Advertisement

ಆರ್‌ಟಿಇ ಸೀಟು ಸಿಕ್ಕಿದ್ದು ಬರೀ 59 ಮಂದಿಗೆ!

09:44 PM May 14, 2019 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಆರ್‌ಟಿಇನಡಿ ಅರ್ಜಿ ಸಲ್ಲಿಸಿದ್ದ 100 ಮಂದಿ ಪೈಕಿ ಮೊದಲ ಹಂತದ ಲಾಟರಿ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಗೆ ಕೇವಲ 59 ಮಂದಿಗೆ ಮಾತ್ರ ಸೀಟು ಹಂಚಿಕೆ ಆಗಿದೆ. 150 ಕ್ಕೂ ಸೀಟುಗಳು ಉಳಿದುಕೊಂಡಿವೆ. ಆದರೆ, ಜಿಲ್ಲೆಯಲ್ಲಿ 211 ಸೀಟಿಗೆ ಇದುವರೆಗೂ ಆನ್‌ಲೈನ್‌ನಲ್ಲಿ ಅರ್ಜಿ ಹಾಕಿದವರ ಸಂಖ್ಯೆ ಕೇವಲ 100 ಮಂದಿ ಮಾತ್ರ.

Advertisement

ನಿರಾಸೆ ಮೂಡಿಸಿದೆ: ಪ್ರತಿಷ್ಟಿತ ಖಾಸಗಿ ಶಾಲೆಗಳಲ್ಲಿ ಪ್ರತಿ ವರ್ಷ ಶಾಲೆಗೆ ದಾಖಲಾಗುವ ಒಟ್ಟಾರೆ ಮಕ್ಕಳ ಪೈಕಿ ಶೇ.25 ಬಡ ಮಕ್ಕಳನ್ನು ಸರ್ಕಾರವೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ವಾರ್ಷಿಕ ಶುಲ್ಕ ತುಂಬಿ ಆರ್‌ಟಿಇನಡಿ ದಾಖಲಿಸುವ ಪ್ರಕ್ರಿಯೆಗೆ ಈ ಬಾರಿ ಚಾಲನೆ ಕೊಟ್ಟಿದೆ. ಸರ್ಕಾರ ಈ ಬಾರಿ ಜಿಲ್ಲೆಗೆ ಬರೋಬ್ಬರಿ 2,500 ಕ್ಕೂ ಹೆಚ್ಚು ಆರ್‌ಟಿಇ ಸೀಟುಗಳನ್ನು ಕಡಿತಗೊಳಿಸುವ ಮೂಲಕ ಆರ್‌ಟಿಸಿ ಸೀಟು ಸಿಗುವ ನಿರೀಕ್ಷೆಯಲ್ಲಿದ್ದ ಪೋಷಕರಿಗೆ ನಿರಾಸೆ ಮೂಡಿಸಿದೆ. ಜಿಲ್ಲೆಗೆ ನಿಗದಿಪಡಿಸಿರುವ 211 ಸೀಟು ತುಂಬುವುದೂ ಈ ವರ್ಷ ಅನುಮಾನವಾಗಿದೆ.

ಸೀಟು ಹಂಚಿಕೆ: ಕಳೆದ ವರ್ಷ ಚಿಕ್ಕಬಳ್ಳಾಪುರ ಜಿಲ್ಲೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಆರ್‌ಟಿಇನಡಿ ಮಕ್ಕಳನ್ನು ದಾಖಲಿಸಿಕೊಳ್ಳಲು ಬರೋಬ್ಬರಿ 2,751 ಆರ್‌ಟಿಇ ಸೀಟುಗಳನ್ನು ಮಂಜೂರು ಮಾಡಲಾಗಿತ್ತು. ಆದರೆ, ಈ ಬಾರಿ ಕಳೆದ ವರ್ಷದಲ್ಲಿದ್ದ ಒಟ್ಟಾರೆ ಸೀಟುಗಳ ಪೈಕಿ ಬರೋಬ್ಬರಿ 2542 ಸೀಟುಗಳನ್ನು ಮೊಟಕುಗೊಳಿಸಿ ಕೇವಲ 2011 ಸೀಟುಗಳು ಮಾತ್ರ ಜಿಲ್ಲೆಗೆ ಮಂಜೂರಾಗಿದೆ. ಆ ಪೈಕಿ ಇದುವರೆಗೂ 59 ಸೀಟುಗಳು ಮಾತ್ರ ಹಂಚಿಕೆ ಆಗಿವೆ. ಆ ಪೈಕಿ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 18, ಚಿಂತಾಮಣಿ 22, ಗೌರಿಬಿದನೂರು 7, ಗುಡಿಬಂಡೆ 1, ಶಿಡ್ಲಘಟ್ಟ 11 ಸೇರಿ ಒಟ್ಟು 59 ಸೀಟುಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಸೀಟು ಹಂಚಿಕೆ ಮಾಡಲಾಗಿದೆ.

