ಸುಳ್ಯ: ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿಯಲ್ಲಿ ಈ ಬಾರಿ ತಾಲೂಕಿನ 14 ಶಾಲೆಗಳಲ್ಲಿ 171 ಸೀಟುಗಳು ಮೀಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಕಳೆದ ಬಾರಿಯಂತೆ ಈ ಬಾರಿಯೂ ಅರ್ಜಿ ಸಲ್ಲಿಸಲು ಆನ್‌ಲೈನ್ ಮೂಲಕ ವ್ಯವಸ್ಥೆ ಮಾಡಲಾಗಿದೆ. ನಗರ ವ್ಯಾಪ್ತಿಯವರು ಯಾವ ಶಾಲೆಗೆ ಬೇಕಾದರೂ ಅರ್ಜಿ ಸಲ್ಲಿಸಬಹುದು.
ಕಳೆದ ಬಾರಿ ಆರ್‌ಟಿಇಯಡಿಯಲ್ಲಿ ತಾಲೂಕಿನ 12 ಶಾಲೆಗಳಲ್ಲಿ 143 ಸೀಟುಗಳಿದ್ದವು. ಆದರೆ ಅವರಲ್ಲಿ ಶಿಕ್ಷಣ ಇಲಾಖೆ ತಂದಿರುವ ನಿಯಮಗಳಿಂದಾಗಿ 98 ವಿದ್ಯಾರ್ಥಿಗಳು ಮಾತ್ರ ಆರ್‌ಟಿಇ ಕಾಯ್ದೆಯಡಿ ವಿವಿಧ ಶಾಲೆಗಳಲ್ಲಿ ಪ್ರವೇಶ ಪಡೆದುಕೊಂಡಿದ್ದರು. 45 ಸೀಟು ಹಾಗೆಯೇ ಉಳಿದುಕೊಂಡಿತ್ತು.
ಕಳೆದ ಬಾರಿ ಸುಳ್ಯ ನಗರ ಪ್ರದೇಶದಲ್ಲಿ ಯಾವ ವಾರ್ಡ್‌ಗಳಲ್ಲಿ ಶಾಲೆಗಳು ಬರುತ್ತವೊ ಅದೇ ವಾರ್ಡಿನಲ್ಲಿರುವವರು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿತ್ತು. ಬಳಿಕ ಕಾನೂನು ತಿದ್ದುಪಡಿಯಾಗಿ ಒಂದು ಕಿ.ಮೀ. ವ್ಯಾಪ್ತಿಗೆ ತರಲಾಯಿತು. ಬಳಿಕ 3 ಕಿ.ಮೀ. ವ್ಯಾಪ್ತಿಯವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು. ಆದರೆ ಈ ಬಾರಿ ಸುಳ್ಯ ನಗರ ಪ್ರದೇಶದವರು ಮಾತ್ರ ಯಾವ ಶಾಲೆಗೆ ಬೇಕಾದರೂ ಅರ್ಜಿ ಸಲ್ಲಿಸಬಹುದು. ವಾರ್ಡ್ ಮಿತಿ ಹಾಗೂ ವ್ಯಾಪ್ತಿಯ ಮಿತಿಯನ್ನು ತೆಗೆದುಹಾಕಲಾಗಿದೆ.
ಸುಳ್ಯ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕಕ್ಕೆ 36 ಸೀಟು (ಎಸ್‌ಸಿ 11, ಎಸ್‌ಟಿ 2, ಇತರ 23), ಕುರುಂಜಿ ಭಾಗ್ ಕೆ.ವಿ.ಜಿ. ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನಲ್ಲಿ ಪೂರ್ವ ಪ್ರಾಥಮಿಕಕ್ಕೆ 19 ಸೀಟು (ಎಸ್‌ಸಿ 6, ಎಸ್‌ಟಿ 1, ಇತರ 12), ಸುಳ್ಯ ರೋಟರಿ ವಿದ್ಯಾಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕಕ್ಕೆ 25 ಹಾಗೂ 1ನೇ ತರಗತಿ ಸೇರ್ಪಡೆಗೆ 4 ಸೀಟುಗಳು, ಒಟ್ಟು 29 (ಎಸ್‌ಸಿ 9,ಎಸ್‌ಟಿ 2, ಇತರ 18) ಸೀಟುಗಳು ಮೀಸಲಾಗಿದೆ. ಸುಳ್ಯ ಸ್ನೇಹ ವಿದ್ಯಾಸಂಸ್ಥೆಯಲ್ಲಿ ಪೂರ್ವ ಪ್ರಾಥಮಿಕಕ್ಕೆ 3 ಹಾಗೂ 1ನೇ ತರಗತಿ ಸೇರ್ಪಡೆಗೆ 2 ಒಟ್ಟು 5 ಸೀಟುಗಳು (ಎಸ್‌ಸಿ 2, ಇತರ 3) ಹೀಗೆ ಒಟ್ಟು 171 ಸೀಟುಗಳು ಇವೆ.
