Advertisement

ಆಧುನಿಕ ಸೌಲಭ್ಯಗಳಿಂದಲೇ ಗ್ರಾಮಾಭಿವೃದ್ಧಿ

06:37 AM Jul 01, 2019 | Lakshmi GovindaRaj |

ದೇವನಹಳ್ಳಿ: ಆಧುನಿಕ ತಂತ್ರಜ್ಞಾನಗಳಾದ ವೈಫೈ, ಸಿಸಿ ಕ್ಯಾಮೇರಾ ಸೇರಿದಂತೆ ಇನ್ನೀತರ ಸೌಲಭ್ಯಗಳನ್ನು ಪಡೆಯುವುದರೊಂದಿಗೆ ದೊಡ್ಡಜಾಲ ಗ್ರಾಮ ಪಂಚಾಯಿತಿಯು ರಾಜ್ಯಕ್ಕೆ ಮಾದರಿ ಗ್ರಾಮವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.

Advertisement

ಸಮೀಪದ ಬೆಂಗಳೂರು ಉತ್ತರ ತಾಲೂಕಿನ ದೊಡ್ಡ ಜಾಲ ಗ್ರಾಪಂ ವ್ಯಾಪ್ತಿಯ ಸಾದಹಳ್ಳಿ ಗೇಟ್‌ ಬಳಿ ಗ್ರಾಪಂನಿಂದ ನಮ್ಮ ಮೆಡಿಕಲ್‌, ಶುದ್ಧ ಕುಡಿಯುವ ನೀರಿನ ಘಟಕ ಮತ್ತು ನವರತ್ನ ಅಗ್ರಹಾರದಲ್ಲಿ ಒಳ ಚರಂಡಿ ಕಾಮಗಾರಿ, ಉಚಿತ ವೈಫೈ, ಸಿಸಿ ಕ್ಯಾಮೇರಾಗಳ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯವಿಲ್ಲ: ಗ್ರಾಮ ಗಳಲ್ಲಿ ವೈಫೈ ಮತ್ತು ಸಿಸಿ ಟಿವಿ, ಮೆಡಿಕಲ್‌ ಸ್ಟೋರ್ ಆರಂಭಿಸುವುದರ ಮೂಲಕ ಮಾದರಿ ಗ್ರಾಪಂ ಎನಿಸಿದೆ. ಇಂತಹ ಗ್ರಾಮಗಳಿಗೆ ತಂತ್ರಜ್ಞಾನದ ಸೌಲಭ್ಯಗಳನ್ನು ಒದಗಿಸಬೇಕಾದರೆ ಸರ್ಕಾರ ನೆರವಾಗಿದೆ. ಸರ್ಕಾರದಿಂದ ಮಾತ್ರ ಗ್ರಾಮಗಳ ಅಭಿವೃದ್ಧಿ ಸಾಧ್ಯವಾಗುವುದಿಲ್ಲ. ದಾನಿಗಳು ಮತ್ತು ಜನರ ನೆರವಿನಿಂದ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಇತರೆ ಸೌಲಭ್ಯಗಳನ್ನು ಅನುಷ್ಠಾನ ಗೊಳಿಸಿ ರಾಜ್ಯಕ್ಕೆ ಮಾದರಿ ಆಗಿದೆ. ನವರತ್ನ ಅಗ್ರಹಾರ ಗ್ರಾಮದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಯಿತು. ಪ್ರತಿ ಗ್ರಾಮದ ಪ್ರತಿಬೀದಿಗೂ ಕ್ಯಾಮೆರಾ ಅಳವಡಿಸಬೇಕು ಎಂದು ಹೇಳಿದರು.

ಸಿಸಿ ಕ್ಯಾಮೆರಾದಿಂದ ಮಾದರಿ ಗ್ರಾಮ: ಗ್ರಾಪಂ ವ್ಯಾಪ್ತಿಯ ಜನರಿಗೆ ನಮ್ಮ ಮೆಡಿಕಲ್‌ ಪ್ರಾರಂಭ ಮಾಡಿ ಶೇ.40ರಷ್ಟು ಔಷಧಗಳು ಅಗ್ಗದ ಹಾಗೂ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಸಿಗುವಂತೆ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಹಲವಾರು ಪ್ರಶಸ್ತಿಗಳು ಗ್ರಾಪಂಗೆ ಬಂದಿದೆ.

ಸ್ವಚ್ಛತೆಯಲ್ಲಿ ಗ್ರಾಪಂ ಮೊದಲ ಆದ್ಯತೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಕಳ್ಳತನ ಮತ್ತು ಅಶಾಂತಿ ವಾತಾವರಣ ಹಾಗೂ ಇನ್ನಿತರೆ ಪ್ರಕರಣಗಳು ಇಲ್ಲದಂತೆ ಮಾಡಲು ಗ್ರಾಮಗಳಿಗೆ ಸಿಸಿ ಕ್ಯಾಮೇರಾ ಅಳವಡಿಸಿ ಈ ಗ್ರಾಪಂ ಒಂದು ಮಾದರಿ ಮಾಡಿದ್ದಾರೆ. ಇದೇ ರೀತಿ ಎಲ್ಲಾ ಗ್ರಾಪಂಗಳಲ್ಲಿ ಮಾಡಿದರೆ ಅನುಕೂಲ ವಾಗುವುದು.

