Advertisement

ಗ್ರಾಮೀಣಾಭಿವೃದ್ಧಿ ವಿವಿಯಿಂದ 20 ಶಾಲೆ ದತ್ತು

06:34 PM Mar 07, 2021 | Team Udayavani |

ಹುಬ್ಬಳ್ಳಿ: ಪ್ರಾಥಮಿಕ ಹಾಗೂ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ವಿವಿಧ ವಿಷಯ ತಜ್ಞರು, ಸಂಶೋಧಕರಿಂದ ಬೋಧನೆ-ಸಂವಾದ, ಕಂಪ್ಯೂಟರ್‌ ಮಾಹಿತಿ, ವಿಶ್ವವಿದ್ಯಾಲಯ ಸ್ವರೂಪ, ಇಂಗ್ಲಿಷ್‌ ಭಾಷೆ ಜ್ಞಾನ, ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ಹೀಗೆ ಇತರೆ ವಿವಿಗಳಿಗೆ ಮಾದರಿಯಾಗುವ, ಹೊಸ ಸಂಪ್ರದಾಯಕ್ಕೆ ಗದುಗಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ವಿಶ್ವವಿದ್ಯಾಲಯ ಮುಂದಡಿ ಇರಿಸಿದೆ.ಗಾಂ ಧೀಜಿ ಚಿಂತನೆಗಳ ಅನುಷ್ಠಾನ ನಿಟ್ಟಿನಲ್ಲಿ ಗಾಂ ಧಿ ಆಶ್ರಮ, ವಿದ್ಯಾರ್ಥಿಗಳಿಗೆ ಚರಕದಿಂದ ನೇಯುವ ತರಬೇತಿ, ಖಾದಿ ಮತ್ತು ಗ್ರಾಮೋದ್ಯೋಗ ಉತ್ಪನ್ನಗಳ ಮಾರಾಟಕ್ಕೆ ವೇದಿಕೆ, ವಿವಿ ವಿದ್ಯಾರ್ಥಿಗಳಿಗೆ ಕೃಷಿ ಬದುಕಿನ ಪರಿಚಯಕ್ಕೆ ಗ್ರಾಮ ವಾಸ್ತವ್ಯದಂತಹ ಹಲವು ಹೊಸತನಗಳಿಗೆ ತನ್ನನ್ನು ತಾನು ತೊಡಗಿಸಿಕೊಂಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಕರು-ವಿದ್ಯಾರ್ಥಿಗಳ ತರಬೇತಿಗೆ ಮಹತ್ವದ ಯೋಜನೆ ಕೈಗೊಂಡಿದೆ.

Advertisement

ಪ್ರಾಥಮಿಕ ಶಿಕ್ಷಣ-ಉನ್ನತ ಶಿಕ್ಷಣ ನಡುವಿನ ಕಂದಕ ಇಲ್ಲವಾಗಿಸುವ, ವಿದ್ಯಾರ್ಥಿಗಳಲ್ಲಿ ಉನ್ನತ ಶಿಕ್ಷಣದ ಮಹತ್ವದ ಬೀಜ ಬಿತ್ತುವ, ವಿಶ್ವವಿದ್ಯಾಲಯಗಳ ಕಡೆ ಅವರನ್ನು ಆಕರ್ಷಿಸಲು ಗ್ರಾಮೀಣಾಭಿವೃದ್ಧಿ ವಿವಿ ಮುಂದಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ ಹಾಗೂ ವ್ಯಕ್ತಿತ್ವ ವಿಕಸನ ಕಾರ್ಯ ಮಾಡುತ್ತಿದೆ.

20 ಸರ್ಕಾರಿ ಶಾಲೆಗಳ ದತ್ತು: ಗದಗ ತಾಲೂಕಿನ 19 ಸರ್ಕಾರಿ ಪ್ರಾಥಮಿಕ, ಒಂದು ಪ್ರೌಢಶಾಲೆಯನ್ನು ಗ್ರಾಮೀಣಾಭಿವೃದ್ಧಿ ವಿವಿ ದತ್ತು ಪಡೆದಿದೆ. ದತ್ತು ಪಡೆದ ಶಾಲೆಗಳಿಗೆ ವಿವಿ ಕುಲಪತಿ, ಕುಲಸಚಿವ, ಪ್ರಾಧ್ಯಾಪಕರು, ವಿಷಯ ತಜ್ಞರು, ಸಂಶೋಧಕರು ತೆರಳಿ ಸಂವಾದ ನಡೆಸಲಿದ್ದಾರೆ.

