1992ರಲ್ಲಿ ಸಂವಿಧಾನಕ್ಕೆ 73ನೇ ತಿದ್ದುಪಡಿ ಮಾಡಿ ಪಂಚಾಯತ್‌ರಾಜ್ ವ್ಯವಸ್ಥೆಗೆ ಸಂಬಂಧಿಸಿದ ಅನುಚ್ಛೇದಗಳನ್ನು ಸೇರಿಸುವ ಮುಖಾಂತರ ಗ್ರಾಮಾ ಭಿವೃದ್ಧಿಯ ಅನಾದಿ ಕಾಲದ ಕನಸು ನನಸಾಯಿತು. ಪ್ರಸ್ತುತ ಪಂಚಾಯತ್‌ರಾಜ್ ವ್ಯವಸ್ಥೆ ಮಹಾತ್ಮಾ ಗಾಂಧಿ ಅವರ ಕನಸಿನಂತೆ ಇಲ್ಲದಿದ್ದರೂ ವಾಸ್ತವಿಕವಾಗಿ ಪರಿಸ್ಥಿತಿಗೆ ಅನುಗುಣವಾಗಿ ಜಾರಿಯಾಗಿರುವುದು ಸಂತಸದ ವಿಷಯ. ಇದರ ಸಂಪೂರ್ಣ ಜಾರಿಯಲ್ಲಿ ಯುವಜನತೆಯ ಪರಿಶ್ರಮ ಬಲು ಮಹತ್ವದ್ದು ಎನ್ನುವುದಂತೂ ಸತ್ಯ.
ಭ್ರಷ್ಟಾಚಾರದ ಮತ್ತು ಅಪ್ತವಲ ಯದ ರಾಜಕಾರಣದಿಂದ ಬೇಸತ್ತ ಯುವ ಜನತೆ, ಎಲ್ಲ ಅಡಳಿತ ವ್ಯವಸ್ಥೆ ಯನ್ನು ಭ್ರಷ್ಟ ಎಂದು ಕಾಣುವಂಥ ಕಾಲ ಇದಾದರೂ ತಮ್ಮ ಸಮಯೋ ಚಿತ ಪ್ರಜ್ಞಾವಂತಿಕೆಯಿಂದ ಮತ್ತು ಸರ್ವಜನರ ಒಳಿತಿನ ಮೂಲ ವಾಗಿರುವ ಗ್ರಾಮೋದ್ಧಾರದ ಹರಿಕಾರರಾಗಿ ಯುವಜನರು ಮೂಡಿ ಬರಬೇಕಿದೆ. ಯುವಜನತೆ ಗ್ರಾಮಸಭೆಗಳಲ್ಲಿ ಭಾಗವಹಿಸುವ ಮೂಲಕ ಗ್ರಾಮದ ಅಡಳಿತ ವ್ಯವಸ್ಥೆಯನ್ನು ಸುಧಾರಿಸಿ, ಗ್ರಾಮವನ್ನು ಅಭಿ ವೃದ್ಧಿಯ ಪಥದೆಡೆಗೆ ಕೊಂಡೊಯ್ಯುವ ಕೆಲಸ ಮಾಡಬೇಕಿದೆ. ಯುವಜನರು ತಮ್ಮ ಶಕ್ತಿಯನ್ನು ಅನಗತ್ಯ ವಿಷಯಗಳಿಗೆ ವಿನಿಯೋಗಿಸುವ ಬದಲು, ತಮ್ಮ ಭವಿಷ್ಯ ತಾವೇ ರೂಪಿಸಿಕೊಳ್ಳಲು ಅನುವು ಮಾಡಿಕೊಡಬೇಕಿದೆ. ಯುವಶಕ್ತಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿದಲ್ಲಿ ಗ್ರಾಮಸ್ಥರ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಇಷ್ಟು ಮಾತ್ರವಲ್ಲದೆ ಇದು ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ರಂಗ ಪ್ರವೇಶಿಸಲು ಭದ್ರ ಬುನಾದಿಯನ್ನು ಹಾಕಿಕೊಡುತ್ತದೆ.
