Advertisement

ನಿದ್ರೆಯಲ್ಲಿದ್ದ ಸೈನಿಕರ ಮಾರಣಹೋಮ

12:02 AM Mar 20, 2022 | Team Udayavani |

ಕೀವ್‌: ದಕ್ಷಿಣ ಉಕ್ರೇನ್‌ನಲ್ಲಿರುವ ಸೇನಾ ಬ್ಯಾರಕ್‌ಗಳ ಮೇಲೆ ರಷ್ಯಾ, ಶನಿವಾರ ಮುಂಜಾನೆ ಶೆಲ್‌ ದಾಳಿ ನಡೆಸಿದ್ದು, ಆ ಘಟನೆಯಲ್ಲಿ 50ಕ್ಕೂ ಹೆಚ್ಚು ಸಾವು ಸಂಭವಿಸಿವೆ ಎಂದು ಉಕ್ರೇನ್‌ ಸರಕಾರ ತಿಳಿಸಿದೆ.

Advertisement

ಘಟನೆ ನಡೆದಾಗ, ಬ್ಯಾರಕ್‌ಗಳಲ್ಲಿದ್ದ ಸುಮಾರು 200 ಯೋಧರು ನಿದ್ರೆಯಲ್ಲಿದ್ದರು. ಆ ಸಂದರ್ಭದಲ್ಲಿ ದಾಳಿ ನಡೆಸಲಾ ಗಿದೆ ಎಂದು ಬ್ಯಾರಕ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಉಕ್ರೇನ್‌ನ ಮ್ಯಾಕ್ಸಿಮ್‌ (22) ಎಂಬ ಯೋಧ ಎಎಫ್ಪಿ ಸಂಸ್ಥೆಗೆ ತಿಳಿಸಿದ್ದಾನೆ.  “ಬ್ಯಾರಕ್‌ಗಳ ಅವಶೇಷಗಳಿಂದ ಶನಿವಾರ ರಾತ್ರಿಯ ತನಕ ಸುಮಾರು 50 ಮೃತದೇಹಗಳನ್ನು ಹೊರತ ಗೆಯಲಾಗಿದೆ. ಇನ್ನೂ ಹಲವಾರು ಯೋಧರು ಕಣ್ಮರೆಯಾಗಿದ್ದು, ಅವರಿಗಾಗಿಯೂ ಹುಡುಕಾಟ ನಡೆಸಲಾಗುತ್ತಿದೆ” ಎಂದು ಮ್ಯಾಕ್ಸಿಮ್‌ ತಿಳಿಸಿದ್ದಾನೆ.

ಮತ್ತೂಬ್ಬ ಯೋಧ ಮಾತನಾಡಿ, ಶೆಲ್‌ ದಾಳಿಯಲ್ಲಿ ಸುಮಾರು 100ಕ್ಕೂ ಹೆಚ್ಚು ಸೈನಿಕರು ಸತ್ತಿರಬಹುದು ಎಂದು ಅಂದಾಜಿಸಿದ್ದಾನೆ. ಆದರೆ ಸಾವಿನ ನಿಖರ ಸಂಖ್ಯೆಯ ಬಗ್ಗೆ ಉಕ್ರೇನ್‌ ಏನನ್ನೂ ಹೇಳಿಲ್ಲ.

ಇದರ ಜತೆಯಲ್ಲೇ ಮರಿಯುಪೋಲ್‌, ಆವ್ಡಿವ್ಕಾ, ಕ್ರಮಾ ಟೋರ್ಕ್‌, ಪೋಕ್ರೋವಿಸ್ಕ್, ನೊವೊಸೆಲ್ಡಿವಾR, ವರ್ಕ್‌ ನೊಟೊ ರೆಸ್ಕ್, ಕಿಮ್ಕಾ ಮತ್ತು ಸೆಪ್ನೆ ನಗರಗಳ ಮೇಲೂ ರಷ್ಯಾ ಹೇರಳವಾದ ಶೆಲ್‌ ದಾಳಿ ನಡೆಸಿದೆ.