ದತ್ತು ಪಡೆದ ಶಾಲೆಗಳ ಮುಖ್ಯೋಪಾಧ್ಯಾಯರು, ಸಿಆರ್‌ಪಿ, ಬಿಇಒ, ಡಿಡಿಪಿಐ, ಎಸ್‌ಡಿಎಂಸಿಯವರ ಸಭೆ ನಡೆಸಿ, ಶಾಲೆಗಳನ್ನು ದತ್ತು ಪಡೆಯುವ ಬಗ್ಗೆ ಸಮಾಲೋಚಿಸಿ ದತ್ತು ಪಡೆಯುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಮಕ್ಕಳಿಗೆ ಕಠಿಣ ಎನಿಸುವ ಗಣಿತ, ಇಂಗ್ಲಿಷ್‌, ವಿಜ್ಞಾನ ವಿಷಯಗಳ ಕುರಿತಾಗಿ ವಿವಿಯ ವಿಷಯ ತಜ್ಞರು, ಪ್ರಾಧ್ಯಾಪಕರು, ಸಂಶೋಧಕರು ಪ್ರಾಥಮಿಕ ಶಾಲೆ ಮಕ್ಕಳ ಮಟ್ಟಕ್ಕಿಳಿದು ಅವರಿಗೆ ಅರ್ಥ ಮಾಡಿಸುವ ಕಾರ್ಯ ಮಾಡುತ್ತಿದ್ದಾರೆ.

ಪ್ರಾಥಮಿಕ ಶಾಲೆಗೆ ಕಾಲೇಜು ಉಪನ್ಯಾಸಕರು ಬಂದಿದ್ದಾರೆ ಎಂದರೆ ಏನೋ ಕುತೂಹಲ ಇರುತ್ತದೆ. ಅಂತಹದ್ದರಲ್ಲಿ ವಿಶ್ವವಿದ್ಯಾಲಯ ವಿಷಯ ತಜ್ಞರೇ ತಮಗೆ ಕಲಿಸಲು ಬಂದಿದ್ದಾರೆಂದರೆ ಮಕ್ಕಳಲ್ಲಿನ ಆಸಕ್ತಿ ಕೆರಳುವುದು ಸಹಜವಾಗಲಿದೆ. ಜತೆಗೆ ವಿವಿ ಪ್ರಾಧ್ಯಾಪಕರು, ವಿಷಯ ತಜ್ಞರಿಗೂ ಪ್ರಾಥಮಿಕ ಶಾಲಾ ಮಕ್ಕಳ ಮನಕ್ಕೆ ಮುಟ್ಟುವ ರೀತಿಯಲ್ಲಿ ಬೋಧಿಸುವ ಅನುಭವವೂ ದೊರೆಯಲಿದೆ. ವಿವಿಯಿಂದ ದತ್ತು ಪಡೆದಿರುವ 19 ಪ್ರಾಥಮಿಕ ಮತ್ತು ಒಂದು ಪ್ರೌಢಶಾಲೆಗಳಲ್ಲಿ ಶಾಲಾ ಅವ ಧಿ ಮುಗಿದ ನಂತರ ಹಾಗೂ ರವಿವಾರ ವಿವಿ ತಜ್ಞರು ಬೋಧನೆಗೆ ಮುಂದಾಗಿರುವುದು ವಿಶೇಷ. ಯಾವ ಶಾಲೆಗೆ ಯಾರು ಬರುತ್ತಾರೆಂಬುದನ್ನು ಆ ಶಾಲೆಗೆ ಒಂದು ದಿನ ಮೊದಲೇ ತಿಳಿಸಲಾಗುತ್ತದೆ.

Advertisement

ಸಂಜೆ 4 ಗಂಟೆ ನಂತರದಲ್ಲಿ ವಿವಿ ತಜ್ಞರು ಶಾಲೆಗಳಿಗೆ ತೆರಳಿ ಮಕ್ಕಳಿಗೆ ಸುಲಭ ರೀತಿಯಲ್ಲಿ ಅರ್ಥೈಯಿಸಿಕೊಳ್ಳುವ ರೀತಿಯಲ್ಲಿ ಇಂಗ್ಲಿಷ್‌, ಗಣಿತ, ವಿಜ್ಞಾನ ಇನ್ನಿತರ ವಿಷಯಗಳನ್ನು ಬೋಧನೆ ಮಾಡುತ್ತಾರೆ. ಕಂಪೂÂಟರ್‌ ಪ್ರಾಥಮಿಕ ಜ್ಞಾನ ನೀಡಲಾಗುತ್ತಿದೆ. ಮಕ್ಕಳ ಪ್ರಶ್ನೆಗಳಿಗೆ ಉತ್ತರಿಸುವ, ಅವರ ಸಂಶಯಗಳನ್ನು ನಿವಾರಿಸುವ ಕೆಲಸ ಮಾಡಲಾಗುತ್ತದೆ. ಮಕ್ಕಳಿಗೆ ಇತರೆ ವಿಷಯಗಳಲ್ಲಿ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಸಾಮಾನ್ಯ ಜ್ಞಾನದ ಬಗ್ಗೆ ಮನವರಿಕೆ ಮಾಡುತ್ತಿದ್ದು, ಮಕ್ಕಳ ಮನದೊಳಗಿನ ಸಮಸ್ಯೆ, ತುಮುಲ, ಗೊಂದಲ, ಬುದ್ಧಿಮಟ್ಟ ತಿಳಿಯುವ ನಿಟ್ಟಿನಲ್ಲಿ ತಜ್ಞರನ್ನು ಕರೆದ್ಯೊಯ್ದು ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಲಾಗುತ್ತದೆ.

