ಬೆಳ್ತಂಗಡಿ: ಕಳೆದ ಮೂರು ತಿಂಗಳಿಂದ ರಬ್ಬರ್ ದರ ಚೇತರಿಕೆಯ ಹಾದಿಯನ್ನು ಕಂಡುಕೊಂಡಿದ್ದು, ಎಪ್ರಿಲ್ ಆರಂಭದಲ್ಲಿ ಕೆ.ಜಿ.ಗೆ 195 ರೂ. ಇದ್ದ ಧಾರಣೆ ನಿರೀಕ್ಷಿಸಿದಂತೆ 200 ರೂ. ತಲುಪುತ್ತಿದೆ.
ಜಾಗತಿಕ ಮಟ್ಟದಲ್ಲಿ ರಬ್ಬರ್ ಇಳುವರಿ ಕೈಕೊಟ್ಟ ಪರಿಣಾಮ 1ಎಕ್ಸ್ ಗ್ರೇಡ್ ರಬ್ಬರ್ ಕೆ.ಜಿ. ಧಾರಣೆ 218 ರೂ. ತಲುಪಿದೆ.
ಎಪ್ರಿಲ್‌ನಲ್ಲಿ ದರ ಸರಾಸರಿ ಏರಿಕೆ ಕಂಡಿದ್ದು, 200 ನಿರೀಕ್ಷೆ ಹುಟ್ಟಿಸಿದ್ದು ಮಾತ್ರವಲ್ಲದೆ ನಿಜವಾಗಿಸುತ್ತಿದೆ.
ಎ. 8ಕ್ಕೆ ರಬ್ಬರ್ ಕೆ.ಜಿ. ಒಂದಕ್ಕೆ 1ಎಕ್ಸ್ ಗ್ರೇಡ್‌ಗೆ 195 ರೂ. ತಲುಪಿತ್ತು. ಬಳಿಕ 200 ರೂ. ಗಡಿ ದಾಟಿ ಚೇತೋಹರಿಯಾಗುತ್ತಲೆ ಜೂ. 8ಕ್ಕೆ 1ಎಕ್ಸ್-217 ಹಾಗೂ 3-192, 4-192, 5-185, ಲಾಟ್-175, ಎಸ್ |-117, ಎಸ್ ||-109 ರೂ. ನೊಂದಿಗೆ ಸ್ಥಿರತೆ ಕಾಯ್ದುಕೊಂಡಿದೆ. ಸ್ಥಳೀಯವಾಗಿ 1ಎಕ್ಸ್ ಬಹಳ ವಿರಳವಾಗಿದ್ದು ದೊಡ್ಡ ದೊಡ್ಡ ಎಸ್ಟೇಟ್‌ನಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಉಳಿದಂತೆ ಸ್ಥಳೀಯವಾಗಿ 3-192 ಮತ್ತು 4-192, ರಬ್ಬರ್ ಬೆಳೆ ಬಹುಪಾಲು ಬೆಳೆಯಲಾಗುತ್ತದೆ.
ಆದರೂ 2021-22ರಲ್ಲಿ 120 ರೂ.ತಲುಪಿದ್ದ ರಬ್ಬರ್ ಧಾರಣೆ ಕಾಲ ಕ್ರಮೇಣ 150ರ ಗಡಿಯಲ್ಲೇ ಇದ್ದು, ಕೃಷಿಕರನ್ನು ರಬ್ಬರ್ ಬೆಳೆಯಿಂದಲೇ ವಿಮುಖಗೊಳಿಸುವಂತಿತ್ತು. ಪ್ರಸಕ್ತ ಉತ್ತಮ ಧಾರಣೆ ಕಂಡುಕೊಂಡ ಪರಿಣಾಮ ರಬ್ಬರ್ ಬೆಳೆಗಾರರು ಸಂತಸದಲ್ಲಿದ್ದಾರೆ. ಆದರೆ ಈ ಅವಧಿಯಲ್ಲಿ ರಬ್ಬರ್ ಇಳುವರಿಯೂ ಇಲ್ಲದಿರುವುದರಿಂದ ಈಗಾಗಲೆ ಶೇಖರಿಸಿಟ್ಟ ರಬ್ಬರ್ ಬೆಳೆಗಾರರು ಬಂಪರ್ ಲಾಭ ಗಳಿಸಿದ್ದಾರೆ.
ರಬ್ಬರ್ ಇಳುವರಿಗೆ ತಯಾರಿ ಈ ಬಾರಿ ತಾಪಮಾನ ಏರಿಕೆ ಯಿಂದ ದೇಶದಲ್ಲಿ ರಬ್ಬರ್ ಬೆಳೆ ಇಳುವರಿ ಕ್ಷೀಣಿಸಿತ್ತು. ರಬ್ಬರ್ ಬೆಳೆಯುವ ಇತರ ದೇಶಗಳಲ್ಲೂ ಇಳುವರಿ ಹೊಡೆತದಿಂದ ಧಾರಣೆ ಏರಿಕೆಯಾಗಿದೆ. ಪೂರ್ವ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಬಾರದ್ದರಿಂದ ರಬ್ಬರ್ ಟ್ಯಾಪಿಂಗ್ ವಿಳಂಬವಾಗಿತ್ತು. ಪ್ರಸಕ್ತ ಮುಂಗಾರು ಆರಂಭಗೊಂಡಿರುವುದರಿಂದ ಈಗಾ ಗಲೇ ಎಲ್ಲೆಡೆ ರಬ್ಬರ್ ಮರದ ಸುತ್ತಲಿನ ಕಳೆ ತೆಗೆದು ಪ್ಲಾಸ್ಟಿಕ್ ಅಳವಡಿಕೆಗೆ ರೈತರು ಮುಂದಾಗಿದ್ದಾರೆ.