ಬೆಂಗಳೂರು: ಮೆಟ್ರೋ ರೈಲಿನಲ್ಲಿ ಮಹಿಳಾ ಐಟಿ ಉದ್ಯೋಗಿಯ ಮೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ಯುವಕನನ್ನು ಮೆಟ್ರೋ ಸಿಬ್ಬಂದಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಲೋಕೇಶ್ (30) ಬಂಧಿತ. 22 ವರ್ಷದ ಮಹಿಳಾ ಟೆಕಿಯೊಬ್ಬರು ಗುರುವಾರ ಬೆಳಗ್ಗೆ 9.40 ಗಂಟೆಗೆ ರಾಜಾಜಿನಗರ ನಿಲ್ದಾಣದಲ್ಲಿ ಮೆಟ್ರೋ ರೈಲು ಹತ್ತಿದ್ದರು. ನಾಡಪ್ರಭು ಕೆಂಪೇಗೌಡ ನಿಲ್ದಾಣಕ್ಕೆ ರೈಲು ಸಮೀಪಿಸುತ್ತಿದ್ದಂತೆ ಪ್ರಯಾಣಿಕರ ಜನಸಂದಣಿ ಹೆಚ್ಚಾಗಿತ್ತು. ಆ ವೇಳೆ ಆರೋಪಿ ಲೋಕೇಶ್ ಯುವತಿಯ ಹಿಂಬದಿಯಲ್ಲಿ ನಿಂತು ಮೈ ಮುಟ್ಟಿ ಅನುಚಿತವಾಗಿ ವರ್ತಿಸಿದ್ದ.
ಜನ ಸಂದಣಿ ಇರುವ ಹಿನ್ನೆಲೆಯಲ್ಲಿ ಒತ್ತಡದಲ್ಲಿ ಆಗಿರಬಹುದು ಎಂದುಕೊಂಡು ಯುವತಿ ಮೊದಲು ಸುಮ್ಮನಿದ್ದರು. ಆರೋಪಿಯು ಮತ್ತೆ ಇದೇ ರೀತಿ ವರ್ತಿಸಿದಾಗ ಯುವತಿ ರೈಲಿನೊಳಗೆ ಜೋರಾಗಿ ಕೂಗಿ ಪ್ರತಿಭಟಿಸಿದ್ದಾರೆ. ಈ ವೇಳೆ ರೈಲು ಮೆಜೆಸ್ಟಿಕ್ ನಿಲ್ದಾಣಕ್ಕೆ ತಲುಪಿದ್ದು, ಆರೋಪಿ ಲೋಕೇಶ್ ಇಳಿದು ಓಡಲು ಪ್ರಾರಂಭಿಸಿದ್ದಾನೆ. ಆಗ ಯುವತಿ ಮತ್ತು ಸಾರ್ವಜನಿಕರು ಜೋರಾಗಿ ಕೂಗಿ ಆತನನ್ನು ಹಿಡಿಯುವಂತೆ ಸೂಚಿಸಿದ್ದರು. ಇದನ್ನು ಗಮನಿಸಿದ ಮೆಟ್ರೋ ಭದ್ರತಾ ಸಿಬ್ಬಂದಿ ಲೋಕೇಶ್‌ನನ್ನು ಹಿಡಿದು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಆರೋಪಿಯ ಹಳೆ ಕೃತ್ಯ ಬಯಲು: ಯುವತಿ ನೀಡಿದ ದೂರು ದಾಖಲಿಸಿಕೊಂಡ ಪೊಲೀಸರು ಲೋಕೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಲೋಕೇಶ್ ಕಳೆದ ಏಪ್ರಿಲ್‌ನಲ್ಲಿ ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬರ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದ. ಆ ವೇಳೆ ಪೊಲೀಸರು ಆತನಿಂದ 20 ಮೊಬೈಲ್, 1 ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದರು. ಬಳಿಕ ಜಾಮೀನಿನ ಮೇಲೆ ಹೊರ ಬಂದಿದ್ದ ಎಂಬ ಸಂಗತಿ ವಿಚಾರಣೆಯಿಂದ ಗೊತ್ತಾಗಿದೆ.
ಪ್ರಯಾಣಿಕರ ಸುರಕ್ಷತೆಯೇ ನಿಗಮದ ಮೊದಲ ಆದ್ಯತೆ: ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆಯಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಹೇಳಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ನಮ್ಮ ಪ್ರಯಾಣಿಕರಿಗೆ ಸಹಾಯ ಮಾಡಲು ನಮ್ಮ ಮೆಟ್ರೋ ಸಿದ್ಧವಾಗಿದೆ. ಭದ್ರತಾ ಸಿಬ್ಬಂದಿಯು ಯಾವಾಗಲೂ ಜಾಗರೂಕರಾಗಿದ್ದು, ತುರ್ತು ಸಂದರ್ಭದಲ್ಲಿ ಯಾವುದೇ ಸಹಾಯಕ್ಕಾಗಿ ಸಿದ್ಧರಾಗಿರುತ್ತಾರೆ ಎಂದು ಹೇಳಿದೆ. ಪ್ರಯಾಣಿಕರು ನಿಯಂತ್ರಣ ಕೇಂದ್ರದ ದೂ.ಸಂ. 080 2519 1208, 080 2216 2258 / 2208 ಮತ್ತು ಸಹಾಯವಾಣಿ 1800-425-12345ಗೆ ಸಂಪರ್ಕಿಸಬಹುದು. ಹೆಚ್ಚುವರಿಯಾಗಿ, ತುರ್ತು ಸಮಯದಲ್ಲಿ ಪ್ರಯಾಣಿಕರು ಸಹಾಯ ಪಡೆಲು ಎಲ್ಲ ಮೆಟ್ರೋ ಬೋಗಿಯಲ್ಲಿ (ಪ್ರತಿ ಬೋಗಿಯಲ್ಲಿ-4) ಅಳವಡಿಸಿರುವ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಬಳಸಿ, ರೈಲು ನಿರ್ವಾಹಕರೊಂದಿಗೆ ಸಂವಹನ ನಡೆಸಬಹುದು. ಇದರಿಂದಾಗಿ, ಸಮೀಪಿಸುತ್ತಿರುವ ಅಥವಾ ಮುಂದಿನ ನಿಲ್ದಾಣದಲ್ಲಿ ಸಹಾಯ ಒದಗಿಸಲು ಅನುಕೂಲವಾಗುತ್ತದೆ ಎಂದು ನಿಗಮ ಹೇಳಿದೆ.
ಹಿಂದೆಯೂ ಮೆಟ್ರೋದಲ್ಲಿ ನಡೆದಿದ್ದವು ಇಂತಹ ಕೃತ್ಯ:
ಕಳೆದ ನವೆಂಬರ್‌ನಲ್ಲಿ ಮೆಟ್ರೋ ನಿಲ್ದಾಣದಲ್ಲಿ ಕಾಲೇಜು ಯುವತಿಯೊಬ್ಬಳಿಗೆ ಯುವಕನೊಬ್ಬ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿತ್ತು. ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದರು.
ಸೆಪ್ಟೆಂಬರ್‌ನಲ್ಲಿ ನಗರದ ಪ್ರತಿಷ್ಠಿತ ಕಾಲೇಜೊಂದರ 20 ವರ್ಷದ ವಿದ್ಯಾರ್ಥಿನಿಗೆ ಮೆಟ್ರೋದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ದಾಖಲಾಗಿತ್ತು.