Advertisement

ಆರ್‌ಟಿಇ ದ.ಕ.: ಮಂಜೂರಾದ 1,864 ಸೀಟುಗಳಲ್ಲಿ  1,742 ಮಂದಿ ದಾಖಲು.!

03:20 PM Jun 07, 2017 | Team Udayavani |

ಮಹಾನಗರ : ಆರ್ಥಿಕವಾಗಿ ಹಿಂದುಳಿದ ಮಕ್ಕಳು ಕೂಡ ಗುಣಮಟ್ಟದ ಶಿಕ್ಷಣ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಸರಕಾರ ಶಿಕ್ಷಣ ಹಕ್ಕು ಕಾಯ್ದೆ(ಆರ್‌ಟಿಇ)ಯನ್ನು ಜಾರಿಗೆ ತಂದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2017-18ನೇ ಸಾಲಿನಲ್ಲಿ 2 ಹಂತದಲ್ಲಿ ಒಟ್ಟು 1,864 ಸೀಟುಗಳು ಮಂಜೂರಾಗಿವೆ. ಇದರಲ್ಲಿ ಒಟ್ಟು 1,742 ಮಂದಿ ಜಿಲ್ಲೆಯ ವಿವಿಧ ಖಾಸಗಿ ಶಾಲೆಗಳಲ್ಲಿ ದಾಖಲಾಗಿದ್ದಾರೆ. 

Advertisement

ಆರ್‌ಟಿಇಯನ್ನು ಕೆಲವರು ದುರುಪಯೋಗ ಪಡಿಸಿಕೊಂಡು ಸೀಟುಗಳನ್ನು ಪಡೆದುಕೊಳ್ಳುತ್ತಾರೆ ಎಂಬ ಆರೋಪದ ಹಿನ್ನೆಲೆ ಯಲ್ಲಿ ಸರಕಾರ ಅರ್ಜಿ ಸಲ್ಲಿಸಲು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿತ್ತು. ವಿದ್ಯಾರ್ಥಿ ವಾಸಸ್ಥಳ ಹಾಗೂ ಪಿನ್‌ಕೋಡ್‌ ಟ್ಯಾಲಿಯಾಗುತ್ತಿದೆಯೇ ಮತ್ತು ಆತ ಗುರುತಿಸಿದ ಶಾಲೆಯ ಪಿನ್‌ಕೋಡ್‌ ಟ್ಯಾಲಿಯಾಗುತ್ತಿದೆಯೇ ಎಂಬೆಲ್ಲ ಕಟ್ಟು ನಿಟ್ಟಿನ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿತ್ತು. 

ಹಿಂದೆ ಬಿಇಓ ಕಚೇರಿಯಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ವಿದ್ದರೂ, ಈ ಬಾರಿ ಎಲ್ಲ ಕಡೆಗಳಲ್ಲೂ ಅವಕಾಶ ನೀಡಲಾಗಿತ್ತು. ಇಂತಹ ಕೆಲವೊಂದು ಬದಲಾವಣೆ ಮಾಡಿಕೊಂಡು ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇಂತಹ ಬದಲಾವಣೆಯಿಂದ ಆರಂಭದಲ್ಲಿ ಗೊಂದಲ ಸೃಷ್ಟಿಯಾಗಿದ್ದರೂ, ಬಳಿಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಸುಸೂತ್ರವಾಗಿ ನಡೆದಿತ್ತು.
 
ಒಟ್ಟು  2,345 ಸೀಟುಗಳು
ಆರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 7 ಬ್ಲಾಕ್‌ಗಳಿಗೆ ಒಟ್ಟು 2,345 ಸೀಟುಗಳನ್ನು ಆರ್‌ಟಿಇಯಲ್ಲಿ ನಿಗದಿ ಪಡಿಸಲಾಗಿತ್ತು. ಆದರೆ ಸೀಟುಗಳು ಮಂಜೂರಾಗುವ ಸಂದರ್ಭದಲ್ಲಿ ಈ ವರೆಗೆ 2 ಹಂತಗಳಲ್ಲಿ 1,864 ಸೀಟುಗಳು ಮಾತ್ರ ಮಂಜೂರಾಗಿವೆ. ಮುಂದೆ ಮೂರನೇ ಹಂತದಲ್ಲಿ ಉಳಿದ ಸೀಟುಗಳು ಮಂಜೂರಾಗುತ್ತವೆಯೇ ಅಥವಾ ಸೀಟು ಹಂಚಿಕೆ ಇಲ್ಲಿಗೆ ಸೀಮಿತ ಗೊಳಿಸಲಾಗಿದೆಯೇ ಎಂಬ ಮಾಹಿತಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಲಭ್ಯವಾಗಿಲ್ಲ. 
ಸೀಟು ಹಂಚಿಕೆಯ ದುರುಪಯೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಅರ್ಜಿ ಸಲ್ಲಿಕೆಯನ್ನು ಬಿಗುಗೊಳಿಸಿದ ಹಿನ್ನೆಲೆ ಯಲ್ಲಿ ಈ ಬಾರಿ ಹೆಚ್ಚಿನ ಅರ್ಜಿಗಳು ತಿರಸ್ಕೃತಗೊಂಡಿವೆ. ಸಂಬಂಧ ಪಟ್ಟ ಅಧಿಕಾರಿಗಳು ಸರಿಯಾಗಿ ಪರಿಶೀಲಿಸಿ ದ.ಕ. ಜಿಲ್ಲೆಗೆ 1,864 ಸೀಟುಗಳನ್ನು ಮಾತ್ರ ಮಂಜೂರುಗೊಳಿಸಿರಬಹುದು. ಜಿಲ್ಲೆಯಲ್ಲಿ ಒಟ್ಟು ಎಷ್ಟು ಮಂದಿ ಅರ್ಜಿ ಸಲ್ಲಿಸಿದ್ದಾರೆ ಎಂಬ ಮಾಹಿತಿಯೂ ನಮಗೆ ಲಭ್ಯವಾಗಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. 

