ರಾಯಚೂರು: ಆಧುನೀಕರಣ ನಿಮಿತ್ತ ದುರಸ್ತಿಗೊಂಡಿದ್ದ ರಾಯಚೂರು ಶಾಖೋತ್ಪನ್ನ ಕೇಂದ್ರದ ಎರಡನೇ ಘಟಕ ಗುರುವಾರ ಪುನಾರಂಭಗೊಂಡಿದೆ.
35 ಕೋಟಿ ರೂ. ವೆಚ್ಚದಲ್ಲಿ ಘಟಕ ಆಧುನೀಕರಣಗೊಳಿಸಲಾಗಿದೆ. 25 ವರ್ಷಗಳಷ್ಟು ಹಳೆಯ ಘಟಕ ಇದಾಗಿದ್ದು, ವಿದ್ಯುತ್ ಉತ್ಪಾದನೆಯಲ್ಲಿ ತಾಂತ್ರಿಕ ಸಮಸ್ಯೆ ಎದುರಿಸುತ್ತಿತ್ತು.
210 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿದ ಘಟಕ ಸಾಕಷ್ಟು ತೊಂದರೆಗೆ ತುತ್ತಾಗುತ್ತಿತ್ತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ವಿದ್ಯುತ್ ಉತ್ಪಾದಿಸದ ಹಿನ್ನೆಲೆಯಲ್ಲಿ 156 ದಿನಗಳ ಹಿಂದೆ ಆಧುನೀಕರಣ ಕೆಲಸ ಕೈಗೊಳ್ಳಲಾಗಿತ್ತು. ಈಗ ಅಗತ್ಯ ವಸ್ತುಗಳನ್ನು ಬದಲಿಸಲಾಗಿದೆ. ಆಧುನಿಕ ತಂತ್ರಜ್ಞಾನದಿಂದ ತಯಾರಿಸಿದ ಕೆಲ ಯಂತ್ರಗಳನ್ನು ಅಳವಡಿಸಲಾಗಿದೆ. ಈ ಹಿಂದೆ ಘಟಕವನ್ನು ಮಾನವ ಸಂಪನ್ಮೂಲದಿಂದ ನಿರ್ವಹಣೆ ಮಾಡಲಾಗುತ್ತಿತ್ತು. ಈಗ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿದ್ದು, ಕಂಪ್ಯೂಟರ್ ಮೂಲಕವೇ ನಿಯಂತ್ರಿಸಬಹುದಾಗಿದೆ. ಇನ್ನು ಮುಂದಿನ 15 ವರ್ಷಗಳವರೆಗೆ ಘಟಕ ಸುಗಮವಾಗಿ ವಿದ್ಯುತ್ ಉತ್ಪಾದಿಸಬಹುದು. ಮೊದಲನೇ ಘಟಕವನ್ನು 2013ರಲ್ಲೇ ಆಧುನೀಕರಣಗೊಳಿಸಲಾಗಿತ್ತು ಎಂದು ಆರ್‌ಟಿಪಿಎಸ್ ವ್ಯವಸ್ಥಾಪಕ ನಿರ್ದೇಶಕ ಆರ್.
ವೇಣುಗೋಪಾಲ್ ತಿಳಿಸಿದ್ದಾರೆ.