ಹೊನ್ನಾವರ: ವಾರಕ್ಕೆರಡು ದಿನ ಮಾತ್ರ ಬೆಳಗಿನ 4 ತಾಸು ವ್ಯವಹಾರಕ್ಕೆ ಅನುಕೂಲ ಮಾಡಿಕೊಟ್ಟಿರುವುದು ಅಪಾಯವನ್ನು ಮತ್ತಷ್ಟು ಮೈಮೇಲೆ ಎಳೆದುಕೊಂಡಂತೆ ಆಯಿತೇ ಎಂಬ ಪ್ರಶ್ನೆ ಜಿಲ್ಲಾಡಳಿತಕ್ಕೆ ಎದುರಾಗುವಂತಿದೆ.
ಕಾರು, ರಿಕ್ಷಾ ಯಾವ ವಾಹನ ಸಿಕ್ಕೊತೋ ಆ ವಾಹನ ಏರಿ ಹಳ್ಳಿಗಳಿಂದ ಜನ ಪೇಟೆಗೆ ಬಂದಿಳಿದರು. ಪೇಟೆ ಮಧ್ಯೆ ವಾಹನ ಪ್ರವೇಶಿಸುವುದನ್ನು ಪೊಲೀಸರು ತಡೆಗಟ್ಟಿದ್ದರೂ ವಾಹನ ಬಿಟ್ಟು ಹೊರಟು ದಟ್ಟಣೆಗೆ ಕಾರಣರಾದ ಜನಕ್ಕೆ ಏನು ತುರ್ತು ಅಗತ್ಯವಿತ್ತೋ ಎಂಬುದು ಪತ್ರಕರ್ತರಿಗೂ ಅರ್ಥವಾಗಲಿಲ್ಲ. ಬೈಕ್‌ನಲ್ಲಿ ಬಂದ ಅರ್ಧಕರ್ಧ ಜನರಲ್ಲಿ ಕೈಚೀಲವೂ ಇರಲಿಲ್ಲ. ಮಾಸ್ಕ್ ಏನೋ ಹೆಸರಿಗೆ ಇತ್ತು. ಅಂತರ ಕಾಯ್ದುಕೊಳ್ಳುವ ಪ್ರಶ್ನೆಯೇ ಇರಲಿಲ್ಲ. ನೂಕಿಕೊಳ್ಳುತ್ತ ಹೋಗಿ ಏನೇನೋ ಖರೀದಿ ಮಾಡಿಕೊಂಡೋ ಅಥವಾ ಖರೀದಿ ಮಾಡುವವರನ್ನು ಕಂಡೋ 10ಗಂಟೆಗೆ ಜನ ಮನೆಯ ಕಡೆ ಮುಖ ಮಾಡಿದರು. ಜನರ ಭರಾಟೆ ಕಂಡು ಪೊಲೀಸರು ಅಸಹಾಯಕರಾದರು.
ಪೊಲೀಸ್ ವಾಹನ ಚಾಲಕನೊಬ್ಬ ಹಿರಿಯ ಪತ್ರಕರ್ತರು ದನದಟ್ಟಣೆ ಫೋಟೋ ತೆಗೆಯುವುದನ್ನು ತಡೆದ. ಬೆಳಗ್ಗೆ 9ಕ್ಕೆ ಎಲ್ಲರ ಮೊಬೈಲ್‌ಗಳಲ್ಲಿ, ಫೇಸ್‌ಬುಕ್‌ಗಳಲ್ಲಿ ಜನದಟ್ಟಣೆ ಚಿತ್ರಗಳು ಹರಿದಾಡಿ ಜಗತ್ತಿಗೆ ತೋರಿಸುತ್ತಿರುವಾಗ ಪೊಲೀಸ್ ಜೀಪ್ ಚಾಲಕ ಪತ್ರಕರ್ತರನ್ನು ಮಾತ್ರ ಏಕೆ ತಡೆದಿದೆ ಎಂಬುದು ಪ್ರಶ್ನಾರ್ಹ. ಜಿಲ್ಲೆಯ ಎಲ್ಲ ಕಡೆಯಿಂದಲೂ ಇಂತಹುದೇ ವರದಿ ಬರುತ್ತಿದೆ. ಬೆಂಗಳೂರಿನಲ್ಲಿ ಮಾಡಿದಂತೆ ಬೆಳಗ್ಗೆ 6-10 ರವರೆಗೆ ವ್ಯವಹಾರ ಮಾಡಲು ಬಿಟ್ಟು ಪೊಲೀಸ್ ಜೀಪ್ ಗಸ್ತು ಮಾಡಿದ್ದರೆ ಜನ ಕೇಳುತ್ತಿದ್ದರು.
ಸರ್ಕಾರದ ಆದೇಶ ಹಾಗೆಯೇ ಇದೆ. ಉತ್ತರ ಕನ್ನಡ ಜಿಲ್ಲಾಡಳಿತ ಜಿಲ್ಲಾ ಉಸ್ತುವಾರಿ ಸಚಿವರ ಸಲಹೆಯಂತೆ ವಾರಕ್ಕೆರಡು ದಿನ ಎಂದು ಹೇಳಿದ್ದು ಎಲ್ಲ ಸೇರಿ ಎಡವಟ್ಟು ಮಾಡಿಕೊಂಡರು ಅನ್ನಿಸುವಂತಾಗಿದೆ. ಈ ಕುರಿತು ಸಚಿವರ ಗಮನ ಸೆಳೆಯುವಂತೆ ಪತ್ರಕರ್ತರಿಗೆ ಫೋನ್ ಬರುತ್ತಿದೆ. ಇಂದು ಬೆಳಗ್ಗೆ 10ರೊಳಗಾಗಿ ಹಣ್ಣು, ತರಕಾರಿ, ಹಾಲು ಸಂಪೂರ್ಣ ಖಾಲಿಯಾಗಿದೆ. ಕಿರಾಣಿ ಅಂಗಡಿಗಳಿಂದ ಸಾಮಾನು ಪಡೆಯಲಾರದೆ ಕೆಲವರು ಮರಳಿ ಹೋಗಿದ್ದಾರೆ. ಸಂಜೆವರೆಗೆ ತೆರೆದಿರುವ ಔಷಧ ಅಂಗಡಿಗಳಲ್ಲೂ ರಶ್ ಇತ್ತು. ಜಿಲ್ಲಾಡಳಿತ ಇನ್ನೊಮ್ಮೆ ಈ ಕುರಿತು ಆಲೋಚಿಸಬೇಕು. ಜಾತ್ರೆಗಳನ್ನು ನಿಷೇಧಿಸಿದ ಆಡಳಿತ ವಾರಕ್ಕೆರಡು ಇಂತಹ ಜಾತ್ರೆ ಸೇರಲು ಬಿಟ್ಟರೆ ಕಷ್ಟ. ಈ ಜನಸಂದಣಿಯಲ್ಲಿ ನಾಲ್ಕಾರು ಜನ ಕೋವಿಡ್ ಪೀಡಿತರು ಸುಳಿದು ಹೋದರೂ ನಾಳೆ ಸೋಂಕಿತರ ಸಂಖ್ಯೆ ಏರುವುದು ಖಂಡಿತ.