Advertisement

ಉಳ್ತೂರು-ಮಲ್ಯಾಡಿ: ಕೃಷಿ ಭೂಮಿ ಆವರಿಸುತ್ತಿದೆ ಅಂತರಗಂಗೆ

11:11 PM Jul 19, 2019 | Sriram |

ಮ್ಯಾನ್‌ಸೋನಿಯಾ ಜಾತಿಯ ಸೊಳ್ಳೆಗಳು ಈ ಗಿಡದ ಆಶ್ರಯದಲ್ಲಿಯೇ ತನ್ನ ವಂಶಾಭಿವೃದ್ಧಿ ಮಾಡುತ್ತವೆ. ಕೇವಲ 24 ಗಂಟೆಗಳಲ್ಲಿ ಈ ಸೊಳ್ಳೆಯ ಲಾರ್ವಾದಿಂದ ಮರಿಗಳು ಯಥೇತ್ಛವಾಗಿ ಹೊರಬರುತ್ತವೆ. ಇದನ್ನ ನೀರಿನಿಂದ ಹೊರತೆಗೆದು ದಂಡೆಗಳಲ್ಲಿ ಒಣಗಿಸಿ ಅನಂತರ ಕೆಲವೊಂದು ರಾಸಾಯನಿಕ ಸಿಂಪಡಣೆ ಅಥವಾ ಸುಟ್ಟಾಗ ಮಾತ್ರ ಶಾಶ್ವತವಾಗಿ ಅಂತರಗಂಗೆಯನ್ನು ನಾಶ ಮಾಡಲು ಸಾಧ್ಯ.

Advertisement

ತೆಕ್ಕಟ್ಟೆ: ತಾಲೂಕಿನ ತೆಕ್ಕಟ್ಟೆ ಹಾಗೂ ಕೆದೂರು ಗ್ರಾ.ಪಂ. ವ್ಯಾಪ್ತಿಯ ಮಲ್ಯಾಡಿ, ಹಲ್ತೂರು, ಉಳ್ತೂರು ಹೊಳೆಸಾಲು ಭಾಗಗಳಲ್ಲಿ ಅಲ್ಲಲ್ಲಿ ಮತ್ತೆ ಅಂತರಗಂಗೆಗಳು ಕಾಣಿಸಿಕೊಂಡಿದ್ದು ಕೃಷಿ ಭೂಮಿಯನ್ನು ಆವರಿಸುವ ಭೀತಿ ಇಲ್ಲಿನ ಗ್ರಾಮೀಣ ರೈತರಲ್ಲಿದೆ. ವಿರಳವಾದ ಮಳೆಯ ಪರಿಣಾಮ ಅಂತರಗಂಗೆಗಳು ಉಳ್ತೂರಿನ ಕಿರು ಸೇತುವೆ ಸಮೀಪದಲ್ಲಿರುವ ಕಿಂಡಿ ಅಣೆಕಟ್ಟಿನ ಬಳಿ ಅಪಾರ ಪ್ರಮಾಣದಲ್ಲಿ ಬಂದು ಶೇಖರಣೆಯಾಗಿದೆ. ಸುತ್ತಮುತ್ತಲಿನ ನೂರಾರು ಎಕರೆ ಕೃಷಿ ಭೂಮಿಯಲ್ಲಿ ಈಗಾಗಲೇ ನಾಟಿ ಕಾರ್ಯ ಪೂರ್ಣಗೊಂಡಿದೆ. ಒಮ್ಮೆಲೇ ಮಳೆಯ ಪ್ರಮಾಣ ಅಧಿಕವಾದರೆ ನಾಟಿ ಮಾಡಿದ ಸಸಿಗಳ ಮೇಲೆ ಬಂದೆರಗಿ ಕೃಷಿ ನಾಶವಾಗುವ ಹೆಚ್ಚಿನ ಸಾಧ್ಯತೆಗಳಿವೆ.

