ಜೇವರ್ಗಿ: ಕಳೆದ ಎರಡ್ಮೂರು ವರ್ಷಗಳಿಂದ ಭೀಮಾನದಿ ತೀರದಲ್ಲಿ ವ್ಯಾಪಕವಾಗಿ ನಡೆದ ಅಕ್ರಮ ಮರಳುಗಾರಿಕೆಯಿಂದ ಭೀಮಾನದಿಈಗ ಬರಡಾಗಿ ನದಿ ತೀರದ ಗ್ರಾಮಗಳಲ್ಲಿ ಗಂಭೀರವಾದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ತಾಲೂಕಿನ ರದ್ದೇವಾಡಗಿ, ಕೋಳಕೂರ ಸೇರಿದಂತೆ 40ಕ್ಕೂ ಹೆಚ್ಚು ಗ್ರಾಮಗಳಲ್ಲಿ ವ್ಯಾಪಕವಾಗಿ ಅಕ್ರಮ ಮರಳುಗಾರಿಕೆ ನಡೆದ ಹಿನ್ನೆಲೆಯಲ್ಲಿಯೇ ಭೀಮಾ ನದಿ ಬತ್ತಿ ಹೋಗಿ ಈಗ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ತಾಲೂಕಿನ 40ಕ್ಕೂ ಅಧಿ ಕ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿ ಜನರು ನಿತ್ಯ ಹೈರಾಣಾಗುತ್ತಿದ್ದಾರೆ.
ಕೊಡ ಹಿಡಿದುಕೊಂಡು ಚಿಕ್ಕ ಚಿಕ್ಕ ಮಕ್ಕಳು, ಮಹಿಳೆಯರು ಕೆಂಡದಂತಹ ಬಿಸಿಲಿನ ನಡುವೆ ನೀರಿಗಾಗಿ ಅಲೆದಾಡುವಂತಹ ಭೀಕರ ಪರಿಸ್ಥಿತಿ ಬಂದೊದಗಿದೆ. ಅದರಲ್ಲೂ ಕಳೆದ ಒಂದು ತಿಂಗಳಿನಿಂದ ಜಿಪಂ ಸದಸ್ಯ ಶಿವರಾಜ ಪಾಟೀಲ ಅವರ ಸ್ವಗ್ರಾಮ ರದ್ದೇವಾಡಗಿಯಲ್ಲಿ ಹನಿ ನೀರಿಗೂ ಜನರು ಪರಿತಪಿಸುತ್ತಿದ್ದಾರೆ.
ಕಾಟಾಚಾರಕ್ಕೆ ಅಧಿಕಾರಿಗಳು ನಿತ್ಯ ಒಂದು ಟ್ಯಾಂಕರ್ ನೀರು ಕಳುಹಿಸಿ ಕೈ ಕಟ್ಟಿ ಕುಳಿತುಕೊಳ್ಳುತ್ತಿದ್ದಾರೆ. ಗ್ರಾಮದಲ್ಲಿ 2000ಕ್ಕೂ ಅ ಧಿಕ ಜನಸಂಖ್ಯೆ ಇದ್ದು, ಪಟ್ಟಣದಿಂದ ಕೇವಲ 5 ಕಿಮೀ ದೂರದಲ್ಲಿದೆ. ಕಳೆದ ಕೆಲ ವರ್ಷಗಳಿಂದ ಗ್ರಾಮದ ಭೀಮಾ ತೀರದಲ್ಲಿ ವ್ಯಾಪಕವಾಗಿ ಮರಳು ಲೂಟಿಯಾದ ಹಿನ್ನೆಲೆಯಲ್ಲಿ ಎಂದೂ ಬತ್ತದ ಭೀಮಾನದಿ ಸಂಪೂರ್ಣವಾಗಿ ಬತ್ತಿ ಹೋಗಿದೆ.
ಇದರಿಂದ ಗ್ರಾಮಸ್ಥರು ಪಕ್ಕದ 4 ಕಿಮೀ ದೂರದ ಕೋಳಕೂರ ಹತ್ತಿರದ ಕೊಳವೆ ಬಾವಿಯಿಂದ ಸೈಕಲ್, ದ್ವಿಚಕ್ರವಾಹನ, ಎತ್ತಿನ ಬಂಡಿಗಳಲ್ಲಿ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಗಲು ರಾತ್ರಿ ಎನ್ನದೇ ಕೊಡ ನೀರಿಗಾಗಿ ಅಲೆದಾಡುತ್ತಿದ್ದಾರೆ. ಕೊಳವೆ ಬಾವಿಗಳು, ತೆರೆದ ಬಾವಿಗಳು, ತೋಟದಲ್ಲಿನ ಬಾವಿ ಅರಸಿ ಜನರು ತಮ್ಮ ಮಕ್ಕಳೊಂದಿಗೆ ರಾತ್ರಿ, ಬಿಸಿಲು ಎನ್ನದೇ ತೆರಳುತ್ತಿರುವ ದೃಶ್ಯ ಗೋಚರಿಸುತ್ತದೆ.
ಅಲ್ಲದೇ ಕೋಳಕೂರ ಗ್ರಾಮದಲ್ಲು ನೀರಿನ ಸಮಸ್ಯೆ ಎದುರಾಗಿದೆ. ಕೂಡಲೇ ತಾಲೂಕು ಆಡಳಿತ ಎರಡು ಗ್ರಾಮಗಳಿಗೆ ನಿತ್ಯ ಸೂಕ್ತ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡುವುದರ ಜತೆಗೆ ಹೊಸ ಕೊಳವೆ ಬಾವಿ ಕೊರೆಸಿ ಅನುಕೂಲ ಕಲ್ಪಿಸಿಕೊಡಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
* ವಿಜಯಕುಮಾರ ಎಸ್. ಕಲ್ಲಾ