Advertisement

ಪಂಚಾಯ್ತಿ ಮಟ್ಟದಲ್ಲಿ ಗ್ರಾಮೀಣ ಕ್ರೀಡೋತ್ಸವ

03:35 PM Aug 22, 2022 | Team Udayavani |

ಬೆಂಗಳೂರು: ಗ್ರಾಮೀಣ ಕ್ರೀಡಾಕೂಟ ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆಯಿರಿಸಿದೆ. ಆ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನಲ್ಲೇ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ಗ್ರಾಮ ಪಂಚಾಯ್ತಿ ಮಟ್ಟದಿಂದ ರಾಜ್ಯಮಟ್ಟದವರೆಗೆ ಕಬಡ್ಡಿ, ಖೋಖೋ, ಕುಸ್ತಿ, ಎತ್ತಿನಗಾಡಿಗಳ, ಲಗೋರಿ, ಚಿನ್ನಿದಾಂಡು ಕ್ರೀಡಾಕೂಟ ಹಮ್ಮಿಕೊಳ್ಳಲು ಮುಂದಾಗಿದೆ.

Advertisement

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಈ ಕ್ರೀಡಾಕೂಟ ಆಯೋಜಿಸಲು ಸಿದ್ಧ ವಾಗಿದ್ದು ದೇಶಿ ಸೊಗಡಿನ ಕ್ರೀಡಾಕೂಟ ಯಶಸ್ವಿ ಸಂಬಂಧ ಕ್ರಿಯಾ ಯೋಜನೆ ರೂಪಿಸಿದೆ.

ಗ್ರಾಮ ಪಂಚಾಯ್ತಿ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಈ ಕ್ರೀಡಾಕೂಟ ಆಯೋಜನೆಗೆ ಸುಮಾರು 10 ಕೋಟಿ ರೂ. ಅನುದಾನ ಅವಶ್ಯವಿದೆ. ಆ ಹಿನ್ನೆಲೆಯಲ್ಲಿ ಪ್ರತಿ ವರ್ಷ ಗ್ರಾಮ ಪಂಚಾಯ್ತಿಗಳು ಸಂಗ್ರಹಿಸುವ ಸ್ವಂತ ಆದಾಯದ ಶೇ.60ರಷ್ಟು ಮೊತ್ತದಲ್ಲಿ ಶೇ.2 ರಷ್ಟು ಅನುದಾನವನ್ನು ಗ್ರಾಮೀಣ ಕ್ರೀಡಾ ಕೂಟ ಹಮ್ಮಿಕೊಳ್ಳುವ ಸಲುವಾಗಿ ಮೀಸಲಿರಿ ಸಲು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮುಂದಾಗಿದೆ ಎಂದು ಪಂಚಾಯ್ತಿ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಗ್ರಾಮೀಣ ಕ್ರೀಡೆಗಳನ್ನು ಉಳಿಸಿ, ಬೆಳೆಸಿ ಅವುಗಳಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಸರ್ಕಾರ ಹೆಜ್ಜೆಯಿರಿಸಿದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಮುಂದಿನ ದಿನಗಳಲ್ಲಿ ಪಂಚಾಯ್ತ ರಾಜ್‌ ಇಲಾಖೆ ಜತೆಗೂಡಿ ಗ್ರಾಮ ಪಂಚಾಯ್ತಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಕ್ರೀಡಾ ಕೂಟ ನಡೆಸಲಿವೆ. ಈ ಕ್ರೀಡಾ ಕೂಟದ ಯಶಸ್ವಿಗೆ ಪಣತೊಡಲಾಗಿದೆ ಎಂದಿದ್ದಾರೆ.

ಮಹಿಳಾ ಕುಸ್ತಿ ಹೇಗೆ ನಡೆಯುತ್ತೆ?: ಈ ಕ್ರೀಡಾಕೂಟ ವಯೋಮಿತಿ ಇಲ್ಲದ ಮುಕ್ತ ಪಂದ್ಯಾವಳಿಯಾಗಿದೆ. ಕುಸ್ತಿಯಲ್ಲಿ ಮಹಿಳೆ ಯರು 50 ಕೆ.ಜಿ, 53 ಕೆ.ಜಿ, 55 ಕೆ.ಜಿ, 57 ಕೆ.ಜಿ, 62 ಕೆ.ಜಿ, 65 ಕೆ.ಜಿ, 68 ಕೆ.ಜಿ, 69 ಕೆ.ಜಿ, 76 ಕೆ.ಜಿ ಹಾಗೂ ಇದರ ಮೇಲ್ಪಟ ವಿಭಾಗದಲ್ಲಿ ಕೂಡ ಭಾಗವಹಿಸಬಹುದಾಗಿದೆ. ಪುರುಷರು 57 ಕೆ.ಜಿ, 61 ಕೆ.ಜಿ, 65 ಕೆ.ಜಿ, 70 ಕೆ.ಜಿ, 74 ಕೆ.ಜಿ, 79 ಕೆ.ಜಿ, 86 ಕೆ.ಜಿ, 92 ಕೆ.ಜಿ, 125 ಕೆ.ಜಿ ಹಾಗೂ ಅದರ ಮೇಲ್ಪಟ್ಟ ವಿಭಾಗಲ್ಲಿ ಕೂಡ ಸ್ಪರ್ಧಿಸಬಹುದಾಗಿದೆ.