Advertisement

ನನ್ನ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಗ್ರಾಪಂ ಈ ರೀತಿಯ ಸೌಲಭ್ಯಗಳನ್ನು ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಗ್ರಾಮಗಳಿ ಹೆಚ್ಚು ಅಭಿವೃದ್ಧಿ ಹೊಂದಬೇಕು. ಸರ್ಕಾರವೂ ಸಹ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡುತ್ತಿದೆ ಎಂದು ಹೇಳಿದರು.

ನಮ್ಮ ಮೆಡಿಕಲ್‌ ಆರಂಭ: ದೊಡ್ಡ ಜಾಲ ಗ್ರಾಪಂ ಅಧ್ಯಕ್ಷ ಎನ್‌.ಕೆ. ಮಹೇಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂನಿಂದ ಒಂದು ನೂತನ ಪ್ರಯತ್ನ ಮಾಡುತ್ತಿದ್ದೇವೆ. ನಮ್ಮ ಮೆಡಿಕಲ್‌ ಸ್ಟೋರ್‌ ಮಾಡಿ, ಈ ಭಾಗದ 15 ರಿಂದ 20 ಗ್ರಾಮಗಳ ಜನರಿಗೆ ಅಗ್ಗದ ದರದಲ್ಲಿ ಔಷಧ ಸಿಗುವಂತೆ ಮಾಡುತ್ತಿದ್ದೇವೆ.

ಈ ಔಷದಿ ಕೇಂದ್ರದಲ್ಲಿ ಶೇ.20% ರಿಯಾಯಿತಿ ದರದಲ್ಲಿ ಔಷದಿ ಹಾಗೂ ಜನರಿಕ್‌ ಔಷಧ ಶೇ. 40 %ರಷ್ಟು ರಿಯಾಯಿತಿ ದರದಲ್ಲಿ ನೀಡುತ್ತಿದ್ದೇವೆ. ಇಡೀ ರಾಜ್ಯದಲ್ಲಿಯೇ ಗ್ರಾಪಂ ಮಟ್ಟ ದಲ್ಲಿ ಅನುಷ್ಠಾನಕ್ಕೆ ಪ್ರಥಮ ಬಾರಿಗೆ ತಂದಿದ್ದೇವೆ. ಜನರ ಸೇವೆಗಾಗಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದೇವೆ. ಎಲ್ಲಾ ಗ್ರಾಪಂ ಸದಸ್ಯರು ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ.

ಸಚಿವ ಕೃಷ್ಣ ಭೈರೇಗೌಡ ಮಾರ್ಗದರ್ಶನ ದೊಂದಿಗೆ ಹಾಗೂ ಎಲ್ಲರ ಸಹಕಾರದೊಂದಿಗೆ ಈ ಕಾರ್ಯವನ್ನು ಮಾಡಿದ್ದೇವೆ. ಗ್ರಾಮದ ಜನರು ತಂತ್ರಜ್ಞಾನ ಯುಗದಲ್ಲಿ ವೆ‌ಸುವಂತೆ ಆಗಿದೆ. ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಸಿಸಿ ಕ್ಯಾಮೇರಾ ಅಳವಡಿಸಿದ್ದೇವೆ. ಜನರ ತೆರಿಗೆ ಹಣದಿಂದ ನಮ್ಮ ಮೆಡಿಕಲ್‌ ಆರಂಭಿಸಿ ಮಾಡಿ ಜನರಿಗೆ ಅನುಕೂಲ ಮಾಡಿದ್ದೇವೆ ಎಂದರು.

ವಾಣಿಜ್ಯೋದ್ಯಮಿ ರೊನಾಲ್ಡ್‌ ಕೊಲಸಾ , ದೊಡ್ಡ ಜಾಲ ಗ್ರಾಪಂ ಉಪಾಧ್ಯಕ್ಷೆ ನಳಿನಾ, ಸದಸ್ಯರಾದ ಬಿ.ಕೆ. ಮಂಜು, ಶೈಲಮ್ಮ, ಭವ್ಯಶ್ರೀ, ಕುಂದಾಣ ಜಿಪಂ ಸದಸ್ಯ ಕೆ.ಸಿ. ಮಂಜುನಾಥ್‌, ಪಿಡಿಒ ಗಂಗಾರಾಮ್‌, ಜಿಪಂ ಮಾಜಿ ಸದಸ್ಯ ಅಶೋಕ, ಮುಖಮಡರಾದ ಎಸ್‌.ನಾಗಣ್ಣ, ಎಲ್‌.ನಾಗರಾಜ್‌, ಎಸ್‌.ಮುನಿರಾಜು, ಗೋವಿಂದಪ್ಪ, ರಾಮಾಂಜನಪ್ಪ , ಶ್ರೀನಿವಾಸ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next