ಕಲಾದಗಿ: ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರಿಗೆಂದು ಲಕ್ಷಾಂತರ ರೂಪಾಯಿ ವ್ಯಯ ಮಾಡಿ ಕಟ್ಟಿಸಿದ ಕ್ವಾರ್ಟ್‌ರ್ಸ್‌ಗಳು ನಾಯಿ, ಹಂದಿ ವಾಸಿಸುವ ಸ್ಥಳಗಳಾಗಿ ಮಾರ್ಪಾಡಾಗುತ್ತಿದ್ದು, ಕಟ್ಟಡಗಳ ಆವರಣದಲ್ಲಿ ಮುಳ್ಳು ಕಂಟಿ ಬೆಳೆದು ಮಿನಿ ಜಂಗಲ್ ಆಗುತ್ತಿದೆ.
ಕಿಟಕಿಗಳು-ಬಾಗಿಲುಗಳು ಮುರಿದು ಹೋಗುವ ಸ್ಥಿತಿಯಲ್ಲಿದ್ದು,ಹುಳು ತಿನ್ನುತ್ತಿವೆ. ಗಾಜುಗಳು ಒಡೆದು ಹೋಗುತ್ತಿವೆ. ಕ್ವಾರ್ಟ್‌ರ್ಸ್ ಆವರಣದಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿದ್ದು, ಗೇಟುಗಳು ಕಾಯಂ ತೆರೆದೇ ಇರುತ್ತವೆ. ವಿದ್ಯುತ್ ತಂತಿಗಳು ಹರಿದು ಬಿದ್ದಿದ್ದು, ಪೈಪ್‌ಗ್ಳು ಒಡೆದು ಹೋಗಿವೆ. ಕಿಟಕಿಯಿಂದ ಒಳಗಡೆ ಕಣ್ಣು ಹಾಯಿಸಿದರೆ ನಿರುಪಯುಕ್ತ ವಸ್ತುಗಳು ಗುಜರಿ ಸಾಮಾನಿನಂತೆ ಕಾಣುತ್ತಿವೆ. ಪಾಳು ಬಿದ್ದ ಬಂಗಲೆಯಂತೆ ಕಾಣುತ್ತಿವೆ.
ಸರಕಾರ ಕಂದಾಯ ನೌಕರರಿಗೆ ಸೇವೆ ಸಲ್ಲಿಸುತ್ತಿರುವ ಗ್ರಾಮದಲ್ಲೇ ವಾಸವಿರಲೆಂದು ಹಾಗೂ ಗ್ರಾಮೀಣ ಜನರಿಗೆ ಸೂಕ್ತ ಕಾಲದಲ್ಲಿ ಸರಕಾರಿ ಸೇವೆಗಳು ಲಭ್ಯವಾಗಲಿ ಎಂಬ ದೃಷ್ಟಿಕೋನವನ್ನಿಟ್ಟುಕೊಂಡು ಸೌಲಭ್ಯಗಳನ್ನೊಳಗೊಂಡ ಮೂರು ಕ್ವಾರ್ಟ್‌ರ್ಸ್‌ಗಳನ್ನು ಕಟ್ಟಿಸಿಕೊಟ್ಟಿತ್ತು.ಆದರೆ ಕಂದಾಯ ಇಲಾಖೆಯ ಉಪತಹಶೀಲ್ದಾರನಾಗಲಿ, ಗ್ರಾಮ ಲೆಕ್ಕಾಧಿಕಾರಿಯಾಗಲಿ, ಕಂದಾಯ ನಿರೀಕ್ಷಕನಾಗಲಿ ಯಾರೂ ಇಲ್ಲಿ ವಾಸವಿರದೆ ಪಾಳು ಬಿದ್ದು ಹೋಗುತ್ತಿದೆ.
ಕ್ವಾರ್ಟ್‌ರ್ಸ್‌ಗಳ ಆವರಣ ಕುಡುಕರ ಅಡ್ಡಾ ಆಗುತ್ತಿದೆ. ಸಾರಾಯಿ ಬಾಟಲಿಗಳು, ಬಿಯರ್ ಬಾಟಲಿಗಳು ಎಲ್ಲೆಂದರಲ್ಲಿ ಬಿದ್ದಿವೆ.ಅಂಡರ್ ಗ್ರೌಂಡ್ ನೀರಿನ ಟ್ಯಾಂಕುಗಳಲ್ಲಿ ಕಲ್ಲು ಮಣ್ಣು ತುಂಬಿಕೊಂಡು ಹಾಳಾಗಿದೆ.
ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಪಾಳು ಬೀಳುತ್ತಿರುವ ಕಟ್ಟಡಗಳನ್ನು ದುರಸ್ತಿ ಮಾಡಿಸಿ ಅಧಿಕಾರಿಗಳು ವಸತಿ ಗೃಹಗಳನ್ನಾಗಲಿ, ಆಧಾರ ನೋಂದಣಿ ಕೇಂದ್ರವನ್ನಾಗಲಿ ಅಥವಾ ಇನ್ನಿತರೆ ಕಚೇರಿಗಳನ್ನಾಗಿ ಉಪಯೋಗಿಸಬೇಕೆಂದು ಗ್ರಾಮಸ್ಥರ ಆಶಯವಾಗಿದೆ.
•ಚಂದ್ರಶೇಖರ ಆರ್.ಎಚ್.