Advertisement

ಗ್ರಾಮೀಣ ಟೆಲಿ ಸಂಪರ್ಕ : ಸಮಸ್ಯೆ ಪರಿಹಾರಕ್ಕೆ ವಿಲ್‌’!

06:00 AM Aug 27, 2018 | |

ಈಗ ಒಬ್ಬರಲ್ಲಿ ಕನಿಷ್ಠ ಎರಡು ಮೊಬೈಲ್‌ ಸೆಟ್‌ಗಳಿವೆ, ನಾಲ್ಕಾರು ಸಿಮ್‌ಗಳಿವೆ. ದೇಶದ ದೂರವಾಣಿ ನಿಯಂತ್ರಣ ಪ್ರಾಧಿಕಾರ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಜೂನ್‌ 30ರಲ್ಲಿ ದೇಶದಲ್ಲಿ 1168.89 ಮಿಲಿಯನ್‌ ದೂರವಾಣಿ ಗ್ರಾಹಕರಿದ್ದಾರೆ. ಇದರಲ್ಲಿ ನಿಸ್ತಂತು ಗ್ರಾಹಕರ ಸಂಖ್ಯೆ ಬರೋಬ್ಬರಿ 1146.49 ಮಿಲಿಯನ್‌. ಗಮನಿಸಬೇಕಾದುದರೆಂದರೆ, ಸ್ಥಿರ ದೂರವಾಣಿ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಯುತ್ತಿದೆ. 

Advertisement

ರಂಗಕರ್ಮಿ ಕೆ.ವಿ. ಅಕ್ಷರ ಒಂದು ಸಂದರ್ಭದಲ್ಲಿ ಹೇಳುತ್ತಿದ್ದರು-” ಮೊಬೈಲ್‌ಗ‌ಳು ನಗರಗಳ ಜನರಿಗಿಂತ, ದುಡಿದು ತಿನ್ನುವ ಶ್ರಮಜೀವಿ ಕಾರ್ಮಿಕ, ಕುಶಲಕರ್ಮಿಗಳಿಗೆ ಹೆಚ್ಚು ಅಗತ್ಯವಾಗಿದೆ. ಆದರೆ, ಇಂದು ಮೊಬೈಲ್‌ ಮೂಲಭೂತ ಅವಶ್ಯಕತೆಗಳನ್ನು ಮೀರಿ ಬೆಳೆದುನಿಂತಿದೆ. ಅದೊಂದು ಐಶಾರಾಮಿ, ಸಮಯವನ್ನು ಕಳೆಯುವ ತಂತ್ರಜಾnನವಾಗಿ ಬೆಳೆದುನಿಂತಿದೆ. ಬೇಕಿದ್ದರೆ, ಒಂದು ಪ್ರವಾಸ ಹೊರಟ ಐವರಲ್ಲಿ ಒಬ್ಬ ಕೆಲ ನಿಮಿಷಗಳಿಗಾಗಿ ಕಾರನ್ನು ನಿಲ್ಲಿಸಿ ಹೊರಗೆ ಹೋಗಿದ್ದಾರೆ ಎಂದುಕೊಂಡರೆ ಕಾರಲ್ಲಿ ಕುಳಿತ ಉಳಿದ ನಾಲ್ವರು ಹರಟೆಯಲ್ಲಿ ತೊಡಗಿರುವುದಿಲ್ಲ. ಅವರೆಲ್ಲ ತಮ್ಮ ಮೊಬೈಲ್‌ಗ‌ಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಲೆದಾಡುತ್ತಿರುತ್ತಾರೆ.  ಈ ಕಲ್ಪನೆಯನ್ನು ಮೀರಿ ಅವರು ಹರಟೆಯನ್ನೇ ಹೊಡೆಯುತ್ತಿದ್ದರೆ. ಕಾರು ಪಾರ್ಕಿಂಗ್‌ ಮಾಡಿದ ಸ್ಥಳದಲ್ಲಿ ಮೊಬೈಲ್‌ ಸಿಗ್ನಲ್‌ ಸಿಗುತ್ತಿಲ್ಲ ಎಂಬುದನ್ನು ನೀವು ಅರ್ಥ ಮಾಡಿಕೊಳ್ಳಬೇಕು’.

