Advertisement

ನಿಯಮ ಉಲ್ಲಂಘನೆ: 9.97 ಲಕ್ಷ ರೂ. ದಂಡ

12:35 PM Sep 11, 2019 | Team Udayavani |

ರಾಮನಗರ: ಕಳೆದ 8 ದಿನಗಳಲ್ಲಿ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದವರಿಂದ 9 ಲಕ್ಷ, 97 ಸಾವಿರ 300 ರೂ. ದಂಡ ವಸೂಲಿ ಮಾಡಿದ್ದಾರೆ. ನಿಯಮ ಉಲ್ಲಂಘಿಸಿದ 1700 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

Advertisement

ಸಂಚಾರ ನಿಯಮ ಉಲ್ಲಂಘನೆಯ ದಂಡ ಪರಿಷ್ಕರಣೆ ಬೆನ್ನಲ್ಲೇ ರಾಮನಗರ ಜಿಲ್ಲೆಯಲ್ಲಿ ಸಂಚಾರ ವಿಭಾಗದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆಗಸ್ಟ್‌ ತಿಂಗಳಲ್ಲಿ ಸುಮಾರು ಒಂದು ವಾರದ ಕಾಲ ಪರಿಷ್ಕೃತ ದಂಡದ ಬಗ್ಗೆ ಸಾರ್ವಜನಿಕ ಜಾಗೃತಿ ಮೂಡಿಸಲಾಗಿತ್ತು. ಹೆಲ್ಮೆಟ್ ಧರಿಸುವ ಕಡ್ಡಾಯಗೊಳಿಸಲಾಗಿದೆ ಎಂದು ದ್ವಿಚಕ್ರ ವಾಹನ ಸವಾರರಿಗೆ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದರು. ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸಿದರೆ 1 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ ಎಂಬ ಕಾನೂನು ಬಗ್ಗೆಯೂ ತಿಳುವಳಿಕೆ ಮೂಡಿಸಲಾಗಿತ್ತು.

1700 ಪ್ರಕರಣಗಳು ದಾಖಲು: ಸೆ.1ರಂದು 583 ಪ್ರಕರಣ ದಾಖಲಿಸಿಕೊಂಡು 1,02,200 ರೂ. ದಂಡ ವಸೂಲು ಮಾಡಿದ್ದಾರೆ. ಸೆ.2ರಂದು 222 ಪ್ರಕರಣಗಳನ್ನು ದಾಖಲಿಸಿಕೊಂಡು 1,00,300 ರೂ. ದಂಡ ವಸೂಲು ಮಾಡಿದ್ದಾರೆ. ಸೆ.3ರಂದು 317 ಪ್ರಕರಣ ಮೂಲಕ 2,00,400 ರೂ.ವಸೂಲಾಗಿದೆ. ಪೊಲೀಸರ ಈ ಕಾರ್ಯಾಚಾರಣೆಯಿಂದಾಗಿ ಹೆಲ್ಮೆಟ್ ಕಡ್ಡಾಯವಾಗಿ ಧರಿಸುವವರ ಸಂಖ್ಯೆಯೂ ಅಧಿಕವಾಗಿದೆ. ಸೆ.4ರಿಂದ 8ರವರೆಗೆ ಉಲ್ಲಂಘನೆಯ ಪ್ರಕರಣಗಳು ಕಡಿಮೆಯಾಗಿದೆ. ಸೆ.8ರವರೆಗೆ ಒಟ್ಟು 1700 ಪ್ರಕರಣಗಳ ಮೂಲಕ 9.97 ಲಕ್ಷ ರೂ.ವಸೂಲು ಮಾಡಲಾಗಿದೆ.

ಆಗಸ್ಟ್‌ನಲ್ಲಿ 22 ಲಕ್ಷ ರೂ.ದಂಡ: ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ಮೂಲಕ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ವಿಧಿಸುವ ದಂಡವನ್ನು ಅಧಿಕಗೊಳಿಸಿ ಆದೇಶಿಸಿತ್ತು. ಈ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸುವ ಮೂಲಕ ಕಾನೂನು ಮೀರಿದವರ ವಿರುದ್ಧ ದಂಡ ಪ್ರಯೋಗಕ್ಕೆ ಹಸಿರು ನಿಶಾನೆ ತೋರಿಸಿತು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ನಗರ ಮತ್ತು ಪಟ್ಟಣ ವ್ಯಾಪ್ತಿಯಲ್ಲಿ ಸಂಚಾರ ವಿಭಾಗದ ಪೊಲೀಸರು ಆಗಸ್ಟ್‌ ತಿಂಗಳಲ್ಲಿ ಕೆಲವು ದಿನಗಳ ಕಾಲ ಜಾಗೃತಿ ಮೂಡಿಸಿ, ತದನಂತರ ದಂಡ ವಿಧಿಸಲು ಮುಂದಾಗಿದ್ದಾರೆ. ಆಗಸ್ಟ್‌ ತಿಂಗಳವೊಂದರಲ್ಲೇ 16262 ಪ್ರಕರಣಗಳನ್ನು ದಾಖಲಿಸಿಕೊಂಡು 22 ಲಕ್ಷದ 2 ಸಾವಿರದ 150 ರೂ.ದಂಡ ವಸೂಲು ಮಾಡಿದ್ದಾರೆ.

