ಮಂಗಳೂರು: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಅರ್ಹರಲ್ಲದ ಬಿಪಿಎಲ್ ಕಾರ್ಡ್‌ದಾರರನ್ನು ಪತ್ತೆ ಮಾಡು ವುದಕ್ಕೆ ಈಗ ಪ್ರಾದೇಶಿಕ ಸಾರಿಗೆ ಕಚೇರಿಯ ನೆರವು ಪಡೆಯಲು ಮುಂದಾಗಿದೆ. ಚತುಷ್ಚಕ್ರ ವಾಹನ ಮಾಲೀಕರ ಪಟ್ಟಿ ಮಾಡಿ ಅನಧಿಕೃತ ಬಿಪಿಎಲ್ ಕಾರ್ಡ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಉದ್ದೇಶಿಸಿದೆ. ಉಡುಪಿಯಲ್ಲಿ ಈಗಾಗಲೇ ಇದು ಆರಂಭವಾಗಿದ್ದು, 169 ಮಂದಿ ಚತುಷ್ಚಕ್ರ ವಾಹನ ಮಾಲೀಕರ ಬಿಪಿಎಲ್ ಕಾರ್ಡ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ದಕ್ಷಿಣ ಕನ್ನಡದ ಜಿಲ್ಲೆಯ ಲ್ಲಿಯೂ ಶೀಘ್ರ ಪ್ರಾರಂಭವಾಗಲಿದೆ. ವಾಹನ ನೋಂದಣಿ ಮಾಡಿಕೊಳ್ಳುವಾಗ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಆಧಾರ್ ಲಿಂಕ್ ಕಡ್ಡಾಯ. ಇದರಿಂದ ಆ ವ್ಯಕ್ತಿಯ ಎಲ್ಲ ಮಾಹಿತಿ ಪಡೆಯುವುದಕ್ಕೆ ಸಾಧ್ಯವಾಗುತ್ತದೆ. ಖಾಸಗಿ ಚತುಷ್ಚಕ್ರ ವಾಹನ ಮಾಲೀಕರ ಮಾಹಿತಿಯನ್ನು ಆರ್‌ಟಿಒದಿಂದ ಪಡೆದುಕೊಂಡರೆ ಅದರಿಂದ ಅವರು ಎಪಿಎಲ್ ಅಥವಾ ಬಿಪಿಎಲ್ ಕಾರ್ಡುದಾರರೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸುಲಭ.
ಪಿಎಫ್, ಆದಾಯ ತೆರಿಗೆ ಸಹಾಯಕ್ಕೆ ಚಿಂತನೆ: ಭವಿಷ್ಯನಿಧಿ ಕಚೇರಿ, ಆದಾಯ ತೆರಿಗೆ ಇಲಾಖೆ ಮುಖಾಂ ತರವೂ ಅನರ್ಹ ಬಿಪಿಎಲ್ ಕಾರ್ಡುಗಳ ಮಾಹಿತಿ ಪಡೆಯಲು ಇಲಾಖೆ ಚಿಂತನೆ ನಡೆಸುತ್ತಿದೆ. ಆದರೆ ಇದರ ಒಟ್ಟು ರೂಪುರೇಷೆಯ ಬಗ್ಗೆ ಇನ್ನಷ್ಟೇ ನಿರ್ಧರಿಸಬೇಕಿದೆ ಎಂದು ಇಲಾ ಖಾಧಿಕಾರಿಗಳು
“ಉದಯವಾಣಿ’ಗೆ ತಿಳಿಸಿದ್ದಾರೆ.
ದ.ಕ 294 ಕುಟುಂಬ ಎಪಿಎಲ್‌ಗೆ: ಬಿಪಿಎಲ್ ಕಾರ್ಡ್ ಹೊಂದಿರುವ ಮಧ್ಯಮ ಮತ್ತು ಶ್ರೀಮಂತ ವರ್ಗದವರು ಎಪಿಎಲ್‌ಗೆ ಪರಿವರ್ತಿಸಿಕೊಳ್ಳಲು ರಾಜ್ಯ ಸರಕಾರ ಸೆ. 30ರ ಗಡುವು ನೀಡಿತ್ತು. ಕಠಿಣ ಕ್ರಮಕ್ಕೆ ಹೆದರಿ ದ.ಕ. ಜಿಲ್ಲೆಯ ಒಟ್ಟು 294 ಕುಟುಂಬಗಳು ಎಪಿಎಲ್‌ಗೆ ಪರಿವರ್ತನೆ ಮಾಡಿಕೊಂಡಿದ್ದಾರೆ. ಇವರಲ್ಲಿ ಮಂಗಳೂರು ಅನೌಪಚಾರಿಕ ಪಡಿತರ ಪ್ರದೇಶದಲ್ಲಿ 8 ಕುಟುಂಬ, ಮಂಗಳೂರು ತಾಲೂಕು 50, ಬೆಳ್ತಂಗಡಿ 56, ಪುತ್ತೂರು 51, ಸುಳ್ಯದ 35 ಕುಟುಂಬಗಳು ಸೇರಿವೆ. ಎರಡು ವರ್ಷಗಳ ಹಿಂದೆ ಬಿಪಿಎಲ್ ಪಡಿತರ ಚೀಟಿ ಹೊಂದಿದ್ದ ಶ್ರೀಮಂತರನ್ನು ಪತ್ತೆ ಹಚ್ಚಿ 4.5 ಲಕ್ಷ ರೂ. ದಂಡ ಸಂಗ್ರಹಿಸಲಾಗಿತ್ತು.