ದೇಶದಲ್ಲಿ ವೈರ್‌ಲೆಸ್‌ ದೂರವಾಣಿ ಸಂಪರ್ಕದಲ್ಲಿ ಕ್ರಾಂತಿಯೇ ಆಗಿದೆ. ಈಗ ಒಬ್ಬರಲ್ಲಿ ಕನಿಷ್ಠ ಎರಡು ಮೊಬೈಲ್‌ ಸೆಟ್‌ಗಳಿವೆ, ನಾಲ್ಕಾರು ಸಿಮ್‌ಗಳಿವೆ. ದೇಶದ ದೂರವಾಣಿ ನಿಯಂತ್ರಣ ಪ್ರಾಧಿಕಾರ ಸಂಗ್ರಹಿಸಿದ ಅಂಕಿಅಂಶಗಳ ಪ್ರಕಾರ, ಜೂನ್‌ 30ರಲ್ಲಿ ದೇಶದಲ್ಲಿ 1168.89 ಮಿಲಿಯನ್‌ ದೂರವಾಣಿ ಗ್ರಾಹಕರಿದ್ದಾರೆ. ಇದರಲ್ಲಿ ನಿಸ್ತಂತು ಗ್ರಾಹಕರ ಸಂಖ್ಯೆ ಬರೋಬ್ಬರಿ 1146.49 ಮಿಲಿಯನ್‌. ಗಮನಿಸಬೇಕಾದುದರೆಂದರೆ, ಸ್ಥಿರ ದೂರವಾಣಿ ಗ್ರಾಹಕರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಯುತ್ತಿದೆ. ಮೇ ತಿಂಗಳಿನ 22.51 ಮಿಲಿಯನ್‌ನಿಂದ ಜೂನ್‌ನಲ್ಲಿ 22.40ಕ್ಕೆ ತಗ್ಗಿದೆ. ಈ ಸಂಖ್ಯೆಯಲ್ಲಿ ಈಗಲೂ ನಗರಗಳಲ್ಲಿ ಸ್ಥಿರ ದೂರವಾಣಿಯ ಪಾಲು ಶೇ. 85.55 ಇದ್ದರೆ ಗ್ರಾಮೀಣ ಭಾಗದ್ದು ಕೇವಲ ಶೇ. 14.45ರ ಸಾಂದ್ರತೆ ಮಾತ್ರ. ನಿಜಕ್ಕಾದರೆ ಮೊಬೈಲ್‌ ಸಿಗ್ನಲ್‌ ಸಿಗದ ಹಳ್ಳಿಗಳಲ್ಲಿ ಸ್ಥಿರ ದೂರವಾಣಿ ಸಂಖ್ಯೆ ಹೆಚ್ಚಿರಬೇಕಿತ್ತು.

ಚಂದಾದಾರರು ವ್ಯಾಪ್ತಿ ಪ್ರದೇಶದ ಹೊರಗೆ!
ದೇಶದ ಟೆಲಿ ಸಾಂದ್ರತೆಯಲ್ಲಿ ಸ್ಥಿರ ದೂರವಾಣಿಗಳದ್ದು 1.72 ಪಾಲು ಮಾತ್ರ ಉಳಿದಿದೆ. ನಗರಗಳಲ್ಲಿ ಇದು ಶೇ. 4.64 ಮತ್ತು ಗ್ರಾಮೀಣ ಭಾಗದಲ್ಲಿ ಬರೀ 0.36! ಈ ಸ್ಥಿರ ದೂರವಾಣಿಯಲ್ಲಿ ಬಿಎಸ್‌ಎನ್‌ಎಲ್‌, ಎಂಟಿಎನ್‌ಎಲ್‌ಗ‌ಳ ಪಾಲು ಶೇ. 67.88. ಈ ಮೊದಲು ಟೆಲಿಕಾಂ ಇಲಾಖೆ ಹಾಗೂ ನಂತರದಲ್ಲಿ ಟ್ರಾಯ್‌ ಎಲ್ಲ ದೂರವಾಣಿ ಸೇವಾದಾತರಿಂದ ಅಕ್ಸೆಸ್‌ ಡಿಫಿಸಿಟ್‌ ಚಾರ್ಜ್‌ ಅಲಿಯಾಸ್‌ ಎಡಿಸಿ ಶುಲ್ಕವನ್ನು ಪಡೆಯುತ್ತಿತ್ತು. ಸರಳವಾಗಿ ಹೇಳುವುದಾದರೆ, ನಾವು ಮಾಡುವ ಮೊಬೈಲ್‌ ಕರೆ ಆದಾಯದಲ್ಲಿ ಕೆಲಭಾಗವನ್ನು ಮೊಬೈಲ್‌ ಸೇವಾದಾತರು ಸರ್ಕಾರಕ್ಕೆ ಎಡಿಸಿ ಶುಲ್ಕವಾಗಿ ಪಾವತಿಸಬೇಕಾಗಿತ್ತು. ಈ ಹಣವನ್ನು ಬಳಸಿ ಸರ್ಕಾರ ದೂರವಾಣಿ ಸಂವಹನ ಲಭ್ಯವಿಲ್ಲದ ಭಾಗಕ್ಕೆ ಲಾಭವಿಲ್ಲದಿದ್ದರೂ ಸಂಪರ್ಕ ಕಲ್ಪಿಸುವವರಿಗೆ ಆ ಹಣವನ್ನು ಒದಗಿಸುತ್ತಿತ್ತು. ಹೀಗೆ ಲಾಭವಿಲ್ಲದೆ ಇದ್ದರೂ ಗ್ರಾಮೀಣ ಭಾರತಕ್ಕೆ ಅತಿ ಹೆಚ್ಚಿನ ದೂರವಾಣಿ ಸಂಪರ್ಕ ಕಲ್ಪಿಸುವ ಎಂಟಿಎನ್‌ಎಲ್‌, ಬಿಎಎನ್‌ಎಲ್‌ಗೆ ಈ ಮೊತ್ತ ಹೋಗುತ್ತಿತ್ತು.

