂದಿ ತೆರಳಿದ್ದಾರೆ. ಸ್ಲೋವಾಕಿಯಾ ಕೂಡ ಉಕ್ರೇನ್ ನಾಗರಿಕರಿಗೆ ಗಡಿ ತೆರೆದಿದೆ. ಆದರೆ ಇದುವರೆಗೆ ಎಷ್ಟು ಮಂದಿ ಅಲ್ಲಿಗೆ ತೆರಳಿದ್ದಾರೆ ಎಂಬುದು ಬಹಿರಂಗವಾಗಿಲ್ಲ. ಹಾಗೆಯೇ, ಮೋಲ್ಡಾವಾ ದೇಶ 15 ಸಾವಿರಕ್ಕೂ ಹೆಚ್ಚು ಹಾಗೂ ರೊಮೇನಿಯಾ 7 ಸಾವಿರ ಮಂದಿಗೆ ಆಶ್ರಯ ಕೊಟ್ಟಿದೆ.
ನೇರವಾಗಿ ಗಡಿಗೆ ಬರಬೇಡಿಯುದ್ಧಪೀಡಿತ ಪ್ರದೇಶಗಳಿಂದ ನೇರವಾಗಿ ಪೋಲೆಂಡ್, ಸ್ಲೋವಾಕಿಯಾ, ರೊಮೇನಿಯಾ, ಹಂಗೇರಿ ಮತ್ತು ಮೋಲ್ಡಾವಾ ಗಡಿಗಳಿಗೆ ಬರಬೇಡಿ. ಸದ್ಯ ನೀವು ಎಲ್ಲಿದ್ದೀರೋ ಅಲ್ಲಿಯೇ ಸುರಕ್ಷಿತವಾಗಿ ಇರಿ. ಅಧಿಕಾರಿಗಳ ಜತೆ ಸಂಪರ್ಕದಲ್ಲಿ ಇದ್ದುಕೊಂಡು ಗಡಿಗೆ ತೆರಳಬೇಕು ಎಂದು ಕೇಂದ್ರ ಸರಕಾರವು ವಿದ್ಯಾರ್ಥಿಗಳಿಗೆ ಸೂಚಿಸಿದೆ. ಈಗಾಗಲೇ 8 ಸಾವಿರ ಭಾರತೀಯರು ಉಕ್ರೇನ್ ತೊರೆದಿದ್ದು, ಇದರಲ್ಲಿ 1,396 ಮಂದಿಯನ್ನು ಸ್ವದೇಶಕ್ಕೆ ಕರೆತರಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಇನ್ನೂ ಮೂರು ವಿಮಾನಗಳು ತೆರಳಲಿವೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. 36 ದೇಶಗಳಿಗೆ ರಷ್ಯಾ ವಾಯು ಪ್ರದೇಶ ಬಂದ್
ಚೀನ, ಭಾರತ, ಯುಎಇ ಹೊರತು ಬಹುತೇಕ ಪ್ರಬಲ ದೇಶಗಳು ರಷ್ಯಾ ಮೇಲೆ ದಿಗ್ಬಂಧನ ವಿಧಿಸುತ್ತಲೇ ಇವೆ. ಸ್ವಿಫ್ಟ್ ನಿಂದ ರಷ್ಯಾವನ್ನು ಹೊರಹಾಕುವ ನಿರ್ಧಾರಕ್ಕೆ ಸೋಮವಾರ ದಕ್ಷಿಣ ಕೊರಿಯಾ, ಜರ್ಮನಿ ಸಮ್ಮತಿ ಸೂಚಿಸಿವೆ. ಇದಕ್ಕೆ ಪ್ರತಿಯಾಗಿ ಇಂಗ್ಲೆಂಡ್, ಕೆನಡಾ ಸಹಿತ 36 ದೇಶಗಳಿಗೆ ರಷ್ಯಾ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಈಗಲೇ ಐರೋಪ್ಯ ಒಕ್ಕೂಟದ ಸದಸ್ಯತ್ವಕ್ಕೆ ಉಕ್ರೇನ್ ಆಗ್ರಹ
ರಷ್ಯಾದ ಆಕ್ರಮಣವನ್ನು ಸಮರ್ಥವಾಗಿಯೇ ಎದುರಿಸುತ್ತಿರುವ ಉಕ್ರೇನ್, ಇನ್ನೊಂದೆಡೆ ಈ ಕ್ಷಣವೇ ಐರೋಪ್ಯ ಒಕ್ಕೂಟ ಮತ್ತು ನ್ಯಾಟೋ ಸದಸ್ಯತ್ವ ನೀಡಿ ಎಂದು ಆಗ್ರಹಿಸಿದೆ. ಯುಎಸ್‌ಎಸ್‌ಆರ್‌ನಿಂದ ಪ್ರತ್ಯೇಕವಾದ ಹಲವಾರು ದೇಶಗಳು ಈಗಾಗಲೇ ಐರೋಪ್ಯ ಒಕ್ಕೂಟದೊಳಗೆ ಸೇರಿವೆ. ಆದರೆ, ಉಕ್ರೇನ್ ಮಾತ್ರ ಇನ್ನೂ ಸೇರಿಲ್ಲ. ಅಲ್ಲದೆ ಒಮ್ಮೆ ಐರೋಪ್ಯ ಒಕ್ಕೂಟಕ್ಕೆ ಸೇರಿದರೆ, ನ್ಯಾಟೋಗೆ ಸೇರುವುದು ಸುಲಭವಾಗಲಿದೆ. ನಾಲ್ವರು ಕೇಂದ್ರ ಸಚಿವರಿಗೆ ಹೊಣೆ
ಕೇಂದ್ರ ಸರಕಾರ ರಚಿಸಿದ ತಂಡದಲ್ಲಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ರೋಮಾನಿಯಾ ಮತ್ತು ಮೋಲ್ಡಾವಾಗೆ, ಕಿರಣ್ ರಿಜಿಜು ಸ್ಲೋವಾಕಿಯಾಗೆ, ಹದೀìಪ್ ಸಿಂಗ್ ಪುರಿ ಹಂಗೇರಿಗೆ ಮತ್ತು ಜ| ವಿ.ಕೆ.ಸಿಂಗ್ ಪೋಲೆಂಡ್‌ಗೆ ತೆರಳಲಿದ್ದಾರೆ. ಉಕ್ರೇನ್ ಗಡಿ ದಾಟಿ ಬಂದ ಬಳಿಕ ಈ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಸಚಿವರು ಸಹಾಯ ಮಾಡಲಿದ್ದಾರೆ. ಈ ಮಧ್ಯೆ ಯುದ್ಧಪೀಡಿತ ಉಕ್ರೇನ್‌ಗೆ ಭಾರತವು ಔಷಧ ಸಹಿತ ಇತರ ಮಾನವೀಯತೆಯ ಸಹಾಯ ಮಾಡಲಿದೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.