Advertisement

ಮಾರುಕಟ್ಟೆಯಲ್ಲಿ ದಟ್ಟಣೆ ರಂಜಾನ್‌ ಹಬ್ಬಕ್ಕೆ ಖರೀದಿ ಜೋರು

10:53 AM Jun 03, 2019 | Suhan S |

ಗದಗ: ಸತತ ಬರಗಾಲದ ಮಧ್ಯೆಯೂ ಅವಳಿ ನಗರದ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್‌ ಹಬ್ಬ ಆಚರಣೆಗೆ ಭರದಿಂದ ಸಿದ್ಧತೆ ನಡೆಸಿದ್ದಾರೆ. ಹಬ್ಬಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದು, ಮಾರುಕಟ್ಟೆ ಕಳೆಗಟ್ಟುತ್ತಿದೆ.

Advertisement

ರಂಜಾನ್‌ ಹಬ್ಬದ ಅಂಗವಾಗಿ ಅವಳಿ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಹಬ್ಬದ ಸಾಮಗ್ರಿ ವ್ಯಾಪಾರ ಜೋರಾಗಿದೆ. ಹಬ್ಬದ ಸಂಭ್ರಮಕ್ಕಾಗಿ ಮುಸ್ಲಿಂರು ಅಗತ್ಯ ಸಾಮಗ್ರಿ ಖರೀದಿಸುವಲ್ಲಿ ಮಗ್ನರಾಗಿದ್ದಾರೆ. ಅಗತ್ಯ ವಸ್ತುಗಳ ಖರೀದಿಗಾಗಿ ಸಂಜೆಯಾಗುತ್ತಿದ್ದಂತೆ ತಂಡೋಪ ತಂಡವಾಗಿ ಮಹಿಳೆಯರು ಮಾರುಕಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದು, ಸಹಜವಾಗಿಯೇ ಜನದಟ್ಟಣೆ ಹೆಚ್ಚುತ್ತಿದೆ.

ನಗರದ ಬ್ಯಾಂಕ್‌ ರೋಡ್‌, ಟಾಂಗಾಕೂಟ, ಗ್ರೇನ್‌ ಮಾರ್ಕೆಟ್ ಮಾರ್ಗದಲ್ಲಿ ವರ್ತಕರು ತಳ್ಳುಗಾಡಿಗಳಲ್ಲೇ ವಿವಿಧ ಪದಾರ್ಥಗಳು ಹಾಗೂ ಬಟ್ಟೆಗಳ ಮಾರಾಟ ಆರಂಭಿಸಿದ್ದಾರೆ. ರಂಜಾನ್‌ ಹಬ್ಬದ ವಿಶೇಷ ಸಿಹಿ ಖಾದ್ಯವಾದ ಸುರಕುಂಬಾ ತಯಾರಿಕೆಗೆ ಅತ್ಯವಶ್ಯವಾದ ಗೋಡಂಬಿ, ದ್ರಾಕ್ಷಿ, ಶಾವಿಗೆ, ಉತ್ತತ್ತಿ ಸೇರಿದಂತೆ ವಿವಿಧ ಡ್ರೈಫುಟ್ಸ್‌ಗಳು ಮತ್ತು ಬಿರಿಯಾನಿ, ವಿಶೇಷ ಮಾಂಸಹಾರಕ್ಕಾಗಿ ಬೇಕಾದ ಮಸಾಲೆ ಸಾಮಾನುಗಳು ಮತ್ತು ಮದರಂಗಿಗೆ ಜನರು ಮುಗಿಬೀಳುತ್ತಿದ್ದಾರೆ.

ಹಬ್ಬದ ನಿಮಿತ್ತ ಇರಾನ್‌ ಹಾಗೂ ಇರಾಕ್‌ನಿಂದ ಆಮದು ಮಾಡಿಕೊಳ್ಳಲಾದ ಅಜ್ವಾ ಖರ್ಜೂರ್‌ ಕೆಜಿ 1200 ರೂ. ಗಡಿ ದಾಟಿದ್ದರಿಂದ ಜನರು ತಮ್ಮ ಶಕ್ತಾನುಸಾರ ಖರೀದಿಸುತ್ತಿದ್ದಾರೆ. ಇನ್ನುಳಿದಂತೆ ಬಟ್ಟೆ, ಬಳೆ, ವಿವಿಧ ಅಲಂಕಾರಿಕ ವಸ್ತುಗಳು, ದಿನಬಳಕೆ ವಸ್ತುಗಳ ಖರೀದಿಯೂ ಭರಾಟೆಯಿಂದ ಕೂಡಿತ್ತು.

ಆದರೆ, ಸತತ ಬರಗಾಲ ಆವರಿಸಿದ್ದರಿಂದ ಕಳೆದ ಬಾರಿಗಿಂತ ಈ ಬಾರಿ ಮತ್ತಷ್ಟು ಕಳೆಗುಂದಿದೆ. ಒಂದು ಕೆಜಿ ಸಾಮಗ್ರಿ ಖರೀದಿಸುವವರು ಅರ್ಧ ಕೆಜಿಗೆ ಸೀಮಿತಗೊಳ್ಳುತ್ತಿದ್ದಾರೆ. ಅದರೊಂದಿಗೆ ವಿವಿಧ ಡ್ರೈಫುಟ್ಸ್‌ಗಳು ಕಳೆದ ವರ್ಷಕ್ಕಿಂತ ದುಪ್ಪಟ್ಟಾಗಿವೆ.

Advertisement

ಆದರೂ, ಹಬ್ಬದ ಮುನ್ನ ದಿನ ಹೆಚ್ಚಿನ ಪ್ರಮಾಣದಲ್ಲಿ ಮಾರಾಟಗೊಳ್ಳುವ ನಿರೀಕ್ಷೆಯಿದೆ ಎನ್ನುತ್ತಾರೆ ಡ್ರೈಫುಟ್ಸ್‌ ವ್ಯಾಪಾರಿ ರಿಯಾಜ್‌ ಅಹಮ್ಮದ್‌. ಆದರೆ, ಹಬ್ಬದ ನಿಮಿತ್ತ ಶ್ಯಾವಿಗೆ, ಬೆಲ್ಲ, ಸಕ್ಕರೆ, ಬಾಸುಮತಿ ಅಕ್ಕಿ ಸೇರಿದಂತೆ ಮಸಾಲೆ ಪದಾರ್ಥಗಳು ಹಾಗೂ ಬಟ್ಟೆ ಖರೀದಿ ಜೋರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next