ಅಂತರಗಂಗೆ ಕೃಷಿಭೂಮಿ ಆವರಿಸುವ ಆತಂಕ
ಉಳ್ತೂರು, ಮಲ್ಯಾಡಿ, ಬೇಳೂರು ಗ್ರಾಮೀಣ ಭಾಗಗಳಲ್ಲಿ ನಡೆಯುತ್ತಿದ್ದ ಆವೆಮಣ್ಣಿನ ಗಣಿಗಾರಿಕೆ (ಕೊಜೆ)ಯಿಂದಾಗಿ ತಗ್ಗು ಪ್ರದೇಶಗಳಲ್ಲಿ ಅಪಾರ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹವಾಗುತ್ತಿದ್ದು ಅದರಲ್ಲಿ ಅಂತರಗಂಗೆಗಳು ದುರ್ಬೀಜವಾಗಿ ಹರಡುತ್ತಿವೆ. ಮಳೆಗಾಲದಲ್ಲಿ ಹೊಂಡಗಳಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ಸುತ್ತಮುತ್ತಲಿನ ನೂರಾರು ಎಕರೆ ಕೃಷಿಭೂಮಿಯನ್ನು ಆವರಿಸುವ ಆತಂಕ ಇಲ್ಲಿನ ಕೃಷಿಕರಲ್ಲಿ ಎದುರಾಗಿದೆ.

ಕೃಷಿ ಭೂಮಿಯಲ್ಲಿ ನೀರಿನ ಪ್ರಮಾಣ ಕುಸಿತ
ಈ ಬಾರಿ ಮಳೆಯ ಪ್ರಮಾಣ ಸಂಪೂರ್ಣ ಇಳಿಮುಖವಾಗಿದ್ದು,ಹಲ್ತೂರು ಬೈಲು, ಉಳೂ¤ರು ಮೂಡುಬೆಟ್ಟು ಸೇರಿದಂತೆ ನಾಟಿ ಮಾಡಿದ ಕೃಷಿಭೂಮಿಯಲ್ಲಿ ಈಗಾಗಲೇ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಒಂದೆಡೆ ಮಳೆಯ ಕೊರತೆ ಮತ್ತೂಂದೆಡೆಯಲ್ಲಿ ಒಮ್ಮೆಲೇ ಮಳೆಯ ತೀವ್ರತೆ ಅಧಿಕವಾದಾಗ ಅಂತರಗಂಗೆಗಳು ನಾಟಿ ಮಾಡಿದ ಸಸಿಗಳ ಬಂದು ಎರಗುವ ಸಾಧ್ಯತೆ ಹೆಚ್ಚಾಗಿದೆ.

ಅಂತರಗಂಗೆ
ಆರರಿಂದ ಎಂಟು ಎಲೆಗಳಿರುವ ಈ ಗಿಡ ನೀರಿನ ಮೇಲ್ಭಾಗದಲ್ಲಿ ತೇಲಿಕೊಂಡು ಬೇರುಗಳು ನೀರಿನ ಒಳಭಾಗದಲ್ಲಿ ಇಳಿಬಿಡುವ ಅಲಂಕಾರಿಕ ಗಿಡವನ್ನು ವಾಟರ್‌ ಲೆಟ್ಯೂಸ್‌ (Water lettuce )ಅಥವಾ ಅಂತರಗಂಗೆ ಎಂದು ಕರೆಯಲಾಗುತ್ತದೆ. ಈ ಗಿಡದ ಮೂಲ ನೈಲ್‌ ನದಿಯ ತಟದಲ್ಲಿ ಕಂಡು ಬಂದಿದ್ದು ಅಲ್ಲಿಂದ ಮಾನವನ ಮೂಲಕವೇ ಈ ಗಿಡ ಭಾರತವನ್ನು ಪ್ರವೇಶಿಸಿದೆ ಎಂದು ಹೇಳಲಾಗುತ್ತಿದೆ. ಹಿಂದೆ ಅಲಂಕಾರಿಕಾ ಗಿಡವಾಗಿ ಬಳಕೆಯಾಗುತ್ತಿದ್ದ ಈ ಗಿಡ ಮನೆಯ ಕುಡಿಯುವ ನೀರಿನ ಬಾವಿ, ಹೂ ಕುಂಡಗಳಲ್ಲಿ ಬೆಳಸಲಾಗುತ್ತಿತ್ತು. ಆದರೆ ಅದೇ ಅಲಂಕಾರಿಕ ಗಿಡ ಕಳೆಯಾಗಿ ನೀರಿನ ಸೆಲೆ ಕೆರೆಗಳನ್ನು ಸೇರಿ ಇಂದು ಸಂಪೂರ್ಣವಾಗಿ ಬಯಲನ್ನು ವ್ಯಾಪಿಸುತ್ತಿದೆ. ನೀರಿನ ಮೇಲ್ಪದರದಲ್ಲಿ ದಟ್ಟವಾಗಿ ಬೆಳೆಯುವ ಈ ಗಿಡ ಆಮ್ಲಜನಕ ಹಾಗೂ ಸೂರ್ಯನ ಬೆಳಕು ನೀರಿನ ಆಳಕ್ಕೆ ಇಳಿಯದಂತೆ ತಡೆಯುವ ಮೂಲಕ ನೀರಿನಲ್ಲಿರುವ ಮೀನುಗಳು ಹಾಗೂ ಇತರ ಜಲಚರಗಳ ಸಾವಿಗೆ ಪರೋಕ್ಷ ಕಾರಣವಾಗುತ್ತದೆ.