ಈ ಮೊತ್ತ ಪಡೆಯುವಲ್ಲಿ ಬಿಎಸ್‌ಎನ್‌ಎಲ್‌ ಅರ್ಹವಾಗಿತ್ತು. ಹಾಗೂ ಪಡೆದ ಹಣವೆಲ್ಲ ಸಮರ್ಪಕವಾಗಿ ಬಳಕೆಯಾಗಿದ್ದರೆ ಗ್ರಾಮೀಣ ಭಾಗದ ಟೆಲಿ ಡೆನ್ಸಿಟಿ ಇವತ್ತಿನ ಶೇ. 57.99ಕ್ಕಿಂತ ಎಷ್ಟೋ ವೃದ್ಧಿಸಿರುತ್ತಿತ್ತು. ಈ ರೀತಿಯ ಎಡಿಸಿ ಶುಲ್ಕದ ಆಕರ್ಷಣೆ ಹಾಗೂ ಸಾಮಾಜಿಕ ಬದ್ಧತೆ ಇದ್ದುದರಿಂದಲೇ ಬಿಎಸ್‌ಎನ್‌ಎಲ್‌ ಹಾಗೂ ವೈರ್‌ಲೆಸ್‌ ಲೋಕಲ್‌ ಲೂಪ್‌ ಅರ್ಥಾತ್‌ ಡಬ್ಲ್ಯುಎಲ್‌ಎಲ್‌ ಎಂಬ ಸ್ವದೇಶಿ ತಂತ್ರಜಾnನದ ದೂರವಾಣಿ ವ್ಯವಸ್ಥೆಯನ್ನು ಜಾರಿಗೆ ತಂದಿತು. ರಿಲಯನ್ಸ್‌ ಇನ್ಫೋಕಾಮ್‌ ಕೂಡ ವಿಲ್‌ ತಾಂತ್ರಿಕತೆಯ ಸ್ಥಿರ ದೂರವಾಣಿಗಳನ್ನು ಒದಗಿಸಿತು. ಕೇಬಲ್‌ಗ‌ಳ ಆಸ್ಪದ ಇಲ್ಲದೆ ಗಾಳಿಯಲ್ಲಿ ಹಾರಿಬರುವ ಸಿಗ್ನಲ್‌ಗ‌ಳನ್ನು ಹಿಡಿದಿಡುವ ಡಬ್ಲ್ಯುಎಲ್‌ಎಲ್‌ ತಾಂತ್ರಿಕತೆಯಲ್ಲಿ ನೂರು ದೋಷಗಳಿರಬಹುದು. ಆದರೆ ಬಿಎಸ್‌ಎನ್‌ಎಲ್‌ ಸ್ಥಿರ ದೂರವಾಣಿಯ ಕೇಬಲ್‌ ಇಲ್ಲದ, ತಂತಿ ಎಳೆಯುವುದು ಶಕ್ಯವೇ ಇಲ್ಲ ಎಂಬ ಭಾಗದಲ್ಲೆಲ್ಲ ವಿಲ್‌ ದೂರವಾಣಿಗಳು ಚಾಲ್ತಿಗೆ ಬಂದವು. 