113 ಸೀಟುಗಳು ರಿಜೆಕ್ಟ್ !
ಒಟ್ಟು 2,345 ಸೀಟುಗಳಲ್ಲಿ ಜಿಲ್ಲೆಗೆ 1,864 ಸೀಟುಗಳು ಮಾತ್ರ ಮಂಜೂರಾಗಿದ್ದರೂ, ಅದರಲ್ಲೂ 113 ಸೀಟುಗಳು ರಿಜೆಕ್ಟ್ ಆಗಿವೆ.

ಜಿಲ್ಲೆಗೆ ಪ್ರಥಮ ಹಂತದಲ್ಲಿ 1,349 ಹಾಗೂ 515 ಸೀಟುಗಳು ಮಂಜೂರಾಗಿದ್ದವು. ಆದರೆ ಇವುಗಳಲ್ಲಿ ಬೇರೆ ಬೇರೆ ಕಾರಣಕ್ಕೆ 113 ಸೀಟುಗಳು ರಿಜೆಕ್ಟ್ ಆಗಿವೆ. ಆದರೆ ಯಾವ ಕಾರಣಕ್ಕೆ ರಿಜೆಕ್ಟ್ ಮಾಡಲಾಗಿದೆ ಎಂಬ ಮಾಹಿತಿ ಜಿಲ್ಲೆಯ ಅಧಿಕಾರಿಗಳಿಗೆ ತಿಳಿದಿಲ್ಲ.

Advertisement

ಪ್ರತಿ ಬ್ಲಾಕಿನ ವಿವರ
ಜಿಲ್ಲೆಯಲ್ಲಿ ಒಟ್ಟು 7 ಕ್ಷೇತ್ರ ಶಿಕ್ಷಣಾಧಿಕಾರಿಗಳ ಬ್ಲಾಕ್‌ಗಳಿದ್ದು, ಪ್ರತಿ ಬ್ಲಾಕ್‌ಗಳಿಗೂ ಈ ಕೆಳಗಿನಂತೆ ಸೀಟುಗಳು ಮಂಜೂರಾಗಿವೆ.

ಬಂಟ್ವಾಳಕ್ಕೆ ಒಟ್ಟು 447 ಸೀಟುಗಳಲ್ಲಿ 361 ಸೀಟುಗಳು ಮಂಜೂರಾಗಿವೆ. ಅದರಲ್ಲಿ 342 ಮಂದಿ ದಾಖಲಾಗಿದ್ದು, 19 ಸೀಟುಗಳು ರಿಜೆಕ್ಟ್ ಆಗಿವೆ. ಬೆಳ್ತಂಗಡಿಯ 259 ಸೀಟುಗಳಲ್ಲಿ 183 ಸೀಟುಗಳು ಮಂಜೂರಾಗಿದ್ದು, 176 ಮಂದಿ ದಾಖಲಾದರೆ 7 ಸೀಟುಗಳು ರಿಜೆಕ್ಟ್ ಆಗಿವೆ. 

ಮಂಗಳೂರು ಉತ್ತರದ 498 ಸೀಟುಗಳಲ್ಲಿ 397 ಸೀಟುಗಳು ಮಂಜೂರಾಗಿದ್ದು, 364 ಮಂದಿ ದಾಖಲಾದರೆ 31 ಸೀಟುಗಳು ರಿಜೆಕ್ಟ್ ಆಗಿವೆ. ಮಂಗಳೂರು ದಕ್ಷಿಣದ 413 ಸೀಟುಗಳಲ್ಲಿ 343 ಸೀಟುಗಳು ಮಂಜೂರಾಗಿದ್ದು, 316 ಮಂದಿ ದಾಖಲಾದರೆ 27 ಸೀಟುಗಳು ರಿಜೆಕ್ಟ್ ಆಗಿವೆ.

ಮೂಡಬಿದಿರೆಯ 150 ಸೀಟುಗಳಲ್ಲಿ 135 ಸೀಟುಗಳು ಮಂಜೂರಾಗಿದ್ದು, 129 ಮಂದಿ ದಾಖಲಾದರೆ 5 ಸೀಟುಗಳು ರಿಜೆಕ್ಟ್ ಆಗಿವೆ. ಪುತ್ತೂರಿನ 404 ಸೀಟುಗಳಲ್ಲಿ 299 ಸೀಟುಗಳು ಮಂಜೂರಾಗಿದ್ದು, 279 ಮಂದಿ ದಾಖಲಾದರೆ 20 ಸೀಟುಗಳು ರಿಜೆಕ್ಟ್ ಆಗಿವೆ. ಸುಳ್ಯದ 171 ಸೀಟುಗಳಲ್ಲಿ 146 ಸೀಟುಗಳು ಮಂಜೂರಾಗಿದ್ದು, 136 ಮಂದಿ ದಾಖಲಾದರೆ 4 ಸೀಟುಗಳು ರಿಜೆಕ್ಟ್ ಆಗಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

– ಕಿರಣ್‌ ಸರಪಾಡಿ

Advertisement

Udayavani is now on Telegram. Click here to join our channel and stay updated with the latest news.

Next