Advertisement

ಆರ್‌ಸೆಟಿ ಕಲ್ಪನೆಯಿಂದ ಕೋಟ್ಯಂತರ ಉದ್ಯೋಗಾವಕಾಶ: ಡಾ|ಹೆಗ್ಗಡೆ

06:35 AM Aug 31, 2017 | Team Udayavani |

ಬೆಳ್ತಂಗಡಿ: ಸವಾಲುಗಳನ್ನು ತೆಗೆದುಕೊಳ್ಳಬೇಕು. ಅಂತಹ ಉತ್ಸಾಹದಿಂದಲೇ ಮೂವತ್ತು ದಶಕದ ಹಿಂದೆ ರುಡ್‌ಸೆಟ್‌ ಎಂಬ ಸ್ವ ಉದ್ಯೋಗ ತರಬೇತಿ ಕೇಂದ್ರ ಸ್ಥಾಪಿಸಲಾಯಿತು. ಇದರ ಪರಿಣಾಮವಾಗಿ ದೇಶದ ಪ್ರತಿ ಜಿಲ್ಲೆಯಲ್ಲಿ ಆರ್‌ಸೆಟಿಗಳ ಸ್ಥಾಪನೆಯಾಗಿ ಸ್ವ ಉದ್ಯೋಗ ತರಬೇತಿ ನೀಡಿ ಕೋಟ್ಯಂತರ ಮಂದಿಗೆ ಉದ್ಯೋಗಾವಕಾಶ ಸೃಷ್ಟಿಯಾಗಿದೆ ಎಂದು ಧರ್ಮಸ್ಥಳದ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

Advertisement

ಅವರು ಧರ್ಮಸ್ಥಳದ ಸನ್ನಿಧಿ ಅತಿಥಿ ಗೃಹದ ಸಭಾಂಗಣ ದಲ್ಲಿ ದೇಶದ 27 ರುಡ್‌ಸೆಟ್‌ಗಳ ನಿರ್ದೇಶಕರ 3 ದಿನಗಳ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.ರುಡ್‌ಸೆಟ್‌ ಸಂಸ್ಥೆಯಲ್ಲಿ ವಾರ್ಷಿಕ 750ರಷ್ಟು ತರಬೇತಿಗಳನ್ನು ನೀಡಲಾಗುತ್ತಿದೆ. ಇದಲ್ಲದೆ ಕೇಂದ್ರ ಸರಕಾರದ ಮೂಲಕ ಸ್ಥಾಪನೆಯಾದ ದೇಶದ 546 ಆರ್‌ಸೆಟಿಗಳ ಸಾಧನೆಗೆ ಸರಕಾರದ ನಿಗದಿಯ ಗಡುವಿಗಿಂತ ಅಧಿಕವೇ ಸಾಧಿಸಿ ತೋರಿಸಲಾಗಿದೆ. ಈವರೆಗೆ 24 ಲಕ್ಷ ಮಂದಿಗೆ ತರಬೇತಿ ನೀಡಲಾಗಿದೆ. ಪ್ರತಿಯೊಬ್ಬರೂ ಕನಿಷ್ಠ 4 ಮಂದಿಗೆ ಉದ್ಯೋಗದಾತರಾಗಿದ್ದರೂ ಅದು ಕೋಟಿಗೆ ಸನಿಹವಿದೆ ಎಂದರು.

ಸಿಂಡಿಕೇಟ್‌ ಬ್ಯಾಂಕ್‌ ವ್ಯವಸ್ಥಾಪನಾ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೆಲ್ವಿನ್‌ ರೇಗೋ ಮಾತನಾಡಿ, ಡಾ| ಹೆಗ್ಗಡೆಯವರು ದೂರದೃಷ್ಟಿಯಿಂದ ರುಡ್‌ಸೆಟ್‌, ಗ್ರಾಮಾಭಿವೃದ್ಧಿ ಮೊದಲಾದ ಅನೇಕ ಹೊಸ ಚಿಂತನೆಗಳನ್ನು ಇತರರಿಗಿಂತ ಮೊದಲೇ ಆರಂಭಿಸಿದ್ದಾರೆ. ಸಾಧನೆ ಮಾಡಬೇಕೆಂಬ ಹಂಬಲ ಉಳ್ಳವನು ಔದ್ಯೋಗಿಕ ಸಮಗ್ರತೆ, ಕಠಿನ ಶ್ರಮ ಹಾಗೂ ಶೋಧಕ ಮನಸ್ಸು ಹೊಂದಿರಬೇಕು. ಔದ್ಯಮಿಕವಾಗಿ ಮೌಲ್ಯಗಳನ್ನು ಹೊಂದಿದ್ದರೆ ಅದು ಸದಾ ಸ್ವೀಕಾರಾರ್ಹ ಎಂದರು.