Advertisement

ಕುಸ್ತಿಯಲ್ಲಿ ತಾಲೂಕು ಮಟ್ಟದಲ್ಲಿ ವಿಜೇತರಿಗೆ 1 ಸಾವಿರ ರೂ. ಜಿಲ್ಲಾಮಟ್ಟದ ವಿಜೇತರಿಗೆ 3 ಸಾವಿರ ರೂ. ಹಾಗೂ ರಾಜ್ಯಮಟ್ಟದ ವಿಜೇತರಿಗೆ 10 ಸಾವಿರ ರೂ. ನಗದು ನೀಡಿ ಗೌರವಿಸಲಾಗುವುದು. ಜತೆಗೆ ದ್ವಿತೀಯ ಬಹುಮಾನ ವಿಜೇತರಿಗೆ ತಾಲೂಕು ಮಟ್ಟದಲ್ಲಿ 600 ರೂ. ಜಿಲ್ಲಾಮಟ್ಟದಲ್ಲಿ 2 ಸಾವಿರ ರೂ. ಮತ್ತು ರಾಜ್ಯಮಟ್ಟದಲ್ಲಿ 7 ಸಾವಿರ ರೂ.ನಗದು ಬಹುಮಾನ ನೀಡಿ ಗೌರವಿಸಲಾಗುತ್ತದೆ. ತೃತೀಯ ಬಹುಮಾನ ಕೂಡ ನೀಡಿ ಸನ್ಮಾನಿಸಲಾಗುತ್ತಿದೆ.

ರಾಜ್ಯಮಟ್ಟದ ಆಯ್ಕೆ ಹೇಗೆ?:

ಮೂರು ಅಥವಾ ಅದಕ್ಕಿಂತ ಕಡಿಮೆ ತಾಲೂಕುಗಳಿರುವ ಜಿಲ್ಲೆಗಳಲ್ಲಿ 1,2 ಮತ್ತು 3ನೇ ಸ್ಥಾನ ಪಡೆದವರಿಗೆ ಮಾತ್ರ ಜಿಲ್ಲಾಮಟ್ಟದಲ್ಲಿ ಅವಕಾಶ. ನಾಲ್ಕು ಅಥವಾ ಐದು ತಾಲೂಕುಗಳಿರುವ ಜಿಲ್ಲೆಗಳಲ್ಲಿ 1 ಮತ್ತು 2ನೇ ಸ್ಥಾನ ಪಡೆದವರಿಗೆ ಅವಕಾಶ ನೀಡಲಾಗುತ್ತದೆ. ಹಾಗೆಯೇ ಆರಕ್ಕಿಂತ ಹೆಚ್ಚಿನ ತಾಲೂಕುಗಳಿರುವ ಜಿಲ್ಲೆಗಳಲ್ಲಿ 1ನೇ ಸ್ಥಾನ ಪಡೆದವರಿಗೆ ಮಾತ್ರ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಮೊದಲು ಸ್ಥಾನ ಪಡೆದವರು ರಾಜ್ಯಮಟ್ಟಕೆ ಆಯ್ಕೆ ಆಗುತ್ತಾರೆ.

ಗ್ರಾಮೀಣ ಕ್ರೀಡಾಕೂಟವನ್ನು ಉತ್ತೇಜಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಆ ಹಿನ್ನೆಲೆಯಲ್ಲೆ ಗ್ರಾಮ ಪಂಚಾಯ್ತಿ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗದಲ್ಲಿ ಕ್ರೀಡೆಗಳು ನಡೆಯಲಿವೆ. ಈ ಕ್ರೀಡಾ ಕೂಟದ ಯಶಸ್ವಿಗೊಳಿಸುವ ಸಂಬಂಧ ಪ್ರತಿ ಗ್ರಾಮ ಪಂಚಾಯ್ತಿಯಲ್ಲಿ ಶೇ.2ರಷ್ಟು ಅನುದಾನ ಮೀಸಲಿಡಲು ಗ್ರಾಮೀಣ ಮತ್ತು ಪಂಚಾಯ್ತಿ ರಾಜ್‌ ಇಲಾಖೆ ಮುಂದಾಗಿದೆ.  –ರಾಜೇಶ್‌, ಪಿಡಿಒ, ಹುಸ್ಕೂರು ಗ್ರಾಪಂ, ಬೆಂಗಳೂರು ಉತ್ತರ ತಾಲೂಕು

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next