ಕರ್ಫ್ಯೂ ಜಾರಿ: ಈ ನಡುವೆ ದಕ್ಷಿಣ ಉಕ್ರೇನ್‌ನ ನಗರವಾದ ಝಾಪೋರಿಝಿಯಾದಲ್ಲಿ ಉಕ್ರೇನ್‌ ಸೇನೆ 36 ಗಂಟೆಗಳ ಕರ್ಫ್ಯೂ ಜಾರಿಗೊಳಿಸಿದೆ. ಸೋಮವಾರ ಬೆಳಗ್ಗೆ ಕರ್ಫ್ಯೂ ಸಡಿಲಿಕೆಯಾ ಗುತ್ತದೆ ಎಂದು ಸೇನೆ ತಿಳಿಸಿದೆ.

Advertisement

ಶಾಂತಿ ಮಾತುಕತೆಗೆ ಝೆಲೆನ್‌ಸ್ಕಿ ಆಗ್ರಹ: ರಷ್ಯಾದೊಂದಿಗೆ ತಾವು ಶಾಂತಿ ಮಾತುಕತೆಗೆ ಸಿದ್ಧವಿರುವುದಾಗಿ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಹೇಳಿದ್ದಾರೆ. ಈಗ ನಡೆಯುತ್ತಿರುವ ಯುದ್ಧದಿಂದ ರಷ್ಯಾ ಕೂಡ ಸಾಕಷ್ಟು ನಷ್ಟ ಅನುಭವಿಸಿದೆ. ಯುದ್ಧ ಮುಂದುವರಿದರೆ ಆ ದೇಶ ಮತ್ತಷ್ಟು ನಷ್ಟ ಅನುಭವಿಸಬೇಕಾಗು ತ್ತದೆ. ಆ ನಷ್ಟ ತುಂಬಬೇಕಾದರೆ ಇನ್ನೂ ಹಲವಾರು ತಲೆಮಾರು ಗಳು ಕಳೆಯಬೇಕಾಗುತ್ತದೆ. ರಷ್ಯಾ ಮತ್ತು ಉಕ್ರೇನ್‌ ಇನ್ನಷ್ಟು ನಷ್ಟ ದಿಂದ ಬಚಾವಾಗಬೇಕಾದರೆ ಶಾಂತಿ ಸಂಧಾನ ಏರ್ಪಡಲೇಬೇಕು. ಪ್ರಾಂತೀಯ ಏಕತೆ ಹಾಗೂ ಸಾಮಾಜಿಕ ನ್ಯಾಯ ಸ್ಥಾಪನೆಗೆ ಕಾಲ ಕೂಡಿಬಂದಿದೆ ಎಂದು ಅವರು ಹೇಳಿದ್ದಾರೆ.

ಪ್ರಳಯದ ನಿರ್ಧಾರ-ಜಾನ್ಸನ್‌: ಬ್ರಿಟನ್‌ನ ಬ್ಲಾಕ್‌ಪೂಲ್‌ನಲ್ಲಿ ಕನ್ಸರ್ವೇಟಿವ್‌ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಬ್ರಿಟನ್‌ ಪ್ರಧಾನಿ ಬೋರಿಸ್‌ ಜಾನ್ಸನ್‌, “ಯುದ್ಧ ಶುರುವಾಗಿ 23 ದಿನ ಕಳೆದರೂ ಉಕ್ರೇನ್‌ನ ಪ್ರತಿರೋಧ ಮುಂದುವರಿದಿರುವುದನ್ನು ಸಹಿಸದ ರಷ್ಯಾ, ಅದರ ಮೇಲೆ ಪರಮಾಣು ಅಸ್ತ್ರಗಳಿಗೆ ಸರಿಸಮಾನವಾದ ಶಕ್ತಿ ಹೊಂದಿ ರುವ ಕಿನ್ಝಾಲ್‌ ಕ್ಷಿಪಣಿಯನ್ನು ಪುತಿನ್‌ ಪ್ರಯೋಗಿಸಿದ್ದಾರೆ. ಇದು ನಿಜಕ್ಕೂ ಪ್ರಳಯಾಂತಕ ನಿರ್ಧಾರ’ ಎಂದಿದ್ದಾರೆ.