ಪೋಷಕರಿಗೆ ತೀವ್ರ ನಿರಾಶೆ: ಕಳೆದ ವರ್ಷದಲ್ಲಿ ಜಿಲ್ಲೆಗೆ 2.751 ಸೀಟುಗಳನ್ನು ಮಂಜೂರು ಮಾಡಿ ಆ ಪೈಕಿ 1500 ಕ್ಕೂ ಸೀಟುಗಳು ಆರ್‌ಟಿಇನಡಿ ವಿವಿಧ ಶಾಲೆಗಳಲ್ಲಿ ಬಡ ಮಕ್ಕಳು ಪ್ರವೇಶ ಪಡೆದವು. ಆದರೆ, ಈ ಬಾರಿ ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳನ್ನು ಬಲಗೊಳಿಸುವ ನಿಟ್ಟಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಗೆ ಹಲವು ತಿದ್ದುಪಡಿ ತರುವ ಮೂಲಕ ಆರ್‌ಟಿಇ ಸೀಟುಗಳನ್ನು ದೊಡ್ಡ ಪ್ರಮಾಣದಲ್ಲಿ ಕಡಿತಗೊಳಿಸುವ ಮೂಲಕ ಪರೋಕ್ಷವಾಗಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದಕ್ಕೆ ಕಡಿವಾಣ ಹಾಕಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳು ಕಾರ್ಯನಿರ್ವಹಿಸುವ ವ್ಯಾಪ್ತಿಯಲ್ಲಿ ಖಾಸಗಿ ಶಾಲೆಗಳಲ್ಲಿ ಆರ್‌ಟಿಇನಡಿ ಸೀಟು ಪಡೆಯುವ ಸೌಲಭ್ಯಕ್ಕೆ ಸರ್ಕಾರ ಕತ್ತರಿ ಹಾಕಿ ಸರ್ಕಾರಿ ಶಾಲೆಗಳನ್ನು ಉಳಿಸುವ ಪ್ರಯತ್ನಕ್ಕೆ ಮುಂದಾಗಿದೆ.

2011 ಸೀಟು ಮಾತ್ರ ಮಂಜೂರು: ಕಳೆದ 2018-19ನೇ ಸಾಲಿನಲ್ಲಿ ಆರ್‌ಟಿಇನಡಿ ಸಾರ್ವಜನಿಕ ಶಿಕ್ಷಣ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನಲ್ಲಿ ಪರಿಶಿಷ್ಟ ಜಾತಿಗೆ 151, ಪಂಗಡಕ್ಕೆ 33, ಸಾಮಾನ್ಯ ವರ್ಗಕ್ಕೆ 298 ಸೇರಿ ಒಟ್ಟು 482 ಸೀಟುಗಳನ್ನು ನಿಗದಿಪಡಿಸಿತ್ತು. ಆದರೆ, ಈ ಬಾರಿ ಒಟ್ಟು ಪರಿಶಿಷ್ಟ ಜಾತಿಗೆ 4, ಪಂಗಡಕ್ಕೆ 1, ಸಾಮಾನ್ಯ ವರ್ಗಕ್ಕೆ 8 ಸೇರಿ ಒಟ್ಟು 13 ಸೀಟುಗಳನ್ನು ಮಾತ್ರ ಮೀಸಲಿಟ್ಟಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಕಳೆದ ವರ್ಷ ಪರಿಶಿಷ್ಟ ಜಾತಿಗೆ 173, ಪಂಗಡಕ್ಕೆ 37, ಸಾಮಾನ್ಯ ವರ್ಗಕ್ಕೆ 350 ಸೇರಿ ಒಟ್ಟು 560 ಮೀಸಲಿಟ್ಟಿತ್ತು.

Advertisement

ಆದರೆ ಈ ಬಾರಿ ಪರಿಶಿಷ್ಟ ಜಾತಿಗೆ 8, ಪಂಗಡಕ್ಕೆ 2 ಹಾಗೂ ಸಾಮಾನ್ಯ ವರ್ಗಕ್ಕೆ 16 ಸೇರಿ ಒಟ್ಟು 26 ಸೀಟುಗಳನ್ನು ಮಾತ್ರ ಮೀಸಲಿಡಲಾಗಿದೆ. ಚಿಂತಾಮಣಿಗೆ ಕಳೆದ ವರ್ಷ ಪರಿಶಿಷ್ಟ ಜಾತಿಗೆ 240, ಪಂಗಡಕ್ಕೆ 37, ಸಾಮಾನ್ಯಕ್ಕೆ 486 ಸೇರಿ ಒಟ್ಟು 775 ಇತ್ತು. ಈ ಬಾರಿ ಪರಿಶಿಷ್ಟ ಜಾತಿಗೆ 29, ಪಂಗಡಕ್ಕೆ 5 ಸಾಮಾನ್ಯ ವರ್ಗಕ್ಕೆ 57 ಸೇರಿ ಒಟ್ಟು 91ಕ್ಕೆ ಮೀಸಲಿಟ್ಟಿದೆ. ಗೌರಿಬಿದನೂರಿಗೆ ಕಳೆದ ವರ್ಷ ಪರಿಶಿಷ್ಟ ಜಾತಿಗೆ 125, ಪಂಗಡಕ್ಕೆ 26, ಸಾಮಾನ್ಯ ವರ್ಗಕ್ಕೆ 262 ಸೇರಿ ಸೇರಿ ಒಟ್ಟು 413 ಆರ್‌ಟಿಇ ಸೀಟುಗಳನ್ನು ಮೀಸಲಿಡಲಾಗಿತ್ತು.

