ಕೋಲ್ಕತಾ: ಪಶ್ಚಿಮಬಂಗಾಳ ವಿಧಾನಸಭೆಯ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲ ಜಗದೀಪ್ ಧನ್ಕರ್ ಅವರು ಭಾಷಣ ಪ್ರಾರಂಭಿಸಿದ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಶಾಸಕರು ಚುನಾವಣೆ ನಡೆದ ನಂತರ ನಡೆದ ಹಿಂಸಾಚಾರದ ಫೋಟೋಗಳನ್ನು ಪ್ರದರ್ಶಿಸಿ ಕೋಲಾಹಲವೆಬ್ಬಿಸಿದ ಪರಿಣಾಮ ಗವರ್ನರ್ ಭಾಷಣವನ್ನು ಪೂರ್ಣಗೊಳಿಸದೇ ಹೊರನಡೆದ ಘಟನೆ ಶುಕ್ರವಾರ (ಜುಲೈ 02) ನಡೆದಿದೆ.
ಇದನ್ನೂ ಓದಿ:20 -25 ಪರ್ಸೆಂಟ್ ಬಿಜೆಪಿ ಸರ್ಕಾರದಲ್ಲಿ ಲಂಚ ಇಲ್ಲದೇ ಏನು ಆಗುವುದಿಲ್ಲ: ಸಿದ್ದರಾಮಯ್ಯ
ಪಶ್ಚಿಮಬಂಗಾಳದಲ್ಲಿ ಮೂರನೇ ಬಾರಿಗೆ ಅಧಿಕಾರಕ್ಕೇರಿದ ನಂತರ ನಡೆದ ಮೊದಲ ಅಧಿವೇಶನದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಮತ್ತೊಂದೆಡೆ ವಿಪಕ್ಷ ಬಿಜೆಪಿ ಮತ್ತು ರಾಜ್ಯಪಾಲರ ಹಾಗೂ ಚುನಾವಣೆ ಬಳಿಕ ನಡೆದ ಹಿಂಸಾಚಾರದ ವಿಷಯದಲ್ಲಿ ಭಾರೀ ಚರ್ಚೆ, ಕೋಲಾಹಲ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು.
ಇಂದು ಅಧಿವೇಶನ ಆರಂಭವಾಗಿ ರಾಜ್ಯಪಾಲರಾದ ಜಗದೀಪ್ ಅವರು ಭಾಷಣ ಆರಂಭಿಸುತ್ತಿದ್ದಂತೆಯೇ ವಿಪಕ್ಷ ಬಿಜೆಪಿ ಶಾಸಕರು ಹಿಂಸಾಚಾರದ ಫೋಟೋಗಳನ್ನು ಪ್ರದರ್ಶಿಸಿ, ಜೈಶ್ರೀರಾಮ್ ಎಂದು ಘೋಷಣೆ ಕೂಗಿದ್ದ ಪರಿಣಾಮ ಕೋಲಾಹಲ ನಡೆದಿತ್ತು. ಏತನ್ಮಧ್ಯೆ ರಾಜ್ಯಪಾಲರು ಭಾಷಣವನ್ನು ಮೊಟಕುಗೊಳಿಸಿ ತೆರಳಿರುವುದಾಗಿ ವರದಿ ತಿಳಿಸಿದೆ.
ಪಶ್ಚಿಮಬಂಗಾಳ ವಿಧಾನಸಭೆಯ ವಿಪಕ್ಷ ನಾಯಕ ಸುವೇಂದು ಅಧಿಕಾರಿ ಮಾತನಾಡಿ, ನಾವು ಚುನಾವಣೆಯಲ್ಲಿ 77 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದೇವೆ. ರಾಜ್ಯಪಾಲರ ಭಾಷಣದಲ್ಲಿ ಚುನಾವಣಾ ನಂತರ ನಡೆದ ಹಿಂಸಾಚಾರದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇದು ರಾಜ್ಯ ಸರ್ಕಾರದ ಪರವಾದ ಭಾಷಣವಾಗಿದ್ದರಿಂದ ನಾವು ವಿರೋಧ ವ್ಯಕ್ತಪಡಿಸಿದ್ದೇವೆ. ನಾವು ರಾಜ್ಯಪಾಲರನ್ನು ಗೌರವಿಸುತ್ತೇವೆ. ಅವರು ಮಮತಾ ಬ್ಯಾನರ್ಜಿ ಸಚಿವ ಸಂಪುಟ ಬರೆದುಕೊಟ್ಟ ಭಾಷಣವನ್ನು ಓದಿದ್ದಾರೆ. ಹೀಗಾಗಿ ನಾವು ಸಾವನ್ನಪ್ಪಿರುವ ನಮ್ಮ ಕಾರ್ಯಕರ್ತರ ಪೋಟೋಗಳನ್ನು ಹಿಡಿದು ಪ್ರತಿಭಟಿಸಿದ್ದೇವೆ ಎಂದು ತಿಳಿಸಿದ್ದಾರೆ.