ವಾಹನ ಚಾಲನೆ ಮಾಡುವಾಗ ಮೊಬೈಲ್ನಲ್ಲಿ ಸಂಭಾಷಣೆ , ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಾಲನೆ, ಸೀಟ್ ಬೆಲ್r ಹಾಕದೇ ಪ್ರಯಾಣ, ಸೂಕ್ತ ದಾಖಲೆಗಳು ಇಲ್ಲದ ವಿಚಾರ ಸೇರಿದಂತೆ ಕೆಲವು ಪ್ರಮುಖ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ದಂಡ ವಿಧಿಸಲಾಗುತ್ತಿದೆ. ಕುಡಿದು ಕಾರು ಚಾಲನೆ ಮಾಡಿದ ಪ್ರಕರಣಗಳು ಸಹ ವರದಿಯಾಗಿದೆ. 10 ಸಾವಿರ ದಂಡವನ್ನು ನ್ಯಾಯಾಲಯದಲ್ಲಿ ಕಟ್ಟಿ ಕಾರು ಬಿಡಿಸಿಕೊಂಡು ಹೋಗಿರುವ ಹಲವಾರು ಪ್ರಕರಣಗಳಿವೆ.

Advertisement

ನಗರದಲ್ಲಿ ಹೆಲ್ಮೆಟ್ ಕಡ್ಡಾಯಕ್ಕೆ ಅಸಮಾಧಾನ: ಜಿಲ್ಲೆಯ ರಾಮನಗರ, ಚನ್ನಪಟ್ಟಣ, ಕನಕಪುರ ಮತ್ತು ಮಾಗಡಿಯ ನಗರ ವ್ಯಾಪ್ತಿಯಲ್ಲಿ ಹೆಲ್ಮೆಟ್ ಕಡ್ಡಾಯಕ್ಕೆ ವಾಹನ ಸವಾರರಿಂದ ಅಸಮಾಧಾನ ವ್ಯಕ್ತವಾಗಿದೆ. ಈ ನಗರಗಳಲ್ಲಿ ಇರೋದೆ ಕಿಷ್ಕಿಂದೆ ರಸ್ತೆಗಳು, ಇಲ್ಲಿ ವೇಗವಾಗಿ ವಾಹನ ಚಲಾಯಿಸುವುದೇ ದುಸ್ತರ, ಇಲ್ಲಿಗೇಕೆ ಹೆಲ್ಮೆಟ್ ಎಂಬ ವಾದವೊಂದೆಡೆಯಾದರೆ, ದ್ವಿಚಕ್ರ ವಾಹನ ರಸ್ತೆಗೆ ಉರುಳಿದರೆ ಮೊದಲು ಪೆಟ್ಟಾಗುವುದೇ ತಲೆಗೆ, ಹೀಗಾಗಿ ಜನರ ರಕ್ಷಣೆಗಾಗಿಯೇ ಕಾನೂನನ್ನು ಬಿಗಿಯಾಗಿ ಜಾರಿ ಮಾಡಲಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.

ವಾಹನಗಳಿಗೆ ದಾಖಲೆಗಳು ಸಿದ್ಧ: ಇಷ್ಟು ದಿನಗಳ ಕಾಲ ಭಣಗುಡುತ್ತಿದ್ದ ವಾಹನ ವಿಮಾ ಕಚೇರಿಗಳು, ಮಾಲಿನ್ಯ ತಪಾಸಣಾ ಕೇಂದ್ರಗಳಿಗೆ ಬೇಡಿಕೆ ಹೆಚ್ಚಾಗಿದೆ. ನೂರರ ಲೆಕ್ಕದಲ್ಲಿದ್ದ ದಂಡದ ಪ್ರಮಾಣ ಸಾವಿರಕ್ಕೆ ಏರಿದ್ದರಿಂದ ಗಾಬರಿಯಾಗಿರುವ ನಾಗರಿಕರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಹಿಡಿ ಶಾಪ ಹಾಕುತ್ತಲೇ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳುತ್ತಿದ್ದಾರೆ. ವಿಮೆ ಮುಗಿದು ತಿಂಗಳು ಗಟ್ಟಲೆ ಸುಮ್ಮನಿರುತ್ತಿದ್ದ ವಾಹನ ಮಾಲೀಕರೀಗ ವಿಮೆ ವಿಸ್ತರಿಸಿಕೊಳ್ಳಲಾರಂಭಿಸಿದ್ದಾರೆ. ಹೆಲ್ಮೆಟ್ ಖರೀದಿಯೂ ಭರ್ಜರಿಯಾಗಿ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next