ಬೆಂಗಳೂರು: ಶಿಕ್ಷಣ ಇಲಾಖೆಯು ಸೋಮವಾರ ನಡೆಸಿದ ಮೊದಲನೇ ಸುತ್ತಿನ ಆರ್‌ಟಿಇ ಸೀಟು ಲಾಟರಿ ಪ್ರಕ್ರಿಯೆಯಲ್ಲಿ 7,596 ಸೀಟುಗಳನ್ನು ಹಂಚಿಕೆ ಮಾಡಿದೆ.
ಸರ್ಕಾರಿ ಶಾಲೆಗಳು ಇಲ್ಲದ ಪ್ರದೇಶದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಶಿಕ್ಷಣ ಇಲಾಖೆಯು ಆರ್‌ಟಿಇ ಸೀಟು ನೀಡುತ್ತಿದ್ದು, 2022-23ನೇ ಸಾಲಿಗೆ ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿರುವ ಶೇ.25ರಷ್ಟು ಸೀಟುಗಳನ್ನು ಹಂಚಿಕೆ ಮಾಡಿದೆ.
2,407 ಶಾಲೆಗಳಲ್ಲಿ ಎಲ್‌ಕೆಜಿಗೆ 1,032, ಒಂದನೇ ತರಗತಿಗೆ 16,723 ಮತ್ತು ಹೆಚ್ಚುವರಿಯಾಗಿ 968 ಸೀಟುಗಳನ್ನು ನೀಡಲಾಗಿದ್ದು, ಒಟ್ಟಾರೆಯಾಗಿ 18,723 ಸೀಟುಗಳ ಲಭ್ಯವಿವೆ. ಇವುಗಳಿಗೆ 20,414 ಅರ್ಜಿಗಳು ದಾಖಲಾಗಿದ್ದವು. ಈ ಪೈಕಿ 19,718 ಅರ್ಜಿಗಳು ಅರ್ಹತೆ ಹೊಂದಿದ್ದು, ಮೊದಲನೇ ಸುತ್ತಿನಲ್ಲಿ 7,596 ಸೀಟುಗಳನ್ನು ಹಂಚಿಕೆ ಮಾಡಲಾಗಿದೆ.
ಇದನ್ನೂ ಓದಿ:ಗುಂಡ್ಲುಪೇಟೆ: ಯುಗಾದಿ ಹೋಳಿಯಾಟದ ಬಣ್ಣ ತೊಳೆಯಲು ಕೆರೆಗೆ ಇಳಿದ ಯುವಕ ನೀರುಪಾಲು
16ರೊಳಗೆ ದಾಖಲಾತಿಗೆ ಸೂಚನೆ: ಮೊದಲನೇ ಸುತ್ತಿನಲ್ಲಿ ಸೀಟು ಪಡೆದಿರುವ ಮಕ್ಕಳ ಪೋಷಕರ ಮೊಬೈಲ್ ಸಂಖ್ಯೆಗೆ ಸಂದೇಶ ಕಳುಹಿಸಲಾಗಿದೆ. ಸಂಬಂಧಪಟ್ಟ ಪೋಷಕರು ತಮ್ಮ ಮಕ್ಕಳನ್ನು ಏ.16ರೊಳಗೆ ಶಾಲೆಗಳಿಗೆ ದಾಖಲಾತಿ ಮಾಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಹಿಂದುಳಿದ ವರ್ಗ ಮುಂದು:
ಆರ್‌ಟಇ ಸೀಟಿಗಾಗಿ ಅರ್ಜಿ ಸಲ್ಲಿಕೆಯಲ್ಲಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೆಟಗರಿ 2ಎ ಮತ್ತು 2ಬಿ ನಲ್ಲಿ ಕ್ರಮವಾಗಿ 3,588 ಮತ್ತು 3,455 ಅರ್ಜಿಗಳು ದಾಖಲಾಗಿವೆ. ಒಟ್ಟಾರೆ 19,718 ಅರ್ಜಿಗಳಲ್ಲಿ 7,043 ಅರ್ಜಿಗಳಿವೆ. ಇನ್ನು ಲಿಂಗಾಧಾರಿತವಾಗಿ ಪರಿಗಣಿಸಿದರೆ, 10,295 ಬಾಲಕರು ಮತ್ತು 9,423 ಬಾಲಕಿಯರು ಅರ್ಜಿ ಸಲ್ಲಿಸಿದ್ದಾರೆ.