ಗಂಗಾವತಿ: ಕೋವಿಡ್ ಕರ್ಫ್ಯೂ ಹಿನ್ನೆಲೆಯಲ್ಲಿ ನಗರದಲ್ಲಿ ಗುಟ್ಕಾ, ಸ್ಟಾರ್, ವಿಮಲ್ ಮುಂತಾದ ತಂಬಾಕು ಪದಾರ್ಥಗಳನ್ನು ಖರೀದಿಸಲು ತಾಲೂಕಿನ ವ್ಯಾಪಾರಿಗಳು ನಿತ್ಯವೂ ಬೆಳಗಿನ ಜಾವ ಗುಟ್ಕಾ ವಿತರಕರು ಸೂಚಿಸುವ ಜಾಗದಲ್ಲಿ ಹಾಜರಿದ್ದು, ದುಪ್ಪಟ್ಟು ದರ ನೀಡಿ ಖರೀದಿಸಲು ಮಾಸ್ಕ್ ಧರಿಸದೇ ಸಾಮಾಜಿಕ ಅಂತರ ಮರೆತು ಗುಂಪು ಸೇರುತ್ತಿದ್ದಾರೆ.
ಇದನ್ನು ನಿಯಂತ್ರಿಸಬೇಕಾದ ನಗರಸಭೆ, ಆರೋಗ್ಯ ವಿಭಾಗದ ಅಧಿಕಾರಿಗಳು, ಪೊಲೀಸ್ ಮತ್ತು ಕಂದಾಯ ಇಲಾಖೆ ಹಾಗೂ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿಗಳು ಮೌನ ವಹಿಸಿರುವುದು ಅನುಮಾನ ಮೂಡಿಸಿದೆ.
ನಗರದಲ್ಲಿ ಮೂರು ಜನ ಗುಟ್ಕಾ ತಂಬಾಕು ಪದಾರ್ಥಗಳ ವಿತರಕರಿದ್ದಾರೆ. ಹಳೆ ಸ್ಟಾಕ್ ಇಟ್ಟುಕೊಂಡು 125 ರೂ ಇದ್ದ ಪ್ಯಾಕೆಟ್ ಗೆ ಕರ್ಪೂ ಜಾರಿಯಾದ ನಂತರ 275 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಹಳೆಯ ಸ್ಟಾಕನ್ನು ಕೊಪ್ಪಳ ರಸ್ತೆಯ ಗೋಡೌನ್ ಹೊಸ್ಕೇರಾದಲ್ಲಿರುವ ಗೋಡೌನ್ ಹಾಗೂ ವಡ್ರಟ್ಟಿಯ ಗೋಡೌನ್ ನಲ್ಲಿರಿಸಲಾಗಿದೆ ಎನ್ನಲಾಗುತ್ತಿದೆ.
ದೂರು: ಗುಟ್ಕಾ ಸ್ಟಾಕ್ ಇಟ್ಟುಕೊಂಡು ದುಪ್ಪಟ್ಟು ದರಕ್ಕೆ ಕೆಲವರಿಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ. ತಾಲ್ಲೂಕು ಆಡಳಿತ ಕೂಡಲೇ ಗುಟ್ಕಾ ಇರುವ ಗೋಡೌನ್ ಗಳ ಮೇಲೆ ದಾಳಿ ಮಾಡಿ ಲೆಕ್ಕಪತ್ರ ಇಲ್ಲದ ಮಾಲನ್ನು ವಶಕ್ಕೆ ಪಡೆದು ದಂಡ ಹಾಕಬೇಕು. ಮಾಸ್ಕ್ ಇಲ್ಲದೇ ಸಾಮಾಜಿಕ ಅಂತರ ಕಾಪಾಡಲು ವಿಫಲರಾಗಿರುವ ಗುಟ್ಕಾ ಡೀಲರ್ ಗಳ ವಿರುದ್ದ ಕೇಸ್ ದಾಖಲಿಸುವಂತೆ ಕಿರಾಣಿ ವರ್ತಕ ಅಶೋಕ ಗುಡಿಕೋಟಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.