ಆನೇಕಲ್: ಬನ್ನೇರುಘಟ್ಟ ಎಂದ ಕೂಡಲೇ ನಮಗೆ ನೆನಪಿಗೆ ಬರುವುದು ಇಲ್ಲಿನ ಉದ್ಯಾನ. ಒಂದು ಕಡೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಜೈವಿಕ ಉದ್ಯಾನ, ಏಷ್ಯಾದಲ್ಲೇ ರಾಜಧಾನಿ ಒಂದಕ್ಕೆ ಅತಿ ಸಮೀಪದಲ್ಲಿರುವ ರಾಷ್ಟ್ರೀಯ ಉದ್ಯಾನವನ್ನು ಬನ್ನೇರುಘಟ್ಟ ಹೊಂದಿದೆ. ಇಷ್ಟೇ ಅಲ್ಲದೆ ಐತಿಹಾಸಿಕವಾಗಿ ಬನ್ನೇರುಘಟ್ಟ ಹಿರಿಮೆ ಹೊಂದಿದೆ. ಇಂತಹ ಬನ್ನೇರುಘಟ್ಟ ವೃತ್ತದಲ್ಲಿರುವ ಪ್ರವಾಸಿ ಬಂಗಲೆ ಪಾಳು ಬಿದ್ದಿದ್ದು, ಜನ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇದರ ಅಭಿವೃದ್ಧಿಗೆ ಗಮನ ಹರಿಸದಿರುವುದು ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.
ಬೆಂಗಳೂರು ಜಿಲ್ಲಾ ಬೋರ್ಡ್‌ನಿಂದ ಮುಜಾಫರ್ ಬಂಗಲೆ ಹೆಸರಿನ ಟ್ರಾವರ್ ಬಂಗಲೆ 1983ರಲ್ಲಿ ನಿರ್ಮಾಣವಾಗಿತ್ತು. ಇಂದು ಅವಸಾನದ ಅಂಚಿಗೆ ತಲುಪಿದೆ. ಇದು ಗ್ರಾಮದ ಮುಖ್ಯ ಸ್ಥಳದಲ್ಲಿದೆ. ಮುಂಭಾಗದಲ್ಲಿ ಪೊಲೀಸ್ ಠಾಣೆ, ಬಸ್ ನಿಲ್ದಾಣವಿದೆ. ಇಂತಹ ಕೇಂದ್ರ ಭಾಗದಲ್ಲಿದ್ದರೂ ಪ್ರವಾಸಿ ಬಂಗಲೆಯನ್ನು ಅಭಿವೃದ್ಧಿ ಮಾಡಬೇಕೆಂಬ ಕಾಳಜಿ ತೋರಿಲ್ಲ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರವಾಸಿ ಬಂಗಲೆ ಒಂದಷ್ಟು ವರ್ಷಗಳ ಕಾಲ ರಾಜಕಾರಣಿಗಳ ಆಶ್ರಯತಾಣವಾಗಿ, ಅಧಿಕಾರಿಗಳು ಸಭೆ ನಡೆಸುವ ಜಾಗವಾಗಿತ್ತು. ಅಲ್ಲಿವರೆಗೂ ಬೆಂಗಳೂರು ಜಿಲ್ಲಾ ಬೋರ್ಡ್ ಮೇಲ್ವಿಚಾರಣೆಯಲ್ಲಿ ನಡೆಯುತ್ತಿತ್ತು. ಅದಾದ ಬಳಿಕ ಪ್ರವಾಸಿ ಬಂಗಲೆ ಆನೇಕಲ್ ತಾಲೂಕು ಪಂಚಾಯ್ತಿ ಸುಪರ್ದಿಗೆ ಒಳ ಪಟ್ಟಿತು. ಆಗಿನಿಂದ ಬಂಗಲೆ ನೋಡಿ ಕೊಳ್ಳುವರು ಇಲ್ಲದೆ ಬಾಗಿಲು ಹಾಕಿತ್ತು. ಒಂದಷ್ಟು ವರ್ಷ ಬಾಗಿಲಿಗೆ ಬೀಗ ಇತ್ತಾದರೂ ಕಾಲ ಕಳೆದಂತೆ ಬಾಗಿಲು ಕಿಟಕಿ, ಒಳಗಿದ್ದ ಬಳಕೆ ವಸ್ತು ಕಳ್ಳರ ಪಾಲಾಯಿತು.
