ಬೆಂಗಳೂರು: ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಬೇಕಾದ ನಿಯಮಗಳನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ರೂಪಿಸುತ್ತಿದ್ದು, ಶೀಘ್ರದಲ್ಲಿ ಹೊಸ ವೇಳಾಪಟ್ಟಿಯ ಅಧಿಸೂಚನೆ ಹೊರಬೀಳಲಿದೆ. ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಸಡಿಲಗೊಳಿಸಿ ನೌಕರರ ವರ್ಗಾವಣೆಗೆ ಚುನಾವಣಾ ಆಯೋಗ ಈಗಾಗಲೇ ಅನುಮತಿ ನೀಡಿದ್ದರಿಂದ ನಿಯಮ ರೂಪಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ(ಶಿಕ್ಷಕರ ವರ್ಗಾವಣೆ ನಿಯಂತ್ರಣ)ತಿದ್ದುಪಡಿ ವಿಧೇಯಕದಂತೆ ಇಲಾಖೆಯ ಅಧಿಕಾರಿಗಳು ವರ್ಗಾವಣೆ ನಿಯಮವನ್ನು ರೂಪಿಸಿಕೊಂಡಿದ್ದಾರೆ. ಅದನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದೆರೆಡು ದಿನದಲ್ಲಿ ಅಂತಿಮಗೊಳಿಸಲಿದ್ದು ನಿಯಮಗಳು ಅಂತಿಮವಾದ ನಂತರ ವೇಳಾಪಟ್ಟಿ ಅಧಿಸೂಚನೆ ಹೊರಡಿಸಲಾಗುತ್ತದೆ.
ತಿದ್ದುಪಡಿ ಕಾಯ್ದೆಯಂತೆ ಶಿಕ್ಷಕರ ವರ್ಗಾವಣೆ ನಿಯಮ ಸಿದ್ಧಪಡಿಸುತ್ತಿದ್ದೇವೆ. ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲಿ ವೇಳಾಪಟ್ಟಿ ಅಧಿಸೂಚನೆ ಹೊರಡಿಸಲಾಗುತ್ತದೆ. ಕೌನ್ಸೆಲಿಂಗ್ ಪ್ರಕ್ರಿಯೆ ಯಾವಾಗ ಆರಂಭವಾಗಲಿದೆ ಎಂಬುದು 2-3 ದಿನದಲ್ಲಿ ತಿಳಿಯಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ತಿಳಿಸಿದ್ದಾರೆ.
ಸರ್ಕಾರಿ ಪ್ರಾಥಮಿಕ ಶಾಲೆಯ 1.64 ಲಕ್ಷ ಶಿಕ್ಷಕರು ಹಾಗೂ ಪ್ರೌಢಶಾಲೆಯ 40 ಸಾವಿರ ಶಿಕ್ಷಕರಲ್ಲಿ ಈ ಹಿಂದೆ ಸುಮಾರು 70 ಸಾವಿರ ಶಿಕ್ಷಕರು ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಚುನಾವಣಾ ನೀತಿ ಸಂಹಿತೆ ಸೇರಿದಂತೆ ವಿವಿಧ ಕಾರಣಕ್ಕಾಗಿ ವರ್ಗಾವಣೆ ಪ್ರಕ್ರಿಯೆ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಈಗ ಹೊಸದಾಗಿ ಅರ್ಜಿ ಆಹ್ವಾನಿಸಲಾಗುತ್ತದೆಯೋ ಅಥವಾ ಹಳೇ ಅರ್ಜಿಯಂತೆ ಪ್ರಕ್ರಿಯೆ ನಡೆಯಲಿದೆಯೇ ಎಂಬುದು ನಿಯಮಗಳ ಅಧಿಸೂಚನೆ ಹೊರಡಿಸಿದ ನಂತರವಷ್ಟೇ ತಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.