ಕೆನರಾ ಬ್ಯಾಂಕ್‌ ಕಾರ್ಯನಿರ್ವಾಹಕ ನಿರ್ದೇಶಕಿ ಪಿ. ವಿ. ಭಾರತಿ ಮಾತನಾಡಿ, ಹಸಿದವನಿಗೆ ಮೀನು ಹಿಡಿದು ಕೊಟ್ಟರೆ ಒಂದು ದಿನ ಕೊಟ್ಟಂತೆ. ಮೀನು ಹಿಡಿಯಲು ಕಲಿಸಿ ಕೊಟ್ಟರೆ ಅವನಿಗೆ ಬದುಕು ಕೊಟ್ಟಂತೆ. ಸಣ್ಣ ಸಣ್ಣ ಕನಸುಗಳನ್ನು ಸಾಕಾರ ಮಾಡಲು ನೆರವಾಗುವ ರುಡ್‌ಸೆಟ್‌ನಲ್ಲಿ  ಡಾ| ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಕೆಲಸ ಮಾಡಲು ಹೆಮ್ಮೆ ಪಡಬೇಕು. ಯುವಜನತೆಗೆ ಕೊಡುವ ತರಬೇತಿ ವಜ್ರಕ್ಕೆ ಹೊಳಪು ನೀಡಿದಂತೆ ಮೌಲ್ಯವರ್ಧನೆ ಎಂದರು.

ಆರ್‌ಸೆಟಿಯ ರಾಷ್ಟ್ರೀಯ ನಿರ್ದೇಶಕ ಕೆ.ಎನ್‌. ಜನಾರ್ದನ್‌, ಆರ್‌ಸೆಟಿಗಳ ಮೂಲಕ ಪ್ರತಿ ವರ್ಷ 2 ಲಕ್ಷ ಜನರಿಗೆ ಉದ್ಯೋಗ ತರಬೇತಿಯ ಗುರಿಯನ್ನು ಸರಕಾರ ನಿಗದಿ ಮಾಡಿತ್ತು. ಆದರೆ ವಾರ್ಷಿಕ 4.25 ಲಕ್ಷ ಮಂದಿಗೆ, ಒಟ್ಟು 24 ಲಕ್ಷ ಜನರಿಗೆ ತರಬೇತಿ ನೀಡಲಾಗಿದೆ. 3 ವರ್ಷ ಮತ್ತೆ ವಿಸ್ತರಣೆ ಮಾಡಲು ಕೇಂದ್ರ ಸರಕಾರ ಒಪ್ಪಂದ ನಡೆಸುತ್ತಿದೆ. ಮೂರು ದಶಕಗಳ ಹಿಂದೆಯೇ ಡಾ| ಹೆಗ್ಗಡೆಯವರಿಗೆ ಮೇಕ್‌ ಇನ್‌ ಇಂಡಿಯಾ, ಮೇಡ್‌ ಇನ್‌ ಇಂಡಿಯಾ ಕಲ್ಪನೆ ಬಂದಿತ್ತು ಎಂದರು.

Advertisement

ಸಿಂಡಿಕೇಟ್‌ ಬ್ಯಾಂಕ್‌ ಜನರಲ್‌ ಮೆನೇಜರ್‌ ಎಂ. ಮೋಹನ ರೆಡ್ಡಿ, ಕೆನರಾ ಬ್ಯಾಂಕ್‌ ಜನರಲ್‌ ಮೆನೇಜರ್‌ ಅನಿಲ್‌ ಕುಮಾರ್‌ ಪಿ., ಡೆಪ್ಯುಟಿ ಜನರಲ್‌ ಮೆನೇಜರ್‌ ವಿಜಯಲಕ್ಷ್ಮೀ, ರುಡ್‌ಸೆಟ್‌ ನ್ಯಾಷನಲ್‌ ಅಕಾಡೆಮಿಯ ಡೈರೆಕ್ಟರ್‌ ಜನರಲ್‌ ಆರ್‌. ಆರ್‌. ಸಿಂಗ್‌, ಸಿಪಿಸಿಆರ್‌ಡಿಯ ಡಿಜಿಎಂ ಜಗದೀಶ ಮೂರ್ತಿ ಉಪಸ್ಥಿತರಿದ್ದರು.
ರುಡ್‌ಸೆಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎಂ. ಜನಾರ್ದನ್‌ ಸ್ವಾಗತಿಸಿದರು. ನಿರ್ದೇಶಕ ಅಜಿತ್‌ ಕೆ. ರಾಜಣ್ಣವರ್‌ ವಂದಿಸಿದರು. ಹಿರಿಯ ಉಪನ್ಯಾಸಕಿ ಅನಸೂಯಾ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next