Advertisement

ಸುಲಭ ಕೃಷಿ ರುದ್ರಾಕ್ಷಿ

04:08 PM Jul 09, 2018 | Harsha Rao |

ಶೈವ ಧರ್ಮದ ಅನುನಾಯಿಗಳಿಗೆ ಪೂಜನೀಯವಾದದ್ದು ರುದ್ರಾಕ್ಷಿ. ಮಠದಲ್ಲಿ ಬೆಳೆಯುವ ರುದ್ರಾಕ್ಷಿಯಲ್ಲಿ ಐದು ಮುಖದ ರುದ್ರಾಕ್ಷಿ, ನಾಲ್ಕು ಮುಖದ ರುದ್ರಾಕ್ಷಿ, ಆರು ಮುಖದ ರುದ್ರಾಕ್ಷಿ ಎಂದೆಲ್ಲಾ ವಿಂಗಡೆಗಳಿವೆ. ಏಕ ಮುಖದ ರುದ್ರಾಕ್ಷಿಗೆ ಸಾವಿರರೂ . ಬೆಲೆ ಇದೆ. ಬೆಳೆದರೆ ಇದರಿಂದ ಸಿಗುವ ಲಾಭಗಳು ಇಲ್ಲಿವೆ.
 

Advertisement

ಪೆರ್ಲ ಬಳಿಯ ವರ್ಮುಡಿಯಲ್ಲಿರುವ ಶಿವಪ್ರಸಾದ ಪರ್ತಜೆಯವರು ಹದಿನೈದು ವರ್ಷಗಳ ಹಿಂದೆ ಮೂರು ರುದ್ರಾಕ್ಷಿ ಗಿಡಗಳನ್ನು ನೆಟ್ಟರು. ತೀರಾ ಶ್ರದ್ಧೆಯಿಂದೇನೋ ಅವರು ಅದನ್ನು ಸಾಕಿರಲಿಲ್ಲ, ಬೇಸಿಗೆಯಲ್ಲಿ ನೀರು ಹಾಕಿದ್ದು ಬಿಟ್ಟರೆ ಗೊಬ್ಬರವನ್ನು ತೋರಿಸಿದ್ದೂ ಇಲ್ಲ. ಆದರೂ ಮಣ್ಣಿನಲ್ಲಿರುವ ಸಾರ-ಸತ್ವವನ್ನೇ ಹೀರಿಕೊಂಡು ಎತ್ತರೆತ್ತರ ಬೆಳೆಯುತ್ತಲೇ ಹೋದ ಮರಗಳು ಈಗ ಐವತ್ತು ಅಡಿಗಿಂತಲೂ ಹೆಚ್ಚು ಬೆಳೆದಿವೆ. ಐದನೆಯ ವರ್ಷದಲ್ಲಿ ಹೂ ಬಿಟ್ಟು ವಿರಳವಾಗಿ ಕಾಯಿ ಕೊಡಲಾರಂಭಿಸಿದ ಆ ಮರಗಳು.  ಹತ್ತನೆಯ ವರ್ಷದಿಂದೀಚೆಗೆ ಗೊಂಚಲು ಗೊಂಚಲು ಕಾಯಿಗಳಾಗಳನ್ನೂ ನೀಡುತ್ತಿವೆ.

    ಶೈವ ಧರ್ಮದ ಅನುಯಾಯಿಗಳಿಗೆ ಪೂಜನೀಯವಾದ ರುದ್ರಾಕ್ಷಿಯ ಮುಖ್ಯ ಬಳಕೆ ಕೊರಳಿನ ಜಪಸರಗಳಾಗಿದ್ದರೂ ಅದರಲ್ಲಿ ಅನೇಕ ಔಷಧೀಯ  ಅಂಶಗಳಿವೆ ಎನ್ನುತ್ತಾರೆ ಶಿವಪ್ರಸಾದ್‌. ರುದ್ರಾಕ್ಷಿಯನ್ನು ರಾತ್ರಿ ಮಣ್ಣಿನ ಪಾತ್ರೆಯ ನೀರಿನಲ್ಲಿ ನೆನೆಸಿಟ್ಟು ಬೆಳಗ್ಗೆ ಆ ನೀರನ್ನು ಕುಡಿಯುವುದರಿಂದ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆಂಬ ನಂಬಿಕೆಯಿಂದ ತುಂಬ ಮಂದಿ ಅವರಲ್ಲಿಗೆ ರುದ್ರಾಕ್ಷಿಯನ್ನು ಕೇಳಿಕೊಂಡು ಬರುತ್ತಾರಂತೆ.