366 ಕುಟುಂಬ ಎಪಿಎಲ್‌ಗೆ: ಉಡುಪಿಯಲ್ಲಿ ಶನಿವಾರದವರೆಗೆ ಬಿಪಿಎಲ್ ಕಾರ್ಡ್ ಹೊಂದಿದ್ದ 366 ಶ್ರೀಮಂತರ ಬಿಪಿಎಲ್ ಕಾರ್ಡ್‌ನ್ನು ರದ್ದು ಪಡಿಸಲಾಗಿದೆ. ಈ ಪೈಕಿ 164 ಕುಟುಂಬಗಳು ಸ್ವಯಂ ಆಗಿ ಹಿಂದಿರುಗಿಸಿದ್ದರೆ, ದೂರು ಬಂದ ಕಾರಣ 3 ಬಿಪಿಎಲ್ ಚೀಟಿಗಳನ್ನು ರದ್ದು ಪಡಿಸಲಾಗಿದೆ. ಆರ್‌ಟಿಒ ಸಹಾಯದೊಂದಿಗೆ ಚತುಷ್ಚಕ್ರ ಹೊಂದಿರುವವರ ಮಾಹಿತಿ ಪಡೆದು 169 ಕುಟುಂಬಗಳ ಬಿಪಿಎಲ್ ಕಾರ್ಡ್‌ನ್ನು ಈಗಾಗಲೇ ರದ್ದು ಪಡಿಸಲಾಗಿದ್ದು, ಪತ್ತೆ ಕಾರ್ಯ ಮುಂದುವರಿಯಲಿದೆ ಎಂದು ಇಲಾಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅನರ್ಹ ಕುಟುಂಬಗಳನ್ನು ಎಪಿಎಲ್ ಕಾರ್ಡ್‌ಗೆ ಪರಿವರ್ತಿಸುವ ಕೆಲಸ ನಡೆಯುತ್ತಿದೆ. ಪರಿವರ್ತಿಸಿಕೊಳ್ಳದೇ ಇದ್ದಲ್ಲಿ ಶಿಕ್ಷೆ ಏನೆಂಬುದರ ಬಗ್ಗೆಯೂ ನಿರ್ಧರಿಸಲಾಗುವುದು. ಒಂದು ವಾರದಲ್ಲಿ ಇದರ ಪರಿಣಾಮಕಾರಿಯಾದ ಕೆಲಸ ಕಾರ್ಯಗಳು ಮತ್ತು ಶಿಕ್ಷೆ ಮುಂತಾದವುಗಳ ವಿಚಾರದ ಬಗ್ಗೆ ಸ್ಪಷ್ಟ ನಿರ್ಧಾರ ತಳೆಯಲಾಗುವುದು.
-ಬಿ.ಟಿ. ಮಂಜುನಾಥನ್, ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ದ.ಕನ್ನಡ
ಈಗಾಗಲೇ ಬಿಪಿಎಲ್ ಕಾರ್ಡ್, ಚತುಷ್ಚಕ್ರ ವಾಹನವಿರುವ 169 ಕುಟುಂಬಗಳ ಕಾರ್ಡ್ ರದ್ದುಪಡಿಸಲಾಗಿದೆ. ಆರ್‌ಟಿಒ ಸಹಕಾರದೊಂದಿಗೆ ಈ ಕಾರ್ಯ ಮುಂದುವರಿಯಲಿದೆ. 1 ಸಾವಿರ ಚ.ಅಡಿ ವಿಸ್ತೀರ್ಣಕ್ಕಿಂತ ಜಾಸ್ತಿ ಇರುವ ಮನೆಗಳ ಪಟ್ಟಿ ನೀಡಲು ಸ್ಥಳೀಯಾಡಳಿತಕ್ಕೆ ತಿಳಿಸಲಾಗಿದೆ. ಭವಿಷ್ಯನಿಧಿ, ಆದಾಯ ತೆರಿಗೆ ಇಲಾಖೆಯ ಸಹಕಾರ ಪಡೆದು ಈ ಪತ್ತೆ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸಲಾಗುವುದು.
-ವಾಸು ಶೆಟ್ಟಿ, ಸಹಾಯಕ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಡುಪಿ
* ಧನ್ಯಾ ಬಾಳೆಕಜೆ