Advertisement

ರೂಪಾಯಿ-ಷೇರು ಕುಸಿತ ; ತೈಲಬೆಲೆ ಜಿಗಿತ

04:09 PM Sep 12, 2018 | Team Udayavani |

ಮುಂಬಯಿ: ರೂಪಾಯಿ ಮೌಲ್ಯ ಕುಸಿತ, ತೈಲ ಬೆಲೆ ಏರಿಕೆಯ ಆಘಾತದ ನಡುವೆಯೇ ಷೇರುಪೇಟೆಯ ತಲ್ಲಣ ಮುಂದುವರಿದಿದೆ. ಮಂಗಳವಾರದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಬರೋಬ್ಬರಿ 509.04 ಅಂಕಗಳಷ್ಟು ಕುಸಿತ ಕಂಡಿದ್ದು, ವಹಿವಾಟಿನ ಅಂತ್ಯಕ್ಕೆ 37,413.13ಕ್ಕೆ ತಲುಪಿದೆ. ಕಳೆದ ಆರು ತಿಂಗಳಲ್ಲೇ ಇದು ಗರಿಷ್ಠ ಕುಸಿತ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. 

Advertisement

ಇನ್ನು, ನಿಫ್ಟಿ 150.60 ಅಂಕ ಇಳಿದು, 11,287.50ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ರೂಪಾಯಿ ಮೌಲ್ಯ ಕುಸಿತ, ಕಚ್ಚಾ ತೈಲದ ದರ ಏರಿಕೆ ಹಾಗೂ ಅಮೆರಿಕ-ಚೀನಾ ನಡುವಿನ ವ್ಯಾಪಾರ ಸಮರ ಕೂಡ ಸೆನ್ಸೆಕ್ಸ್‌ ಪಾತಾಳಕ್ಕಿಳಿಯಲು ಕಾರಣ ಎಂದು ಹೇಳಲಾಗಿದೆ.

ರೂ. ಮೌಲ್ಯ ಕುಸಿತ: ಇದೇ ವೇಳೆ, ಡಾಲರ್‌ ವಿರುದ್ಧ ರೂಪಾಯಿ ಮೌಲ್ಯವೂ ದಾಖಲೆಯ ಮಟ್ಟಕ್ಕೆ ಕುಸಿದಿದೆ. ಮಂಗಳವಾರ ಆರಂಭದಲ್ಲಿ ಡಾಲರ್‌ ಮುಂದೆ 20 ಪೈಸೆಯಷ್ಟು ಏರಿಕೆ ಕಂಡಿತ್ತಾದರೂ, ಅನಂತರ ಕುಸಿಯುತ್ತಾ ದಿನಾಂತ್ಯಕ್ಕೆ 28 ಪೈಸೆಯಷ್ಟು ಇಳಿಕೆಯಾಗಿ, ಒಂದು ಡಾಲರ್‌ಗೆ ಪ್ರತಿಯಾಗಿ 72.73 ರೂ.ಗಳಿಗೆ ಬಂದು ಮುಟ್ಟಿದೆ. 

ಮತ್ತೆ ತೈಲ ಬಿಸಿ: ಕಳೆದ ಹದಿನೈದು ದಿನಗಳಿಂದ ಏರುತ್ತಿರುವ ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಮಂಗಳವಾರ 14 ಪೈಸೆಗಳ ಏರಿಕೆ ಕಂಡಿದೆ. ದಿಲ್ಲಿಯಲ್ಲಿ ಪ್ರತಿ ಲೀ. ಪೆಟ್ರೋಲ್‌ಗೆ 80.87 ರೂ., ಡೀಸೆಲ್‌ಗೆ 72.97 ರೂ. ಆಗಿದೆ. ಮುಂಬೈನಲ್ಲಿ ಪ್ರತಿ ಲೀ. ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಕ್ರಮವಾಗಿ 88.26 ರೂ. ಹಾಗೂ 77.47 ರೂ. ಗಳಿಗೆ ಮುಟ್ಟಿದೆ. 

ಪಿಐಎಲ್‌ ಸಲ್ಲಿಕೆ
ಪ್ರತಿದಿನ ತೈಲ ದರ ಪರಿಷ್ಕರಣೆ ಪ್ರಶ್ನಿಸಿ ದಿಲ್ಲಿ ಹೈಕೋರ್ಟ್‌ಗೆ ಪೂಜಾ ಮಹಾಜನ್‌ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾ ವಣೆಗೂ ಮುನ್ನ 22 ದಿನಗಳ ಕಾಲ ತೈಲ ಬೆಲೆ ಪರಿಷ್ಕರಿಸಿರಲಿಲ್ಲ. ಬೇಕಾದಾಗ ದೈನಂದಿನ ಬೆಲೆ ಪರಿಷ್ಕರಣೆ ನಿಲ್ಲಿಸಬಹುದಾದರೆ ಈಗ ಅದು ಏಕೆ ಸಾಧ್ಯವಿಲ್ಲ, ತೈಲಗಳ ಮೇಲೆ ಒಂದು ಸ್ಥಿರ ತೈಲ ಬೆಲೆ ನಿಗದಿಗೊಳಿಸಬಾರದೇಕೆ ಎಂದು ಅವರು ಕೇಂದ್ರವನ್ನು ಪ್ರಶ್ನಿಸಿದ್ದಾರೆ. ಬುಧವಾರ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆಯಿದೆ. 

Advertisement

ಇಲ್ಲಿ ಪೆಟ್ರೋಲ್‌ಗೆ 90 ರೂ.!
ಮುಂಬೈನಿಂದ ಪೂರ್ವಕ್ಕೆ 500 ಕಿ.ಮೀ. ದೂರವಿರುವ ಪರ್ಬಾನಿ ಎಂಬ ಊರಿನಲ್ಲಿ ಪೆಟ್ರೋಲ್‌ ಬೆಲೆ 90 ರೂ.ಗಳ ಗಡಿ ದಾಟಿದೆ. ಕೇವಲ 3,10,000 ಜನಸಂಖ್ಯೆ ಇರುವ ಈ ಪಟ್ಟಣದಲ್ಲಿ ಸೋಮವಾರವೇ ಪೆಟ್ರೋಲ್‌ ಬೆಲೆ 89.97 ರೂ. ಇತ್ತು. ಇನ್ನು, ಈ ಊರಿನಲ್ಲಿ ಡೀಸೆಲ್‌ ಬೆಲೆ ಪ್ರತಿ ಲೀಟರ್‌ಗೆ 77.92 ರೂ.ಗಳಿಂದ 78.06 ರೂ.ಗಳಿಗೆ ಏರಿದೆ. 

ಬೆಲೆ ಇಳಿಸಿದ ದೀದಿ
ಪೆಟ್ರೋಲ್‌ ಮೇಲಿನ ತೆರಿಗೆಯನ್ನು ಇಳಿಸಿದ ರಾಜ್ಯಗಳ ಪಟ್ಟಿಗೆ ಪಶ್ಚಿಮ ಬಂಗಾಳ ಸೇರ್ಪಡೆಗೊಂಡಿದೆ. ಸಿಎಂ ಮಮತಾ ಬ್ಯಾನರ್ಜಿ ತೈಲಗಳ ಮೇಲಿನ ವ್ಯಾಟ್‌ ಇಳಿಸಿದ್ದು, ಪೆಟ್ರೋಲ್‌, ಡೀಸೆಲ್‌ ದರ 1 ರೂ. ಇಳಿಕೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next