ಗಾಂಧಿ ಆಶ್ರಮಕ್ಕೆ ಭೇಟಿ: ಗುಜರಾತ್‌ನ ಸಬರಮತಿ ಗಾಂಧಿ  ಆಶ್ರಮದ ತದ್ರೂಪಿಯಂತೆ ಗದುಗಿನ ನಾಗಾವಿ ಬಳಿ ಗಾಂ ಧಿ ಆಶ್ರಮ ಸ್ಥಾಪಿಸಲಾಗಿದೆ. ದತ್ತು ಪಡೆದ ಶಾಲೆಗಳ ವಿದ್ಯಾರ್ಥಿಗಳನ್ನು ಗಾಂಧಿ  ಆಶ್ರಮಕ್ಕೆ ಕರೆದ್ಯೊಯ್ದು ಗಾಂ ಧೀಜಿಯವರ ಚಿಂತನೆ, ಜೀವನ ಶೈಲಿ, ತತ್ವಾದರ್ಶ, ಖಾದಿ ಉತ್ಪನ್ನಗಳ ಮಹತ್ವ ಕುರಿತಾಗಿ ಮಕ್ಕಳಿಗೆ ಮನವರಿಕೆ ಮಾಡಲಾಗುತ್ತದೆ. ಮಕ್ಕಳನ್ನು ವಿವಿಧ ನರ್ಸರಿಗಳಿಗೆ ಕರೆದ್ಯೊಯ್ದು, ಅಲ್ಲಿನ ವಿವಿಧ ಸಸಿಗಳ ಬಗ್ಗೆ ಪರಿಚಯಿಸಲಾಗುತ್ತದೆ.

ಗಿಡಿಗಳನ್ನು ನೆಡುವುದರಿಂದ ಪರಿಸರಕ್ಕಾಗುವ ಲಾಭ, ಪರಿಸರ ರಕ್ಷಣೆಯಲ್ಲಿ ನಾಗರಿಕರಾಗಿ ನಾವು ತೋರಬೇಕಾದ ಕಾಳಜಿ-ಜವಾಬ್ದಾರಿಯನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ದತ್ತು ಪಡೆದ ಪ್ರತಿ ಶಾಲೆಗೆ 20-30 ಗಿಡಗಳನ್ನು ನೀಡಲಾಗುತ್ತಿದ್ದು, ಮಕ್ಕಳಿಂದಲೇ ಅವುಗಳನ್ನು ನೆಡಲಾಗುತ್ತಿದ್ದು, ಅವುಗಳ ಸಂರಕ್ಷಣೆ ಜವಾಬ್ದಾರಿ ನೀಡಲಾಗುತ್ತದೆ. ಆ ಮೂಲಕ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಮೂಡಿಸಲಾಗುತ್ತಿದೆ.

ಪ್ರಾಥಮಿಕ ಪ್ರೌಢ ಹಂತದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ಉತ್ತಮ ನಾಗರಿಕರಾಗುವಂತಹ ಪ್ರೇರಣೆ ನೀಡುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ವಿಶ್ವವಿದ್ಯಾಲಯ ಮಹತ್ವದ ಯತ್ನಕ್ಕೆ ಮುಂದಾಗಿದೆ. ಇತರೆ ವಿವಿಗಳು ಇದೇ ಮಾದರಿಗೆ ಮುಂದಾದಲ್ಲಿ ಅನೇಕ ಗ್ರಾಮೀಣ ಶಾಲೆಗಳ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ಪುಟಿದೇಳುವುದನ್ನು ತಳ್ಳಿ ಹಾಕುವಂತಿಲ್ಲ.

ಅಮರೇಗೌಡ ಗೋನವಾರ

 

Advertisement

Udayavani is now on Telegram. Click here to join our channel and stay updated with the latest news.

Next