ಭಾರತ ಹಳ್ಳಿಗಳ ದೇಶವಾಗಿದ್ದು, ಹಳ್ಳಿಗಳು ಉದ್ಧಾರ ವಾದಲ್ಲಿ ಮಾತ್ರ ದೇಶದ ಪ್ರಗತಿ ಸಾಧ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಹಳ್ಳಿಗಳು ಉದ್ಧಾರವಾಗಬೇಕಿದ್ದಲ್ಲಿ ಜನರಿಗೆ ಬೇಕಾದ ಮೂಲ ಸೌಕರ್ಯಗಳ ಒದಗಿಸುವಿಕೆ ಅತೀ ಮುಖ್ಯ. 21ನೇ ಶತಮಾನದಲ್ಲಿರುವ ನಾವು ಇತರ ದೇಶಗಳಂತೆ ಅಭಿವೃದ್ಧಿಯ ಪಥದೆಡೆಗೆ ಸಾಗ ಬೇಕಿದೆ. ಶಿಕ್ಷಣ, ಉದ್ಯೋಗ, ವೈದ್ಯಕೀಯ ಸವಲತ್ತು ಮತ್ತು ತಾಂತ್ರಿಕತೆಯ ಕಾರಣವೊಡ್ಡಿ ಹಳ್ಳಿಗಳನ್ನು ಬಿಟ್ಟು ಪಟ್ಟಣ ಮತ್ತು ಹೊರ ದೇಶಗಳಿಗೆ ವಲಸೆ ಹೋಗಿ, ಜೀತದಾಳುಗಳಂತೆ ಕೆಲಸ ಮಾಡುವ ಬದಲು ಯುವಜನರು ಗ್ರಾಮಗಳಲ್ಲಿ ಆಡಳಿತ ವ್ಯವಸ್ಥೆಗೆ ಧುಮುಕಿ, ಹೊಸ ಚಿಂತನೆಗಳೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇ ಆದಲ್ಲಿ ಪಂಚಾಯತ್ ವ್ಯವಸ್ಥೆ ಸಾರ್ಥಕ್ಯ ಪಡೆಯಲು ಸಾಧ್ಯ. ಇದರಿಂದ ದೇಶದ ಅರ್ಥಿಕ ಮತ್ತು ಆಡಳಿತ ವ್ಯವಸ್ಥೆ ಸಶಕ್ತೀಕರಣಗೊಳ್ಳಲು ಮಹತ್ವದ ಕೊಡುಗೆ ನೀಡಿದಂತಾಗುತ್ತದೆ.
“ನಮ್ಮನ್ನು ನಮ್ಮ ಹಿರಿಯರು ಅರ್ಥ ಮಾಡಿ ಕೊಳ್ಳುವುದಿಲ್ಲ’ ಎಂದು ಸಾಮಾನ್ಯ ವಿಷಯಗಳಲ್ಲಿ ಹಿರಿಯರನ್ನು ದೂಷಿಸುವ ಯುವಜನತೆ ತಮ್ಮ ಗ್ರಾಮಗಳ ಅಭಿವೃದ್ಧಿಯ ಹೊಣೆಯನ್ನು ಸಂಪೂರ್ಣವಾಗಿ ತಮ್ಮ ಹಿರಿಯರ ಹೆಗಲಿಗೆ ಹೊರಿಸಿ ತಮ್ಮ ಪಾಲಿಗೆ ತಾವು ಅನಗತ್ಯ ವಿಷಯಗಳಲ್ಲಿ ತಲ್ಲೀನರಾಗುವ ಬದಲು, ನಮ್ಮ ಭವಿಷ್ಯವನ್ನು ನಿರ್ಧರಿಸುವಂಥ ವಿಷಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಗ್ರಾಮದ ಮಕ್ಕಳು ಮತ್ತು ಯುವಜನರಿಗೆ ಉತ್ತಮ ಶಿಕ್ಷಣ, ಉದ್ಯೋಗ, ಆರೋಗ್ಯ, ನೀರು, ವಿದ್ಯುತ್ ಮತ್ತು ಇತರ ಅಗತ್ಯ ತಾಂತ್ರಿಕ ಸೌಲಭ್ಯಗಳನ್ನು ಒದಗಿಸುವ ಕಾರ್ಯವಾಗಬೇಕಿದೆ. ಅತ್ಯಂತ ವ್ಯವಸ್ಥಿತ, ಭ್ರಷ್ಟಾಚಾರ ರಹಿತ ಹಾಗೂ ಶಿಸ್ತು ಬದ್ಧ ಆಡಳಿತ ಗ್ರಾಮಗಳ ಇಂದಿನ ಅಗತ್ಯವಾಗಿದೆ. ಇವೆಲ್ಲವೂ ಸಾಕಾರಗೊಳ್ಳಬೇಕಾದರೆ ಸಶಕ್ತ ಯುವಪಡೆಯ ಸಹಭಾಗಿತ್ವ ಅನಿವಾರ್ಯ.