ತಾಲೂಕಿನ ಇತರೆಡೆ ಪಂಜ ಕೆ.ಎಸ್.ಜಿ ಹಿ.ಪ್ರಾ. ಶಾಲೆಯಲ್ಲಿ ಪೂರ್ವ ಪ್ರಾಥಮಿಕಕ್ಕೆ 12 ಸೀಟುಗಳು (ಎಸ್‌ಸಿ 4, ಎಸ್‌ಟಿ 1, ಇತರ 7), ಅಜ್ಜಾವರ ವಿವೇಕಾನಂದ ಶಾಲೆಯಲ್ಲಿ ಪೂರ್ವ ಪ್ರಾಥಮಿಕಕ್ಕೆ 9 ಸೀಟುಗಳು (ಎಸ್‌ಸಿ 3, ಎಸ್‌ಟಿ 1, ಇತರ 5), ಚೊಕ್ಕಾಡಿ ಶ್ರೀ ಸತ್ಯಸಾಯಿ ವಿದ್ಯಾಕೇಂದ್ರದಲ್ಲಿ 1ನೇ ತರಗತಿಗೆ 1ಸೀಟು ಮತ್ತು ಇತರ 1, ಬೆಳ್ಳಾರೆ ದಾರುಲ್ ಹಿ.ಪ್ರಾ. ಶಾಲೆಯಲ್ಲಿ ಪೂರ್ವ ಪ್ರಾಥಮಿಕಕ್ಕೆ 9 ಸೀಟು (ಎಸ್‌ಸಿ 3, ಎಸ್‌ಟಿ 1, ಇತರ 5), ಜಾಲೂÕರು ಪಯನೀರ್ ಪಬ್ಲಿಕ್ ಸ್ಕೂಲ್ 1ನೇ ತರಗತಿ 4 ಸೀಟು (ಎಸ್‌ಸಿ 1, ಇತರ 3), ಕಲ್ಲುಗುಂಡಿ ಸವೇರಪುರ ಹಿ.ಪ್ರಾ. ಶಾಲೆಯ ಪೂರ್ವ ಪ್ರಾಥಮಿಕಕ್ಕೆ 8 ಸೀಟು (ಎಸ್‌ಸಿ 2, ಎಸ್‌ಟಿ 1, ಇತರ 5), ಗೂನಡ್ಕ ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಪೂರ್ವ ಪ್ರಾಥಮಿಕಕ್ಕೆ 10 ಸೀಟುಗಳು (ಎಸ್‌ಸಿ 3, ಎಸ್‌ಟಿ 1, ಇತರ 6), ಸುಬ್ರಹ್ಮಣ್ಯ ಕುಮಾರಸ್ವಾಮಿ ಹಿ.ಪ್ರಾ. ಶಾಲೆಯ ಪೂರ್ವ ಪ್ರಾಥಮಿಕಕ್ಕೆ 17 ಸೀಟು (ಎಸ್‌ಸಿ 5, ಎಸ್‌ಟಿ 1, ಇತರ 10, 1 ಸೀಟು 1ನೇ ತರಗತಿ ವಿದ್ಯಾರ್ಥಿಗೆ), ಕೊಡಿಯಾಲಬೈಲು ಮಹಾತ್ಮಾ ಗಾಂಧಿ ಮಲಾ°ಡು ಕಿ.ಪ್ರಾ. ಶಾಲೆಯಲ್ಲಿ ಪೂ. ಪ್ರಾಥಮಿಕ ವಿಭಾಗಕ್ಕೆ 1, 1ನೇ ತರಗತಿ ಸೇರ್ಪಡೆಯಾಗುವ ಮಗುವಿಗೆ 1 ಸೀಟು ಸೇರಿ ಒಟ್ಟು 2 ಸೀಟು ಮೀಸಲಾಗಿದೆ. ಈ ಎರಡೂ ಸೀಟುಗಳು ಇತರರಿಗೆ ಮೀಸಲು.ಪಂಜ ನಾಡ ಕಚೇರಿ, ಸುಳ್ಯ ತಾಲೂಕು ಕಚೇರಿ, ಎಲ್ಲ ಸೈಬರ್ ಸೆಂಟರ್, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಮಾ. 30 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ.
ಆರ್‌ಟಿಇ ಕಾಯ್ದೆಯಂತೆ ಪ್ರವೇಶ ಕೋರಲು ಜೂ. 1, 2017ರಲ್ಲಿದ್ದಂತೆ ಎಲ್.ಕೆ.ಜಿ. ತರಗತಿಗೆ 3 ವರ್ಷ 10 ತಿಂಗಳಿನಿಂದ 4 ವರ್ಷ 10 ತಿಂಗಳು ಮತ್ತು 1ನೇ ತರಗತಿಗೆ 5 ವರ್ಷ 10 ತಿಂಗಳಿನಿಂದ 6 ವರ್ಷ 10 ತಿಂಗಳು ವಯೋಮಿತಿಯನ್ನು ಸರಕಾರ ನಿಗದಿಪಡಿಸಿದೆ. ಹೆಚ್ಚಿನ ಮಾಹಿತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ವಿವರಗಳನ್ನು ಪಡೆಯಬಹುದಾಗಿದೆ.
