ವಿಧಾನ ಪರಿಷತ್ತು: ಐಎಎಸ್ ಮತ್ತು ಐಪಿಎಸ್ ಮಹಿಳಾ ಅಧಿಕಾರಿಗಳಿಬ್ಬರ ನಡುವಿನ ಕಿತ್ತಾಟವು ಮಂಗಳವಾರ ಮೇಲ್ಮನೆಯಲ್ಲೂ ಪ್ರತಿಧ್ವನಿಸಿತು. ಮಂಗಳವಾರ ವಿಷಯ ಪ್ರಸ್ತಾಪಿಸಿದ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ ರಾಠೊಡ, “ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ಕಿತ್ತಾಟದ ಬಗ್ಗೆ ಪ್ರಧಾನಿ ಕಚೇರಿ ಯಿಂದಲೇ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ ಎಂದು ಕೇಳಿ ಬರುತ್ತಿದೆ.
ಈ ಬಗ್ಗೆ ಸರ್ಕಾರದ ಸ್ಪಷ್ಟೀಕರಣ ಏನು’ ಎಂದು ಕೇಳಿದರು. ಅಷ್ಟೇ ಅಲ್ಲ, ಪ್ರಧಾನಿ ಕಚೇರಿಯಿಂದ ತರಾಟೆಗೆ ತೆಗೆದುಕೊಂಡಿರುವ ಬಗ್ಗೆ ವರದಿಯೊಂದನ್ನು ಪ್ರದರ್ಶಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಸಚಿವ ಜೆ.ಸಿ. ಮಾಧುಸ್ವಾಮಿ, “ಪ್ರತಿಪಕ್ಷದ ಮುಖ್ಯ ಸಚೇತಕರು ನೇರವಾಗಿ ಪ್ರಧಾನಿ ಕಚೇರಿಯೊಂದಿಗೇ ನೇರ ಸಂಪರ್ಕ ಇದ್ದಂತಿದೆ. ಆದರೆ, ನಮಗೆ ಇದರ ಬಗ್ಗೆ ಮಾಹಿತಿ ಇಲ್ಲ. ಅಷ್ಟಕ್ಕೂ ಹೀಗೆ ತರಾಟೆ ತೆಗೆದುಕೊಂಡ ಬಗ್ಗೆ ಅಧಿಕೃತ ದಾಖಲೆಗಳೂ ಇಲ್ಲ’ ಎಂದು ಹೇಳಿದರು.
ಬೆನ್ನಲ್ಲೇ ಬಿಜೆಪಿಯ ಎಚ್. ವಿಶ್ವನಾಥ ಮಾತನಾಡಿ, “ಐಎಎಸ್- ಐಪಿಎಸ್ ಅಧಿಕಾರಿಗಳ ಗಲಾಟೆ ಒಂದು ರೀತಿ ಆಡಳಿತ ವ್ಯವಸ್ಥೆಗೆ ಅವಮಾನ ಮತ್ತು ಮುಜುಗರ ಉಂಟುಮಾಡುವಂತಿದೆ. ಇದು ರಾಜ್ಯದ ಅಭಿವೃದ್ಧಿ ಮೇಲೆ ಪರಿಣಾಮ ಬೀರಲಿದೆ. ವಿಚಿತ್ರವೆಂದರೆ ಈ ಇಬ್ಬರೂ ಅಧಿಕಾರಿಗಳ ಅಭಿಮಾನಿಗಳ ಸಂಘಗಳು ಕೂಡ ಹುಟ್ಟಿಕೊಂಡಿವೆ. ಇವರೇನೂ ರಾಜಕಾರಣಿಗಳಾ? ಈ ಬಗ್ಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕು’ ಎಂದು ಮನವಿ ಮಾಡಿದರು.
ಆಗ ಪ್ರತಿಕ್ರಿಯಿಸಿದ ಸಭಾಪತಿ ಬಸವರಾಜ ಹೊರಟ್ಟಿ, “ವಿಷಯ ಪ್ರಸ್ತಾಪಕ್ಕೆ ಸಂಬಂಧಿಸಿದಂತೆ ನೋಟಿಸ್ ಕೊಡಿ. ನಂತರ ಚರ್ಚೆಗೆ ಅವಕಾಶ ನೀಡಲಾಗುವುದು’
ಎಂದರು.