ಒಂದಷ್ಟು ದಿನ ಇದೇ ಬಂಗಲೆ ಜುಜಾಡುವವರ ಆಶ್ರಯ ತಾಣವಾಗಿತ್ತು. ಯಾವಾಗ ಪೊಲೀಸರು ದಾಳಿ ನಡೆಸಲು ಮುಂದಾದರೂ ಆಗ ಜೂಡಾಡುವವರು ಜಾಗ ಖಾಲಿ ಮಾಡಿದರು. ನಂತರ ಪಾಳು ಬಿದ್ದು ಭೂತ ಬಂಗಲೆಯಂತಾಗಿದೆ. ಬಂಗಲೆ ಸುತ್ತಲು ಹತ್ತಾರು ಎಕರೆ ಭೂಮಿ ಇದೆ. ಆದರೆ, ಸರಿಯಾದ ಕಾಪೌಂಡ್ ಇಲ್ಲದೆ ಒತ್ತುವರಿ ಸಹ ಆಗಿದೆ. ಇನ್ನೂ ಪ್ರವಾಸಿ ಬಂಗಲೆಗೆ ಸೇರಿದ ಜಾಗದಲ್ಲೆ ಅಂಗಡಿ ಮಳಿಗೆಗಳನ್ನು ನಿರ್ಮಾಣ ಮಾಡಿದ್ದರು. ಅದರಲ್ಲಿ ಒಂದಷ್ಟು ಅಂಗಡಿಗಳು ಬಾಡಿ ಕಟ್ಟಿದರೆ ಉಳಿದವರು ಮಾತ್ರ ಒಂದು ರೂ. ಕಟ್ಟದೆ ಸರ್ಕಾರಿ ಕಟ್ಟಡ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ಹಳೆಯ ಪ್ರವಾಸಿ ಬಂಗಲೆ ಇರುವ ಕಟ್ಟಡ ಮತ್ತು ಸುತ್ತಲಿನ ಜಾಗ ರಕ್ಷಣೆಯ ಜವಾಬ್ದಾರಿಯಾದ ಆನೇಕಲ್ ತಾಲೂಕು ಪಂಚಾಯ್ತಿ ಮಾತ್ರ ತೀವ್ರ ನಿರ್ಲಕ್ಷ್ಯವಹಿಸಿದೆ. ಬನ್ನೇರುಘಟ್ಟ ಸಾವಿರಾರು ಪ್ರವಾಸಿಗರು ಬಂದು ಹೋಗುವ ತಾಣ ಇಲ್ಲಿ ಸುವ್ಯವಸ್ಥಿತ ವಸತಿ ವ್ಯವಸ್ಥೆ ಮಾಡಿದರೆ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಒಂದು ಕಡೆ ಪ್ರವಾಸಿಗರಿಗೆ, ಭಕ್ತರಿಗೆ ಅನುಕೂಲ ಮಾಡಿಕೊಡುವುದು ಜೊತೆ ತಾಲೂಕು ಪಂಚಾಯ್ತಿಗೂ ಆರ್ಥಿಕ ಲಾಭವಾಗುವುದು
ಇಂತಹ ಚಿಂತನೆಯನ್ನು ಅಧಿಕಾರಿಗಳಾಗಲಿ ಅಥವಾ ಈ ಭಾಗದ ಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್ ಆಗಲಿ ಪಾಳು ಬಿದ್ದ ಬಂಗಲೆ ವಿಷಯವಾಗಿ ಚಿಂತನೆ ನಡೆಸಿಲ್ಲ ಎಂಬುದೇ ನಾಗರಿಕರ ಬೇಸರಕ್ಕೆ ಕಾರಣವಾಗಿದೆ. ಗ್ರಾಪಂ ಸದಸ್ಯ ಮಹದೇವ್ ಮಾತನಾಡಿ, ಬನ್ನೇರುಘಟ್ಟ ಹೆಸರಿಗೆ ತಕ್ಕನಾದ ಒಂದು ಹೋಟೆಲ್ ಆಗಲಿ, ಸಾರ್ವಜನಿಕ ವಸತಿ ಕೇಂದ್ರವಾಗಲಿ ಇಲ್ಲದೆ ಇರುವುದು ನೋವಿನ ಸಂಗತಿ ಎಂದರು.
ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಇದು ಒಳಪಡುವುದಿಲ್ಲ, ತಾಪಂ ಬಂಗಲೆಯ ಅಧಿಕಾರ ಇದೆ. ಅವರು ಇದರ ಬಗ್ಗೆ ಗಮನ ಹರಿಸುತ್ತಿಲ್ಲ, ಇದನ್ನು ಹೀಗೆ ಬಿಟ್ಟರೆ ಮುಂದೆ ನಿರಾಶ್ರಿತರು ಗುಡಿಸಲು ಹಾಕಿಕೊಂಡು ತದ ನಂತರ ಮನೆಗಳನ್ನು ಕಟ್ಟಿಕೊಂಡರೂ ಆಶ್ಚರ್ಯವಿಲ್ಲ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಜನ ಪ್ರತಿನಿಧಿಗಳು ಇತ್ತ ಗಮನಹರಿಸಿ ಪ್ರವಾಸಿಗರಿಗೆ, ಭಕ್ತರಿಗೆ ಅನುಕೂಲವಾಗುವ ವಸತಿ ಕೇಂದ್ರವಾಗಿ ಅಭಿವೃದ್ಧಿಪಡಿಸಬೇಕಿದೆ ಎಂದು ಸ್ಥಳೀಯರಾದ ರಮೇಶ್ ಅಭಿಪ್ರಾಯವಾಗಿದೆ.