Advertisement

ಹೊಳೆ ಸಾಲು ಹೂಳೆತ್ತಬೇಕಿದೆ
ಪ್ರತಿ ವರ್ಷದಂತೆ ಅಂತರಗಂಗೆಯ ಜತೆಗೆ ಮುಳ್ಳು ಜಾತಿಯ ವಿಷಕಾರಿ ಎಲೆ ಹೊಂಡದಲ್ಲಿ ಅಲ್ಲಲ್ಲಿ ಬೆಳೆದು ನಿಂತಿದ್ದು ಮಳೆ ಬಂದಾಗ ಕೃಷಿ ಭೂಮಿಯನ್ನು ಆವರಿಸುತ್ತಿದೆ. ಹೊಳೆ ಸಾಲುಗಳನ್ನು ಸಮರ್ಪಕವಾಗಿ ಹೂಳೆತ್ತುವ ಮಹತ್ವಾಕಾಂಕ್ಷಿ ಯೋಜನೆ ಕಾರ್ಯರೂಪಕ್ಕೆ ಬಂದರೆ ಮಾತ್ರ ಅಂತರಗಂಗೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ. ಈಗಾಗಲೇ ಎಲ್ಲೆಡೆಯಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದ್ದು ಒಮ್ಮೆಲೇ ಮಳೆಯ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡರೆ ಅಂತರಗಂಗೆ ಕೃಷಿಭೂಮಿಯನ್ನು ಆವರಿಸುವ ಆತಂಕವಿದೆ.
– ರವೀಂದ್ರ ಶೆಟ್ಟಿ ಕಟ್ಟೆಮನೆ
ಕೃಷಿಕರು, ಉಳ್ತೂರು

ಮತ್ತೆ ಚಿಗುರಿದ ಅಂತರಗಂಗೆ
ಹಿಂದಿನ ಕೆಲವು ವರ್ಷಗಳನ್ನು ನೋಡಿದರೆ ಈ ಬಾರಿ ಅಂತರಗಂಗೆಯ ಪ್ರಮಾಣ ಬಹಳ ವಿರಳವಾಗಿದೆ, ಮಳೆ ಪ್ರಮಾಣ ವಿರಳವಾದ ಹಿನ್ನೆಲೆಯಲ್ಲಿ ಕೆಲವು ಕಡೆಗಳಲ್ಲಿ ಕೊಜೆ ಹೊಂಡದಲ್ಲಿದ್ದ ಒಣಗಿದ ಅಂತರಗಂಗೆ ಮತ್ತೆ ಚಿಗುರಿದೆ. ಇದರ ನಿಯಂತ್ರಣಕ್ಕೆ ವೈಜ್ಞಾನಿಕವಾಗಿ ಹೊಳೆಯನ್ನು ಸಮರ್ಪಕವಾಗಿ ಹೂಳೆತ್ತಿದಾಗ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ.
– ಜಯರಾಮ ಶೆಟ್ಟಿ, ಪಿಡಿಒ, ಗ್ರಾಮ ಪಂಚಾಯತ್‌ ಕೆದೂರು

-ಟಿ. ಲೋಕೇಶ್‌ ಆಚಾರ್ಯ ತೆಕ್ಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next