Advertisement

ಗ್ರಾಮೀಣ ಸೌಕರ್ಯ ವೃದ್ಧಿಗೆ ಬದ್ಧ: ಪಿಣರಾಯಿ

09:55 AM Apr 14, 2018 | Karthik A |

ಕಾಸರಗೋಡು: ಸ್ಥಳೀಯಾಡಳಿತ ಸಹಿತ ವಿವಿಧ ಸ್ತರಗಳ ಆಡಳಿತ ವ್ಯವಸ್ಥೆಯ ವೇಗವನ್ನು ಬಲಪಡಿಸಿ ಗ್ರಾಮೀಣ ಪ್ರದೇಶಗಳ ವಿಕಾಸಕ್ಕೆ, ಕುಡಿಯುವ ನೀರು, ವಸತಿ ನಿರ್ಮಾಣಗಳಂತಹ ಮೂಲಭೂತ ಸೌಕರ್ಯಗಳ ಉನ್ನತಿಗೆ ಸರಕಾರ ಬದ್ಧ ಎಂದು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಹೇಳಿದರು. ಕಾರಡ್ಕ ಬ್ಲಾಕ್‌ ಪಂಚಾಯತ್‌ ಕಾರ್ಯಾಲಯಕ್ಕೆ ಕರ್ಮಂತೊಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

Advertisement

ಅಭಿವೃದ್ಧಿ ಪ್ರಕ್ರಿಯೆಗಳಿಗೆ ಮನಸ್ಸನ್ನು ತೆರೆದುಕೊಳ್ಳದ ಹೊರತು ಅಭಿವೃದ್ಧಿಯತ್ತ ಮುನ್ನಡೆಯಲಾಗದು. ಯಾವುದೇ ನೂತನ ಪ್ರಕ್ರಿಯೆಗಳ ಸಾಫಲ್ಯದ ಹಿಂದೆ ನೋವು -ಸಂಕಷ್ಟಗಳಿರುವುದು ಸಹಜ. ಆದರೆ ಆ ಬಳಿಕ ಅದು ನೆಮ್ಮದಿ ನೀಡುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅಭಿಪ್ರಾಯ ವ್ಯಕ್ತಪಡಿಸಿದರು. ಕಾರಡ್ಕ ಬ್ಲಾಕ್‌ ಪಂಚಾಯತ್‌ ಕಾರ್ಯಾಲಯಕ್ಕೆ ಕರ್ಮಂತೊಡಿಯಲ್ಲಿ ನೂತನವಾಗಿ ನಿರ್ಮಿಸಿರುವ ಕಟ್ಟಡವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶಗಳ ಜನಸಾಮಾನ್ಯರ ಸಮಗ್ರ ಅಭಿವೃದ್ಧಿಯನ್ನು ಸುಲಲಿತಗೊಳಿಸಿ ಆಡಳಿತ ವ್ಯವಸ್ಥೆಗೆ ಗುಣಮಟ್ಟವನ್ನು ತರುವಲ್ಲಿ ಸರಕಾರ ವ್ಯಾಪಕ ಕಾರ್ಯಯೋಜನೆ ಹೊಂದಿದ್ದು, ವಾರ್ಷಿಕ ಯೋಜನೆಗಳನ್ನು ಈ ವರ್ಷದಿಂದ ಎಪ್ರಿಲ್‌ ಮೊದಲ ವಾರದಿಂದಲೇ ಆರಂಭಿಸಲಾಗುತ್ತದೆ. ಡಿಸೆಂಬರ್‌ ವೇಳೆಗೆ ಶೇ. 70ರ ಅನುದಾನ ಬಳಕೆಯಾಗಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ವಿನಿಯೋಗಿಸಿದ ಅನುದಾನಗಳ ಕ್ಷಮತೆ ಪರಿಶೀಲನೆ ಮತ್ತು ಮಿಕ್ಕುಳಿದ ಶೇ. 30ರ ವಿನಿಯೋಗಕ್ಕೆ ಕಾರ್ಯಯೋಜನೆ ವಿಸ್ತರಿಸಲು ರಾಜ್ಯ ಸರಕಾರ ಈಗಾಗಲೇ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶನ ನೀಡಿದೆ ಎಂದವರು ತಿಳಿಸಿದರು.

ರಾಷ್ಟ್ರೀಯ ಹೆದ್ದಾರಿಯ ಅಭಿವೃದ್ಧಿಗೆ ಸಂಬಂಧಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಗಡಿ ಪ್ರದೇಶ ತಲಪಾಡಿಯಿಂದ ಈಚೆಗಿನ ಹೆದ್ದಾರಿ ಪಕ್ಕದ ನಿರಾಶ್ರಿತರಾಗುವವರಿಗೆ ಗರಿಷ್ಠ ಪರಿಹಾರ ಧನ ನೀಡುವಲ್ಲಿ ರಾಜ್ಯ ಸರಕಾರ ಪ್ರಯತ್ನಿಸಲಿದೆ. ಇತರ ರಾಜ್ಯಗಳಿಗಿಂತ ಅಧಿಕ ಮೊತ್ತದ ಪರಿಹಾರ ಧನದ ಬಗ್ಗೆ ಈಗಾಗಲೇ ಕೇಂದ್ರ ಸರಕಾರ ಕೇಳಿದ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್‌ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಸಂಸದ ಪಿ. ಕರುಣಾಕರನ್‌ ಅವರು ಬ್ಲಾ. ಪಂ.ನ 2018-19ನೇ ಸಾಲಿನ ವಿವಿಧ ಯೋಜನೆಗಳ ಉದ್ಘಾಟನೆ ಮತ್ತು ವನಿತಾ ಕ್ಯಾಂಟೀನ್‌ ನಿರ್ಮಾಣದ ಶಂಕು ಸ್ಥಾಪನೆಯನ್ನು ನೆರವೇರಿಸಿದರು. ರಾಜ್ಯ ಕೇರಳ್ಳೋತ್ಸವದ ಬಹುಮಾನಿತರನ್ನು ಸಭೆಯಲ್ಲಿ ಶಾಸಕ ಎಂ. ರಾಜಗೋಪಾಲ್‌ ಗೌರವಿಸಿದರು.