ಹಿರಿಯರು ಕೂಡ ಸರ್ವಜನರ ಒಳಿತನ್ನು ಬಯಸಿ, ಗ್ರಾಮಾಭಿವೃದ್ಧಿಯ ಸಾಮರ್ಥಯ ಹೊಂದಿರುವ ಯುವ ಜನರಿಗೆ ಪ್ರೇರಣೆ ನೀಡಿ ಗ್ರಾಮದ ಆಡಳಿತ ವ್ಯವಸ್ಥೆಯನ್ನು ನಿಭಾಯಿಸಲು ಅನುವು ಮಾಡಿಕೊಡಬೇಕು.
ಸದ್ಯದ ರಾಜಕೀಯ ವ್ಯವಸ್ಥೆಯಿಂದಾಗಿ ಗ್ರಾಮ ಸಭೆ ಮತ್ತು ಪಂಚಾಯತ್‌ರಾಜ್ ವ್ಯವಸ್ಥೆಯ ಬಗ್ಗೆ ನಿರ್ಲಕ್ಷ್ಯ ತಳೆಯುವ ಮತ್ತು ಋಣಾತ್ಮಕ ಚಿಂತನೆಯಿಂದಾಗಿ ಈ ವ್ಯವಸ್ಥೆಯಿಂದ ದೂರವಿರಲು ಯವಜನತೆ ಬಯಸುವುದು ಸಹಜ. ಆದರೆ ಪಂಚಾಯತ್‌ರಾಜ್ ವ್ಯವಸ್ಥೆಯ ನಿಜಾಂಶಗಳನ್ನು ಅರಿತು, ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಈ ವ್ಯವಸ್ಥೆಯಲ್ಲಿ ಸಕ್ರಿಯರಾ ಗುವ ಅಗತ್ಯ ಇಂದು ಬಹಳಷ್ಟಿದೆ. ಸಾಮಾನ್ಯವಾಗಿ ದೇಶ ಮತ್ತು ರಾಜ್ಯ ಆಡಳಿತ ವ್ಯವಸ್ಥೆಯಲ್ಲಿ ರಾಜಕಾರಣ ಇರುತ್ತದೆ. ಅದರೆ ಪಂಚಾಯತ್‌ರಾಜ್ ವ್ಯವಸ್ಥೆ ರಾಜಕಾರಣದ ಪರಿಕಲ್ಪನೆಯ ಬದಲಿಗೆ ಅಭ್ಯರ್ಥಿಯ ಸಾಮರ್ಥಯ ಹಾಗೂ ಅವರ ಸಾಮಾಜಿಕ ಮತ್ತು ಸೇವಾ ಮನೋಭಾವದ ಮೇಲೆ ಕೇಂದ್ರೀಕೃತವಾಗಿದೆ ಎನ್ನುವುದು ಸತ್ಯ. ಅದುದರಿಂದ ಪ್ರಜ್ಞಾವಂತ ಪ್ರಜೆಗಳಾಗಿ, ಗ್ರಾಮದ ಜನರ ಒಳಿತಿಗಾಗಿ ಶ್ರಮಿಸುವ ಹುಮ್ಮಸ್ಸು ಇರುವ ಯುವ ನೇತಾರರು ಈ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ. ಗ್ರಾಮಾಭಿವೃದ್ಧಿಗೆ ಪ್ರಜ್ಞಾವಂತ ಯುವಜನತೆಯ ಸಾರಥ್ಯದ ಅಗತ್ಯವಿದೆ.
ಫಾ| ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ ನಿರ್ದೇಶಕರು, ಸಂದೇಶ ಪ್ರತಿಷ್ಠಾನ, ಮಂಗಳೂರು