ಹೊಸದಿಲ್ಲಿ : ಇಂದು ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿನ ತನ್ನ ಸಾರ್ವಕಾಲಿಕ ತಳ ಮಟ್ಟದಿಂದ 23 ಪೈಸೆಗಳ ಚೇತರಿಕೆಯನ್ನು ಕಂಡಿದ್ದ ರೂಪಾಯಿ, ವಹಿವಾಟು ಮುಂದುವರಿದಂತೆಯೇ 70 ರೂ. ಗಡಿ ದಾಟಿ ದಾಖಲೆಯ ಕುಸಿತವನ್ನು ಕಂಡು ತೀವ್ರ ಕಳವಳಕ್ಕೆ ಕಾರಣವಾಯಿತು.
ಟರ್ಕಿ ಕಾಣುತ್ತಿರುವ ಅಭೂತಪೂರ್ವ ಕರೆನ್ಸಿ ಬಿಕ್ಕಟ್ಟು ಈಗಿನ್ನು ಇತರ ಜಾಗತಿಕ ಆರ್ಥಿಕತೆಗಳಿಗೂ ಹಬ್ಬುವ ಭೀತಿ ತಲೆದೋರಿದ್ದು ಭಾರತದ ರೂಪಾಯಿ 70 ರೂ. ಗಡಿ ದಾಟಿ ಕುಸಿದಿರುವುದು ಈ ಭೀತಿಯನ್ನು ಇನ್ನಷ್ಟು ಖಚಿತಗೊಳಿಸಿದೆ.
ಅಂತರ ಬ್ಯಾಂಕ್ ವಿದೇಶ ವಿನಿಮಯ ಮಾರುಕಟ್ಟೆಯಲ್ಲಿ ಇಂದು ಬೆಳಗ್ಗೆ 10.37ರ ಹೊತ್ತಿಗೆ ರೂಪಾಯಿ ಡಾಲರ್ ಎದುರು ಶೇ.0.21ರ ಕುಸಿತದೊಂದಿಗೆ 70.07 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ನಿನ್ನೆ ಡಾಲರ್ ಎದುರು ರೂಪಾಯಿ ಅಭೂತಪೂರ್ವ ಎನಿಸಿರುವ 110 ಪೈಸೆಗಳ ಕುಸಿತವನ್ನು ಅನುಭವಿಸಿತ್ತು. ಇದು ಕಳೆದ ಐದು ವರ್ಷಗಳಲ್ಲೇ ಮೊದಲ ಬಾರಿಗೆ ಸಂಭವಿಸಿದ್ದ ಏಕದಿನದ ಗರಿಷ್ಠ ನಷ್ಟವಾಗಿತ್ತು.
2013ರ ಆಗಸ್ಟ್‌ನಲ್ಲಿ ಡಾಲರ್ ಎದುರು ರೂಪಾಯಿ ಒಂದೇ ದಿನದಂದು 148 ಪೈಸೆಗಳ ನಷ್ಟವನ್ನು ಅನುಭವಿಸಿತ್ತು.