Advertisement

ಜಿಲ್ಲಾಧಿಕಾರಿ ಕೆ. ಜೀವನ್‌ ಬಾಬು, ಸಹಾಯಕ ಅಭಿವೃದ್ಧಿ ಅಧಿಕಾರಿ ವಿ.ಎಸ್‌. ಸಂತೋಷ್‌ ಕುಮಾರ್‌ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿದರು. ಕಾರಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಸ್ವಪ್ನಾ ಜೆ., ಬೇಡಡ್ಕ ಗ್ರಾಮ ಪಂಚಾಯತ್‌ ಅಧ್ಯಕ್ಷ ನ್ಯಾಯವಾದಿ ಸಿ. ರಾಮಚಂದ್ರನ್‌, ದೇಲಂಪಾಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ಎ. ಮುಸ್ತಫ ಹಾಜಿ, ಮುಳಿಯಾರ್‌ ಗ್ರಾಮ ಪಂಚಾಯತ್‌ ಅಧ್ಯಕ್ಷ ಖಾಲಿದ್‌ ಬೆಳ್ಳಿಪ್ಪಾಡಿ, ಕುತ್ತಿಕೋಲ್‌ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಲಿಸಿ ವಿ.ಜೆ, ಬೆಳ್ಳೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ಲತಾ ಎಂ., ಕುಂಬ್ದಾಜೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ಫಾತಿಮತ್‌ ಝುಹ್ರಾ ಸಹಿತ ವಿವಿಧ ಗ್ರಾಮ ಪಂಚಾಯತ್‌  ಉಪಾಧ್ಯಕ್ಷರು, ಬ್ಲಾಕ್‌ ಪಂಚಾಯತ್‌ ಸದಸ್ಯರು, ಸ್ಥಾಯೀ ಸಮಿತಿ ಅಧ್ಯಕ್ಷರು, ಗ್ರಾಮ ಪಂಚಾಯತ್‌ ಸದಸ್ಯರು ಉಪಸ್ಥಿತರಿದ್ದರು. ಕಾರಡ್ಕ ಬ್ಲಾಕ್‌ ಪಂಚಾಯತ್‌ ಅಧ್ಯಕ್ಷೆ ಓಮನಾ ರಾಮಚಂದ್ರನ್‌ ಸ್ವಾಗತಿಸಿದರು. ಬ್ಲಾಕ್‌ ಪಂಚಾಯತ್‌ ಕಾರ್ಯದರ್ಶಿ ಬಾಲಕೃಷ್ಣ ಬಿ. ವಂದಿಸಿದರು.

ಅಭಿವೃದ್ಧಿಯಲ್ಲಿ ಕೈಜೋಡಿಸಿ
ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯ ತೀವ್ರ ಹಿನ್ನಡೆಯ ಅಭಿವೃದ್ಧಿಯಲ್ಲಿದೆ. ಜನರ ಮನೋಭಾವ ಬದಲಾಗದ ಹೊರತು ಹೊಸ ಅಭಿವೃದ್ಧಿ ಚಟುವಟಿಕೆಗಳನ್ನು ಜಾರಿಗೊಳಿಸಲು ತೊಂದರೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ಜನಸಾಮಾನ್ಯರು ಗಲಿಬಿಲಿಗೊಳ್ಳದೆ, ಯಾವುದೇ ಲಾಲಸೆಗೊಳಗಾಗದೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕೈಜೋಡಿಸಬೇಕು. ಅಭಿವೃದ್ಧಿ ವಿಷಯಗಳಲ್ಲಿ ರಾಜಕೀಯ ನೇತಾರರರು ಪಕ್ಷ ರಾಜಕೀಯ ಪರಿಗಣಿಸಬಾರದು. ಪಕ್ಷಾತೀತರಾಗಿ ಅಭಿವೃದ್ಧಿ ಪ್ರಕ್ರಿಯೆಗಳಿಗೆ ಕೈಜೋಡಿಸಿದಾಗಲಷ್ಟೆ ಅಭಿವೃದ್ಧಿಯ ಮುನ್ನಡೆ ಸಾಧ್ಯ. ಅಭಿವೃದ್ಧಿ ಜನತೆಗೋಸ್ಕರ ಇರುವುದೆಂಬದನ್ನು ತಿಳಿಯಬೇಕು. ಹೀಗಾದಲ್ಲಿ ಮಾತ್ರ ಅಭಿವೃದ್ಧಿ ಚಟುವಟಿಕೆಗಳು ಕ್ಲಪ್ತ ಸಮಯಕ್ಕೆ, ಭ್ರಷ್ಟಾಚಾರ ರಹಿತವಾಗಿ ಜಾರಿಗೊಳ್ಳುವುದೆಂದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next