Advertisement

23ರಂದು “ಆಯುಷ್ಮಾನ್‌ ಭಾರತ’ಕ್ಕೆ ಚಾಲನೆ

06:15 AM Sep 15, 2018 | Team Udayavani |

ಬೆಂಗಳೂರು: ದೇಶದಲ್ಲಿ ಜನರ ಜೀವಿತಾವಧಿ ಪ್ರಮಾಣ ಏರಿಕೆ ಆಗುತ್ತಿದೆ. ಆದರೆ, ಬೆನ್ನಲ್ಲೇ ಕಾಯಿಲೆಗಳ ಪ್ರಮಾಣ ಕೂಡ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜಗತ್‌ ಪ್ರಕಾಶ್‌ ನಡ್ಡಾ ಹೇಳಿದ್ದಾರೆ.

Advertisement

ನಗರದ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯ ಜೆ.ಎನ್‌.ಟಾಟಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಬುದ್ಧಿಮಾಂದ್ಯತೆ ಕುರಿತ ಮೂರು ದಿನಗಳ ಅಂತಾರಾಷ್ಟ್ರೀಯ ಕಾರ್ಯಾಗಾರಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.  ದೇಶದ ಜೀವಿತಾವಧಿ ಪ್ರಮಾಣ ಹೆಚ್ಚುತ್ತಿದೆ. 1960ರಲ್ಲಿ 60 ವರ್ಷ ಮೇಲ್ಪಟ್ಟವರ ಜೀವಿತಾವಧಿ ಪ್ರಮಾಣ ಶೇ. 5.7ರಷ್ಟಿದ್ದರೆ, 2011ರಲ್ಲಿ ಶೇ. 10ಕ್ಕೆ ಏರಿಕೆಯಾಗಿ ಪ್ರಸ್ತುತ ಶೇ. 20ರಷ್ಟಾಗಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ, ಜತೆಗೆ ಕಾಯಿಲೆಗಳ ಹೊರೆಯೂ ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ರೋಗ ತಡೆಗಟ್ಟುವುದು ಮತ್ತು ಆರೋಗ್ಯ ರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ “ಆಯುಷ್ಮಾನ್‌ ಭಾರತ್‌’ ಘೋಷಿಸಿದ್ದು, ಸೆ. 23ರಂದು ಇದಕ್ಕೆ ಚಾಲನೆ ದೊರೆಯಲಿದೆ ಎಂದರು.

ದೇಶದ 10.74 ಕೋಟಿ ಕುಟುಂಬಗಳು ಅಂದರೆ 55 ಕೋಟಿ ಜನ “ಆಯುಷ್ಮಾನ್‌ ಭಾರತ್‌’ ಆರೋಗ್ಯ ವಿಮಾ ಯೋಜನೆ ವ್ಯಾಪ್ತಿಗೆ ಬರಲಿದ್ದಾರೆ. ಇದು ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಒಟ್ಟಾರೆ ಜನಸಂಖ್ಯೆಗೆ ಸಮವಾಗಿದೆ. ಈ ಮಹತ್ವಾಕಾಂಕ್ಷಿ ಯೋಜನೆ ಸೆ. 23ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.

ಹೆಚ್ಚುತ್ತಿರುವ ಕಾಯಿಲೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಕಾಯಿಲೆ ಬರುವುದರ ಮುಂದೂಡುವಿಕೆಯಲ್ಲಿ ಕುಟುಂಬಗಳು ಕೂಡ ಬಹುಮುಖ್ಯ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.

Advertisement

ಇಸ್ರೋ ಮಾಜಿ ಅಧ್ಯಕ್ಷ ಪ್ರೊ.ಕಸ್ತೂರಿ ರಂಗನ್‌ ಮಾತನಾಡಿ, ಪ್ರತಿ 20 ವರ್ಷಗಳಿಗೊಮ್ಮೆ ಬುದ್ಧಿಮಾಂದ್ಯತೆಯಿಂದ ಬಳಲುತ್ತಿರುವವ ಪ್ರಮಾಣ ದುಪ್ಪಟ್ಟು ಆಗುತ್ತಿದೆ. ದೇಶದಲ್ಲಿ 4.4 ದಶಲಕ್ಷ ಜನ ಇದರಿಂದ ಬಳಲುತ್ತಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ನಿಟ್ಟಿನಲ್ಲಿ ಸಂಶೋಧನೆ ಮತ್ತು ಅನ್ವೇಷಣೆಗಳ ಅವಶ್ಯಕತೆ ಇದೆ. ಪೂರಕ ಆರೋಗ್ಯ ನೀತಿಗಳನ್ನು ರಚಿಸುವ ಅವಶ್ಯಕತೆ ಇದೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ, ವಿಶ್ವ ಆರೋಗ್ಯ ಸಂಸ್ಥೆಯ ಡಾ.ಆತ್ರೇಯಿ ಗಂಗೂಲಿ, ಅಲಿlàಮರ್ ಆಂಡ್‌ ರಿಲೇಟೆಡ್‌ ಡಿಸ್‌ಆರ್ಡರ್ ಸೊಸೈಟಿ ಆಫ್ ಇಂಡಿಯಾ (ಎಆರ್‌ಡಿಎಸ್‌ಐ) ಉಪಾಧ್ಯಕ್ಷೆ ಡಾ.ರಾಧಾ ಎಸ್‌. ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

ದೇಶದ 1.50 ಲಕ್ಷ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಕ್ಷೇಮಾಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಸಚಿವ ಜಗತ್‌ ಪ್ರಕಾಶ್‌ ನಡ್ಡಾ ತಿಳಿಸಿದರು.

ಪ್ರಸ್ತುತ ಈ ಆರೋಗ್ಯ ಕೇಂದ್ರಗಳು ತಾಯಿ ಮತ್ತು ಮಗುವಿನ ಆರೈಕೆಗೆ ಸೀಮಿತವಾಗಿವೆ. ಮುಂದಿನ ದಿನಗಳಲ್ಲಿ ಬುದ್ಧಿಮಾಂದ್ಯತೆ, ವೃದ್ಧಾಪ್ಯ ಸಂಬಂಧಿ ಕಾಯಿಲೆಗಳಿಗೆ ಉಚಿತ ಔಷಧ ವಿತರಣೆ ಮತ್ತು ಪರೀಕ್ಷೆ ಒಳಗೊಂಡಂತೆ ಒಟ್ಟಾರೆ ಕ್ಷೇಮಾಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next