ಪುತಿನ್‌ ಭಾಷಣಕ್ಕೆ ಅಡ್ಡಿ!: ಶುಕ್ರವಾರ ರಾತ್ರಿ ರಷ್ಯಾದ್ಯಂತ ಅಲ್ಲಿನ ರಾಷ್ಟ್ರೀಯ ಟೆಲಿವಿಷನ್‌ ವಾಹಿನಿಯಲ್ಲಿ ಮೂಡಿಬಂದಿದ್ದ ರಷ್ಯಾದ ಅಧ್ಯಕ್ಷ ಪುತಿನ್‌ರವರ ಭಾಷಣದ ನೇರಪ್ರಸಾರ ಅರ್ಧದಲ್ಲೇ ನಿಂತು ಹೋಗಿರುವ ಪ್ರಸಂಗ ನಡೆದಿದೆ. ಭಾಷಣದ ನಡುವೆ, ರಷ್ಯಾ ದೇಶಾಭಿಮಾನ ಉಕ್ಕಿಸುವ ಹಾಡೊಂದರ ತುಣುಕು ಕೆಲವು ಸೆಕೆಂಡ್‌ಗಳವರೆಗೆ ಪ್ರಸಾರವಾಗಿದೆ! ಇದನ್ನು ತಿಳಿಯದ ಪುತಿನ್‌, ತಮ್ಮ ಭಾಷಣ ಮುಂದುವರಿಸಿದ್ದಾರೆ. ಭಾಷಣ ಕಾರ್ಯಕ್ರಮ ಮುಗಿದ 10 ನಿಮಿಷಗಳ ಅನಂತರ ವಾಹಿನಿಯು ಆ ಭಾಷಣದ ಮರುಪ್ರಸಾರ ಮಾಡಿದೆ… ಯಾವುದೇ ಅಡೆತಡೆಯಿಲ್ಲದೆ!

ರಷ್ಯಾದ ರಾಷ್ಟ್ರೀಯ ವಾಹಿನಿಯನ್ನು ರಷ್ಯಾ ಸರಕಾರವೇ ನಿಭಾಯಿಸುವುದರಿಂದ ಅಲ್ಲಿ ಸರಕಾರಿ ಕಾರ್ಯಕ್ರಮಗಳ ಪ್ರಸಾರ ಯಾವುದೇ ಅಡೆತಡೆಯಿಲ್ಲದೆ ಪ್ರಸಾರವಾಗುತ್ತವೆ. ಅದರಲ್ಲೂ ಪುತಿನ್‌ರವರ ಭಾಷಣದಂಥ ಪ್ರಮುಖ ಕಾರ್ಯಕ್ರಮಗಳನ್ನು ಒಂದಿನಿತೂ ಲೋಪವಾಗದೇ ಪ್ರಸಾರವಾಗುತ್ತವೆ. ಹಾಗಿದ್ದರೂ ಪುತಿನ್‌ರವರ ಭಾಷಣದ ಮಧ್ಯೆ ಹೀಗೊಂದು ಹಾಡು ಪ್ರಸಾರವಾಗಿದ್ದು ಎಲ್ಲರನ್ನೂ ಗಲಿಬಿಲಿಗೊಳಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ರಷ್ಯಾ ಸರಕಾರ, ಇದು ತಾಂತ್ರಿಕ ಅಡಚಣೆಯಿಂದ ಆಗಿರುವಂಥ ಲೋಪ ಎಂದು ಹೇಳಿದೆ. ಅದೇನೇ ಇರಲಿ, ರಷ್ಯಾದ ಇತಿಹಾಸದಲ್ಲೇ ಅಧ್ಯಕ್ಷರ ಭಾಷಣದ ನೇರಪ್ರಸಾರ ಅರ್ಧಕ್ಕೇ ನಿಂತು ಹೋಗಿದ್ದು ಇದೇ ಮೊದಲು ಎನ್ನಲಾಗಿದೆ.

ವಾಣಿಜ್ಯ ನಂಟು ಕಡಿದುಕೊಂಡ ಪೋಲೆಂಡ್‌ :

ಯುದ್ದೋತ್ಸಾಹಿ ರಷ್ಯಾ ಜತೆಗಿನ ಎಲ್ಲ ವಾಣಿಜ್ಯ ಸಂಬಂಧಗಳನ್ನು ತಾನು ರದ್ದ ಗೊಳಿಸಿರುವುದಾಗಿ ಪೋಲೆಂಡ್‌ ಸರಕಾರ, ಶನಿವಾರ ಘೋಷಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಲ್ಲಿನ ಪ್ರಧಾನಿ ಮ್ಯಾಟಿಯಸ್‌ ಮೊರಾವೆಕಿ, ವಾಣಿಜ್ಯ ವಹಿವಾಟು ರದ್ದತಿಯ ರೂಪುರೇಷೆ ಸಿದ್ಧವಾಗಿದ್ದು, ಸದ್ಯದಲ್ಲೇ ಅದನ್ನು ಜಾರಿಗೊಳಿಸ ಲಾಗುತ್ತದೆ ಎಂದು ತಿಳಿಸಿದ್ದಾರೆ.

