Advertisement

ರುದ್ರೇಶ್‌ ಹತ್ಯೆ ಪ್ರಕರಣ: ಆರೋಪಿ ಅರ್ಜಿ ವಜಾ

07:00 AM Nov 23, 2018 | |

ಬೆಂಗಳೂರು: ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಕೊಲೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧದ ಆರೋಪಗಳನ್ನು ಕೈಬಿಡುವಂತೆ ಕೋರಿ ಪ್ರಕರಣದ 5ನೇ ಆರೋಪಿ ಆಸೀಂ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು ಗುರುವಾರ ಹೈಕೋರ್ಟ್‌ ವಜಾಗೊಳಿಸಿದೆ.

Advertisement

ಅರ್ಜಿ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ. ಎನ್‌.ಕೆ. ಸುಧೀಂದ್ರರಾವ್‌, ಗುರುವಾರ ತೀರ್ಪು ಪ್ರಕಟಿಸಿದ್ದು, ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಪರ ವಕೀಲರ ವಾದವನ್ನು ಮಾನ್ಯ ಮಾಡಿ, ಆರೋಪಿ ಆಸೀಂ ಶರೀಫ್ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದರು.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿರುವ ಪ್ರಕರಣವನ್ನು ಅಕ್ರಮ ಕೂಟ ಕಾಯ್ದೆ-1967ರ ಷೆಡ್ನೂಲ್ಡ್‌ (ಪಟ್ಟಿ ಮಾಡಲಾಗಿರುವ) ಅಪರಾಧ ಪ್ರಕರಣ ಸ್ವರೂಪ ಹೊಂದಿರಬೇಕು. ಆದರೆ ಇದೊಂದು ಕೊಲೆ ಪ್ರಕರಣ. ಎನ್‌ಐಎ ಇದಕ್ಕೆ ಭಯೋತ್ಪಾದಕರ ಬಣ್ಣ ಕಟ್ಟಿದೆ. ಕೊಲೆ ಪ್ರಕರಣಕ್ಕೂ ಅರ್ಜಿದಾರರಿಗೂ ಯಾವುದೇ ಸಂಬಂಧವಿಲ್ಲ. ಘಟನೆ ನಡೆದ ಸ್ಥಳದಲ್ಲಿ ಆರೋಪಿ ಇರಲಿಲ್ಲ. ಅರ್ಜಿದಾರರಿಗೆ ಪಿಎಫ್‌ಐ ಸಂಘಟನೆಯ ನಂಟಿದೆ ಎಂದಾದರೂ, ಅದು ನಿಷೇಧಿತ ಸಂಘಟನೆಯಲ್ಲ. ಇದೊಂದು ರಾಜಕೀಯ ಪ್ರೇರಿತ ಪ್ರಕರಣವಾಗಿದೆ. ಹೀಗಾಗಿ ಆರೋಪ ಕೈಬಿಡಬೇಕು ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ಇದಕ್ಕೆ ಆಕ್ಷೇಪಿಸಿದ್ದ ಎನ್‌ಐಎ ಪರ ವಕೀಲ ಪಿ. ಪ್ರಸನ್ನಕುಮಾರ್‌, ಹತ್ಯೆಯಾದ ರುದ್ರೇಶ್‌ ಹಾಗೂ ಆರೋಪಿಗಳ ನಡುವೆ ಯಾವುದೇ ವೈಯುಕ್ತಿಕ ಪರಿಚಯ ಅಥವಾ ದ್ವೇಷವಿರಲಿಲ್ಲ. ಎಲ್ಲ ಆರೋಪಿಗಳೂ ಪಾಪ್ಯುಲರ್‌ ಫ್ರಾಂಟ್‌ ಆಫ್‌ ಇಂಡಿಯಾದ (ಪಿಎಫ್‌ಐ) ಸಕ್ರಿಯ ಕಾರ್ಯಕರ್ತರಾಗಿದ್ದು, ಆರ್‌ಎಸ್‌ಎಸ್‌ ಕಾರ್ಯಕರ್ತರನ್ನು ಗುರಿಯಾಗಿಸಿ ಕೃತ್ಯವೆಸಗಿದ್ದಾರೆ. ರುದ್ರೇಶ್‌ ಹತ್ಯೆಯಾದ ದಿನ ಆರ್‌ಎಸ್‌ಎಸ್‌ ಪಥಸಂಚಲನವಿತ್ತು. ಆ ದಿನ ಯಾರಾದರೂ ಒಬ್ಬ ಕಾರ್ಯಕರ್ತನನ್ನು ಹತ್ಯೆ ಮಾಡಿದರೆ, ಆರ್‌ಎಸ್‌ಎಸ್‌ಗೆ ಭೀತಿ ಹುಟ್ಟಿಸಬಹುದು ಎಂಬ ಸಂಚು ರೂಪಿಸಿದ್ದರು ಎಂದು ವಿವರಿಸಿದ್ದರು.

