ವಿಶ್ವ ಉತ್ತೇಜಕ ಔಷಧಿ ನಿಗ್ರಹ ಸಂಸ್ಥೆ (ವಾಡಾ) ಇಂದು ರಷ್ಯಾ ದೇಶಕ್ಕೆ ಒಲಂಪಿಕ್ಸ್, ವಿಶ್ವಕಪ್ ಫುಟ್ಬಾಲ್ ಸೇರಿದಂತೆ ವಿಶ್ವದ ಪ್ರಮುಖ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದಕ್ಕೆ ನಾಲ್ಕು ವರ್ಷಗಳ ನಿಷೇಧ ಹೇರಿದೆ.
ಹಾಗಾಗಿ ಮುಂದಿನ ವರ್ಷದ ಟೋಕಿಯೋ ಒಲಂಪಿಕ್ಸ್ ಮತ್ತು 2022ರ ವಿಶ್ವಕಪ್ ಫುಟ್ಬಾಲ್ ಕೂಟಗಳಲ್ಲಿ ರಷ್ಯಾ ದೇಶದ ಧ್ವಜ ಮತ್ತು ರಾಷ್ಟ್ರಗೀತೆಗೆ ಅವಕಾಶವಿರುವುದಿಲ್ಲ. ಆದರೆ ಉತ್ತೇಜಕ ಔಷಧಿ ಸೇವನೆ ಹಗರಣದಲ್ಲಿ ಭಾಗಿಯಾಗದಿರುವ ರಷ್ಯಾ ದೇಶದ ಕ್ರೀಡಾಪಟುಗಳು ತಟಸ್ಥ ಧ್ವಜದಡಿಯಲ್ಲಿ ಪ್ರಮುಖ ವಿಶ್ವ ಕ್ರೀಡಾಕೂಟಗಳಲ್ಲಿ ಭಾಗವಹಿಸಬಹುದೆಂಬ ಸೂಚನೆಯನ್ನು ವಾಡಾ ನೀಡಿದೆ.
ಸ್ವಿಝರ್ ಲ್ಯಾಂಡ್ ನಲ್ಲಿ ನಡೆದ ಸಭೆಯಲ್ಲಿ ವಾಡಾದ ಕಾರ್ಯಕಾರಿ ಸಮಿತಿಯು ರಷ್ಯಾ ದೇಶಕ್ಕೆ ನಾಲ್ಕು ವರ್ಷಗಳ ನಿಷೇಧ ವಿಧಿಸುವ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿದ್ದಾರೆ.
ಈ ವರ್ಷದ ಜನವರಿ ತಿಂಗಳಿನಲ್ಲಿ ತನಿಖಾಧಿಕಾರಿಗಳಿಗೆ ತಿರುಚಿದ ಪ್ರಯೋಗಾಲಯ ಪರೀಕ್ಷಾ ಮಾಹಿತಿಗಳನ್ನು ಹಸ್ತಾಂತರಿಸಲಾಗಿರುವುದು ತನಿಖೆಯಿಂದ ಬಹಿರಂಗಗೊಂಡಿತ್ತು ಮತ್ತು ಇದರ ವಿರುದ್ದ ರಷ್ಯಾದ ಉತ್ತೇಜಕ ಔಷಧಿ ನಿಗ್ರಹ ಸಂಸ್ಥೆ (ರುಸಾದಾ) ಸೂಕ್ತ ಕ್ರಮ ಕೈಗೊಳ್ಳಲು ವಿಫಲವಾಗಿರುವ ಕಾರಣಕ್ಕಾಗಿ ರಷ್ಯಾ ದೇಶದ ಮೇಲೆ ಈ ಕಠಿಣ ಕ್ರಮವನ್ನು ವಾಡಾ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ದೇಶಾದ್ಯಂತ ಸರಕಾರಿ ಪ್ರಾಯೋಜಿತ ಉತ್ತೇಜಕ ಔಷಧಿ ಸೇವನೆ ಹಗರಣಕ್ಕಾಗಿ ಈ ದೇಶದ ಮೇಲೆ ವಿಧಿಸಲಾಗಿದ್ದ ಮೂರು ವರ್ಷಗಳ ನಿಷೇಧವನ್ನು 2018ರಲ್ಲಿ ಹಿಂಪಡೆಯಲಾಗಿತ್ತು ಮತ್ತು ವಾಡಾದ ಈ ಕ್ರಮ ಸಾಕಷ್ಟು ವಿವಾದಕ್ಕೂ ಕಾರಣವಾಗಿತ್ತು.
ರಷ್ಯಾದಲ್ಲಿ 2011-15ರವರೆಗೆ ಸರಕಾರಿ ಪ್ರಾಯೋಜಿತ ಉತ್ತೇಜಕ ಔಷಧಿಗಳ ಸೇವನಾ ಪ್ರಕರಣಗಳು ವ್ಯಾಪಕವಾಗಿ ನಡೆದಿರುವುದನ್ನು 2016ರಲ್ಲಿ ಹೊರಬಿದ್ದಿದ್ದ ಮೆಕ್ ಕ್ಲೇರ್ ಸ್ವತಂತ್ರ ವರದಿ ಬಹಿರಂಗಪಡಿಸಿತ್ತು.