Advertisement

ದಸರಾ ಕರಕುಶಲ ವಸ್ತು ಪ್ರದರ್ಶನದಲ್ಲಿ ಗ್ರಾಮೀಣ ಸೊಗಡು

01:19 PM Nov 13, 2017 | Team Udayavani |

ಮೈಸೂರು: ದಸರಾ ಮಹೋತ್ಸವದ ಅಂಗವಾಗಿ ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ವತಿಯಿಂದ ದಸರಾ ವಸ್ತುಪ್ರದರ್ಶನದ ಅಂಗಳದಲ್ಲಿ ಆಯೋಜಿಸಿರುವ ಕರಕುಶಲ ವಸ್ತುಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ.

Advertisement

ಹಳ್ಳಿಯ ಜನಜೀವನವನ್ನು ಪರಿಚಯಿಸುವ ಜೋಡೆತ್ತಿನಗಾಡಿ, ಮಣ್ಣಿನ ಮಡಕೆಯಲ್ಲಿ ನೀರು ಹೊತ್ತು ನಿಂತಿರುವ ಹೆಂಗಳೆಯರು, ಝುಳು ಝುಳು ಹರಿಯುತ್ತಿರುವ ನೀರಿನ ತೊರೆ, ಪಂಪ್‌ಸೆಟ್‌ ಮನೆಯ ಸ್ವಿಚ್‌ ಬೋರ್ಡ್‌ಗೆ ಒರಗಿಸಿ ನಿಲ್ಲಿಸಿದ ಮಂಕ್ರಿ, ಧ್ಯಾನಸ್ತ ಬುದ್ಧ ಕಲಾಕೃತಿಗಳು ನೋಡುಗರನ್ನು ಸೆಳೆಯುತ್ತಿವೆ.

ಗೀಜಗನ ಗೂಡಿಗೆ ತಲೆ ಆನಿಸಿ ನಿಂತ ಚೆಲುವೆಯ ಕಂಗಳಲ್ಲಿ ಪರಿಸರ ರಕ್ಷಣೆಯ ಚಿಂತೆ, ಮಾಲಿನ್ಯದ ರಭಸಕ್ಕೆ ನಡುಗತ್ತಿರುವ ವೃಕ್ಷ, ಗಾಜಿನ ಬಾಟಲಿಯೊಳಗೆ ಚಿನ್ನದ ಅಂಬಾರಿ ಹೊತ್ತ ಆನೆ… ಮೊದಲಾದ ಕಲಾಕೃತಿಗಳು ಪ್ರದರ್ಶನದ ಮೆರಗನ್ನು ಇನ್ನಷ್ಟು ಹೆಚ್ಚಿಸಿವೆ.

ಕೆ.ಆರ್‌.ನಗರ ತಾಲೂಕು ಸಾಲಿಗ್ರಾಮದ ಚಿತ್ರ ಕಲಾವಿದ ವೆಂಕಟೇಶ್‌ ಅವರು ಗಾಜಿನ ಬಾಟಲಿ, ಬುರುಡೆ ಬಲ್ಬ್ಗಳ ಒಳಗೆ ತ್ಯಾಜ್ಯಗಳನ್ನು ಬಳಸಿಯೇ ವಿವಿಧ ಕಲಾಕೃತಿಗಳನ್ನು ರಚಿಸಿದ್ದಾರೆ. ಚಿನ್ನದ ಅಂಬಾರಿ ಹೊತ್ತ ಆನೆಯನ್ನು ಬಾಟಲಿಯೊಳಗೆ ಬಂಧಿಸಿಟ್ಟಿದ್ದಾರೆ.

2 ಮಹಡಿ ಮನೆ, ದೊಡ್ಡಗಡಿಯಾರ, ಹಡಗು ಮುಂತಾದ ಚಿತ್ರಗಳನ್ನು ಬಾಟಲಿಯೊಳಗೆ ಸೂಕ್ಷ್ಮವಾಗಿ ರಚಿಸಿದ್ದಾರೆ. ರಂಗೋಲಿ ಸ್ಪರ್ಧೆ: ಇದೇ ಸಂದರ್ಭದಲ್ಲಿ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಸುಮಾರು 23 ಮಹಿಳೆಯರು ಸ್ಪರ್ಧೆಯಲ್ಲಿ ಪಾಲ್ಗೊಂಡು ರಂಗೋಲಿಯಲ್ಲಿ ಚಿತ್ತಾರ ಬಿಡಿಸಿದರು. 

Advertisement

ವಿಜೇತರು: ಸರಸ್ವತಿ (ಪ್ರ), ಮಲ್ಲಿಗೆ (ದ್ವಿ), ನವ್ಯಶ್ರೀ ತೃತೀಯ ಬಹುಮಾನ ತನ್ನದಾಗಿಸಿಕೊಂಡರು. ಶಾಸಕ ವಾಸು, ಕರಕುಶಲ ವಸ್ತು ಪ್ರದರ್ಶನ ಮಳಿಗೆ ಹಾಗೂ ರಂಗೋಲಿ ಸ್ಪರ್ಧೆ ಉದ್ಘಾಟಿಸಿದರು. ದಸರಾ ಲಲಿತಕಲೆ ಮತ್ತು ಕರಕುಶಲ ಉಪಸಮಿತಿ ಅಧ್ಯಕ್ಷ ಶೌಕತ್‌ ಅಲಿಖಾನ್‌, ಉಪಾಧ್ಯಕ್ಷ ಆರ್‌.ಗಿರೀಶ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next