Advertisement

ಆವತ್ತು ಗ್ರಾಮೀಣ ಭಾಗದಲ್ಲಿ ನಿರಂತರ ಆರು ಘಂಟೆಗಳ ಕಾಲ ವಿದ್ಯುತ್‌ ಕಡಿತದ ಸನ್ನಿವೇಶ ಇರುವುದರಿಂದ ಇದೇ ಎಡಿಸಿ ಶುಲ್ಕದ ಬೆಂಬಲ ಪಡೆದ ಬಿಎಸ್‌ಎನ್‌ಎಲ್‌ ಅದರ ಜೊತೆ ಪ್ರತ್ಯೇಕ ಬ್ಯಾಟರಿಯನ್ನೂ ನೀಡಿತು. ತೀರಾ ಕಳಪೆ ಮಟ್ಟದ ಬ್ಯಾಟರಿ ಕೊಡುವ ಬದಲು ಉತ್ತಮವಾದುದನ್ನು ಕೊಟ್ಟಿದ್ದರೆ ಈ ವ್ಯವಸ್ಥೆಯೇ ಜನಪ್ರಿಯವಾಗುತ್ತಿತ್ತು. ಆವತ್ತಿನ ಕೇಂದ್ರದ ಟೆಲಿಕಾಂ ಸಚಿವರು ಒಳ್ಳೆಯ ಕಿಕ್‌ಬ್ಯಾಕ್‌ ಪಡೆದು ಬ್ಯಾಟರಿ ವಿತರಣೆಗೆ ಅವಕಾಶ ಕೊಟ್ಟರು ಎಂಬ ಮಾತು ಕೇಳಿಬಂದಿತ್ತು. ವಾರವೊಪ್ಪತ್ತಿನಲ್ಲಿ ಬ್ಯಾಟರಿಗಳು ಕೈಕೊಡುವುದನ್ನು ಗಮನಿಸಿದಾಗ ಆ ಮಾತು ನಿಜವೂ ಇರಬಹುದು ಎನ್ನಿಸುತ್ತದೆ. ಫೋನ್‌ ಸೆಟ್‌ ವ್ಯವಹಾರದಲ್ಲೂ ಬಿಎಸ್‌ಎನ್‌ಎಲ್‌ ಗ್ಯಾರಂಟಿ ಅವಧಿಯಲ್ಲಿ ರಾಜಿ ಮಾಡಿಕೊಂಡು ಕಡಿಮೆ ಬೆಲೆಗೆ ಸೆಟ್‌ ಖರೀದಿ ಗುತ್ತಿಗೆ ನೀಡುವ ಕ್ರಮ ಅನುಸರಿಸಿದ್ದು ಅಂತಿಮವಾಗಿ ಸಂಸ್ಥೆಯ ಉತ್ಪನ್ನಗಳ ವಿಶ್ವಾಸಾರ್ಹತೆಗೇ ಧಕ್ಕೆ ತಂದಿತ್ತು ಎಂಬುದನ್ನು ಇಲ್ಲಿ ಪ್ರಸ್ತಾಪಿಸಲೇಬೇಕು.

ದೂರವಾಗುವ ದೂರವಾಣಿ!
ಈಗಿನ ಸನ್ನಿವೇಶದಲ್ಲಿ ಕೋಡ್‌ ಡಿವಿಶನ್‌ ಮಲ್ಟಿಪಲ್‌ ಆಕ್ಸೆಸ್‌ ಯಾನೆ ಸಿಡಿಎಂಎ ಎಂಬ ವಿಜಾnನದ ವಿಲ್‌ ಫೋನ್‌ನ ಅಗತ್ಯ ಅರ್ಥವಾಗುತ್ತದೆ. ದೇಶದ 6,40,000 ಹಳ್ಳಿಗಳನ್ನು ತಲುಪಲು ಇದು ಏಕೈಕ ಸಫ‌ಲ ಮಾರ್ಗವಾಗಿತ್ತು. ಮೊನ್ನೆ ಕೊಡಗಿನಲ್ಲಿ ಶತಮಾನದ ದುರಂತದಲ್ಲಿ ಗುಡ್ಡಗಳೇ ಪ್ರವಾಹದೋಪದಿಯಲ್ಲಿ ಬಂದು ಮನೆಗಳನ್ನು, ಬದುಕನ್ನೂ ನುಂಗಿ ನೀರುಕುಡಿದಿದೆ. ಇಂತಹ ವೇಳೆ ಸಿಗ್ನಲ್‌ ಸಿಗದ ಜಂಗಮ ವಾಣಿ ಸಫ‌ಲವಲ್ಲ. ಈ ವೇಳೆ ಅಲ್ಲೆಲ್ಲೋ ಗುಡ್ಡದಲ್ಲಿ ಸಿಲುಕಿದವರು ವಿಲ್‌ ಇದ್ದಿದ್ದರೆ ಕರೆ ಮಾಡಿ ತಿಳಿಸಲು ಸಾಧ್ಯವಾಗುತ್ತಿತ್ತು ಅಲ್ಲವೇ?

