ಮಣಿಪಾಲ: ಈಗಾಗಲೇ ಶೇ.50ಕ್ಕೂ ಹೆಚ್ಚು ಕುಸಿದಿರುವ ಹೊಟೇಲ್ ಉದ್ಯಮವನ್ನು ಪುನರಾರಂಭಿಸಲು ಹಲವು ರಾಷ್ಟ್ರಗಳು ಸಜ್ಜಾಗುತ್ತಿವೆ. ಆದರೆ ಸಾಮಾಜಿಕ ಅಂತರ ನಿಯಮ ಹೊಟೇಲ್ ಉದ್ಯಮಕ್ಕೆ ಮಾರಕವಾಗಿ ಪರಿಣಮಿಸಿದೆ.
ಅಮೆರಿಕದ ಜಾರ್ಜಿಯಾದಲ್ಲಿ ಹೊಟೇಲ್‌ಗಳು ಪೂರ್ಣವಾಗಿ ತೆರೆದಿವೆ. ಆದರೆ ಸಾಮಾಜಿಕ ಅಂತರ ನಿಯಮ ವ್ಯಾಪಾರಕ್ಕೆ ತೊಡಕಾಗುತ್ತಿದೆ.
ಈ ನಿಯಮದಿಂದಾಗಿ ಗ್ರಾಹಕರು ಹೊಟೇಲ್‌ಗಳಿಂದ ದೂರ ಉಳಿದಿದ್ದಾರೆ. ತನ್ನ ಮೂರು ಹೊಟೇಲ್‌ಗಳನ್ನು ಬಂದ್ ಮಾಡಿ ಕೆಲಗಾರರಿಗೆ ಸಂಬಳ ನೀಡಲಾಗದೆ ವ್ಯಥೆ ಪಡುತ್ತಿರುವ ರಿಯಾನ್ ಪೆರ್ನಿಸ್ ” ನನ್ನ ಹೊಟೇಲ್‌ಗಳಲ್ಲಿ ಸುಮಾರು 120ಕ್ಕೂ ಕೆಲಸಗಾರರಿದ್ದು, 80 ಜನರನ್ನು ಅನಿವಾರ್ಯವಾಗಿ ವಜಾಗೊಳಿಸಲೇ ಬೇಕು. ಸೀಮಿತ ಮಟ್ಟದ ಗ್ರಾಹಕರನ್ನು ನಂಬಿಕೊಂಡು ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳನ್ನು ನಡೆಸಲು ಸಾಧ್ಯವಿಲ್ಲ’ ಎನ್ನುತ್ತಾರೆ. ನ್ಯೂಯಾರ್ಕ್ ರೆಸ್ಟೋರೆಂಟ್ ಆಪರೇಟರ್ ಯೂನಿಯನ್ ಸ್ಕ್ವಾರ್ ಹಾಸ್ಪಿಟಾಲಿಟಿ ಗ್ರೂಪ್ ಸುಮಾರು 2,000 ನೌಕರರನ್ನು ವಜಾಗೊಳಿಸಿದ್ದು, ಲಸಿಕೆ ದೊರೆಯುವವರೆಗೂ ಹೊಟೇಲ್ ಉದ್ಯಮ ಎಂದಿನಂತೆ ಕಾರ್ಯಾಚಾರಿಸುವುದು ಕಷ್ಟ ಸಾಧ್ಯ ಎಂದು ಸಿಇಒ ಡ್ಯಾನಿ ಮೆಯೆರ್ ಹೇಳಿದ್ದಾರೆ.
ಐರೋಪ್ಯ ರಾಷ್ಟ್ರಗಳಲ್ಲೂ ಲಕ್ಷಾಂತರ ಹೊಟೇಲ್ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಪ್ರಸ್ತುತ ನಿಯಮಗಳು ಸಡಿಲವಾಗಿದ್ದರೂ ಗ್ರಾಹಕರು ಹೊಟೇಲ್ ಗಳನ್ನು ಭೀತಿಯಿಂದಲೇ ನೋಡುತ್ತಿದ್ದಾರೆ. ಇಟಲಿಯಲ್ಲೂ ಸಾಮಾಜಿಕ ಅಂತರ ಪಾಲನೆಯನ್ನು ಕಡ್ಡಾಯಗೊಳಿಸಲಾಗಿದೆ. ಜೂನ್ ತಿಂಗಳ ನಂತರವೂ ನಿಯಮ ಮುಂದುವರಿದರೆ ವ್ಯಾಪಾರ ಶೇ.70ರಷ್ಟು ಕಡಿತವಾಗಲಿದೆ. ಈ ಹಿನ್ನಲೆಯಲ್ಲಿ ಸಾವಿರಾರು ರೆಸ್ಟೋರೆಂಟ್ ಮಾಲಕರು ನಾನು ತೆರೆಯುವುದಿಲ್ಲ ಎಂಬ ಹ್ಯಾಶ್ ಟ್ಯಾಗ್ ಹಿಡಿದು ಸಾಮಾಜಿಕ ಅಂತರ ನಿಯಮ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಬ್ರಿಟನ್‌ನ ಬಹುತೇಕ ಹೊಟೇಲ್ ಮಾಲಕರು ಸಾಮಾಜಿಕ ಅಂತರ ನಿಯಮದ ನಡುವೆ ಉದ್ಯಮವನ್ನು ಹಿಂದಿನಂತೆ ನಡೆಸುತ್ತೇವೆ ಎಂಬ ನಂಬಿಕೆ ನಮ್ಮಗಿಲ್ಲ ಎಂದು ಹೇಳಿದ್ದಾರೆ.