ಆದರೆ ಈ ಬಾರಿ ಪರಿಶಿಷ್ಟ ಜಾತಿಗೆ 6, ಎಸ್‌ಟಿಗೆ 1 ಹಾಗೂ ಸಾಮಾನ್ಯ ವರ್ಗಕ್ಕೆ 12 ಸೇರಿ ಒಟ್ಟು 19 ಸೀಟುಗಳನ್ನು ಮೀಸಲಿಡಲಾಗಿದೆ. ಗುಡಿಬಂಡೆ ತಾಲೂಕಿಗೆ ಕಳೆದ ವರ್ಷ ಪರಿಶಿಷ್ಟ ಜಾತಿಗೆ 28, ಪಂಗಡಕ್ಕೆ 7, ಸಾಮಾನ್ಯ ವರ್ಗಕ್ಕೆ 55 ಸೇರಿ ಒಟ್ಟು 90 ಸೀಟುಗಳು ನಿಗದಿಯಾಗಿತ್ತು. ಆದರೆ ಈ ಬಾರಿ ಎಸ್‌ಸಿ1 ಹಾಗೂ ಇತರೇ 1 ಸೇರಿ ಗುಡಿಬಂಡೆಗೆ ಬರೀ 2 ಸೀಟು ಮಾತ್ರ ಮೀಸಲಿಡಲಾಗಿದೆ. ಶಿಡ್ಲಘಟ್ಟಗೆ ಕಳೆದ ವರ್ಷ ಪರಿಶಿಷ್ಟ ಜಾತಿಗೆ 134, ಪಂಗಡಕ್ಕೆ 33, ಸಾಮಾನ್ಯ ವರ್ಗಕ್ಕೆ 264 ಸೇರಿ ಒಟ್ಟು 431 ಸೀಟುಗಳು ನಿಗದಿಯಾಗಿದ್ದವು. ಆದರೆ ಈ ವರ್ಷ ಪರಿಶಿಷ್ಟ ಜಾತಿಗೆ 21, ಪಂಗಡಕ್ಕೆ 3, ಸಾಮಾನ್ಯ ವರ್ಗಕ್ಕೆ 34 ಸೇರಿ ಒಟ್ಟು 58 ಸೀಟುಗಳನ್ನು ಮಾತ್ರ ನಿಗದಿಪಡಿಸಲಾಗಿದೆ.

ತಾಲೂಕು ಒಟ್ಟು ಆರ್‌ಟಿಇ ಸೀಟು ಭರ್ತಿಯಾದ ಸೀಟು ಉಳಿಕೆ
-ಚಿಕ್ಕಬಳ್ಳಾಪುರ 26 18 8
-ಬಾಗೇಪಲ್ಲಿ 13 00 13
-ಚಿಂತಾಮಣಿ 91 22 69
-ಗುಡಿಬಂಡೆ 02 01 01
-ಶಿಡ್ಲಘಟ್ಟ 58 11 47
-ಗೌರಿಬಿದನೂರು 19 07 12

ಜಿಲ್ಲೆಗೆ ಒಟ್ಟು 211 ಆರ್‌ಟಿಇ ಸೀಟು ಮಂಜೂರಾಗಿದ್ದು ಆ ಪೈಕಿ ಇದುವರೆಗೂ 100 ಮಂದಿ ಮಾತ್ರ ಅರ್ಜಿ ಹಾಕಿದ್ದಾರೆ. ಮೊದಲ ಹಂತದ ಲಾಟರಿ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಗೆ 59 ಸೀಟು ಮಾತ್ರ ಹಂಚಿಕೆ ಆಗಿದೆ. ಅರ್ಜಿ ಹಾಕುವ ದಿನಾಂಕ ವಿಸ್ತರಿಸಲಾಗಿದೆ. ಜಿಲ್ಲೆಯಲ್ಲಿ ಇನ್ನೂ 154 ಸೀಟು ಹಂಚಿಕೆ ಆಗಬೇಕಿದೆ.
-ಎಸ್‌.ಜಿ.ನಾಗೇಶ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಕರು

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next