ಮಾಸ್ಕೋ: ಉಕ್ರೇನ್ ವಿರುದ್ಧ ಜಯ ಸಾಧಿಸಲೇಬೇಕು ಎಂಬ ಛಲಕ್ಕೆ ಬಿದ್ದಿರುವ ರಷ್ಯಾ ಅಧ್ಯಕ್ಷ ಪುಟಿನ್, ಬೆಲಾರುಸ್‌ನಲ್ಲಿ ವ್ಯೂಹಾತ್ಮಕ ಅಣ್ವಸ್ತ್ರ ವ್ಯವಸ್ಥೆಯನ್ನು ನಿಯೋಜಿಸುವ ನಿರ್ಧಾರ ಪ್ರಕಟಿಸಿದ್ದಾರೆ.
ರಷ್ಯಾ ಸರ್ಕಾರದ ಮುಖವಾಣಿ “ರಷ್ಯಾ 1′ ವಾಹಿನಿ ಜತೆಗೆ ಈ ಬಗ್ಗೆ ವಿವರಣೆ ನೀಡಿ, ಜುಲೈ ಒಳಗಾಗಿ ಅದಕ್ಕೆ ಬೇಕಾಗಿರುವ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದಿದ್ದಾರೆ.
ಈ ವ್ಯವಸ್ಥೆ ಅಳವಡಿಕೆಗೆ ಪೂರ್ವಭಾವಿಯಾಗಿ ಇಸ್ಕಾಂದರ್ ಎಂಬ ಅಲ್ಪ ದೂರದ ಕ್ಷಿಪಣಿ ವ್ಯವಸ್ಥೆಯನ್ನು ಈಗಾಗಲೇ ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಈ ಮೂಲಕ ಉಕ್ರೇನ್ ವಶಕ್ಕೆ ಮತ್ತೂಂದು ರೀತಿಯ ಬೆದರಿಕೆ ತಂತ್ರವನ್ನು ರಷ್ಯಾ ಅಧ್ಯಕ್ಷರು ಮುಂದಿಟ್ಟಿದ್ದಾರೆ. ಬೆಲಾರುಸ್‌ನ ಹತ್ತು ವಿಮಾನಗಳಿಗೆ ಅಣ್ವಸ್ತ್ರಗಳನ್ನು ಹೊತ್ತೂಯ್ದು ದಾಳಿ ನಡೆಸುವ ಸಾಮರ್ಥ್ಯ ಇರುವ ವ್ಯವಸ್ಥೆಯನ್ನು ಮಾಡಲಾಗಿದೆ. ಉಕ್ರೇನ್ ಸೇನೆಗೆ ಅಮೆರಿಕ, ಯು.ಕೆ. ಸೇರಿದಂತೆ ಪಾಶ್ಚಿಮಾತ್ಯ ಸೇನೆಯಿಂದ ಶಸ್ತ್ರಾಸ್ತ್ರಗಳ ನೆರವು ಇನ್ನಷ್ಟು ಪೂರೈಕೆಯಾದಲ್ಲಿ ಯುರೇನಿಯಂಸಹಿತ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸುವುದಾಗಿಯೂ ಪುಟಿನ್ ಬೆದರಿಕೆಯೊಡ್ಡಿದ್ದಾರೆ.
ಏನಿದು ವ್ಯೂಹಾತ್ಮಕ ಅಣ್ವಸ್ತ್ರ ವ್ಯವಸ್ಥೆ?
ಯುದ್ಧ ಭೂಮಿಯಲ್ಲಿ ಬಳಕೆ ಮಾಡುವ ಶಸ್ತ್ರಾಸ್ತ್ರ ವ್ಯವಸ್ಥೆ ಇದು. ಹೆಚ್ಚು ಶಕ್ತಿಶಾಲಿಯಾಗಿರುವ ಅಣ್ವಸ್ತ್ರ ಸಿಡಿತಲೆಗಳಿಗೆ ಹೋಲಿಕೆ ಮಾಡಿದರೆ ಇವು ಉಂಟು ಮಾಡುವ ಹಾನಿ ಕೊಂಚ ಕಡಿಮೆ. ಈ ಅಣ್ವಸ್ತ್ರ ವ್ಯವಸ್ಥೆಯನ್ನು ಜು.1ರ ಒಳಗಾಗಿ ಬೆಲಾರುಸ್ ವ್ಯಾಪ್ತಿಯಲ್ಲಿ ಅಳವಡಿಸಲು ರಷ್ಯಾ ಮುಂದಾಗಿದೆ. ಅಮೆರಿಕ ಸರ್ಕಾರ ಮಿತ್ರ ರಾಷ್ಟ್ರಗಳು ಮತ್ತು ತಾನು ಪರೋಕ್ಷವಾಗಿ ನಿಯಂತ್ರಿಸುವ ರಾಷ್ಟ್ರಗಳ ಭೂಪ್ರದೇಶದಲ್ಲಿ ಮೊದಲಿನಿಂದಲೂ ಇಂಥ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.