ಕೀವ್: ಉಕ್ರೇನ್‌ನ ಮೇಲೆ ರಷ್ಯಾದ ದಾಳಿ ಮುಂದುವರಿದಿದ್ದು, ರಾಜಧಾನಿ ಕೀವ್ ಹಾಗೂ ಅದರ ಹೊರವಲಯಗಳಲ್ಲಿ ವಿಧ್ವಂಸಕಾರಿಯಾಗಿ ಶಕ್ತಿಪ್ರದರ್ಶನ ಮಾಡುತ್ತಿದ್ದ ರಷ್ಯಾದ ಪಡೆಗಳು, ಆ ಜಾಗವನ್ನು ತೆರವುಗೊಳಿಸಿ, ಉಕ್ರೇನ್‌ನ ಬೇರೊಂದು ಪಾರ್ಶ್ವದ ಮೇಲೆ ದಾಳಿ ನಡೆಸಲಾರಂಭಿಸಿವೆ. ಅದರ ಪರಿಣಾಮ, ಕಪ್ಪು ಸಮುದ್ರಕ್ಕೆ ಅಂಟಿಕೊಂಡಿರುವ ಉಕ್ರೇನ್‌ನ ದಕ್ಷಿಣ ಭಾಗದಲ್ಲಿರುವ “ಬಂದರು ನಗರ’ ಒಡೆಶಾದ ಮೇಲೆ ರಷ್ಯಾದ ಪಡೆಗಳು ರವಿವಾರ ಹೇರಳವಾಗಿ ಕ್ಷಿಪಣಿ ದಾಳಿ ನಡೆಸಿವೆ.
ಒಡೆಶಾದ ಹಲವಾರು ಕಡೆ ಸ್ಫೋಟದ ಸದ್ದು ಕೇಳಿಬಂದ ಬೆನ್ನಲ್ಲೇ ಅಲ್ಲಲ್ಲಿ ದಟ್ಟ ಹೊಗೆಯು ಮುಗಿಲೆತ್ತರಕ್ಕೆ ಚಿಮ್ಮಿದ್ದು ಇಡೀ ನಗರದಾದ್ಯಾಂತ ದಟ್ಟ ಧೂಮ ಹರಡಿಕೊಂಡಿದೆ. ರವಿವಾರ ಮುಂಜಾನೆ, ಜನರಿನ್ನೂ ನಿದ್ರಾವಸ್ಥೆಯಲ್ಲಿದ್ದ ಸಮಯದಲ್ಲಿ ದಾಳಿ ನಡೆಸಲಾಗಿದ್ದು ಹಲವಾರು ಸಾವು ನೋವು ಸಂಭವಿಸಿರಬಹುದು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ನಗರದ ಪ್ರಮುಖ ಕಟ್ಟಡಗಳು ಹಾಗೂ ಸ್ಥಳಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಉಕ್ರೇನ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಟೋ ಎಚ್ಚರಿಕೆ: ಕೀವ್ ನಗರದ ಹೊರವಲಯದಿಂದ ಹಿಂದಕ್ಕೆ ಸರಿಯುವ ಮೂಲಕ ತಾನು ಉಕ್ರೇನ್ ರಾಜಧಾನಿಯನ್ನು ತೆರವುಗೊಳಿಸಿರುವುದಾಗಿ ರಷ್ಯಾ ಹೇಳಕೂಡದು. ಏಕೆಂದರೆ, ಕೀವ್‌ನಿಂದ ಹೊರಹೋದ ಮಾತ್ರಕ್ಕೆ ಯುದ್ಧದಿಂದ ಹೊರನಡೆದಂತಲ್ಲ ಎಂದು ನ್ಯಾಟೋ ಪಡೆಗಳ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟಾಲ್ಟನ್‌ಬರ್ಗ್ ತಿಳಿಸಿದ್ದಾರೆ.
ಬುಚಾದಲ್ಲಿ ನರಮೇಧ: ರಾಜಧಾನಿ ಕೀವ್‌ನಿಂದ ವಾಯವ್ಯ ಭಾಗಕ್ಕೆ ಸುಮಾರು 37 ಕಿ.ಮೀ. ದೂರವಿರುವ ಬುಚಾ ಪಟ್ಟಣದ ಮೇಲೆ ಕಳೆದೊಂದು ತಿಂಗಳಿನಿಂದ ರಷ್ಯಾ ಪಡೆಗಳು ನಡೆಸಿದ ದಾಳಿಗೆ ಸುಮಾರು 300 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಆ ನಗರದ ಮೇಯರ್ ಹೇಳಿದ್ದಾರೆ.
ಯುದ್ಧಾಪರಾಧಕ್ಕೆ ಹಲವಾರು ಸಾಕ್ಷ್ಯ: ಉಕ್ರೇನ್‌ನಲ್ಲಿ ರಷ್ಯಾದ ಯೋಧರು ನಡೆಸಿರುವ ಪೈಶಾಚಿಕ ದಾಳಿಯು ಐಸಿಸ್ ಉಗ್ರರ ಕುಕೃತ್ಯಗಳಿಗಿಂತ ದೊಡ್ಡಮಟ್ಟದ್ದು. ಅಲ್ಲದೆ, ರಷ್ಯಾದ ನಡೆಗಳು ಯಾವ ಯುದ್ಧಾಪರಾಧಕ್ಕಿಂತಲೂ ಕಮ್ಮಿಯೇನಿಲ್ಲ ಎಂದು ಐರೋಪ್ಯ ಒಕ್ಕೂಟ ರಾಷ್ಟ್ರಗಳು ಹೇಳಿವೆ. ಮತ್ತೂಂದೆಡೆ, ಜರ್ಮನಿ ಕೂಡ ರಷ್ಯಾದ ಯುದ್ಧಾಪರಾಧಿ ಮನೋಭಾವವನ್ನು ಖಂಡಿಸಿದ್ದು, ರಷ್ಯಾವು ಮುಂದೆ ಇದಕ್ಕೆ ತಕ್ಕ ಪ್ರತಿಫಲ ಅನುಭವಿಸಬೇಕಾಗುತ್ತದೆ ಎಂದಿದೆ.
5ನೇ ಸುತ್ತಿನ ನಿರ್ಬಂಧ?: ರಷ್ಯಾದ ಮೇಲೆ ಐದನೇ ಸುತ್ತಿನ ಆರ್ಥಿಕ ನಿರ್ಬಂಧಗಳನ್ನು ಹೇರಲು ಐರೋಪ್ಯ ಒಕ್ಕೂಟಗಳು ಚಿಂತನೆ ನಡೆಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಷ್ಯಾ, “”ನಿರ್ಬಂಧಗಳ ಮೂಲಕ ರಷ್ಯಾವನ್ನು ಏಕಾಂಗಿಯಾಗಿ ಮಾಡಲು ಸಾಧ್ಯವಿಲ್ಲ” ಎಂದಿದೆ.