Advertisement

Valmiki Corp. scam ನಡೆದಿದೆ,ಕಠಿನ ಕ್ರಮ ಎಂದ ಸಿಎಂ: ಸದನದ ಬಾವಿಯಲ್ಲಿ ಕೋಲಾಹಲ

08:01 PM Jul 19, 2024 | Team Udayavani |

ಬೆಂಗಳೂರು: ಕರ್ನಾಟಕ ವಿಧಾನಸಭೆಯಲ್ಲಿ ಶುಕ್ರವಾರ ತೀವ್ರ ಗದ್ದಲಕ್ಕೆ ಸಾಕ್ಷಿಯಾಗಿದ್ದು, ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಶಾಸಕರು ಒಂದಾಗಿ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದು ಮಹರ್ಷಿ ವಾಲ್ಮೀಕಿ ನಿಗಮ ಹಗರಣ ಮತ್ತು ಮುಡಾ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

Advertisement

ಸದನದ ಬಾವಿಗಿಳಿದ ಪ್ರತಿಪಕ್ಷಗಳ ಶಾಸಕರು ನಿರಂತರ ಘೋಷಣೆಗಳನ್ನು ಕೂಗಿದರು. ಈ ವೇಳೆ ಎದ್ದು ನಿಂತ ಸಿಎಂ ಸಿದ್ದರಾಮಯ್ಯ ಅವರು ಸರ್ಕಾರವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು, ಆದರೆ ಹಗರಣವು ನಿಜವಾಗಿಯೂ ನಡೆದಿದೆ ಎಂದು ಒಪ್ಪಿಕೊಂಡು, ತಪ್ಪಿತಸ್ಥರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ವಿರೋಧ ಪಕ್ಷವನ್ನು “ಭ್ರಷ್ಟಾಚಾರದ ಪಿತಾಮಹ” ಎಂದು ಕರೆದ ಸಿಎಂ ತಮ್ಮ ಅಧಿಕಾರಾವಧಿಯಲ್ಲಿ, ಅದರಲ್ಲೂ ವಿಶೇಷವಾಗಿ ಬಿಜೆಪಿಯ ಆಪಾದಿತ ಹಗರಣಗಳ ಪಟ್ಟಿಯನ್ನು ನೀಡಿ ವಿಚಾರ ತಿರುಗಿಸಲು ಪ್ರಯತ್ನಿಸಿದರು. ನಮ್ಮ ಸರ್ಕಾರವು ತನಿಖೆಗೆ ಒಳಪಡಿಸಿ ತಪ್ಪು ಮಾಡಿದವರನ್ನು ಜೈಲಿಗೆ ಕಳುಹಿಸುವ ಮೂಲಕ ಬೆಲೆ ತೆರುವಂತೆ ಮಾಡುವುದನ್ನು ಖಚಿತಪಡಿಸುತ್ತದೆ ಎಂದರು.

ರಾಜೀನಾಮೆಯ ಬೇಡಿಕೆಯನ್ನು ಪ್ರಶ್ನಿಸಿ’ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ನಡೆದಿರುವ ಅಕ್ರಮಗಳ ಹೊಣೆಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಹಿಸುತ್ತಾರೆಯೇ? ಬ್ಯಾಂಕುಗಳು ಹಣಕಾಸು ಸಚಿವಾಲಯದ ಅಡಿಯಲ್ಲಿ ಬರುವುದರಿಂದ ರಾಜೀನಾಮೆ ನೀಡುತ್ತಾರೆಯೇ? ಎಂದು ಪ್ರಶ್ನಿಸಿದರು.

”ನನಗೆ ಹಾಗೂ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಆರೋಪ ಮಾಡಲಾಗುತ್ತಿದೆ. ಎಸ್ ಟಿ ಸಮುದಾಯದ ಹಣವನ್ನು ಲೂಟಿ ಮಾಡಲಾಗಿದೆ ಎಂದು ಆರೋಪಿಸುತ್ತಿದ್ದಾರೆ . ಇದು 187.33 ಕೋಟಿ ರೂ.ಹಗರಣ ಅಲ್ಲ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ಹೆಚ್ಚಿನ ಮೊತ್ತ ಹೋಗಿದೆ, ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ 89.63 ಕೋಟಿ ರೂ. ಹೋಗಿದ್ದು ಅದನ್ನು ವಸೂಲಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

“ಅಪರಾಧಿಗಳು ಯಾರೇ ಆಗಿರಲಿ, ಕಳ್ಳರು ಯಾರೇ ಆಗಿರಲಿ, ಲೂಟಿಕೋರರು ಯಾರೇ ಆಗಿರಲಿ, ಅವರಿಗೆ ಶಿಕ್ಷೆಯಾಗುವುದನ್ನು ನಾವು ಖಚಿತಪಡಿಸುತ್ತೇವೆ. ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಭ್ರಷ್ಟಾಚಾರದೊಂದಿಗೆ ಯಾವುದೇ ರಾಜಿ ಇಲ್ಲ. ಭ್ರಷ್ಟಾಚಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಪ್ರತಿಪಕ್ಷಗಳು ತಮ್ಮ ಅಧಿಕಾರಾವಧಿಯಲ್ಲಿ ನಡೆದಿರುವ  ತಪ್ಪುಗಳು, ಕಳ್ಳತನ, ಲೂಟಿ ಮತ್ತು ಭ್ರಷ್ಟಾಚಾರವನ್ನು ಮರೆಮಾಚಲು ನನ್ನ ಸರ್ಕಾರದ ವಿರುದ್ಧ ಆರೋಪ ಮಾಡುತ್ತಿವೆ’ ಎಂದು ಸಿಎಂ ಕಿಡಿ ಕಾರಿದರು.

ಪ್ರತಿಪಕ್ಷ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಸರಕಾರ “ಲೂಟಿಕೋರ” “ಎಸ್‌ಸಿ/ಎಸ್‌ಟಿ ಜನರಿಗೆ ಅನ್ಯಾಯ” ಎಂದು ಆರೋಪಿಸಿ ಘೋಷಣೆಗಳನ್ನು ಕೂಗಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿದರು.

”ಆರೋಪದ ಹಿಂದಿನ ಸತ್ಯಾಂಶವನ್ನು ನಾವು ಬಹಿರಂಗಪಡಿಸುತ್ತೇವೆ. ರಾಜ್ಯದ ಏಳು ಕೋಟಿ ಜನ ಸತ್ಯವನ್ನು ತಿಳಿಯುತ್ತಾರೆ ಎಂದು ಪ್ರತಿಪಕ್ಷಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅವರು ಸದನದ ಬಾವಿಗೆ ಬರುತ್ತಿದ್ದೀರಿ. ಜನರು ನಿಮ್ಮನ್ನು ಕಳ್ಳರು ಎಂದು ನಿರ್ಧರಿಸಿಯೇ ವಿರೋಧ ಪಕ್ಷದಲ್ಲಿ ಕೂರಿಸಿದ್ದಾರೆ. ಕಾಂಗ್ರೆಸ್ 136 ಶಾಸಕರೊಂದಿಗೆ ಅಧಿಕಾರದಲ್ಲಿದ್ದು ಪ್ರತಿಪಕ್ಷಗಳ ಸುಳ್ಳು ಆರೋಪಗಳಿಗೆ ಹೆದರುವುದಿಲ್ಲ’ ಎಂದು ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next