ಜಾಗತೀಕರಣ ಈ ಥರಹದ ಸಾಮಾಜಿಕ ನ್ಯಾಯಗಳತ್ತ ನೋಡುವುದಿಲ್ಲ. ಮೊಬೈಲ್‌ ಸೇವಾದಾತರು ಎಡಿಸಿ ಶುಲ್ಕದೆಡೆಗೆ ಸದಾ ಆಕ್ಷೇಪ ಎತ್ತುತ್ತಿದ್ದರು. ಗ್ರಾಮೀಣ ಭಾಗದ ದೂರವಾಣಿ ಸೌಲಭ್ಯಕ್ಕಾಗಿನ ಈ ಶುಲ್ಕ ನಿರಂತರವಲ್ಲ. ಇದನ್ನು ಸ್ಥಗಿತಗೊಳಿಸಬೇಕು ಎಂಬ ಪ್ರತಿಪಾದನೆಗೇ ಹೆಚ್ಚು ಬಲ ಬಂದಿತು. ಸಾಮಾಜಿಕ ಕಳಕಳಿಯನ್ನು ಪೂರೈಸಲು ಟ್ರಾಯ್‌ ಯುಎಸ್‌ಓ ನಿಧಿಯನ್ನು ಕೂಡ ಹೊಂದಿದ್ದ ಸಂದರ್ಭದಲ್ಲಿ ಎರಡು ಏಕ ಉದ್ದೇಶದ ಯೋಜನೆಗಳ ಅಗತ್ಯವಿಲ್ಲ, ಟ್ರಾಯ್‌ ಕೂಡ ಎಡಿಸಿಯನ್ನು ಒಂದು ತಾತ್ಕಾಲಿಕ ಶುಲ್ಕ ಎಂದೇ ಹೇಳಿತ್ತು ಎಂಬ ಹಿನ್ನೆಲೆಯಲ್ಲಿ 2003ರಲ್ಲಿ ಜಾರಿಗೆ ಬಂದಿದ್ದ ಎಡಿಸಿ 2008-09ರ ಆರ್ಥಿಕ ವರ್ಷದಲ್ಲಿ ಹಿಂಪಡೆಯಿತು. 
ಪರಿಣಾಮ? ಕೆಲ ಕಾಲದಲ್ಲಿಯೇ ರಿಲಯನ್ಸ್‌ ಇನ್ಫೋಕಾಮ್‌ ತನ್ನ ಸಿಡಿಎಂಎ ಸಂಪರ್ಕ ವ್ಯವಸ್ಥೆಯನ್ನು ಮೂರು ವರ್ಷಗಳ ಹಿಂದೆ ಸ್ಥಗಿತಗೊಳಿಸಿತು. ಆ ವೇಳೆಗೆ ಮೊಬೈಲ್‌ ನಂಬರ್‌ ಪೋರ್ಟಬಿಲಿಟಿ ಬಂದದ್ದರಿಂದ ಹಲವು ಗ್ರಾಹಕರು ಸದರಿ ನಂಬರ್‌ನ್ನು ಉಳಿಸಿಕೊಂಡು ಬೇರೆ ಸೇವಾದಾತರ ಜಿಎಸ್‌ಎಂಗೆ ವರ್ಗಾವಣೆಗೊಂಡರು. ಗ್ಯಾಸ್‌ ಸಬ್ಸಿಡಿ ಮೊದಲಾದವಕ್ಕೆ ಈ ನಂಬರ್‌ನ್ನು ಕೊಟ್ಟು, ಬೇರೆ ಮೊಬೈಲ್‌ ಸಿಗ್ನಲ್‌ಗ‌ಳು ಕೂಡ ಅಲಭ್ಯ ಸ್ಥಿತಿಯಲ್ಲಿದ್ದವರು ಮಾತ್ರ ಗೋಳು ಅನುಭವಿಸಿದರು. ಸರ್ಕಾರ ಈ ಸಂಕಷ್ಟಕ್ಕೆ ಕಿವಿಗೊಡಲಿಲ್ಲ!

