Advertisement
ರಷ್ಯಾದಲ್ಲಿ ಪ್ರತಿ 10 ಲಕ್ಷ ಜನರಿಗೆ ಬರೀ 13 ಮಂದಿ ಮಾತ್ರ ಕೋವಿಡ್ ಗೆ ಬಲಿಯಾಗಿದ್ದರು. ಜಾಗತಿಕವಾಗಿ ಇದು 36 ಇದ್ದು, ರಷ್ಯಾದ ಈ ತೀರಾ ಕಡಿಮೆ ಸಂಖ್ಯೆ ಸಂಶೋಧಕರಿಗೊಂದು ಜಟಿಲ ಪ್ರಶ್ನೆಯಾಗಿಯೇ ಉಳಿದಿತ್ತು. ಆದರೆ ಎಪ್ರಿಲ್‌ನಿಂದೀಚೆಗೆ ದತ್ತಾಂಶಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದಾಗ ರಷ್ಯಾದ ಹೇಳಿಕೆ ಸುಳ್ಳು ಎನ್ನುವುದು ಸಾಬೀತಾಗುತ್ತಿದೆ.
ಒಂದು ವಿಚಾರ ಈಗ ಸ್ಪಷ್ಟವಾಗುತ್ತಿದೆ. ಕೋವಿಡ್ ಬಲಿ ಸಂಖ್ಯೆ ಸರಕಾರ ಹೇಳಿರುವುದಕ್ಕಿಂತ ಕನಿಷ್ಠ ಮೂರು ಪಟ್ಟು ಹೆಚ್ಚು ಇದೆ. ನಿಜವಾದ ಸಾವಿನ ಸಂಖ್ಯೆಯನ್ನು ತಿಳಿಯಲು ವಿಶೇಷವಾದ ಅಧ್ಯಯನ ನಡೆಸುವ ಅಗತ್ಯವಿದೆ ಎನ್ನುತ್ತಾರೆ ಮಾಸ್ಕೊದ ಪ್ರಸಿಡೆನ್ಶಿಯಲ್ ಅಕಾಡೆಮಿ ಆ್ಯಂಡ್ ಪಬ್ಲಿಕ್ ಅಡ್ಮಿನಿಸ್ಟ್ರೇಶನ್‌ನ ಹಿರಿಯ ಸಂಶೋಧಕಿ ಟಟಿಯಾನ ಎನ್.ಮಿಖಾಯಿಲೋವ.
Related Articles
ನಮ್ಮ ದೇಶ ಜಗತ್ತಿನಲ್ಲೇ ಅತಿ ಕಡಿಮೆ ಕೋವಿಡ್ ಸಾವುಗಳನ್ನು ಕಂಡಿದೆ ಎಂದು ಕೆಲ ದಿನಗಳ ಹಿಂದೆಯಷ್ಟೇ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೊಂಡಿದ್ದರು. ಸರಕಾರಿ ಟಿವಿ ವಾಹಿನಿಗಳಂತೂ ಕೋವಿಡ್ ವಿರುದ್ಧ ಸರಕಾರ ನಡೆಸುತ್ತಿರುವ ಸಶಕ್ತ ಹೋರಾಟದ ಬಗ್ಗೆ ಪುಂಖಾನುಪುಂಖವಾಗಿ ಸುದ್ದಿಗಳನ್ನು ಮತ್ತು ಜಾಹೀರಾತುಗಳನ್ನು ಬಿತ್ತರಿಸುತ್ತಿದ್ದವು.
Advertisement
ಕೋವಿಡ್ ವ್ಯಾಪಿಸುವಿಕೆ ನಿಯಂತ್ರಣಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಸೋಮವಾರ ಪುಟಿನ್ ದೇಶವ್ಯಾಪಿ ಜಾರಿಯಲ್ಲಿದ್ದ ಕೆಲಸ “ರಹಿತ ಅವಧಿಯನ್ನು’ ವಜಾಗೊಳಿಸಿರುವುದಾಗಿ ಘೋಷಿಸಿದ್ದರು. ಇದರ ಬೆನ್ನಿಗೆ ರಷ್ಯಾದಲ್ಲಿ ಕೋವಿಡ್ ಗೆ ಬಲಿಯಾದವರ ಕುರಿತು ಅನುಮಾನಗಳು ವ್ಯಕ್ತವಾಗಿವೆ. ಮಾಸ್ಕೊದಲ್ಲಿ ಶೇ.70 ಮತ್ತು ಒಟ್ಟಾರೆ ದೇಶದಲ್ಲಿ ಶೇ.80 ಸಾವುಗಳನ್ನು ಅಧಿಕೃತವಾಗಿ ವರದಿಯೇ ಮಾಡಿಲ್ಲ. ಇದನ್ನು ಸೇರಿಸಿದರೆ ರಷ್ಯಾದ ಸಾವಿನ ಪ್ರಮಾಣ ಅಪಾರವಾಗಲಿದೆ ಎನ್ನುತ್ತಿದೆ ಒಂದು ಮೂಲ. ಹೆಚ್ಚಿನ ಸಾವುಗಳಿಗೆ ಅಂಗಾಂಗ ವೈಫಲ್ಯ, ಹೃದಯಾಘಾತ ಈ ಮುಂತಾದ ಕಾರಣಗಳನ್ನು ತೋರಿಸಲಾಗಿದೆ. ಇದು ರಷ್ಯಾದಲ್ಲಿ ಆರೋಗ್ಯ ಕ್ಷೇತ್ರ ಕಾರ್ಯ ನಿರ್ವಹಿಸುತ್ತಿರುವ ವ್ಯವಸ್ಥೆ ಎನ್ನುತ್ತಾರೆ ಮಿಖಾಯಿಲೋವ.