ಬಂಟ್ವಾಳ: ಸಮ್ಯಕ್ ಜ್ಞಾನ, ಸಮ್ಯಕ್ ದರ್ಶನ ಮತ್ತು ಸಮ್ಯಕ್ ಚಾರಿತ್ರ್ಯ ಪಾಲನೆ ಮಾಡುವುದು ಅಗತ್ಯ ಎಂದು 108 ಮುನಿಶ್ರೀ ವೀರಸಾಗರ ಮಹಾರಾಜರು ಹೇಳಿದರು. ಪಾಣೆಮಂಗಳೂರಿನಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯ – ಋಷಿಮಂಡಲ ಆರಾಧನೆ ಸಂದರ್ಭ ಮಂಗಲ ಪ್ರವಚನ ನೀಡಿದರು.
Advertisement
ಜೀವನದಲ್ಲಿ ಧರ್ಮಾಚರಣೆಗೆ ಮಹತ್ವವಿದೆ. ಧರ್ಮಪಾಲನೆ, ಶಿಸ್ತು ಸಂಯಮ ಆಳವಡಿಸಿಕೊಂಡು ಜೀವನ ನಡೆಸಿದರೆ ಪುಣ್ಯಪ್ರಾಪ್ತಿಯಾಗುತ್ತದೆ ಎಂದರು. ಇದೇ ಸಂದರ್ಭದಲ್ಲಿ ಮುನಿಶ್ರೀಗಳ ಪಾವನ ಸಾನ್ನಿಧ್ಯದಲ್ಲಿ ಋಷಿಮಂಡಲ ಆರಾಧನೆಯನ್ನು ಮೂಡಬಿದಿರೆಯ ವೀರೇಂದ್ರ ಕುಮಾರ್ ಕುಟುಂಬ, ಸರ್ವ ಮಂಗಳ ಮಹಿಳಾ ಸಂಘ ಪ್ರಾಯೋಜಕತ್ವವದಲ್ಲಿ ಶ್ರಾವಕ ಬಂಧುಗಳ ಭಾಗವಹಿಸುವಿಕೆಯಲ್ಲಿ ನಡೆಸಲಾಯಿತು. ಮಂಗಲ ಪ್ರವಚನದ ಅನಂತರ ಧರ್ಮ ಸಭೆಯಲ್ಲಿ ಶಂಕಾ -ಸಮಾಧಾನ ನಡೆಯಿತು. ಶ್ರಾವಕ ಬಂಧುಗಳ ಅನೇಕ ಧಾರ್ಮಿಕ ಪ್ರಶ್ನೆಗಳಿಗೆ ಮುನಿಶ್ರೀಗಳು ಉತ್ತರಿಸಿದರು. ಸಾಮೂಹಿಕ ಆರಾಧನೆ ಕಾರ್ಯಕ್ರಮದಲ್ಲಿ ಮಂಗಳೂರು, ಮೂಡಬಿದಿರೆ, ವೇಣೂರು, ಪುತ್ತೂರು, ಕಾರ್ಕಳ, ಸಂಸೆ ಮುಂತಾದ ಕಡೆಗಳಿಂದ ಅನೇಕ ಶ್ರಾವಕ ಬಂಧುಗಳು ಪಾಲ್ಗೊಂಡಿದ್ದರು.