ಸರ್ಕಾರದ ನೆರವು ಬೇಕಾಗಿದೆ!
ಮತ್ತದೇ ಪರಿಸ್ಥಿತಿ ಇನ್ನಷ್ಟು ಗ್ರಾಹಕರನ್ನು ಕಾಡುವಂತಿದೆ. ನಂಬಲರ್ಹ ಮಾಹಿತಿಗಳ ಅನುಸಾರ, ಬಿಎಸ್‌ಎನ್‌ಎಲ್‌ ಕೂಡ ತನ್ನ ಸಿಡಿಎಂಎ ತಂತ್ರಜಾnನದ ವಿಲ್‌ ಫೋನ್‌ಗಳ ಸೇವೆಯನ್ನು ಸ್ಥಗಿತಗೊಳಿಸಲಿದೆ. ಪರ್ಯಾಯ ಸೂತ್ರಗಳನ್ನು ಒದಗಿಸದೆ ಈಗಿರುವ ಸೇವೆಯನ್ನು ನಿಲ್ಲಿಸಿದರೆ ಜನರಿಗಾಗುವ ತೊಂದರೆ ಕುರಿತು ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಯೋಚಿಸಬೇಕು ಎಂದುಕೊಳ್ಳುವುದಕ್ಕಿಂತ ಜನರಿಗಾಗಿಯೇ ಇರುವ ಸರ್ಕಾರಗಳು ಇಂತಹ ಸನ್ನಿವೇಶಗಳನ್ನು ತನ್ನ ಅನುದಾನಗಳ ಮೂಲಕ ಉಳಿಸಿಕೊಳ್ಳಬೇಕಿದೆ. 

ಬಿಎಸ್‌ಎನ್‌ಎಲ್‌ನ ಲ್‌ ಫೋನ್‌ ಹೊಂದಿರುವ ಬಹುತೇಕರಿಗೆ ಬೇರೆ ಮಾದರಿಯಲ್ಲಿ ದೂರವಾಣಿ ಸಂವಹನ ಅವಕಾಶಗಳಿಲ್ಲ ಎಂಬುದನ್ನು ಗಮನಿಸಬೇಕು. ಈ ಸ್ಥಿರ ದೂರವಾಣಿಗೆ ನೀಡಿದ ನಂಬರ್‌ಗಳ ಪೋರ್ಟಬಿಲಿಟಿಯೂ ಸಾಧ್ಯವಿಲ್ಲ. ಇದೊಂದು ರೀತಿ, ಕೊಡಗಿನ ಮಳೆ, ಕೇರಳದ ನೆರೆ, ಮತ್ತಾವುದೋ ಭಾಗದ ಬಿರುಗಾಳಿಗಳು ಇಲ್ಲದಿದ್ದರೂ ಆದಿ ಮಾನವನ ಕಾಲಕ್ಕೆ ತೆರಳಿದಂತೆ. ಗ್ರಾಮೀಣ ದೂರವಾಣಿಯನ್ನು ಮತ್ತಷ್ಟು ಕಾಲ ಬೆಂಬಲಿಸಬೇಕಾಗಿದೆ. ಇದಕ್ಕೆ ಎಡಿಸಿ, ಯುಎಸ್‌ಓ ಅಥವಾ ಇನ್ನಾವುದೇ ಹೆಸರಿನಲ್ಲಿ ಸಹಾಯ ಒದಗಿಸಬೇಕಾಗಿದೆ. ಇವು ಈಗಿನ ತರ್ಕ, ಕಾನೂನುಗಳಿಂದ ಸರಿದೂಗುವುದಿಲ್ಲ. ಈ ಸಂಬಂಧ ಜನಪ್ರತಿನಿಧಿಗಳು ಮಾತನಾಡಬೇಕು!

– ಮಾ.ವೆಂ.ಸ.ಪ್ರಸಾದ್‌,
ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next