ಜೆಕ್‌ ಗಣರಾಜ್ಯದ ಘೋಷಣೆ :

ಯುದ್ಧಪೀಡಿತ ಉಕ್ರೇನ್‌ನಿಂದ ತನ್ನಲ್ಲಿಗೆ ಆಗಮಿಸುತ್ತಿರುವ ಮಹಿಳೆಯರು ಹಾಗೂ ಮಕ್ಕಳ ಸಂಪೂರ್ಣ ಜವಾಬ್ದಾರಿಯನ್ನು ತಾನು ಹೊರುವುದಾಗಿ ಜೆಕ್‌ ಗಣರಾಜ್ಯದ ಪ್ರಧಾನಿ ಪೀಟರ್‌ ಫಿಯಾಲಾ ಘೋಷಿಸಿದ್ದಾರೆ.

112 ಮಕ್ಕಳ ಸಾವು: ರಷ್ಯಾದ ಆಕ್ರಮಣ ಶುರುವಾದಾಗಿನಿಂದ ಇಲ್ಲಿಯವರೆಗೆ ಉಕ್ರೇನ್‌ನಲ್ಲಿ 112 ಮಕ್ಕಳು ಸಾವಿಗೀಡಾಗಿದಾರೆ ಎಂದು ಉಕ್ರೇನ್‌ ಸರಕಾರ ತಿಳಿಸಿದೆ. ಸುಮಾರು 3 ಲಕ್ಷಕ್ಕೂ ಹೆಚ್ಚು ಜನರು ನೆರೆಯ ರಾಷ್ಟ್ರಗಳಿಗೆ ವಲಸೆ ಹೋಗಿದ್ದಾರೆ. ಇನ್ನು, 6 ಲಕ್ಷಕ್ಕೂ ಹೆಚ್ಚು ಜನರು ಉಕ್ರೇನ್‌ನ ಆಂತರಿಕ ಪ್ರಾಂತ್ಯಗಳಲ್ಲೇ ವಲಸೆ ಹೋಗಿದ್ದಾರೆ.

ಬ್ಯಾಲೆಟ್‌ ಡ್ಯಾನ್ಸರ್‌ ಸಾವು :

ರಷ್ಯಾ ದೇಶವು ಉಕ್ರೇನ್‌ ಮೇಲೆ ಸತತವಾಗಿ ದಾಳಿ ನಡೆಸುತ್ತಿದೆ. ಇತ್ತೀಚೆಗೆ ಉಕ್ರೇನ್‌ ಪ್ರಸಿದ್ಧ ಬ್ಯಾಲೆಟ್‌ ಡ್ಯಾನ್ಸರ್‌ ಆರ್ಟಿಯೋಮ್‌ ದಟ್ಶಿಶಿನ್‌(43) ಅವರ ವಸತಿ ಕಟ್ಟಡದ ಮೇಲೂ ರಷ್ಯಾದ ಶೆಲ್‌ ದಾಳಿ ನಡೆದಿದ್ದು, ಆರ್ಟಿಯೋಮ್‌ ಅವರು ಗಂಭೀರ ಗಾಯಾಳುವಾಗಿದ್ದರು. ಹಲವು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅವರು, ಚಿಕಿತ್ಸೆ ಫ‌ಲಕಾರಿಯಾಗದ ಹಿನ್ನೆಲೆ ಗುರುವಾರ ಕೊನೆ ಯು ಸಿರೆಳೆದಿದ್ದಾರೆ. ಅವರ ಅಂತ್ಯಸಂಸ್ಕಾರವನ್ನು ಶುಕ್ರವಾರ ನಡೆಸಲಾಗಿದೆ.

