ಕೋಲ್ಕತ್ತಾ: ನಮ್ಮದು ಉತ್ತಮ ತಂಡ, ಆದರೆ ಕೆಲವು ಕೆಟ್ಟ ತೀರ್ಮಾನಗಳಿಂದ ನಾವು ಸೋಲುತ್ತಿದ್ದೇವೆ ಎಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಅಲ್ ರೌಂಡರ್ ಅಂದ್ರೆ ರಸ್ಸೆಲ್ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಸ್ತುತ ಐಪಿಎಲ್ ನಲ್ಲಿ ಕೋಲ್ಕತ್ತಾ ತಂಡದ ಪ್ರದರ್ಶನ ಕಳಪೆ ಮಟ್ಟದಲ್ಲಿದೆ. ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡ ಸತತ ಆರು ಪಂದ್ಯಗಳಲ್ಲಿ ಸೋಲನುಭವಿಸಿದೆ.
ತಂಡದ ಸತತ ಸೋಲುಗಳ ಬಗ್ಗೆ ಮಾತನಾಡಿದ ರಸ್ಸೆಲ್, ನಮ್ಮದು ಉತ್ತಮ ತಂಡ. ಬಲಿಷ್ಠ ಆಟಗಾರರು ನಮ್ಮ ತಂಡದಲ್ಲಿದ್ದಾರೆ. ಆದರೆ ಸಮಯಯಕ್ಕೆ ಸರಿಯಾದ ನಿರ್ಧಾರ ಕೈಗೊಳ್ಳುವಲ್ಲಿ ವಿಫಲರಾಗಿರುವುದೇ ನಮ್ಮ ಈ ಸೋಲಿಗೆ ಕಾರಣ. ಕೆಲವು ಪಂದ್ಯಗಳನ್ನು ನಾವು ಗೆಲ್ಲಬಹುದಾಗಿತ್ತು. ಬೌಲರ್ ಗಳು ನಿರ್ಣಾಯಕ ಸಮಯದಲ್ಲಿ ಸರಿಯಾದ ಬೌಲಿಂಗ್ ಮಾಡದೇ ಇರುವುದು ಮತ್ತು ಯಾವ ಬೌಲರ್ ಯಾವ ಹಂತದಲ್ಲಿ ಬಾಲ್ ಹಾಕಬೇಕು ಎಂಬ ತಪ್ಪು ನಿರ್ಧಾರಗಳು ನಮ್ಮನ್ನು ಸೋಲು ಕಾಣುವಂತೆ ಮಾಡಿದವು ಎಂದರು.
ಮುಂದುವರಿದು ಮಾತನಾಡಿದ ಕೆರಿಬಿಯನ್ ಆಟಗಾರ ರಸ್ಸೆಲ್, ನಮ್ಮ ಬ್ಯಾಟಿಂಗ್ ಅಸ್ಥಿರತೆ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಾರೆ. ಆದರೆ ನಮಗೆ ಬ್ಯಾಟಿಂಗ್ ನಲ್ಲಿ ಯಾವುದೇ ಸಮಸ್ಯೆ ಇಲ್ಲ. ಬ್ಯಾಟ್ಸಮನ್ ಗಳು ಉತ್ತಮ ರನ್ ಕಲೆ ಹಾಕುತ್ತಿದ್ದಾರೆ. ಆದರೆ ಎದುರಾಳಿ ತಂಡವನ್ನು ಕಡಿಮೆ ಮೊತ್ತಕ್ಕೆ ಕಟ್ಟಿ ಹಾಕಲು ಸಾಧ್ಯವಾಗುತ್ತಿಲ್ಲ ಎಂದರು.
ನಾವು ಬೌಲರ್ ಗಳಾಗಿ ಯಾವಾಗ ಉತ್ತಮ ಬೌಲಿಂಗ್ ಮಾಡುವುದಿಲ್ಲವೋ, ಯಾವಾಗ ಕೈಗೆ ಬಂದ ಕ್ಯಾಚ್ ಗಳನ್ನು ಕೈ ಚೆಲ್ಲುತ್ತೇವೋ, ಆಗ ಗೆಲುವು ಹೇಗೆ ಸಾಧ್ಯ ? ಈ ಐಪಿಎಲ್ ನಲ್ಲಿ ನಾವು ಕೆಟ್ಟ ಆಟ ಆಡುತ್ತಿದ್ದೇವೆ. ನಾವು ಪ್ರತಿಸಲ ಒಂದೇ ರೀತಿಯಲ್ಲಿ ಪಂದ್ಯ ಸೋಲುತ್ತಿದ್ದೇವೆ. ಇದು ನಿರಾಶಾದಾಯಕ ಎಂದು ಬೇಸರ ವ್ಯಕ್ತ ಪಡಿಸಿದರು.
ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಅಲ್ ರೌಂಡರ್ ಆಗಿರುವ ಅಂದ್ರೆ ರಸ್ಸೆಲ್ ಈ ಐಪಿಎಲ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಆಡಿರುವ 11 ಪಂದ್ಯಗಳಿಂದ 406 ರನ್ ಗಳಿಸಿದ್ದಾರೆ.