ಪಿರಿಯಾಪಟ್ಟಣ: ಸಂಸದರ ಕೆಲಸವೇನಿದ್ದರೂ ನಗರ ಪ್ರದೇಶದ ಹೈವೇ- ರೈಲ್ವೆಗೆ ಸೀಮೀತ ಎಂದು ಭಾವಿಸಿದ್ದ ನಮಗೆ ಗ್ರಾಮೀಣ ಪ್ರದೇಶದ ಅಭಿವೃದ್ದಿಗೂ ನೀವು ತೊಡಗಿಸಿಕೊಳ್ಳಬೇಕು ಎಂದು ಗ್ರಾಮೀಣ ಪ್ರದೇಶಕ್ಕೆ ಅನುದಾನ ಮೀಸಲಿಟ್ಟ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಬೇಕು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು.
ತಾಲೂಕಿನ ಬೆಟ್ಟದಪುರ, ಭುವನಹಳ್ಳಿ, ಬೆಕ್ಕರೆ, ನೇರಲೆಕುಪ್ಪೆ, ಆವರ್ತಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಈಚೂರು ಗ್ರಾಮದಲ್ಲಿ ಮಾತನಾಡಿದರು.
ಈ ಹಿಂದೆ ಮೈಸೂರು ಭಾಗದಲ್ಲಿ ಸಂಸದರಾಗಿದ್ದ ಮಹಾರಾಜ್ರು, ಹೆಚ್.ವಿಶ್ವನಾಥ್, ಸಿ.ಹೆಚ್.ವಿಜಯಶಂಕರ್ ರವರು ಗ್ರಾಮೀಣ ಪ್ರದೇಶಗಳಿಗೆ ಕೇವಲ ಸಮುದಾಯ ಭವನ, ದೇವಾಲಯದ ಅಭಿವೃದ್ದಿಗಷ್ಟೇ ಸಂಸದರ ಕೆಲಸ ಎನ್ನುವಂತೆ ಜನರಲ್ಲಿ ಕಲ್ಪನೆ ಮೂಡಿಸಿದ್ದರು. ಆದರೆ ನಾನು ಸಂಸದನಾಗಿ ಆಯ್ಕೆಯಾದ ನಂತರ ಗ್ರಾಮೀಣ ಪ್ರದೇಶದ ಜನರು ಮೂಲ ಸೌಕರ್ಯಕ್ಕೆ ಮನವಿ ಮಾಡುತ್ತಿರುವ ಬಗ್ಗೆ ಸಂಸದರೆಲ್ಲಾ ಸೇರಿ ಮೋದಿಯವರಿಗೆ ಮನವರಿಕೆ ಮಾಡಿದರ ಫಲವಾಗಿ ಇಂದು ಗ್ರಾ.ಪಂ, ಜಿ.ಪಂ.ತಾ.ಪಂ.ಗಳಿಗೆ ಅನುದಾನಗಳು ನೇರವಾಗಿ ಗ್ರಾ.ಪಂ.ಗೆ ಬರುವಂತೆ ಮಾಡಿದರು.
ಇದನ್ನೂ ಓದಿ:ನಾವು ತಪ್ಪು ಮಾಡಿಲ್ಲ, ಐಟಿ ದಾಳಿಯಿಂದ ನಮಗೆ ಯಾವುದೇ ತೊಂದರೆ ಇಲ್ಲ: ಬಿಎಸ್ ವೈ
ಮೈಸೂರಿನಲ್ಲಿ ವಿಮಾನ ನಿಲ್ಧಾಣದ ಅಭಿವೃದ್ದಿಗೆ ಭೂಮಿ ನೀಡಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದು, ರೈಲ್ವೆ ಅಭಿವೃದ್ದಿಗೂ 1954 ಕೋಟಿ ಮೀಸಲಿರಿಸಲಾಗಿ ರಾಜ್ಯ ಸರ್ಕಾರ ಭೂಸ್ವಾಧೀನ ಮಾಡಬೇಕಾಗಿದೆ. ಕೊರೊನಾ ಮತ್ತಿತರ ವಿಚಾರಗಳಿಂದ ವಿಳಂಭವಾಗಿದ್ದ ಅನೇಕ ಯೋಜನೆಗಳು ಶೀಘ್ರದಲ್ಲಿ ಪ್ರಾರಂಭವಾಗುವುದರ ಜೊತೆಗೆ 9500 ಕೋಟಿಯ 4 ಲೈನ್ ಹೈವೆ ಕಾಮಗಾರಿ ಕೂಡ ನಡೆಯಲಿದ್ದು ಭವಿಷ್ಯದಲ್ಲಿ ಕೈಗಾರಿಕೋದ್ಯಮ ಅಭಿವೃದ್ದಿ ಹೊಂದಿ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಆದ್ದರಿಂದ ತಾಲೂಕಿನಲ್ಲಿ ಜಾತಿಜಾತಿಗಳನ್ನು ಎತ್ತಿಕಟ್ಟಿ ರಾಜಕಾರಣ ಮಾಡುತ್ತಿದ್ದವರಿಗೆ ಅಭಿವೃದ್ದಿಯ ಮೂಲಕ ಉತ್ತರ ನೀಡುತ್ತಿದ್ದು ಮುಂದೆ ಅಭಿವೃದ್ದಿ ರಾಜಕಾರಣಕ್ಕೆ ಜನರು ಸಹಕಾರ ನೀಡಬೇಕು ಎಂದರು.