2 ವಿದ್ಯಾ ಸಂಸ್ಥೆ ಹೆಚ್ಚುವರಿ ಸೇರ್ಪಡೆ
ಈ ಬಾರಿ ಹೊಸದಾಗಿ ಗೂನಡ್ಕ ಮಾರುತಿ ಇಂಟರ್ ನ್ಯಾಶನಲ್ ಪಬ್ಲಿಕ್ ಸ್ಕೂಲ್ ಹಾಗೂ ಮಹಾತ್ಮಾಗಾಂಧಿ ಮಲಾ°ಡ್ ಕಿ.ಪ್ರಾ. ಶಾಲೆ ಕೊಡಿಯಾಲ್ ಬೈಲು ಈ ವಿದ್ಯಾಸಂಸ್ಥೆಯಲ್ಲಿ ಆರ್‌ಟಿಇ ಕಾನೂನು ಅನ್ವಯವಾಗಿದೆ. ಕೆಲವು ಶಾಲೆಯಲ್ಲಿ ಪೂರ್ವ ಪ್ರಾಥಮಿಕದ ಜತೆಗೆ 1ನೇ ತರಗತಿಗೂ ಮಕ್ಕಳ ಸೇರ್ಪಡೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಆದುದರಿಂದ ಕಳೆದ ಬಾರಿ 143 ಮಕ್ಕಳಿಗೆ ಅವಕಾಶ ಕಲ್ಪಿಸಲಾಗಿದ್ದು, ಈ ಬಾರಿ 171 ಮಕ್ಕಳು ಈ ಅವಕಾಶ ಪಡೆಯಲಿದ್ದಾರೆ.
ಜ್ಞಾನಗಂಗಾದಲ್ಲಿ ಅವಕಾಶ ಇಲ್ಲ
ಬೆಳ್ಳಾರೆ ಜ್ಞಾನಗಂಗಾ ವಿದ್ಯಾಸಂಸ್ಥೆಯಲ್ಲಿ ಆರ್‌ಟಿಇ ಕಾನೂನು ಅನ್ವಯವಾಗಿತ್ತು. ಆದರೆ ಕಳೆದ ಬಾರಿ ಆಡಳಿತ ಮಂಡಳಿಯವರು ನಮ್ಮ ಶಾಲೆ ತುಳು ಭಾಷಾ ಅಲ್ಪಸಂಖ್ಯಾಕವಾಗಿರುವುದಾಗಿ ನ್ಯಾಯಾಲಯದಿಂದ ಸ್ಟೇ ತಂದಿದ್ದರು. ಬಳಿಕ ಈ ವಿದ್ಯಾಸಂಸ್ಥೆಯನ್ನು ಪಟ್ಟಿಯಿಂದ ಕೈಬಿಡಲಾಗಿತ್ತು.
2017ರ ಜ. 18ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಜ್ಞಾನಗಂಗಾ ಸಂಸ್ಥೆ ತುಳು ಭಾಷಾ ಅಲ್ಪಸಂಖ್ಯಾಕ ಶಾಲೆ ಎಂದು ಘೋಷಣೆಯಾಗದ ಕಾರಣ ಶಾಲೆಯವರು ತಂದಿದ್ದ ತಡೆ ಆದೇಶವನ್ನು ಕೋರ್ಟ್ ತೆರವುಮಾಡಿತ್ತು. ಅದಾದ ಬಳಿಕ ಶಾಲೆಯ ಆಡಳಿತ ಮಂಡಳಿ ಮತ್ತೆ ಫೆ. 22ರಂದು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿ ತಡೆ ತಂದಿದೆ.
ಆಧಾರ್ ಕಾರ್ಡ್ ಕಡ್ಡಾಯ
ಈ ಬಾರಿ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಯಾಕೆಂದರೆ ಪೋಷಕರು ಯಾವ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಅರ್ಜಿ ಸಲ್ಲಿಸುತ್ತಾರೋ ಆ ವ್ಯಾಪ್ತಿಯ ವಿಳಾಸ ಅವರ ಆಧಾರ್ ಕಾರ್ಡಿನಲ್ಲಿ ನಮೂದಾಗಿದ್ದರೆ ಮಾತ್ರ ಸಾಫ್ಟ್‌ವೇರ್ ಅವರ ಅರ್ಜಿಯನ್ನು ಪುರಸ್ಕರಿಸುತ್ತದೆ.