ಅಲ್ಲದೇ,  ಆರೋಪಿಗಳ ಈ ದುಷ್ಕೃತ್ಯವು ಅಕ್ರಮ ಕೂಟ ಕಾಯ್ದೆ-1967ರ ಪ್ರಕಾರ ಭಯೋತ್ಪಾದನಾ ಕೃತ್ಯವಾಗಿದೆ. ಮೇಲಾಗಿ ಆರೋಪಿ ಆಸೀಂ ಶರೀಫ್ ಸಲ್ಲಿಸಿದ ಅರ್ಜಿಯನ್ನು ಈಗಾಗಲೇ ಎನ್‌ಐಎ ವಿಶೇಷ ನ್ಯಾಯಾಲಯ ವಜಾಗೊಳಿಸಿದ್ದು, ಎನ್‌ಐಎ ಕಾಯ್ದೆಯ ಸೆಕ್ಷನ್‌ 21ರ ಪ್ರಕಾರ ವಿಶೇಷ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಲು ಅವಕಾಶವಿಲ್ಲ. ಹೀಗಾಗಿ ಅರ್ಜಿ ವಜಾಗೊಳಿಸುವಂತೆ ಮನವಿ ಮಾಡಿದ್ದರು. ಈ ಅಂಶಗಳನ್ನು ಪುರಸ್ಕರಿಸಿದ ನ್ಯಾಯಪೀಠ, ಆರೋಪಿಯ ಅರ್ಜಿಯನ್ನು ವಜಾಗೊಳಿಸಿದೆ.

Advertisement

ಪ್ರಕರಣವೇನು?
ಬೆಂಗಳೂರಿನ ಶಿವಾಜಿನಗರದ ಕಾಮರಾಜ್‌ ರಸ್ತೆಯಲ್ಲಿ 2016ರ ಅ.16ರಂದು ಆರ್‌ಎಸ್‌ಎಸ್‌ ಕಾರ್ಯಕರ್ತ ರುದ್ರೇಶ್‌ ಕೊಲೆ ನಡೆದಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕಮರ್ಷಿಯಲ್‌ ಸ್ಟ್ರೀಟ್‌ ಠಾಣಾ ಪೊಲೀಸರು ತನಿಖೆ ನಡೆಸಿ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾದ ಬೆಂಗಳೂರು ನಗರ ಜಿಲ್ಲಾ ಘಟಕದ ಅಧ್ಯಕ್ಷ ಅಸೀಂ ಷರೀಫ್ ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದರು. ಈ ಮಧ್ಯೆ ಕೇಂದ್ರ ಸರ್ಕಾರ ಪ್ರಕರಣದ ತನಿಖೆಯನ್ನು ಎನ್‌ಐಎಗೆ ವಹಿಸಿ ಆದೇಶಿಸಿತ್ತು. ಕೊಲೆ ಘಟನೆ ಖಂಡಿಸಿ ಭಾರಿ ಪ್ರತಿಭಟನೆ ನಡೆಸಿದ್ದ ಬಿಜೆಪಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಎನ್‌ಐಎಗೆ ವಹಿಸಬೇಕು. ಪಿಎಫ್ಐ ಸಂಘಟನೆಯನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿತ್ತು.

ವಿಡಿಯೋ ಕಾನ್ಪರೆನ್ಸ್ ಮೂಲಕ ತೀರ್ಪು
ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಜುಲೈ 27ಕ್ಕೆ ಪೂರ್ಣಗೊಳಿಸಿದ್ದ ನ್ಯಾಯಮೂರ್ತಿಗಳು ತೀರ್ಪು ಕಾಯ್ದಿರಿಸಿದ್ದರು. ಸದ್ಯ ಹೈಕೋರ್ಟ್‌ನ ಧಾರವಾಡ ನ್ಯಾಯಪೀಠದಲ್ಲಿ ಕಾರ್ಯನಿರ್ವಹಿಸುತ್ತಿರುವ ನ್ಯಾ. ಸುಧೀಂದ್ರರಾವ್‌ ಅವರು ಗುರುವಾರ ವಿಡಿಯೋ ಕಾನ್ಪರೆನ್ಸ್  ಮೂಲಕ ತೀರ್ಪು ಪ್ರಕಟಿಸಿ, ಆರೋಪಿ ಆಸೀಂ ಶರೀಫ್ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿ ಆದೇಶ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next