ಶಾಸಕ ಕೆ.ಮಹದೇವ್ ಮಾತನಾಡಿ ಈಚೂರು ಗ್ರಾಮಕ್ಕೆ 1.50 ಕೋಟಿಯಷ್ಟು ಅನುದಾನ ನೀಡಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ. 3 ಹೆಚ್ಚುವರಿ ಶಾಲಾ ಕೊಠಡಿಗಳನ್ನು ಸಂಸದರು ಮತ್ತು ನಾನು ಸೇರಿ ಸರ್ಕಾರದಿಂದ ಮಂಜೂರು ಮಾಡಿಸಿಕೊಡುತ್ತೇವೆ. 2ಬಾರಿ ಸೋಲಿಸಿ 3ನೇ ಬಾರಿ ಗೆಲಿಸಿದ್ದೀರಾ 75 ವರ್ಷಗಳಲ್ಲಿ ಅಭಿವೃದ್ದಿಯ ಬಗ್ಗೆ ಪ್ರಶ್ನೆ ಮಾಡದೆ ಆಸಕ್ತಿತೋರದ ನೀವು ಈಗ ಏಕಾಏಕಿ ನಮ್ಮಮೇಲೆ ಒತ್ತಡ ಹಾಕಿದರೆ ಒಟ್ಟಿಗೆ ಅಭಿವೃದ್ದಿ ಮಾಡುವುದಾದರೂ ಹೇಗೆ? ಕೊರೊನಾ, ಪ್ರವಾಹ ಹೀಗೆ ಪ್ರಕೃತಿ ವಿಕೋಪಗಳಿಂದ 2 ವರ್ಷ ಸರ್ಕಾರದ ಖಜಾನೆ ಖಾಲಿಯಾಗಿದೆ. ಹೀಗಿದ್ದರೂ ಸಂಸದರ ಮತ್ತು ಉಸ್ತುವಾರಿ ಸಚಿವರ ಸಹಕಾರದಿಂದ ಅನೇಕ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತಿದೆ. ನರೇಗಾ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಇಒ ಕೃಷ್ಣಕುಮಾರ್, ಪಿಡಿಒ ದೇವರಾಜೇಗೌಡ, ಕಾರ್ಯದರ್ಶಿ ಬಸವರಾಜು,ಗ್ರಾ.ಪಂ.ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ರಮೇಶ್, ಸುರೇಶ್, ಮಾನಸ, ಶ್ರೀನಿವಾಸ್, ಮುಖಂಡರಾದ ಆರ್.ಟಿ.ಸತೀಶ್, ಅಣ್ಣಯ್ಯಶೆಟ್ಟಿ, ಎಂ.ಎ.ರಾಜೇಗೌಡ, ಶಿವರಾಮೇಗೌಡ, ಬೆಮ್ಮತ್ತಿ ಚಂದ್ರು, ಪ್ರವೀಣ್, ಪ್ರಸಾದ್, ಪಟೇಲ್ಶಂಕರ್, ಕೆಂಪೇಗೌಡ, ರವಿ ಸೇರಿದಂತೆ ಮತ್ತಿತರರು ಹಾಜರಿದ್ದರು.