ಸಮವಸ್ತ್ರ ತಯಾರಿಸಿದ ಮಳಿಗೆ  :

ಉಕ್ರೇನ್‌ನ ಲುವ್ಯೂನಲ್ಲಿ ವೆಡ್ಡಿಂಗ್‌ ಗೌನ್‌ಗಳನ್ನು ವಿನ್ಯಾಸಗೊಳಿಸುವ ಮೂಲಕ ಪ್ರಸಿದ್ಧವಾಗಿದ್ದ ಮಿಲ್ಲಾ ನೋವಾ ಸಂಸ್ಥೆಯು ಇದೀಗ ಉಕ್ರೇನ್‌ ಯೋಧರ ಸಮವಸ್ತ್ರ ತಯಾರಿಸಲಾರಂಭಿಸಿದೆ. 600 ಸಿಬಂದಿಯಿರುವ ಸಂಸ್ಥೆಯು ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿ ಕೊಂಡಿದೆ. “ನಮ್ಮ ಸಿಬಂದಿ ಸಮಯದ ಅವಧಿ ಮುಗಿದ ಅನಂತರವೂ ಹೆಚ್ಚು ಸಮಯ ಕಚೇರಿಯಲ್ಲೇ ಇದ್ದು ಸಮವಸ್ತ್ರ ತಯಾರಿಸುತ್ತಿದ್ದಾರೆ. ಶತ್ರುಗಳ ವಿರುದ್ಧ ಒಗ್ಗಟ್ಟಾಗಿ ಹೋರಾಡಲು ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯವನ್ನು ನಾವು ಮಾಡುತ್ತಿದ್ದೇವೆ’ ಎಂದು ಬರೆದು ಕೊಂಡಿದ್ದಾರೆ. ಸಿಬಂದಿ ಪೈಕಿ ಅನೇಕರು ಪೋಲೆಂಡ್‌ಗೆ ಸ್ಥಳಾಂತರ ಗೊಂಡಿರುವುದಾಗಿಯೂ ತಿಳಿಸಲಾಗಿದೆ.

ಝೆಲೆನ್‌ಸ್ಕಿ ದಿಂಬಿಗೆ ಬೇಡಿಕೆ :

ರಷ್ಯಾ-ಉಕ್ರೇನ್‌ ಯುದ್ಧದಲ್ಲಿ ಉಕ್ರೇನ್‌ನ ಅಧ್ಯಕ್ಷ ಝೆಲೆನ್‌ಸ್ಕಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದಾರೆ. ಸೂಟು ಬೂಟು ಬಿಟ್ಟು, ಕಡು ಹಸುರು ಬಣ್ಣದ ಟೀ ಶರ್ಟ್‌ ಧರಿಸಿರುವ ಅವರ ಫೋಟೋ ಹೆಚ್ಚು ವೈರಲ್‌ ಆಗುತ್ತಿದೆ. ಅದನ್ನೇ ಆದಾಯದ ಮೂಲವಾಗಿಸಿಕೊಂಡ ಸಂಸ್ಥೆಯೊಂದು ಝೆಲೆನ್‌ಸ್ಕಿ ಫೋಟೋ ಇರುವ ದಿಂಬುಗಳನ್ನು ತಯಾರಿಸುತ್ತಿದೆ. ದಿಂಬು ಮಾರಾಟ ಆರಂಭವಾದ ಒಂದೇ ದಿನದಲ್ಲಿ 2,000ಕ್ಕೂ ಅಧಿಕ ದಿಂಬುಗಳಿಗೆ ಆರ್ಡರ್‌ ಬಂದಿರುವುದಾಗಿ ದಿಂಬು ತಯಾರಿಕೆ ಯಲ್ಲಿ ತೊಡಗಿ ಕೊಂಡಿರುವ ಟಿಎಂಬಿಕೆ ಸಂಸ್ಥೆ ತಿಳಿಸಿದೆ. ಥೋಮಸ್‌ ಬ್ರಿನೇಕ್‌ ಹೆಸರಿನವರು ಈ ದಿಂಬನ್ನು ವಿನ್ಯಾಸ ಮಾಡಿದ್ದಾರೆ.  ಈ ದಿಂಬು ಮಾರಾಟದಿಂದ ಬರುವ ಹಣವನ್ನು ಉಕ್ರೇನ್‌ ಜನರಿಗೆ ಮತ್ತು ಯೋಧರಿಗೆ ಸಹಾಯ ಮಾಡುವುದಕ್ಕೆ ಬಳಸುವುದಾಗಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next