    ನೇಪಾಳದಲ್ಲಿ ಧಾರಾಳವಾಗಿ ಬೆಳೆಯುವ ರುದ್ರಾಕ್ಷಿ$ ಮರವು ವರ್ಷದಲ್ಲಿ ಎರಡು ಸಲ ಹೂ ಬಿಡುತ್ತದೆ. ಆಗಸ್ಟ್‌ ತಿಂಗಳಲ್ಲಿ ಹೂ ಬಿಟ್ಟರೆ ನವೆಂಬರ್‌ನಲ್ಲಿ ಕಾಯಿಗಳಾಗುತ್ತವೆ. ಮರಳಿ ಜನವರಿಯಲ್ಲಿ ಬಿಡುವ ಹೂಗಳಿಂದ ಏಪ್ರಿಲ್‌ ತಿಂಗಳಲ್ಲಿ ಕಾಯಿಗಳು ಸಿಗುತ್ತವೆ. ಆಕಾರದಲ್ಲಿ ಹೊನ್ನೆಮರದ ಕಾಯಿಗಳಂತಿರುವ ಇವುಗಳನ್ನು ಶಿವಪ್ರಸಾದರು ಕೊಯ್ಯುವುದಿಲ್ಲ. ರುದ್ರಾಕ್ಷಿ ಮರ ತುಂಬ, ಮೃದು, ಮಾತ್ರವಲ್ಲ; ಎತ್ತರ ಬೆಳೆದಂತೆ ಕೆಳಭಾಗದ ಕೊಂಬೆಗಳು ಕಡಿಮೆಯಾಗುತ್ತವೆ. ಹಣ್ಣಾದಾಗ ಹಸಿರು ವರ್ಣದ ಕಾಯಿ ಹಳದಿಯಾಗುತ್ತದೆ. ಅವರು ಕೆಳಗೆ ಬಿದ್ದುದನ್ನಷ್ಟೇ ಹೆಕ್ಕುತ್ತಾರೆ.

    ಹಣ್ಣುಗಳನ್ನು ನೀರಿನಲ್ಲಿ ಹಾಕಿಡುವುದರಿಂದ ಸಿಪ್ಪೆ ಕೊಳೆಯುತ್ತದೆ.
ಬ್ರಷ್‌ ಮೂಲಕ ಸಿಪ್ಪೆಯ ಅಂಶಗಳನ್ನು ತೆಗೆದು ಶುಚಿ ಮಾಡುತ್ತಾರೆ. ಬಳಿಕ ಅದರ ಮುಖಗಳನ್ನು ನೋಡಿ ವರ್ಗೀಕರಿಸುತ್ತಾರೆ. ಐದು ಮುಖದ್ದು ಅತ್ಯಧಿಕವಾಗಿ ಸಿಗುತ್ತದೆ. ಆರು ಮುಖದ್ದು ಒಂದು ದೊರಕಿದೆ. ನಾಲ್ಕು ಹಾಗೂ ಮೂರು ಮುಖದ್ದು ಒಂದೆರಡು ಲಭಿಸಿದೆ. ಏಕಮುಖದ್ದು ಸಿಕ್ಕಿದರೆ ಸಹಸ್ರಾರು ರೂಪಾಯಿಗೆ ಖರೀದಿಯಾಗುವುದಂತೆ. ರುದ್ರಾಕ್ಷಿಗಳನ್ನು ಹೀಗೆ  ವರ್ಗೀಕರಿಸಿದ ಬಳಿಕ ಪ್ರತ್ಯೇಕವಾಗಿ ಎಲ್ಲವನ್ನೂ ಸಾಸಿವೆಯೆಣ್ಣೆ ತುಂಬಿದ ಶೀಸೆಗಳಲ್ಲಿ ತೊಂಬತ್ತು ದಿನಗಳ ಕಾಲ ಹಾಕಿಡುತ್ತಾರೆ. ಹೀಗೆ ಸಂಸ್ಕರಿಸಿದರೆ ಆ ನಂತರದಲ್ಲಿ ರುದ್ರಾಕ್ಷಿ ಮಾರಾಟಕ್ಕೆ ಸಿದ್ಧ.

Advertisement

    ರುದ್ರಾಕ್ಷಿ ಬೀಜದಿಂದ ಗಿಡವಾಗುವುದು ನನ್ನ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ ಶಿವಪ್ರಸಾದ್‌. ಆದರೆ ಅದರ ಬಲಿತ ಕೊಂಬೆಗಳನ್ನು ಕತ್ತರಿಸಿ ಮಣ್ಣು ತುಂಬಿದ ಪಾಲಿಥಿನ್‌ ತೊಟ್ಟೆಯಲ್ಲಿ ನೆಟ್ಟರೆ ಚಿಗುರಿ, ನೆಡಲು ಯೋಗ್ಯವಾದ ಗಿಡವಾಗುತ್ತದಂತೆ.

(ದೂರವಾಣಿ:04998/225167)

– ಪ,ರಾಮಕೃಷ್ಣ ಶಾಸ್ತ್ರೀ

Advertisement

Udayavani is now on Telegram. Click here to join our channel and stay updated with the latest news.

Next